* ಅಭಿವೃದ್ಧಿ ಕಾರ್ಯಗಳಿಗೆ ಜನಪ್ರತಿನಿಧಿಗಳ ಸಲಹೆ–ಸಹಕಾರ ಅತ್ಯಗತ್ಯ
* ಅನಾಥ ವಾಹನಗಳ ತೆರವಿಗೆ ಕ್ರಮ
* ತ್ಯಾಜ್ಯ ಸಂಗ್ರಹಣೆಗೆ ಹೊಸ ವ್ಯವಸ್ಥೆ
ಬೆಂಗಳೂರು: ಕೆಲಸಕ್ಕೆ ಸಮರ್ಪಕವಾಗಿ ಹಾಜರಾಗದ ಪೌರಕಾರ್ಮಿಕರನ್ನು ಕೆಲಸದಿಂದ ನಿರ್ದಾಕ್ಷಿಣ್ಯವಾಗಿ ವಜಾಗೊಳಿಸಬೇಕು ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ವಿಷಯಗಳಿಗೆ ಸಂಬಂಧಿಸಿದಂತೆ ಜನಪ್ರತಿನಿಧಿಗಳೊಂದಿಗೆ ವಿಕಾಸಸೌಧದ ಕೊಠಡಿ ಸಂಖ್ಯೆ 318ರಲ್ಲಿ ಇಂದು ನಡೆದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಬಿಎ ಅಸ್ತಿತ್ವಕ್ಕೆ ಬಂದ ಬಳಿಕ ಹೊಸ ವ್ಯವಸ್ಥೆಗೆ ಅಗತ್ಯವಿರುವ ವ್ಯವಸ್ಥಿತ ಕಾರ್ಯವಿಧಾನವನ್ನು ರೂಪಿಸಲಾಗುತ್ತಿದೆ ಎಂದರು.
ಪೌರಕಾರ್ಮಿಕರನ್ನು ನಿಯೋಜಿಸಿರುವ ಸ್ಥಳಗಳಲ್ಲಿ ಸುಮಾರು ಶೇ.30ರಷ್ಟು ಮಂದಿ ಕರ್ತವ್ಯಕ್ಕೆ ಸಮರ್ಪಕವಾಗಿ ಹಾಜರಾಗುತ್ತಿಲ್ಲ. ಕೆಲಸಕ್ಕೆ ನಿಯಮಿತವಾಗಿ ಹಾಜರಾಗದ ಪೌರಕಾರ್ಮಿಕರಿಗೆ ಮೂರು ಬಾರಿ ನೋಟಿಸ್ ನೀಡಲಾಗುವುದು. ನೋಟಿಸ್ಗಳಿಗೆ ಸ್ಪಂದಿಸದಿದ್ದರೆ ನಿಯಮಾನುಸಾರ ಸೇವೆಯಿಂದ ವಜಾಗೊಳಿಸಲು ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.
ಮನೆ ಮನೆಗೆ ತೆರಳಿ ಕಸ ಸಂಗ್ರಹಿಸುವುದು ಪೌರ ಕಾರ್ಮಿಕರ ಆದ್ಯ ಕರ್ತವ್ಯ. ಅವರು ಕಸ ಸಂಗ್ರಹಣೆಗೆ ತೆರಳದಿದ್ದರೆ ಜನ ಕಸವನ್ನು ರಸ್ತೆಗೆ ಎಸೆಯುತ್ತಾರೆ. ಇದರಿಂದ ಅನಗತ್ಯವಾಗಿ ಕಸದ ಬ್ಲಾಕ್ ಸ್ಪಾಟ್ಗಳು ನಿರ್ಮಾಣಗೊಳ್ಳುತ್ತಿವೆ. ಶೇ.30 ರಷ್ಟು ಪೌರ ಕಾರ್ಮಿಕರು ಪ್ರತಿನಿತ್ಯ ತಮ್ಮ ಕೆಲಸಕ್ಕೇ ಹಾಜರಾಗದಿದ್ದಲ್ಲಿ ನಗರವನ್ನು ಸ್ವಚ್ಚವಾಗಿಡುವುದು ಹೇಗೆ ಎಂದು ಅಸಮಾಧಾನ ಹೊರಹಾಕಿದರು.
ಅನಾಥ ವಾಹನಗಳ ತೆರವಿಗೆ ಕ್ರಮ:
ಅನಾಥ ಹಾಗೂ ಬಳಕೆಯಲ್ಲಿಲ್ಲದ ವಾಹನಗಳನ್ನು ತೆರವುಗೊಳಿಸಲು ಗುತ್ತಿಗೆದಾರರನ್ನು ನಿಯೋಜಿಸಲಾಗಿದೆ. ಸ್ಥಳೀಯ ಜನಪ್ರತಿನಿಧಿಗಳು ಈ ಕಾರ್ಯದ ಮೇಲ್ವಿಚಾರಣೆ ನಡೆಸಿ, ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತರುವ ಕೆಲಸ ಮಾಡಬೇಕು. ಇದಲ್ಲದೆ ತ್ಯಾಜ್ಯ ತೆರವುಗೊಳಿಸ ಹಾಗೂ ಖಾಸಗಿ ನಿವೇಶನಗಳಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳುವುದರ ಮೇಲೂ ಮೇಲ್ವಿಚಾರಣೆ ಮಾಡಿ ತೆರವುಗೊಳಿಸುವ ಕೆಲಸಕ್ಕೆ ಕೈಜೋಡಿಸಬೇಕೆಂದು ಮನವಿ ಮಾಡಿದರು.
ತ್ಯಾಜ್ಯ ಸಂಗ್ರಹಣೆಗೆ ಹೊಸ ವ್ಯವಸ್ಥೆ:
ನಗರದಲ್ಲಿ ಘನತ್ಯಾಜ್ಯ ನಿರ್ವಹಣೆಗಾಗಿ ಒಟ್ಟು 33 ಪ್ಯಾಕೇಜ್ಗಳನ್ನು ರೂಪಿಸಲಾಗಿದೆ. ಇದರಲ್ಲಿ 21 ಪ್ಯಾಕೇಜ್ಗಳಿಗೆ ಅನುಮೋದನೆ ದೊರೆತಿದ್ದು, ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡುವ ಪ್ರಕ್ರಿಯೆ ನಡೆಯುತ್ತಿದೆ. ಮುಂದಿನ ಎರಡು ತಿಂಗಳಲ್ಲಿ ಕಾರ್ಯಾರಂಭ ಮಾಡುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಪ್ರಸ್ತುತ ಇರುವ ಆಟೋ ಟಿಪ್ಪರ್ಗಳ ಸಾಮರ್ಥ್ಯ 1 ಟನ್ ಮಾತ್ರವಿದ್ದು, ಹೊಸ ಟೆಂಡರ್ನಲ್ಲಿ ತ್ಯಾಜ್ಯ ಸಂಗ್ರಹಣೆಗೆ 3 ಟನ್ ಸಾಮರ್ಥ್ಯದ ಹೊಸ ವಾಹನಗಳನ್ನು ಬಳಸಲಾಗುವುದು. ಎಲ್ಲಾ ವಾಹನಗಳಿಗೆ ಜಿಪಿಎಸ್ ಅಳವಡಿಕೆ ಕಡ್ಡಾಯವಾಗಿರಲಿದೆ. ಪ್ರತಿಯೊಂದು ಆಟೋಗೆ ನಿರ್ದಿಷ್ಟ ಮಾರ್ಗವನ್ನು ನಿಗದಿಪಡಿಸಲಾಗುವುದು ಹಾಗೂ ಪ್ರತಿದಿನವೂ ನಿಗದಿತ ಮಾರ್ಗದಲ್ಲಿ ಸಂಚರಿಸಿ ತ್ಯಾಜ್ಯ ಸಂಗ್ರಹಿಸುವುದು ಕಡ್ಡಾಯವಾಗಿರಲಿದೆ.
ಸಾರ್ವಜನಿಕರು ರಸ್ತೆಗಳಲ್ಲಿ ತ್ಯಾಜ್ಯವನ್ನು ಬಿಸಾಡುವ ಪದ್ಧತಿಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ರಸ್ತೆ ಬದಿಯಲ್ಲಿ ಕಸದ ಡಬ್ಬಿಗಳನ್ನು ಇಡುವ ಪದ್ಧತಿಯನ್ನು ಮುಂದುವರಿಸಲಾಗುವುದಿಲ್ಲ. ಪ್ರತಿಯೊಂದು ಮನೆಗೂ ತ್ಯಾಜ್ಯ ಸಂಗ್ರಹಣಾ ವಾಹನವನ್ನು ಕಳುಹಿಸಲಾಗುವುದು. ಸಾರ್ವಜನಿಕರು ತಮ್ಮ ಮನೆಯ ತ್ಯಾಜ್ಯವನ್ನು ಕಡ್ಡಾಯವಾಗಿ ವಾಹನಕ್ಕೆ ನೀಡಬೇಕು. ರಸ್ತೆ ಬದಿಯಲ್ಲಿ ತ್ಯಾಜ್ಯ ಹಾಕಬಾರದು ಎಂದು ಸಚಿವರು ಮನವಿ ಮಾಡಿದರು.
ಸಾರ್ವಜನಿಕರಿಗೆ ನಿಗದಿತ ಸಮಯದಲ್ಲಿ ತ್ಯಾಜ್ಯ ನೀಡಲು ಸಾಧ್ಯವಾಗದ ಸಂದರ್ಭಗಳಲ್ಲಿ, ಮನೆಯ ಕಾಂಪೌಂಡ್ ಅಥವಾ ಗ್ರಿಲ್ಗೆ ತ್ಯಾಜ್ಯದ ಚೀಲವನ್ನು ನೇತುಹಾಕಬಹುದು. ತ್ಯಾಜ್ಯ ಸಂಗ್ರಹಣಾ ಸಿಬ್ಬಂದಿ ಅಲ್ಲಿಂದಲೇ ಅದನ್ನು ಸಂಗ್ರಹಿಸಿ, ಡಬ್ಬಿಗಳನ್ನು ಅಲ್ಲಿಯೇ ಇಡಲಾಗುವುದೆಂದು ಸೂಚನೆ ನೀಡಿದರು.
ಪ್ರಸ್ತುತ ಪ್ರತಿನಿತ್ಯ 5200 ಮೆ.ಟ ತ್ಯಾಜ್ಯ ಸಂಗ್ರಹಿಸುವ ಸಾಮರ್ಥ್ಯವಿದ್ದು, ಹೊಸ ಟೆಂಡರ್ ವ್ಯವಸ್ಥೆಯಡಿ ದಿನಕ್ಕೆ ಸುಮಾರು 9,000 ಮೆ. ಟನ್ ತ್ಯಾಜ್ಯವನ್ನು ಸಂಗ್ರಹಿಸಿ ಸಾಗಿಸುವ ಸಾಮರ್ಥ್ಯ ಹೊಂದಿರುವ ವ್ಯವಸ್ಥೆಯನ್ನು ರೂಪಿಸಲಾಗುತ್ತಿದೆ. ಸಾರ್ವಜನಿಕರು ಎಷ್ಟು ಪ್ರಮಾಣದ ತ್ಯಾಜ್ಯ ನೀಡಿದರೂ ಅದನ್ನು ಸಮರ್ಪಕವಾಗಿ ಸಂಗ್ರಹಿಸಿ ವಿಲೇವಾರಿ ಮಾಡುವ ವ್ಯವಸ್ಥೆ ಮಾಡಲಾಗುವುದು. ಈ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ವಿಶೇಷ ಅಭಿಯಾನ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.
ಜನಪ್ರತಿನಿಧಿಗಳ ಪ್ರಮುಖ ಅಭಿಪ್ರಾಯಗಳು ಹಾಗೂ ಸಲಹೆಗಳು:
ಸಭೆಯಲ್ಲಿ ಸಂಸದರು, ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ನಗರದ ಅಭಿವೃದ್ಧಿ ಹಾಗೂ ಸಾರ್ವಜನಿಕ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಹಲವು ಪ್ರಮುಖ ಅಭಿಪ್ರಾಯ ಹಾಗೂ ಸಲಹೆಗಳನ್ನು ನೀಡಿದರು.
* ಒಂಟಿ ಮನೆಗಳಿಗೆ ಅನುದಾನ ಹಂಚಿಕೆಯಾಗದಿರುವ ಸಮಸ್ಯೆಯನ್ನು ಪರಿಹರಿಸಿ, ತಂತ್ರಾಂಶದಲ್ಲಿರುವ ದೋಷಗಳನ್ನು ಕೂಡಲೇ ಸರಿಪಡಿಸಿ ಅರ್ಹ ಫಲಾನುಭವಿಗಳ ಖಾತೆಗಳಿಗೆ ಹಣ ಜಮೆಯಾಗುವಂತೆ ಕ್ರಮ ಕೈಗೊಳ್ಳಬೇಕು.
* ಬೀದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿದ ಬಳಿಕ ಪಾದಚಾರಿ ಮಾರ್ಗಗಳ ಮೇಲಿನ ಒತ್ತುವರಿ ತೆರವು ಕಾರ್ಯಾಚರಣೆ ಕೈಗೊಳ್ಳಬೇಕು.
* ಪುಲಕೇಶಿನಗರ ಹೆಚ್ಚಿನ ಜನಸಾಂದ್ರತೆಯ ಪ್ರದೇಶವಾಗಿದ್ದು, ಅಲ್ಲಿನ ರಸ್ತೆಗಳ ಅಭಿವೃದ್ಧಿಯನ್ನು ಸಮರ್ಪಕವಾಗಿ ಕೈಗೊಳ್ಳಬೇಕು.
* ಪಾಲಿಕೆಯ ಶಾಲೆಗಳಲ್ಲಿ ಮೂಲಸೌಕರ್ಯಗಳನ್ನು ಸಮರ್ಪಕವಾಗಿ ಕಲ್ಪಿಸಿ, ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು.
* ಆಸ್ತಿಗಳ ಡ್ರೋನ್ ಮೂಲಕ ನಡೆಸಲಾಗುತ್ತಿರುವ ಸರ್ವೇಯಲ್ಲಿ ಹಲವು ದೋಷಗಳು ಕಂಡುಬರುತ್ತಿದ್ದು, ಅವುಗಳನ್ನು ಸರಿಪಡಿಸಬೇಕು.
* ನಗರದಲ್ಲಿ ಗುಣಮಟ್ಟದ ಬೀದಿ ದೀಪಗಳನ್ನು ಅಳವಡಿಸುವುದರ ಜೊತೆಗೆ, ಅವುಗಳ ಸಮರ್ಪಕ ನಿರ್ವಹಣೆಗೆ ಕ್ರಮ ಕೈಗೊಳ್ಳಬೇಕು.
* ಉದ್ಯಾನವನಗಳ ನಿರ್ವಹಣೆ ಸಮರ್ಪಕವಾಗಿ ನಡೆಯುತ್ತಿಲ್ಲ. ಈ ಬಗ್ಗೆ ವಿಶೇಷ ಗಮನಹರಿಸಬೇಕು.
* ನಿವೃತ್ತಿಯಾಗುತ್ತಿರುವ ಪೌರಕಾರ್ಮಿಕರ ಸ್ಥಾನಗಳಿಗೆ ಹೊಸ ಸಿಬ್ಬಂದಿಯನ್ನು ನಿಯೋಜಿಸಲು ಕ್ರಮ ಕೈಗೊಳ್ಳಬೇಕು.
* ಬನಶಂಕರಿ ಮೆಟ್ರೋ ಸ್ಕೈವಾಕ್ ನಿರ್ಮಾಣ ಕಾಮಗಾರಿಯನ್ನು ತ್ವರಿತವಾಗಿ ಕೈಗೊಳ್ಳಬೇಕು.
* ರಸ್ತೆ ಗುಂಡಿಗಳ ಮುಚ್ಚುವಿಕೆಗೆ ಎಷ್ಟು ಹಣ ವ್ಯಯಿಸಲಾಗಿದೆ ಎಂಬುದರ ಕುರಿತು ಶ್ವೇತಪತ್ರ ಹೊರಡಿಸಬೇಕು.
* ಜಲಮಂಡಳಿಯಿಂದ ವಿವಿಧ ಪ್ರದೇಶಗಳಲ್ಲಿ ರಸ್ತೆಗಳನ್ನು ಅಗೆದು ಕಾಮಗಾರಿ ಪೂರ್ಣಗೊಳಿಸಿದ ಬಳಿಕ ರಸ್ತೆ ದುರಸ್ತಿ ಕಾರ್ಯವನ್ನು ಸಮರ್ಪಕವಾಗಿ ಕೈಗೊಳ್ಳಬೇಕು.
* ನಗರದಲ್ಲಿ ಕಾವೇರಿ ನೀರಿನ ಪೂರೈಕೆಯನ್ನು ಸಮರ್ಪಕವಾಗಿ ನಿರ್ವಹಿಸಬೇಕು.
* ನಗರದಲ್ಲಿ ಫ್ಲೆಕ್ಸ್ಗಳು ಹಾಗೂ ಪೋಸ್ಟರ್ಗಳ ಹಾವಳಿ ಹೆಚ್ಚಾಗಿದ್ದು, ಅದಕ್ಕೆ ಪರಿಣಾಮಕಾರಿಯಾಗಿ ಕಡಿವಾಣ ಹಾಕಬೇಕು.
* ಮೆಟ್ರೋ ಕಾಮಗಾರಿಗೆ ವೇಗ ನೀಡುವ ಜೊತೆಗೆ ಮೆಟ್ರೋ ಕಾಮಗಾರಿ ನಡೆಯುತ್ತಿರುವ ಪ್ರದೇಶಗಳಲ್ಲಿ ಹಾಳಾಗಿರುವ ರಸ್ತೆಗಳನ್ನು ತಕ್ಷಣ ದುರಸ್ತಿಪಡಿಸಬೇಕು.
* ಜಾಲಹಳ್ಳಿ ಕ್ರಾಸ್ನಲ್ಲಿ ಕೆಳಸೇತುವೆ ಕಾಮಗಾರಿ ಕೈಗೆತ್ತಿಕೊಂಡು, ತ್ವರಿತವಾಗಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು.
* ಅವೈಜ್ಞಾನಿಕವಾಗಿ ಅಳವಡಿಸಿರುವ ಟ್ರಾನ್ಸ್ಫಾರ್ಮರ್ಗಳನ್ನು ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕು.
* ಸಾರ್ವಜನಿಕರು ಅಧಿಕಾರಿಗಳನ್ನು ಭೇಟಿ ಮಾಡುವ ಸಮಯವನ್ನು ನಿಗದಿಪಡಿಸುವ ವ್ಯವಸ್ಥೆ ಜಾರಿಗೊಳಿಸಬೇಕು.
* ರಸ್ತೆಗಳಲ್ಲಿ ಮಳೆನೀರು ನಿಲ್ಲದಂತೆ ಮಳೆನೀರು ಇಂಗುವ ಗುಂಡಿಗಳ ವ್ಯವಸ್ಥೆ ಸೇರಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು.
* ಬೀದಿ ನಾಯಿಗಳ ಹಾವಳಿ ಹಾಗೂ ನಾಯಿ ಕಡಿತದ ಪ್ರಕರಣಗಳಿಗೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಬೇಕು.
* ಬೇಸ್ಮೆಂಟ್ ಗಳಲ್ಲಿ ವಾಣಿಜ್ಯ ಚಟುವಟಿಕೆಗಳನ್ನು ನಡೆಸುತ್ತಿದ್ದು, ಅದನ್ನು ನಿಂತ್ರಿಸುವ ಕೆಲಸ ಮಾಡಬೇಕು.
* ಆರ್.ಆರ್ ನಗರ ಆರ್ಚ್ ಬಳಿ ಮೇಲ್ಸೇತುವೆ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಅದನ್ನು ಪೂರ್ಣಗೊಳಿಸಲು ಕ್ರಮವಹಿಸಿ.
ಸಭೆಯಲ್ಲಿ ಸಂಸದರಾದ ಡಾ. ಸಿ.ಎನ್ ಮಂಜುನಾಥ್, ತೇಜಸ್ವಿ ಸೂರ್ಯ, ಶಾಸಕರಾದ ಕೆ. ಗೋಪಾಲಯ್ಯ, ದಿನೇಶ್ ಗುಂಡೂರಾವ್, ಮುನಿರತ್ನ, ಉದಯ್ ಬಿ. ಗರುಡಾಚಾರ್, ಎಸ್.ಆರ್ ವಿಶ್ವನಾಥ್, ಎಂ. ಕೃಷ್ಣಪ್ಪ, ಬಿ.ಎ ಬಸವರಾಜು, ಎ.ಸಿ ಶ್ರೀನಿವಾಸ್, ಮಂಜುಳಾ, ಮುನಿರಾಜು, ರಾಜ್ಯಸಭಾ ಸಂಸದರಾದ ಮನ್ಸುರ್ ಅಲಿಖಾನ್, ವಿಧಾನಪರಿಷತ್ ಸದಸ್ಯರಾದ ಕೆ. ಗೋವಿಂದರಾಜು, ರಾಮೋಜಿಗೌಡ, ಗೋಪಿನಾಥ್ ರೆಡ್ಡಿ, ನಾಗರಾಜ್ ಯಾದವ್, ಸುಧಾಮ್ ದಾಸ್, ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್, ವಿಶೇಷ ಆಯುಕ್ತರಾದ ಮುನೀಶ್ ಮೌದ್ಗಿಲ್, ನಿತೀಶ್, ಜಲಮಂಡಳಿ ಅಧ್ಯಕ್ಷರಾದ ಮಂಜುಳಾ, ನಗರ ಪಾಲಿಕೆ ಆಯುಕ್ತರಾದ ರಮೇಶ್ ಡಿ.ಎಸ್, ಪೊಮ್ಮಲ ಸುನೀಲ್ ಕುಮಾರ್, ರಮೇಶ್ ಕೆ.ಎನ್, ಡಾ. ರಾಜೇಂದ್ರ ಕೆ.ವಿ, ಅಪರ ಆಯುಕ್ತರು, ಪ್ರಧಾನ ಅಭಿಯಂತರರು, ಮುಖ್ಯ ಅಭಿಯಂತರರು ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.
