ಪಾಸ್‌ಪೋರ್ಟ್ ಕೇವಲ ವಿದೇಶ ಪ್ರಯಾಣದ ದಾಖಲೆಯಷ್ಟೇ, ಅದು ಒಬ್ಬ ವ್ಯಕ್ತಿಯ ಪೌರತ್ವವನ್ನು ಖಚಿತಪಡಿಸುವ ಅಂತಿಮ ಪುರಾವೆಯಲ್ಲ ಎಂದು ವಿದೇಶಾಂಗ ಸಚಿವಾಲಯ (Ministry of External Affairs) ಸ್ಪಷ್ಟಪಡಿಸಿದೆ. ಇದು ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದ್ದು, ಹೊಸ ಚರ್ಚೆಗಳಿಗೆ ನಾಂದಿ ಹಾಡಿವೆ. ಗಡಿ ದಾಟಲು ಬೇಕಿರುವ ಪಾಸ್‌ಪೋರ್ಟ್ (Passport) ಪೌರತ್ವದ ನಿರ್ಣಾಯಕ ದಾಖಲೆಯಲ್ಲ ಎಂದಾದರೆ, ಒಬ್ಬ ವ್ಯಕ್ತಿಯ ನಾಗರಿಕತ್ವವನ್ನು ಸಾಬೀತುಪಡಿಸುವ ಕಾನೂನುಬದ್ಧ ದಾಖಲೆ ಯಾವುದು ಎಂಬ ಯಕ್ಷಪ್ರಶ್ನೆ ಈಗ ಸಾರ್ವಜನಿಕರಲ್ಲಿ ಮೂಡಿದೆ. .
ಪೌರತ್ವ ಮತ್ತು ಸರ್ಕಾರಿ ಸೌಲಭ್ಯಗಳಿಗೆ ಅರ್ಹತೆಯ ಪುರಾವೆಯಾಗಿ ಪಾಸ್‌ಪೋರ್ಟ್‌ಗಳ ಬಳಕೆಯ ಬಗ್ಗೆ ಹೆಚ್ಚುತ್ತಿರುವ ಸಾರ್ವಜನಿಕ ಗೊಂದಲದ ಮಧ್ಯೆ ಇತ್ತೀಚಿಗೆ ವಿದೇಶಾಂಗ ಸಚಿವಾಲಯ (MEA) ಈ ಸ್ಪಷ್ಟನೆ ನೀಡಿತ್ತು. ಭಾರತೀಯ ಪಾಸ್‌ಪೋರ್ಟ್ ಪ್ರಯಾಣ ದಾಖಲೆಯಾಗಿದೆ. ಅದನ್ನು ಪೌರತ್ವದ (Citizenship) ನಿರ್ಣಾಯಕ ಪುರಾವೆಯಾಗಿ ಪರಿಗಣಿಸಬಾರದು ಎಂದು ತಿಳಿಸಿತ್ತು. ಭಾರತೀಯ ನಾಗರಿಕರಿಗೆ ಪಾಸ್‌ಪೋರ್ಟ್‌ಗಳನ್ನು ನೀಡಲಾಗುತ್ತದೆ. ಈ ದಾಖಲೆಯ ಪ್ರಾಥಮಿಕ ಉದ್ದೇಶ ಅಂತಾರಾಷ್ಟ್ರೀಯ ಪ್ರಯಾಣವನ್ನು ಸಕ್ರಿಯಗೊಳಿಸುವುದು ಮತ್ತು ವಿದೇಶದಲ್ಲಿ ಗುರುತನ್ನು ಸ್ಥಾಪಿಸುವುದು ಎಂದು ಅಧಿಕಾರಿಗಳು ಒತ್ತಿ ಹೇಳಿದ್ದರು.

ಇದಕ್ಕೂ ಮುನ್ನ ಕೇಂದ್ರ ಸರ್ಕಾರ ಆಧಾರ್ ಕಾರ್ಡ್ (Aadhar card) ಮತ್ತು ವೋಟರ್ ಐಡಿಗಳೂ (Voter ID) ಪೌರತ್ವದ ದಾಖಲೆಯಲ್ಲ ಎಂದು ಸ್ಪಷ್ಟಪಡಿಸಿತ್ತು. ಹಾಗಾದ್ರೆ ದೇಶದ ಪ್ರತಿಯೊಬ್ಬ ನಾಗರಿಕನೂ ಹೊಂದಿರುವ ಆಧಾರ್ ಕಾರ್ಡ್, ವೋಟರ್ ಐಡಿ ಅಥವಾ ರೇಷನ್ ಕಾರ್ಡ್‌ಗಳು ಸಹ ಕೇವಲ ವಿಳಾಸ ಮತ್ತು ಗುರುತಿನ ಚೀಟಿಗಳಾಗಿಯೇ ಉಳಿದಿರುವಾಗ, ಭಾರತೀಯ ಪೌರತ್ವ ಕಾಯ್ದೆ (Citizenship Act) ಅಡಿಯಲ್ಲಿ ನಾಗರಿಕತ್ವದ ಅಂತಿಮ ಮಾನದಂಡ ಯಾವುದು? ಅಸಲಿಗೆ ಪೌರತ್ವ ಎಂದರೇನು? ಅದು ಯಾಕೆ ಪೌರತ್ವದ ದಾಖಲೆಯಾಗುವುದಿಲ್ಲ? ಈ ಗೊಂದಲಗಳ ಪರಿಹಾರ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

ಪೌರತ್ವ ಎಂದರೇನು?
ಒಂದು ದೇಶದಲ್ಲಿ ಕಾನೂನುಬದ್ಧವಾಗಿ ವಾಸಿಸಲು ಸಿಗುವ ಅಧಿಕೃತ ಸದಸ್ಯತ್ವವೇ ಪೌರತ್ವ. ಈ ನಾಗರಿಕತ್ವ ಹೊಂದಿರುವ ವ್ಯಕ್ತಿಗೆ ಮಾತ್ರ ಆ ದೇಶದ ಸಂವಿಧಾನಬದ್ಧ ಹಕ್ಕುಗಳು, ಉದ್ಯೋಗ, ವಸತಿ ಸೌಲಭ್ಯ ಹಾಗೂ ಸರ್ಕಾರದ ಸಕಲ ಸವಲತ್ತುಗಳು ಲಭ್ಯವಾಗುತ್ತವೆ. ಇದೇ ಕಾರಣಕ್ಕೆ ಆಯಾ ದೇಶಗಳು ತನ್ನ ಪ್ರಜೆಗಳಿಗೆ ಪೌರತ್ವದ ಪ್ರಮಾಣಪತ್ರಗಳನ್ನು ನೀಡುತ್ತವೆ.
ಭಾರತದಲ್ಲಿ ಪೌರತ್ವ ಪರಿಕಲ್ಪನೆ ಬಂದಿದ್ದು ಹೇಗೆ?
1914ರ ಮೊದಲ ಜಾಗತಿಕ ಯುದ್ಧಕ್ಕೂ ಮುನ್ನ ಜಗತ್ತಿನಾದ್ಯಂತ ಯಾವುದೇ ಕಠಿಣ ಗಡಿ ನಿರ್ಬಂಧಗಳಿರಲಿಲ್ಲ. ಆದರೆ, ಯುದ್ಧದ ಸಂದರ್ಭದಲ್ಲಿ ಶತ್ರು ರಾಷ್ಟ್ರಗಳ ಗೂಢಚಾರರು ನುಸುಳಬಹುದು ಎಂಬ ಆತಂಕ ಹೆಚ್ಚಾದಾಗ, ದೇಶಗಳು ತಮ್ಮ ಭದ್ರತೆಯ ಹಿತದೃಷ್ಟಿಯಿಂದ ನಾಗರಿಕರ ಕಡ್ಡಾಯ ಗುರುತಿಸುವಿಕೆ ಪ್ರಕ್ರಿಯೆಯನ್ನು ಜಾರಿಗೆ ತಂದವು. ಇದಕ್ಕೆ ಪೂರಕವಾಗಿ ಯುನೈಟೆಡ್ ಕಿಂಗ್‌ಡಮ್ (UK) 1914ರಲ್ಲಿ ‘ಬ್ರಿಟಿಷ್ ಏಲಿಯನ್ಸ್ ರಿಸ್ಟ್ರಿಕ್ಷನ್ ಆ್ಯಕ್ಟ್’ ಎಂಬ ಕಾನೂನನ್ನು ಜಾರಿಗೆ ತರುವ ಮೂಲಕ ಈ ವ್ಯವಸ್ಥೆಗೆ ಮುನ್ನುಡಿ ಬರೆಯಿತು. ಆದರೆ, ಆಧುನಿಕ ಜಗತ್ತಿನಲ್ಲಿ ಪೌರತ್ವ ಪ್ರಮಾಣಪತ್ರದ ಮೂಲ ಪರಿಕಲ್ಪನೆ ಚಿಗುರೊಡೆದಿದ್ದು 1790ರ ಫ್ರೆಂಚ್ ಕ್ರಾಂತಿಯ ನಂತರದ ಫ್ರಾನ್ಸ್‌ನಲ್ಲಿ ಎಂಬುದು ಗಮನಾರ್ಹ. ಹೀಗೆ ಶುರುವಾದ ಪೌರತ್ವ ವ್ಯವಸ್ಥೆ ಇಂದು ಪ್ರತಿಯೊಂದು ದೇಶಕ್ಕೂ ಸಂಚರಿಸಲು ಬೇಕಾಗುವ ಒಂದು ದಾಖಲೆಯಾಗಿದೆ.

ರಾಜರ ಕಾಲದಲ್ಲಿಯೂ ಜಾರಿಯಿದ್ದ ಪದ್ಧತಿ:
ಭಾರತದ ರಾಜರ ಕಾಲದಲ್ಲಿ ಇಂದು ನಾವು ಬಳಸುವ ಪೌರತ್ವ ಎಂಬ ಆಧುನಿಕ, ಕಾನೂನಾತ್ಮಕ ಪದ ಅಥವಾ ಪರಿಕಲ್ಪನೆ ನೇರವಾಗಿ ಇರಲಿಲ್ಲ. ಮೌರ್ಯರ ಕಾಲದಲ್ಲಿ ಬೇರೆ ದೇಶಗಳಿಂದ ಅಥವಾ ರಾಜ್ಯಗಳಿಂದ ಬರುವವರನ್ನು ಪತ್ತೆಹಚ್ಚಲು ಮತ್ತು ಅವರ ಚಟುವಟಿಕೆಗಳನ್ನು ಗಮನಿಸಲು ಪ್ರತ್ಯೇಕ ಇಲಾಖೆ ಇರುತ್ತಿತ್ತು. ರಾಜನ ವ್ಯಾಪ್ತಿಯಲ್ಲಿ ವಾಸಿಸುವ ಪ್ರತಿಯೊಬ್ಬ ಪ್ರಜೆಯ ಜನನ, ಮರಣ ಮತ್ತು ವೃತ್ತಿಯ ದಾಖಲೆಗಳನ್ನು ಇಡಲಾಗುತ್ತಿತ್ತು. ಇಂದಿನ ‘ಪಾಸ್‌ಪೋರ್ಟ್’ ಮಾದರಿಯಲ್ಲಿ, ರಾಜ್ಯದ ಒಳಗೆ ಬರಲು ಮತ್ತು ಹೋಗಲು ‘ಮುದ್ರಾ’ ವ್ಯವಸ್ಥೆ ಇತ್ತು. ಮುದ್ರೆ ಇಲ್ಲದವರನ್ನು ಅಕ್ರಮ ನುಸುಳುಕೋರರು ಎಂದು ಪರಿಗಣಿಸಲಾಗುತ್ತಿತ್ತು.
ಭಾರತದಲ್ಲಿ ʻಪೌರತ್ವʼ:
ಭಾರತೀಯ ಇತಿಹಾಸದ ಪುಟಗಳನ್ನು ತಿರುವಿ ನೋಡಿದಾಗ, ಇಂದು ನಾವು ಹೆಮ್ಮೆಯಿಂದ ಹೇಳಿಕೊಳ್ಳುವ ಭಾರತದ ಪೌರತ್ವ ಎಂಬ ಸಾಂವಿಧಾನಿಕ ಹಕ್ಕು ಅಧಿಕೃತವಾಗಿ ಜನ್ಮತಾಳಿದ್ದು 1950ರ ಜನವರಿ 26ರಂದು. ಅಂದು ಭಾರತವು ಗಣರಾಜ್ಯವಾಗಿ ಘೋಷಣೆಯಾಗುವುದರೊಂದಿಗೆ, ಶತಮಾನಗಳ ಗುಲಾಮಗಿರಿ ಮತ್ತು ರಾಜಪ್ರಭುತ್ವದ ವ್ಯವಸ್ಥೆಗೆ ಪೂರ್ಣವಿರಾಮ ಬಿದ್ದಿತು.
1947ರಲ್ಲಿ ದೇಶ ವಿಭಜನೆಯಾದಾಗ ಯಾರು ಭಾರತೀಯರು, ಯಾರು ಪಾಕಿಸ್ತಾನಕ್ಕೆ ಸೇರಿದವರು ಎಂದು ಪತ್ತೆಹಚ್ಚುವುದು ಕಷ್ಟಕರವಾಗಿತ್ತು. ಇದಕ್ಕೆ ಶಾಶ್ವತ ಪರಿಹಾರವಾಗಿ ಭಾರತದ ಸಂವಿಧಾನದ 5 ರಿಂದ 11ನೇ ವಿಧಿ ಭಾರತೀಯ ಪೌರತ್ವಕ್ಕೆ ಕಾನೂನಾತ್ಮಕ ಚೌಕಟ್ಟನ್ನು ನೀಡಿತು. ತಾರತಮ್ಯವಿಲ್ಲದೆ ದೇಶದ ಪ್ರತಿಯೊಬ್ಬ ವ್ಯಕ್ತಿಗೂ ಸಮಾನ ರಾಜಕೀಯ ಮತ್ತು ನಾಗರಿಕ ಹಕ್ಕುಗಳನ್ನು ನೀಡಿದ ಐತಿಹಾಸಿಕ ದಿನವದು.

ಸಂವಿಧಾನ ಜಾರಿಯಾದ ನಂತರ, ಪೌರತ್ವವನ್ನು ನಿಯಂತ್ರಿಸಲು ಸರ್ಕಾರ ‘ಪೌರತ್ವ ಕಾಯ್ದೆ 1955’ (‘Citizenship Act 1955’) ಅನ್ನು ಜಾರಿಗೆ ತಂದಿತು. ಅಮೆರಿಕದಂತೆ ಭಾರತದಲ್ಲಿ ರಾಜ್ಯಕ್ಕೊಂದು, ದೇಶಕ್ಕೊಂದು ಪೌರತ್ವವಿಲ್ಲ. ಬದಲಿಗೆ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ನಾವೆಲ್ಲರೂ ಒಂದೇ ಎಂಬ ‘ಏಕ ಪೌರತ್ವ’ ವ್ಯವಸ್ಥೆಯನ್ನು ನಮ್ಮ ಸಂವಿಧಾನ ಒದಗಿಸಿದೆ. 1950ರ ಜನವರಿ 26 ಭಾರತಕ್ಕೆ ಕೇವಲ ಗಣರಾಜ್ಯೋತ್ಸವದ ದಿನವಲ್ಲ. ಅದು ಪ್ರತಿಯೊಬ್ಬ ಭಾರತೀಯನಿಗೂ ಅಧಿಕೃತವಾಗಿ ನಾನು ಈ ದೇಶದ ಪೌರ ಎಂಬ ಗುರುತು ಸಿಕ್ಕ ದಿನವಾಗಿದೆ.
1955ರ ಪೌರತ್ವ ಕಾಯ್ದೆ ಹೇಳೋದೇನು?
ಭಾರತದ ಪೌರತ್ವ ಕಾಯ್ದೆ 1955ರ ಪ್ರಕಾರ, ದೇಶದ ಪೌರತ್ವವನ್ನು ಪಡೆಯಲು ಮತ್ತು ಕಳೆದುಕೊಳ್ಳಲು ಸ್ಪಷ್ಟವಾದ ಕಾನೂನು ಚೌಕಟ್ಟನ್ನು ರೂಪಿಸಲಾಗಿದೆ. ಈ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಭಾರತೀಯ ಪೌರತ್ವವನ್ನು ನಿರ್ಧರಿಸಲಾಗುತ್ತದೆ.
ಭಾರತದ ನೆಲದಲ್ಲಿ ಜನಿಸಿದ ಆಧಾರದ ಮೇಲೆ ಜನ್ಮದ ಮೂಲಕ ಪೌರತ್ವವನ್ನು ನೀಡಲಾಗುತ್ತದೆ. ಒಂದು ವೇಳೆ ಮಗು ಭಾರತದ ಹೊರಗೆ ಜನಿಸಿದರೂ ಆತನ ಪೋಷಕರು ಭಾರತೀಯರಾಗಿದ್ದರೆ ವಂಶಾವಳಿಯ ಮೂಲಕ ಪೌರತ್ವ ಸಿಗುತ್ತದೆ. ಇನ್ನುಳಿದಂತೆ ಭಾರತೀಯ ಮೂಲದವರು ಅಥವಾ ಭಾರತೀಯರನ್ನು ವಿವಾಹವಾದವರು ನೋಂದಣಿ ಪ್ರಕ್ರಿಯೆಯ ಮೂಲಕ ಮತ್ತು ವಿದೇಶಿಗರು ದೀರ್ಘಕಾಲ ಭಾರತದಲ್ಲಿ ವಾಸವಿದ್ದು ಇಲ್ಲಿನ ನಿಯಮಗಳನ್ನು ಪಾಲಿಸುವ ಮೂಲಕ ಸ್ವಾಭಾವೀಕರಣದ ಅಡಿಯಲ್ಲಿ ಪೌರತ್ವವನ್ನು ಪಡೆದುಕೊಳ್ಳಬಹುದು. ಇದೇ ಕಾಯ್ದೆಯ ಸೆಕ್ಷನ್ 8, 9 ಮತ್ತು 10ರ ಅಡಿಯಲ್ಲಿ ಒಬ್ಬ ವ್ಯಕ್ತಿ ತಾನಾಗಿಯೇ ಪೌರತ್ವವನ್ನು ತ್ಯಾಗ ಮಾಡಲು, ಬೇರೆ ದೇಶದ ಪೌರತ್ವ ಪಡೆದಾಗ ಭಾರತದ ಪೌರತ್ವ ರದ್ದಾಗಲು ಅಥವಾ ವಂಚನೆಯಿಂದ ಪೌರತ್ವ ಪಡೆದಿದ್ದರೆ ಸರ್ಕಾರವೇ ಅದನ್ನು ರದ್ದುಪಡಿಸಲು ನೇರ ಅವಕಾಶವಿದೆ.

ಈ ಕಾನೂನಿನ ಪ್ರಕಾರ, ಪಾಸ್‌ಪೋರ್ಟ್ ಎಂಬುದು ಕೇವಲ ವಿದೇಶ ಪ್ರಯಾಣಕ್ಕಾಗಿ ಸರ್ಕಾರ ಕೊಡುವ ಒಂದು ಅನುಮತಿ ಪತ್ರವಷ್ಟೇ ಹೊರತು ಅದು ಪೌರತ್ವದ ಏಕೈಕ ಪುರಾವೆಯಲ್ಲ. ನಾಗರಿಕರು ತಮ್ಮ ಪೌರತ್ವವನ್ನು ಸಾಬೀತುಪಡಿಸಲು ಅಥವಾ ಅದಕ್ಕಾಗಿ ಅರ್ಜಿ ಸಲ್ಲಿಸಲು ಸರ್ಕಾರದಿಂದ ಅಧಿಕೃತವಾಗಿ ನೀಡಲಾಗುವ ಜನನ ಪ್ರಮಾಣಪತ್ರ, ವಾಸಸ್ಥಳ ದೃಢೀಕರಣ ಪತ್ರ ಹಾಗೂ ಪಾಲಕತ್ವ ಪ್ರಮಾಣಪತ್ರ ಸೇರಿದಂತೆ ಪ್ರಮುಖ ನಾಗರಿಕ ದಾಖಲೆಗಳನ್ನು ಮೂಲ ಆಧಾರವಾಗಿ ಬಳಸಿಕೊಳ್ಳಬಹುದು ಎಂದು ಕಾಯ್ದೆಯಲ್ಲಿ ಸ್ಪಷ್ಟಪಡಿಸಲಾಗಿದೆ.
1967ರ ಪಾಸ್‌ಪೋರ್ಟ್ ಕಾಯ್ದೆ ಏನು ಹೇಳುತ್ತದೆ?
ಭಾರತದಲ್ಲಿ ಪಾಸ್‌ಪೋರ್ಟ್ ವಿತರಣೆಯನ್ನು ನಿಯಂತ್ರಿಸುವುದು 1967ರ ಪಾಸ್‌ಪೋರ್ಟ್‌ಗಳ ಕಾಯ್ದೆ. ಕೇಂದ್ರ ಸರ್ಕಾರಕ್ಕೆ ಭಾರತೀಯರ ವಿದೇಶ ಪ್ರಯಾಣವನ್ನು ವ್ಯವಸ್ಥಿತವಾಗಿ ನಿರ್ವಹಿಸುವ ಸರ್ವಾಧಿಕಾರವನ್ನು ‘ಪಾಸ್‌ಪೋರ್ಟ್ ಕಾಯ್ದೆ 1967’ ಒದಗಿಸಿಕೊಡುತ್ತದೆ. ಈ ಕಾನೂನಿನ ಅಡಿಯಲ್ಲಿ ಪ್ರಮುಖ ನಿಯಮಾವಳಿಗಳು ಜಾರಿಯಲ್ಲಿದ್ದು, ಗಡಿ ದಾಟುವ ಪ್ರತಿಯೊಬ್ಬ ವ್ಯಕ್ತಿಯೂ ಇವುಗಳನ್ನು ಪಾಲಿಸುವುದು ಕಡ್ಡಾಯವಾಗಿದೆ.
ಅಧಿಕೃತವಾದ ಪ್ರಯಾಣದ ಪತ್ರಗಳು ಅಥವಾ ಚಾಲ್ತಿಯಲ್ಲಿರುವ ಪಾಸ್‌ಪೋರ್ಟ್ ಇಲ್ಲದೆ ಯಾವುದೇ ವ್ಯಕ್ತಿ ಭಾರತದ ಗಡಿಯನ್ನು ದಾಟುವಂತಿಲ್ಲ. ಇಂತಹ ದಾಖಲೆಗಳಿಲ್ಲದೆ ದೇಶದಿಂದ ಹೊರಹೋಗಲು ಪ್ರಯತ್ನಿಸುವುದೂ ಸಹ ಕಾನೂನುಬಾಹಿರ ಹಾಗೂ ಅಪರಾಧ ಎಂದು ಪರಿಗಣಿಸಲಾಗುತ್ತದೆ. ಇನ್ನೂ ಒಬ್ಬ ವ್ಯಕ್ತಿಯ ಬಳಿ ಪಾಸ್‌ಪೋರ್ಟ್ ಇದೆ ಎಂದ ಮಾತ್ರಕ್ಕೆ ಅದು ಆತನ ಭಾರತೀಯ ಪೌರತ್ವವನ್ನು ಸಾಬೀತುಪಡಿಸುವ ಅಂತಿಮ ಅಥವಾ ಏಕೈಕ ದಾಖಲೆಯಾಗಲು ಸಾಧ್ಯವಿಲ್ಲ.

ಸೆಕ್ಷನ್ 20: ಪಾಸ್‌ಪೋರ್ಟ್ ಕೇವಲ ಪ್ರಯಾಣದ ದಾಖಲೆಗಳೇ ಹೊರತು ಭಾರತೀಯ ಪೌರತ್ವದ ಪುರಾವೆಯಲ್ಲ
ಸೆಕ್ಷನ್ 3: ಮಾನ್ಯತೆ ಇರುವ ಪಾಸ್‌ಪೋರ್ಟ್ ಇಲ್ಲದೆ ಭಾರತದ ಗಡಿ ದಾಟುವಂತಿಲ್ಲ ಹಾಗೂ ಭಾರತದ ಒಳಗೆ ಅಕ್ರಮವಾಗಿ ನುಸುಳುವಂತಿಲ್ಲ
ಸೆಕ್ಷನ್ 6(2)(ಎ)): ಅರ್ಜಿದಾರರು ಭಾರತದ ನಾಗರಿಕರಾಗಿದ್ದರೆ ಮಾತ್ರ ಪಾಸ್‌ಪೋರ್ಟ್ ನೀಡಬೇಕು, ಇಲ್ಲದಿದ್ದರೆ ತಿರಸ್ಕರಿಸುವ ಅಧಿಕಾರ ಪ್ರಾಧಿಕಾರಕ್ಕಿದೆ.
ಸೆಕ್ಷನ್ 12: ಭಾರತದ ನಾಗರಿಕನಲ್ಲದ ವ್ಯಕ್ತಿ ಸುಳ್ಳು ಮಾಹಿತಿ ಅಥವಾ ರಾಷ್ಟ್ರೀಯತೆ ಮರೆಮಾಚಿ ಪಾಸ್‌ಪೋರ್ಟ್ ಪಡೆದರೆ ಅದು ಶಿಕ್ಷಾರ್ಹ ಅಪರಾಧವಾಗುತ್ತದೆ.
ಪಾಸ್‌ಪೋರ್ಟ್ ಹೊಂದುವ ಹಕ್ಕು:
ಈ ಕಾಯ್ದೆಯ ಪ್ರಕಾರ, ಪ್ರತಿಯೊಬ್ಬ ಭಾರತೀಯ ಪ್ರಜೆಗೂ ವಿದೇಶಕ್ಕೆ ಪ್ರಯಾಣಿಸಲು ಪಾಸ್‌ಪೋರ್ಟ್ ಪಡೆಯುವ ಕಾನೂನಾತ್ಮಕ ಹಕ್ಕಿದೆ. ಸರ್ಕಾರದ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕಾರಣವಿಲ್ಲದೆ ಅಥವಾ ಕಾನೂನುಬಾಹಿರವಾಗಿ ಪಾಸ್‌ಪೋರ್ಟ್ ನಿರಾಕರಿಸುವಂತಿಲ್ಲ.
ವಿವಿಧ ರೀತಿಯ ಪ್ರಯಾಣ ದಾಖಲೆಗಳು:
ಈ ಕಾಯ್ದೆಯಡಿ ಮೂರು ಮುಖ್ಯ ರೀತಿಯ ಪಾಸ್‌ಪೋರ್ಟ್‌ಗಳನ್ನು ನೀಡಲಾಗುತ್ತದೆ:
- ನೀಲಿ (Ordinary Passport): ಸಾಮಾನ್ಯ ಪ್ರಜೆಗಳ ವಿದೇಶಿ ಪ್ರಯಾಣಕ್ಕಾಗಿ (ಉದ್ಯೋಗ, ಪ್ರವಾಸ, ಶಿಕ್ಷಣ). ಇದು ನೀಲಿ ಬಣ್ಣದಲ್ಲಿರುತ್ತದೆ.
- ಬಿಳಿ (Official Passport): ಉನ್ನತ ಶ್ರೇಣಿಯ ಸರ್ಕಾರಿ ಅಧಿಕಾರಿಗಳು ಮತ್ತು ಸರ್ಕಾರಿ ಪರವಾಗಿ ಅಧಿಕೃತ ಕರ್ತವ್ಯದ ಮೇಲೆ ವಿದೇಶಕ್ಕೆ ಪ್ರಯಾಣಿಸುವವರಿಗೆ ನೀಡಲಾಗುತ್ತದೆ. ಇದು ಬಿಳಿ ಬಣ್ಣದ್ದಾಗಿರುತ್ತದೆ.
- ಕೆಂಪು (Diplomatic Passport): ಉನ್ನತ ಶ್ರೇಣಿಯ ಸರ್ಕಾರಿ ಅಧಿಕಾರಿಗಳು, ರಾಜತಾಂತ್ರಿಕರು, ರಾಯಭಾರಿಗಳು ಮತ್ತು ಭಾರತೀಯ ವಿದೇಶಾಂಗ ಸೇವೆ (IFS) ಅಧಿಕಾರಿಗಳಿಗೆ ಈ ಪಾಸ್‌ಪೋರ್ಟ್ ನೀಡಲಾಗುತ್ತದೆ. ಇದು ಮರೂನ್ ಬಣ್ಣದ್ದಾಗಿರುತ್ತದೆ.

ಪಾಸ್‌ಪೋರ್ಟ್ ನಿರಾಕರಣೆ ಅಥವಾ ಮುಟ್ಟುಗೋಲು
ಕಾಯ್ದೆಯ ಸೆಕ್ಷನ್ 6 ಮತ್ತು 10ರ ಅಡಿಯಲ್ಲಿ, ಸರ್ಕಾರವು ಕೆಲವು ನಿರ್ದಿಷ್ಟ ಸಂದರ್ಭಗಳಲ್ಲಿ ಪಾಸ್‌ಪೋರ್ಟ್ ನೀಡಲು ನಿರಾಕರಿಸಬಹುದು ಅಥವಾ ಇರುವ ಪಾಸ್‌ಪೋರ್ಟ್ ಅನ್ನು ಮುಟ್ಟುಗೋಲು ಹಾಕಿಕೊಳ್ಳಬಹುದು:
- ಅರ್ಜಿದಾರನು ಭಾರತದ ಪ್ರಜೆಯಾಗಿಲ್ಲದಿದ್ದರೆ.
- ಆ ವ್ಯಕ್ತಿಯ ವಿದೇಶ ಪ್ರಯಾಣದಿಂದ ಭಾರತದ ಸಾರ್ವಭೌಮತ್ವ, ಭದ್ರತೆ ಅಥವಾ ವಿದೇಶಗಳೊಂದಿಗಿನ ಬಾಂಧವ್ಯಕ್ಕೆ ಧಕ್ಕೆಯುಂಟಾಗುತ್ತದೆ ಎಂದು ಕಂಡುಬಂದರೆ.
- ಅರ್ಜಿದಾರನ ವಿರುದ್ಧ ಭಾರತದ ಯಾವುದೇ ನ್ಯಾಯಾಲಯದಲ್ಲಿ ಕ್ರಿಮಿನಲ್ ಪ್ರಕರಣ ಬಾಕಿ ಇದ್ದರೆ ಅಥವಾ ಆತನ ಬಂಧನಕ್ಕೆ ವಾರಂಟ್ ಜಾರಿಯಾಗಿದ್ದರೆ.
- ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಆತ ದೇಶ ಬಿಟ್ಟು ಹೋಗುವುದು ಸೂಕ್ತವಲ್ಲ ಎಂದು ಸರ್ಕಾರ ಭಾವಿಸಿದರೆ.
ಅಪರಾಧ ಮತ್ತು ಶಿಕ್ಷೆಗಳು:
- ತಪ್ಪು ಮಾಹಿತಿ ನೀಡಿ ಪಾಸ್‌ಪೋರ್ಟ್ ಪಡೆಯುವುದು, ನಕಲಿ ಪಾಸ್‌ಪೋರ್ಟ್ ಬಳಸುವುದು ಅಥವಾ ಕಾನೂನುಬಾಹಿರವಾಗಿ ದೇಶದ ಗಡಿ ದಾಟುವುದು ಅಪರಾಧವಾಗಿದೆ.
- ಇಂತಹ ಅಪರಾಧಗಳಿಗೆ ದಂಡ ಮತ್ತು 2 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ (ಕೆಲವು ಗಂಭೀರ ಪ್ರಕರಣಗಳಲ್ಲಿ ಶಿಕ್ಷೆ ಇನ್ನೂ ಹೆಚ್ಚಾಗಬಹುದು).
1967ಕ್ಕಿಂತ ಮುಂಚೆ, ಪಾಸ್‌ಪೋರ್ಟ್ ನೀಡುವುದು ಸಂಪೂರ್ಣವಾಗಿ ಸರ್ಕಾರದ ವಿವೇಚನೆಗೆ ಬಿಡಲಾಗಿತ್ತು. ಆದರೆ ‘ಸತ್ಬಂತ್ ಸಿಂಗ್ ವರ್ಸಸ್ ಅಸಿಸ್ಟೆಂಟ್ ಪಾಸ್‌ಪೋರ್ಟ್ ಆಫೀಸರ್‘ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್, ವಿದೇಶಕ್ಕೆ ಪ್ರಯಾಣಿಸುವುದು ಸಂವಿಧಾನದ ಆರ್ಟಿಕಲ್ 21ರ ಅಡಿಯ ಜೀವಿಸುವ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕಿನ ಭಾಗವಾಗಿದೆ ಎಂದು ತೀರ್ಪು ನೀಡಿತು. ಈ ತೀರ್ಪಿನ ನಂತರವೇ ಭಾರತ ಸರ್ಕಾರವು ಈ ವ್ಯವಸ್ಥಿತವಾದ ‘ಪಾಸ್‌ಪೋರ್ಟ್ ಕಾಯ್ದೆ 1967’ ಅನ್ನು ಜಾರಿಗೆ ತಂದಿತು.

ವಿದೇಶಿಗರಿಗೂ ಪಾಸ್‌ಪೋರ್ಟ್ ಸಿಗುತ್ತದೆಯಾ?
ಹೌದು, ಪಾಸ್‌ಪೋರ್ಟ್ ಕಾಯ್ದೆಯ ಸೆಕ್ಷನ್ 20ರ ಅಡಿಯಲ್ಲಿ ಒಂದು ವಿಶೇಷ ವಿನಾಯಿತಿ ಇದೆ. ಸಾರ್ವಜನಿಕ ಹಿತಾಸಕ್ತಿ ಅಥವಾ ರಾಷ್ಟ್ರದ ಹಿತದೃಷ್ಟಿಯಿಂದ ಅಗತ್ಯವೆಂದು ಕಂಡುಬಂದರೆ, ಭಾರತದ ನಾಗರಿಕನಲ್ಲದ ವ್ಯಕ್ತಿಗೂ ಭಾರತ ಸರ್ಕಾರ ಪಾಸ್‌ಪೋರ್ಟ್ ಅಥವಾ ಪ್ರಯಾಣ ದಾಖಲೆಯನ್ನು ನೀಡಲು ಕಾನೂನಿನಲ್ಲಿ ಅವಕಾಶವಿದೆ. ಹೀಗಾಗಿಯೇ, ಪಾಸ್‌ಪೋರ್ಟ್ ಹೊಂದಿದ ತಕ್ಷಣ ಒಬ್ಬ ವ್ಯಕ್ತಿ ಭಾರತದ ಪೌರ ಎಂದು ಕಣ್ಣುಮುಚ್ಚಿ ನಂಬಲು ಸಾಧ್ಯವಿಲ್ಲ.
ವೋಟರ್ ಐಡಿ, ಆಧಾರ್ ಯಾಕೆ?
ಮತದಾರರ ಗುರುತಿನ ಚೀಟಿ ಮತ್ತು ಆಧಾರ್ ಕಾರ್ಡ್ ಎರಡೂ ಭಾರತದಲ್ಲಿ ಪ್ರತಿಯೊಬ್ಬ ಪ್ರಜೆಯೂ ಹೊಂದಿರಬೇಕಾದ ಅತ್ಯಂತ ಪ್ರಮುಖ ದಾಖಲೆಗಳು.
ಭಾರತದ ಪ್ರಜೆಯಾಗಿ ದೇಶದ ಚುಕ್ಕಾಣಿ ಹಿಡಿಯುವ ಸರ್ಕಾರವನ್ನು ಆಯ್ಕೆ ಮಾಡಲು (ಮತ ಚಲಾಯಿಸಲು) ವೋಟರ್ ಐಡಿ ಕಡ್ಡಾಯವಾಗಿ ಬೇಕು. ಇದನ್ನು ಭಾರತೀಯ ಚುನಾವಣಾ ಆಯೋಗ ನೀಡುತ್ತದೆ. ನಿಮಗೆ ಭಾರತದಲ್ಲಿ ಮತದಾನದ ಅರ್ಹತೆ ಇದೆ ಎಂಬುದಕ್ಕೆ ಇದು ಕಾನೂನಾತ್ಮಕ ಪುರಾವೆ.

ಆಧಾರ್ ಕಾರ್ಡ್ ಅನ್ನು UIDAI ನೀಡುತ್ತದೆ. ಇದು ನಿಮ್ಮ ಬಯೋಮೆಟ್ರಿಕ್ ಆಧಾರಿತ ಗುರುತಿನ ಚೀಟಿಯಾಗಿದೆ. ದೇಶದ ಪ್ರತಿಯೊಬ್ಬ ವ್ಯಕ್ತಿಗೂ ಪ್ರತ್ಯೇಕವಾದ 12 ಅಂಕಿಗಳ ಸಂಖ್ಯೆಯನ್ನು ಇದು ನೀಡುತ್ತದೆ. ಸರ್ಕಾರದ ಸಬ್ಸಿಡಿಗಳು ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಬರಬೇಕಾದರೆ ಆಧಾರ್ ಲಿಂಕ್ ಇರಬೇಕು. ಬ್ಯಾಂಕ್ ಖಾತೆ ತೆರೆಯಲು, ಹೊಸ ಮೊಬೈಲ್ ಸಿಮ್ ಕಾರ್ಡ್ ಪಡೆಯಲು, ಪಾಸ್‌ಪೋರ್ಟ್ ಅರ್ಜಿಗೆ ಮತ್ತು ಆದಾಯ ತೆರಿಗೆ ಸಲ್ಲಿಸಲು ಆಧಾರ್ ಕಡ್ಡಾಯ.
ಆಧಾರ್ ಕಾರ್ಡ್ ನಿಮ್ಮ ವೈಯಕ್ತಿಕ ಗುರುತು ಮತ್ತು ವಿಳಾಸಕ್ಕೆ ಪುರಾವೆಯಾಗಿದೆಯೇ ಹೊರತು, ಅದು ನಿಮಗೆ ಭಾರತದ ಪೌರತ್ವದ ದಾಖಲೆಯಲ್ಲ. ವೋಟರ್ ಐಡಿ ನಿಮಗೆ ಭಾರತದ ಪ್ರಜೆಯಾಗಿ ಮತದಾನ ಮಾಡುವ ಅಧಿಕಾರವನ್ನು ನೀಡುತ್ತದೆ. ಹಾಗಾಗಿ, ದೇಶದ ಸೌಲಭ್ಯಗಳನ್ನು ಪಡೆಯಲು ಆಧಾರ್ ಕಾರ್ಡ್ ಬೇಕು, ದೇಶದ ಪ್ರಜೆಯಾಗಿ ನಿಮ್ಮ ಹಕ್ಕನ್ನು ಚಲಾಯಿಸಲು ವೋಟರ್ ಐಡಿ ಬೇಕು.

ಹಾಗಾದ್ರೆ ಪೌರತ್ವದ ದಾಖಲೆ ಯಾವುದು?
ಜನನ ಪ್ರಮಾಣ ಪತ್ರ:
ಜನನ ಪ್ರಮಾಣ ಪತ್ರವು ಒಬ್ಬ ವ್ಯಕ್ತಿ ಭಾರತದಲ್ಲಿ ಹುಟ್ಟಿದ್ದಾನೆ ಎಂಬುದಕ್ಕೆ ಇರುವ ಪ್ರಾಥಮಿಕ ಪುರಾವೆಯಾಗಿದೆ. ಆದರೆ, ಕೇವಲ ಭಾರತದಲ್ಲಿ ಹುಟ್ಟಿದ ತಕ್ಷಣ ಪೌರತ್ವ ಸಿಗುವುದಿಲ್ಲ.
1987 ಜುಲೈ 1ಕ್ಕಿಂತ ಮುಂಚೆ: ಈ ಅವಧಿಗಿಂತ ಮೊದಲು ಭಾರತದಲ್ಲಿ ಜನಿಸಿದ ಯಾರೇ ಆದರೂ, ಅವರ ಪೋಷಕರು ಯಾವುದೇ ದೇಶದವರಾಗಿದ್ದರೂ, ಅವರು ಹುಟ್ಟಿನಿಂದಲೇ ನೇರವಾಗಿ ಭಾರತದ ಪೌರರಾಗುತ್ತಾರೆ. ಈ ಸಂದರ್ಭದಲ್ಲಿ ಜನನ ಪ್ರಮಾಣ ಪತ್ರವೇ ಪುರಾವೆ.

1987 ಜುಲೈ 1ರಿಂದ 2004 ಡಿಸೆಂಬರ್ 3 ರವರೆಗೆ: ಈ ಅವಧಿಯಲ್ಲಿ ಭಾರತದಲ್ಲಿ ಜನಿಸಿದವರ ಜನನ ಪ್ರಮಾಣ ಪತ್ರದ ಜೊತೆಗೆ, ಅವರ ಪೋಷಕರಲ್ಲಿ ಯಾರಾದರೂ ಒಬ್ಬರು ಭಾರತದ ಪ್ರಜೆಯಾಗಿರಬೇಕು.
2004ರ ಡಿಸೆಂಬರ್ 3ನಂತರ: ಈ ಅವಧಿಯ ನಂತರ ಭಾರತದಲ್ಲಿ ಜನಿಸಿದ ಮಗುವಿನ ಜನನ ಪ್ರಮಾಣ ಪತ್ರದ ಜೊತೆಗೆ, ಪೋಷಕರಿಬ್ಬರೂ ಭಾರತದ ಪ್ರಜೆಗಳಾಗಿರಬೇಕು ಅಥವಾ ಒಬ್ಬರು ಭಾರತದ ಪ್ರಜೆಯಾಗಿದ್ದು, ಇನ್ನೊಬ್ಬರು ಅಕ್ರಮ ವಲಸಿಗರಾಗಿರಬಾರದು.
ಪೋಷಕರ ಪೌರತ್ವದ ದಾಖಲೆ:
1987ರ ನಂತರ ಭಾರತದಲ್ಲಿ ಜನಿಸಿದವರಿಗೆ ಕೇವಲ ಅವರ ಜನನ ಪ್ರಮಾಣ ಪತ್ರವಿದ್ದರೆ ಸಾಲುವುದಿಲ್ಲ. ಅವರ ತಂದೆ-ತಾಯಿಯ ಪೌರತ್ವವನ್ನು ಸಾಬೀತುಪಡಿಸಬೇಕಾಗುತ್ತದೆ. ಇದಕ್ಕಾಗಿ ಪೋಷಕರ ಈ ಕೆಳಗಿನ ದಾಖಲೆಗಳನ್ನು ಕೇಳಲಾಗುತ್ತದೆ:
- ಪೋಷಕರ ಭಾರತೀಯ ಪಾಸ್‌ಪೋರ್ಟ್.
- ಪೋಷಕರ ವೋಟರ್ ಐಡಿ
- ಪೋಷಕರು ಭಾರತದ ಭೂಮಿಯ ಹಕ್ಕುಗಳನ್ನು ಹೊಂದಿರುವ ಹಳೆಯ ಕಂದಾಯ ದಾಖಲೆಗಳು ಅಥವಾ ಅವರ ಜನನ ಪ್ರಮಾಣ ಪತ್ರ.
ಪಾಸ್‌ಪೋರ್ಟ್ ಹೊಂದಿದ ತಕ್ಷಣ ಒಬ್ಬ ವ್ಯಕ್ತಿ ಭಾರತದ ಪೌರ ಎಂದು ನಂಬಲು ಸಾಧ್ಯವಿಲ್ಲ. ಯಾಕೆಂದರೆ ಭಾರತದ ನಾಗರಿಕನಲ್ಲದ ವ್ಯಕ್ತಿಗೂ ಭಾರತ ಸರ್ಕಾರ ಪಾಸ್‌ಪೋರ್ಟ್ ನೀಡುತ್ತದೆ. ಹೀಗಾಗಿ ಪಾಸ್‌ಪೋರ್ಟ್ ಪೌರತ್ವದ ದಾಖಲೆಯಾಗಿರದೇ ಅದು ಕೇವಲ ಪ್ರಯಾಣದ ದಾಖಲೆಯಷ್ಟೇ. ಭಾರತದ ಪೌರತ್ವ ಪಡೆಯಬೇಕೆಂದರೆ ಜನನ ಪ್ರಮಾಣಪತ್ರ, ವಾಸಸ್ಥಳ ದೃಢೀಕರಣ ಪತ್ರ ಹಾಗೂ ಪಾಲಕತ್ವ ಪ್ರಮಾಣಪತ್ರ ಸೇರಿದಂತೆ ಪ್ರಮುಖ ನಾಗರಿಕ ದಾಖಲೆಗಳನ್ನು ಮೂಲ ಆಧಾರವಾಗಿ ಬಳಸಿಕೊಂಡು ಪೌರತ್ವ ಪ್ರಮಾಣಪತ್ರ ಪಡೆಯಬಹುದು.
