Connect with us

Districts

ಪ್ರಯಾಣಿಕರನ್ನು ಕುರಿಗಳಂತೆ ತುಂಬ್ತಾರೆ, ಟಾಪ್‍ಲ್ಲಿ ಕೂರಿಸ್ತಾರೆ – ತುಮಕೂರಿನಲ್ಲಿ ಖಾಸಗಿ ಬಸ್‍ಗಳಿಂದ ರೂಲ್ಸ್ ಬ್ರೇಕ್

Published

on

ತುಮಕೂರು: ಜಿಲ್ಲೆಯಲ್ಲಿ ಖಾಸಗಿ ಬಸ್ಸುಗಳಿಗೆ ಯಾವುದೇ ಲಂಗು ಲಗಾಮಿಲ್ಲದಂತಾಗಿದೆ. ಬುಧವಾರ ಕೊರಟಗೆರೆಯ ಜಟ್ಟಿ ಅಗ್ರಹಾರದಲ್ಲಿ ಐವರ ಸಾವಿಗೆ ಕಾರಣವಾದ ಖಾಸಗಿ ಬಸ್ಸುಗಳ ಆಟಾಟೋಪ ಮುಂದುವರಿದಿದೆ. ಓವರ್ ಲೋಡ್, ಟಾಪಲ್ಲಿ ಪ್ರಯಾಣ ಎಂದಿನಂತೆ ಸಾಗಿದೆ. ಆದರೂ ಜಿಲ್ಲಾಡಳಿತ, ಆರ್‌ಟಿಓ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದೆ.

ಬುಧವಾರದಂದು ಕೊರಟಗೆರೆಯ ಜಟ್ಟಿ ಅಗ್ರಹಾರದ ಬಳಿ ಓವರ್ ಸ್ಪೀಡಲ್ಲಿ ಬಂದ ಖಾಸಗಿ ಬಸ್ ನಿಯಂತ್ರಣ ತಪ್ಪಿ ಮಗುಚಿದ ಪರಿಣಾಮ ಐವರು ಸಾವನಪ್ಪಿ, 29 ಜನರಿಗೆ ಗಾಯಗೊಂಡ ಘಟನೆ ನಡೆದಿತ್ತು. ಆದರೂ ಖಾಸಗಿ ಬಸ್ಸುಗಳ ಆಟಾಟೋಪಕ್ಕೆ ಬ್ರೇಕ್ ಬಂದಿಲ್ಲ. ತುಮಕೂರು- ಕೊರಟಗೆರೆ-ಮಧುಗಿ ಮಾರ್ಗದಲ್ಲಿ ಬಸ್ಸುಗಳ ಅತಿ ವೇಗ ಮತ್ತೆ ಪ್ರಯಾಣಿಕರ ಪ್ರಾಣಕ್ಕೆ ಸಂಚಕಾರ ತಂದೊಡ್ಡುತ್ತಿದೆ. ಇದನ್ನೂ ಓದಿ: ತುಮಕೂರಿನಲ್ಲಿ ಭೀಕರ ಅಪಘಾತಕ್ಕೆ ಐವರು ಬಲಿ

ಕಡಿಮೆ ಸಮಯದಲ್ಲಿ ತಲುಪಬೇಕು ಎಂಬ ಆತುರದಲ್ಲಿ ಚಾಲಕರು ತಮ್ಮ ಅತೀ ವೇಗದ ಚಾಲನೆ ಮುಂದುವರಿಸಿದ್ದಾರೆ. ಬುಧವಾರ ನಡೆದ ಘಟನೆಯಿಂದ ಎಚ್ಚೆತ್ತುಕೊಳ್ಳದ ಖಾಸಗಿ ಬಸ್ಸಿನ ಚಾಲಕರು ಸಾರ್ವಜನಿಕರ ಜೀವದ ಜೊತೆ ಚೆಲ್ಲಾಟ ಆಡುತಿದ್ದಾರೆ.

ತುಮಕೂರು ನಗರದಲ್ಲಿ ಖಾಸಗಿ ಬಸ್ಸಿನ ಟಾಪಲ್ಲಿ ಕೂತು ಪ್ರಯಾಣಿಸುವವರ ಸಂಖ್ಯೆ ಕಡಿಮೆ ಇದೆ. ಆದರೆ ಮಧುಗಿರಿ-ಶಿರಾ-ತಿಪಟೂರು ಮಾರ್ಗದಲ್ಲಿ ಖಾಸಗಿ ಬಸ್ಸಿನವರು ಆಡಿದ್ದೇ ಆಟವಾಗಿದೆ. ಈ ಮಾರ್ಗದಲ್ಲಿ ಪ್ರತಿ ಬಸ್ಸಿನ ಟಾಪಲ್ಲಿ ಪ್ರಯಾಣಿಕರು ಕುಳಿತು ಪ್ರಯಾಣಿಸುತ್ತಾರೆ. ಬಸ್ಸಿನೊಳಗೆ ಪ್ರಯಾಣಿಕರನ್ನು ಕಿಕ್ಕಿರಿದು ತುಂಬಿ, ಬಾಗಿಲಲ್ಲಿ ನಿಂತು ಪ್ರಯಾಣಿಸುವುದು ಸಾಮಾನ್ಯವಾಗಿದೆ. ವಿಧಿಯಿಲ್ಲದೆ ಸಾರ್ವಜನಿಕರು ಪ್ರಯಾಣಿಸುವಂತಾಗಿದೆ.