ನವದೆಹಲಿ: ಕರ್ನಾಟಕದ 8 ಸಾಧಕರು ಸೇರಿ 2026ನೇ ಸಾಲಿನ ಪದ್ಮ ಪ್ರಶಸ್ತಿಗೆ ಆಯ್ಕೆಯಾಗಿರುವ 131 ಮಂದಿಗೆ ನಾಳೆ (ಮೇ 25) ರಾಷ್ಟ್ರಪತಿ ದ್ರೌದಿ ಮುರ್ಮು ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಸೋಮವಾರ (ಮೇ 25) ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ರಾಷ್ಟ್ರಪತಿಗಳು ದೇಶದ ಅತ್ಯುನ್ನತ ನಾಗರಿಕ ಸೇವಾ ಪ್ರಶಸ್ತಿಗಳಾದ ಪದ್ಮವಿಭೂಷಣ, ಪದ್ಮಭೂಷಣ ಹಾಗೂ ಪದ್ಮಶ್ರೀ ಪ್ರಶಸ್ತಿಯನ್ನ ಸಾಧಕರಿಗೆ ಪ್ರದಾನ ಮಾಡಲಿದ್ದಾರೆ.

ಈ ವರ್ಷ ಒಟ್ಟು 131 ಸಾಧಕರು ಪದ್ಮ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದಾರೆ. ಒಟ್ಟು 5 ಮಂದಿಗೆ ಪದ್ಮವಿಭೂಷಣ, 13 ಮಂದಿಗೆ ಪದ್ಮಭೂಷಣ, 113 ಮಂದಿಗೆ ಪದ್ಮಶ್ರೀ ಪ್ರಶಸ್ತಿ ವಿತರಿಸಲಾಗುತ್ತಿದೆ. ಇದರಲ್ಲಿ ಕರ್ನಾಟಕದ 8 ಸಾಧಕರು ನಾಗರಿಕ ಗೌರವಕ್ಕೆ ಪಾತ್ರರಾಗುತ್ತಿದ್ದಾರೆ. ಪ್ರಶಸ್ತಿ ಪುರಸ್ಕೃತರಲ್ಲಿ 19 ಮಹಿಳೆಯರು ಮತ್ತು 16 ದಿವಂಗತ ಗಣ್ಯರಿಗೆ ಮರಣೋತ್ತರ ಗೌರವ ನೀಡಲಾಗುತ್ತಿದೆ.
ಪದ್ಮ ಪ್ರಶಸ್ತಿಗೆ ಆಯ್ಕೆಯಾದ ಕನ್ನಡಿಗರು
ಪುಸ್ತಕ ಪ್ರೇಮಿ ಮಂಡ್ಯದ ಅಂಕೇಗೌಡ (ಸಮಾಜ ಸೇವೆ), ಅಲರ್ಜಿ ತಜ್ಞೆ ಡಾ.ಶುಭ ವೆಂಕಟೇಶ ಅಯ್ಯಂಗಾರ್ (ವಿಜ್ಞಾನ), ಟಿಟಿ ಜಗನ್ನಾಥನ್ (ಕೈಗಾರಿಕೆ), ಪ್ರಭಾಕರ ಕೋರೆ (ಶಿಕ್ಷಣ), ಎಸ್‌ಜಿ ಸುಶೀಲಮ್ಮ(ಸಮಾಜ ಸೇವೆ), ಶಶಿ ಶೇಖರ್ ವೆಂಪತಿ (ಶಿಕ್ಷಣ), ಸುರೇಶ್ ಹನಗವಾಡಿ (ವೈದ್ಯಕೀಯ) ಅವರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ. ಶತಾವಧಾನಿ ಆರ್. ಗಣೇಶ್ (ಕಲೆ ವಿಭಾಗ) ಪದ್ಮಭೂಷಣ ಗೌರವಕ್ಕೆ ಪಾತ್ರರಾಗಿದ್ದಾರೆ.
ಅಲ್ಲದೇ ನಟ ಮಮ್ಮುಟ್ಟಿ, ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಶಿಬು ಸೊರೆನ್ (ಮರಣೋತ್ತರ), ಅಡ್ಮನ್ ಪಿಯೂಷ್ ಪಾಂಡೆ (ಮರಣೋತ್ತರ), ಕೋಟಕ್ ಮಹೀಂದ್ರಾ ಬ್ಯಾಂಕ್ ಸಂಸ್ಥಾಪಕ ಉದಯ್ ಕೋಟಕ್, ಗಾಯಕಿ ಅಲ್ಕಾ ಯಾಗ್ನಿಕ್, ಮಾಜಿ ಟೆನಿಸ್ ಆಟಗಾರ ವಿಜಯ್ ಅಮೃತರಾಜ್, ಮಹಾರಾಷ್ಟ್ರದ ಮಾಜಿ ಗವರ್ನರ್ ಭಗತ್ ಸಿಂಗ್ ಕೋಶ್ಯಾರಿ ಸೇರಿದಂತೆ 13 ಮಂದಿ ಪದ್ಮಭೂಷಣ ಪ್ರಶಸ್ತಿ ಪಡೆದಿದ್ದಾರೆ. ಕ್ರಿಕೆಟಿಗ ರೋಹಿತ್ ಶರ್ಮಾ, ಜೆಎನ್‌ಯು ಮಾಜಿ ಉಪಕುಲಪತಿ ಜಗದೀಶ್ ಕುಮಾರ್ ಸೇರಿದಂತೆ 113 ಮಂದಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಲ್ಲಿ ಸೇರಿದ್ದಾರೆ.
