Connect with us

Districts

ಒಂದೇ ದಿನ ಇಬ್ಬರು ಸಚಿವರು,ಇಬ್ಬರು ಕಾರ್ಯದರ್ಶಿಗಳ ಭೇಟಿ- ದೆಹಲಿಯಲ್ಲಿ ಮಧ್ವರಾಜ್ ರೌಂಡ್ಸ್

Published

on

ಉಡುಪಿ: ರಾಜ್ಯ ಸರ್ಕಾರದ ಈ ಅವಧಿಯ ಕೊನೆಯ ಬಜೆಟ್ ಮಂಡಿಸುತ್ತಿದ್ದಂತೆ ಮೀನುಗಾರಿಕಾ, ಕ್ರೀಡಾ, ಯುವಜನ ಸಬಲೀಕರಣ ಸಚಿವ ಪ್ರಮೋದ್ ಮಧ್ವರಾಜ್ ದೆಹಲಿಗೆ ಹಾರಿದ್ದಾರೆ. ಕೇಂದ್ರ ಸಚಿವರನ್ನು ಭೇಟಿಯಾಗಿ ತನ್ನ ಇಲಾಖೆಗೆ ಅನುದಾನ ನೀಡುವಂತೆ ಮನವಿ ಸಲ್ಲಿಸಿದ್ದಾರೆ. ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿ ರಾಜ್ಯ ರಾಜಕಾರಣಕ್ಕೆ ಸೂಕ್ತ ಸಲಹೆ ಪಡೆದಿದ್ದಾರೆ.

ಕೇಂದ್ರ ಕ್ರೀಡಾ ಸಚಿವರಾದ ರಾಜ್ಯವರ್ಧನ್ ಸಿಂಗ್ ರಾಥೋಡ್ ರವರನ್ನು ದೆಹಲಿಯಲ್ಲಿರುವ ಅವರ ಕಚೇರಿಯಲ್ಲಿಂದು ಪ್ರಮೋದ್ ಮಧ್ವರಾಜ್ ಭೇಟಿ ಮಾಡಿದರು. ಕರ್ನಾಟಕದ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಕೈಗೊಂಡಿರುವ ಯೋಜನೆಗಳ ಬಗ್ಗೆ ಚರ್ಚೆ ಮಾಡಿದರು. ಕೇಂದ್ರ ಬಿಡುಗಡೆಗೊಳಿಸಬೇಕಾದ ಅನುದಾನವನ್ನು ಸ್ಥಗಿತಗೊಳಿಸಿದ್ದು ಅವುಗಳನ್ನು ಬಿಡುಗಡೆಗೊಳಿಸಲು ಒತ್ತಾಯಿಸಿದರು. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕ್ರೀಡಾ ಸವಲತ್ತುಗಳನ್ನು ಅಭಿವೃದ್ಧಿ ಮಾಡಲು ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆಯೂ ಪ್ರಮೋದ್ ಮಧ್ವರಾಜ್ ಮನವಿ ಮಾಡಿದರು.

ಅಲ್ಲಿಂದ ಮಧ್ವರಾಜ್ ಕೇಂದ್ರದ ಕೃಷಿ ಇಲಾಖೆಯ ಮುಖ್ಯ ಕಾರ್ಯದರ್ಶಿ ಎಸ್.ಕೆ.ಪಟ್ನಾಯಕ್ ಅವರನ್ನು ಭೇಟಿಯಾಗಲು ತೆರಳಿದರು. ರಾಜ್ಯ ಮತ್ತು ಕೇಂದ್ರ ಸಹಭಾಗಿತ್ವದ ಮೀನುಗಾರಿಕಾ ಇಲಾಖೆಯ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಹಾಗೂ ಮೀನುಗಾರರ ಕಲ್ಯಾಣ ಯೋಜನೆಗಳಿಗೆ ಕೇಂದ್ರ ಸರ್ಕಾರ ಅನುದಾನ ತಡೆ ಹಿಡಿದಿದೆ. ಕೇಂದ್ರ ಸರ್ಕಾರದ 80 ಕೋಟಿ ರೂ. ಬಾಕಿ ಅನುದಾನವನ್ನು ಬಿಡುಗಡೆಗೊಳಿಸುವಂತೆ ರಾಜ್ಯ ಸರ್ಕಾರದ ಪರವಾಗಿ ಮನವಿ ಮಾಡಲಾಯಿತು.

ಕೇಂದ್ರದ ಕ್ರೀಡಾ ಕಾರ್ಯದರ್ಶಿ ಮತ್ತು ಕ್ರೀಡಾ ಪ್ರಾಧಿಕಾರದ ನಿರ್ದೇಶಕರಾಗಿರುವ ರಾಹುಲ್ ಭಟ್ನಾಗರ್ ರವರನ್ನು ಭೇಟಿ ಮಾಡಿ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಕೇಂದ್ರ ಸರ್ಕಾರದ ಅನುದಾನವನ್ನು ಮಂಜೂರುಗೋಳಿಸುವಂತೆ ಹಾಗೂ ಇಲಾಖೆಗೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಕಳುಹಿಸಲಾದ ಪ್ರಸ್ತಾವನೆಗಳನ್ನು ಪರಿಶೀಲಿಸಿ ಸಕಾರಾತ್ಮಕವಾಗಿ ಸ್ಪಂದಿಸುವಂತೆ ಮನವಿ ನೀಡಲಾಯಿತು

ಮೋದಿ ಸರ್ಕಾರದಲ್ಲಿ ಅಂಕಿ ಅಂಶ ಮತ್ತು ಕಾರ್ಯಕ್ರಮದ ಅನುಷ್ಠಾನ ಸಚಿವ, ರಾಜ್ಯದ ಮಾಜಿ ಮುಖ್ಯಮಂತ್ರಿ ಸದಾನಂದ ಗೌಡರನ್ನು ದೆಹಲಿಯ ಕಚೇರಿಯಲ್ಲಿ ಭೇಟಿ ಮಾಡಿ ಮೀನುಗಾರಿಕಾ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಗಳನ್ನು ಕಳುಹಿಸಲಾಗಿದೆ. ಸಂಬಂಧಪಟ್ಟವರನ್ನು ಭೇಟಿ ಮಾಡಿ ಮನವಿ ಮಾಡಿರುವುದನ್ನು ಮನವರಿಕೆ ಮಾಡಿದರು. ಪ್ರಸ್ತಾವನೆಗಳನ್ನು ಕೇಂದ್ರ ಸರ್ಕಾರದಿಂದ ಮಂಜೂರು ಮಾಡಿಸಲು ಸಹಕಾರ ನೀಡುವಂತೆ ಪ್ರಮೋದ್ ಮಧ್ಚರಾಜ್ ಡಿ.ವಿ ಸದಾನಂದ ಗೌಡರಲ್ಲಿ ಮನವಿ ಮಾಡಿದರು. ಈ ವೇಳೆ ರಾಜ್ಯ ಮತ್ತು ಕೇಂದ್ರ ರಾಜಕಾರಣ ಬಗ್ಗೆ ಚರ್ಚೆಗಳು ನಡೆದಿದೆ ಎನ್ನಲಾಗಿದೆ.

ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಹಾಗೂ ಮಾಜಿ ಕೇಂದ್ರ ರಕ್ಷಣಾ ಖಾತೆ ಸಚಿವ ಎ.ಕೆ.ಆಂಟನಿಯವರನ್ನು ಇಂದು ಪ್ರಮೋದ್ ಮಧ್ವರಾಜ್ ಭೇಟಿ ಮಾಡಿ ಪಕ್ಷದ ಬೆಳವಣಿಗೆಗಳ ಬಗ್ಗೆ ವಿಚಾರ ವಿಮರ್ಶೆ ನಡೆಸಿ ಅವರಿಂದ ಮಾರ್ಗದರ್ಶನ ಪಡೆದರು.

ದೆಹಲಿ ಪ್ರವಾಸದಲ್ಲಿ ಕೇಂದ್ರದ ಸಚಿವರನ್ನು ಭೇಟಿ ಮಾಡಿ ಇಲಾಖೆಗಳಿಗೆ ಶೀಘ್ರ ಅನುದಾನ ನೀಡುವಂತೆ ಪ್ರಮೋದ್ ಮಧ್ವರಾಜ್ ಒಂದೇ ದಿನ ಒತ್ತಾಯಿಸಿದ್ದಾರೆ. ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದು ಸಚಿವ ಪ್ರಮೋದ್ ಮಧ್ವರಾಜ್ ಪಬ್ಲಿಕ್ ಟಿವಿಗೆ ಹೇಳಿದ್ದಾರೆ.

Click to comment

Leave a Reply

Your email address will not be published. Required fields are marked *

www.publictv.in