ಬಳ್ಳಾರಿ: ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ರೈತರ ಜೀವನಾಡಿಯಾದ ಟಿಬಿ ಡ್ಯಾಮ್‍ನಲ್ಲಿ ಸುಮಾರು 34 ಟಿಎಂಸಿಯಷ್ಟು ಹೂಳು ತುಂಬಿರುವುದರಿಂದ ನೀರಿನ ಸಂಗ್ರಹ ಕಡಿಮೆಯಾಗಿದೆ. ಆದ್ದರಿಂದ ನವಲಿ ಸಮಾನಾಂತರ ಜಲಾಶಯದ ಅಗತ್ಯವಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ (BY Vijayendra) ಹೇಳಿದ್ದಾರೆ.
5ನೇ ದಿನದ ಬಳ್ಳಾರಿ ಚಲೋ ಪಾದಯಾತ್ರೆ ಅಂಗವಾಗಿ ಇಂದು ನವಲಿ ಜಲಾಶಯದ ವ್ಯಾಪ್ತಿಯಲ್ಲಿನ ರೈತರ ಜೊತೆ ನಡೆದ ಸಂವಾದದಲ್ಲಿ ಮಾತನಾಡಿದ ಅವರು, ಈ ಹಿಂದೆ ಬಿ.ಎಸ್. ಯಡಿಯೂರಪ್ಪ ಅವರು ನವಲಿ ಜಲಾಶಯ ನಿರ್ಮಾಣಕ್ಕೆ ಆಲೋಚನೆ ಮಾಡಿದ್ದರು. ಆನಂತರ ಯಾವುದೇ ಕ್ರಮಗಳು ಆಗಲೇ ಇಲ್ಲ ಎಂದಿದ್ದಾರೆ.
ಅಧಿವೇಶನದಲ್ಲಿ ಜಲಾಶಯದ ಬಗ್ಗೆ ಪ್ರಸ್ತಾಪ
ನಾವು ಪಾದಯಾತ್ರೆ ಆರಂಭಿಸಿದ ನಂತರ ಮಸ್ಕಿಯಲ್ಲಿ ಪಾದಯಾತ್ರೆ ನಡೆಯುತ್ತಿದ್ದಾಗ ವಿಶೇಷ ಅಧಿವೇಶನಕ್ಕೆ ಆಗ್ರಹ ಮಾಡಿದ್ದೆವು. ರೈತರ ಸಮಸ್ಯೆಗಳನ್ನು ಚರ್ಚಿಸಲು ಆಗ್ರಹಿಸಿದ್ದೆವು. ಈಗ ಸಿಎಂ ವಿಶೇಷ ಅಧಿವೇಶನಕ್ಕೆ ಮುಂದಾಗಿದ್ದಾರೆ. ಈ ವಿಶೇಷ ಅಧಿವೇಶನದಲ್ಲಿ ನಾವು ನವಲಿ ಜಲಾಶಯದ ಬಗ್ಗೆಯೂ ಮಾತನಾಡುತ್ತೇವೆ. ಮೂರು ತಿಂಗಳಿಂದ ಬೆಂಗಳೂರು ಬಿಟ್ಟು ಹೊರಗೆ ಬಾರದ ಸಿಎಂ ನಮ್ಮ ಪಾದಯಾತ್ರೆ ಆರಂಭವಾದ ನಂತರ ಉತ್ತರ ಕರ್ನಾಟಕದ ಕಡೆ ಮುಖ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಕಾರ್ಯರೂಪಕ್ಕೆ ತರಲು ಒತ್ತಾಯ
ಸಮಾನಾಂತರ ಜಲಾಶಯದ ಬಗ್ಗೆ ರಾಜ್ಯ ಸರ್ಕಾರ ತೀರ್ಮಾನ ಮಾಡಿ ಬಜೆಟ್‍ನಲ್ಲಿ ಹಣ ಇಡಬೇಕಿತ್ತು. ಇಲ್ಲದಿದ್ದರೆ ಬರದ ಸಂದರ್ಭದಲ್ಲಿ ರೈತರಿಗೆ ನೀರಿಲ್ಲದೆ ತೊಂದರೆಯಾಗಲಿದೆ. ಕೇವಲ ಘೋಷಣೆ ಮಾಡಿದರೆ ಸಾಲದು ಬದಲಿಗೆ ಯೋಜನೆ ಕಾರ್ಯರೂಪಕ್ಕೆ ಬರಬೇಕು. ಕಳೆದ ಬಾರಿ ತುಂಗಾಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಕೊಚ್ಚಿ ಹೋಗಿ ಅಪಾರ ಪ್ರಮಾಣದ ನೀರು ಪೋಲಾಯಿತು. ಗೇಟ್ ರಿಪೇರಿಗೆ ಸರ್ಕಾರ ಎರಡು ವರ್ಷ ತೆಗೆದುಕೊಂಡಿತು. ಇಂತಹ ಸಂದರ್ಭದಲ್ಲಿ ನವಲಿ ಜಲಾಶಯದಂತಹ ಪರ್ಯಾಯ ವ್ಯವಸ್ಥೆ ಇದ್ದರೆ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.
ಸ್ವಾರ್ಥಕೋಸ್ಕರ ನವಲಿ ಜಲಾಶಯಕ್ಕೆ ಮುಂದಾಗಿದ್ದಾರೆ ಎಂದು ಕೆಲವರು ಹೇಳುತ್ತಾರೆ. ಇದರಲ್ಲಿ ರಾಜಕೀಯ ಬೇಡ. ಸಮಾನಾಂತರ ಜಲಾಶಯ ಬೇಕೋ ಅಥವಾ ಟಿಬಿ ಡ್ಯಾಮ್‍ನ ಹೂಳು ತೆಗೆಯಬಹುದೊ ಎಂಬುದರ ಬಗ್ಗೆ ವೈಜ್ಞಾನಿಕವಾಗಿ ಅಧ್ಯಯನ ನಡೆಸಬೇಕು. ಜಲಾಶಯದಲ್ಲಿ ನೀರು ಇದ್ದಾಗ ಹೂಳು ತೆಗೆಯಲು ಆಗುವುದಿಲ್ಲ. ನೀರು ಇಲ್ಲದಿದ್ದಾಗ ಹೂಳು ತೆಗೆಯಬಹುದು. ಯೋಜನೆ ಬಗ್ಗೆ ರೈತ ಮುಖಂಡರಲ್ಲಿ ಗೊಂದಲ ಬೇಡ ಎಂದು ತಿಳಿಸಿದ್ದಾರೆ.
ಜಲಾಶಯದ ಹೂಳು ತೆಗೆಯಲು ತಂತ್ರಜ್ಞಾನ ಇದೆ ಎಂದು ಹೇಳುತ್ತಾರೆ. ಆದರೆ ದೊಡ್ಡ ಪ್ರಮಾಣದ ಹೂಳು ತೆಗೆಯುವುದು ಹೇಗೆ ಎಂಬ ಬಗ್ಗೆ ಪರಿಶೀಲನೆ ಮಾಡಬೇಕಿದೆ. ಈ ಬಗ್ಗೆ ಕೇಂದ್ರ ಸಚಿವರ ಜೊತೆ ಮಾತನಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ.
ರೈತರ ಜೊತೆ ಚೆಲ್ಲಾಟ ಬೇಡ…
ರಾಜ್ಯ ಸರ್ಕಾರದ ಯಾವುದೇ ಯೋಜನೆ ತೆಗೆದುಕೊಳ್ಳಲಿ. ಅದರನ್ನು ಸರಿಯಾದ ಸಮಯದಲ್ಲಿ ಮುಗಿಸಬೇಕು. ಇಲ್ಲದಿದ್ದರೆ ಯೋಜನಾ ವೆಚ್ಚ ಏರಿಕೆಯಾಗಿ ಜನರ ದುಡ್ಡು ವ್ಯರ್ಥವಾಗುತ್ತದೆ. ನಾವೀಗ ವಿರೋಧ ಪಕ್ಷದಲ್ಲಿದ್ದೇವೆ. ಮುಂದೆ ಆಡಳಿತ ಪಕ್ಷವಾಗಬಹುದು. ಕೇವಲ ಚಪ್ಪಾಳೆ ಗಿಟ್ಟಿಸಲು ಮಾತನಾಡುವುದಲ್ಲ. ವಾಸ್ತವಿಕ ಅಂಶಗಳನ್ನು ಇಟ್ಟುಕೊಂಡು ಮಾತನಾಡಬೇಕು. ಇಂತಹ ವಿಷಯದಲ್ಲಿ ರೈತರ ಜೊತೆ ಯಾವುದೇ ಸರ್ಕಾರವಾಗಲಿ, ವಿರೋಧ ಪಕ್ಷವಾಗಲಿ ಚೆಲ್ಲಾಟವಾಡಬಾರದು. ಜವಾಬ್ದಾರಿಯುತವಾಗಿ ನಿಮ್ಮೆಲ್ಲರ ಧ್ವನಿಯಾಗಿ ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ.
ದಬ್ಬಾಳಿಕೆ ನಡೆಯುವುದಿಲ್ಲ
ಜಿಲ್ಲಾ ಉಸ್ತುವಾರಿ ಸಚಿವರು ಹೋರಾಟಗಾರರ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿ ದಬ್ಬಾಳಿಕೆ ಮಾಡ್ತಾ ಇದ್ದಾರೆ ಎಂಬ ಆರೋಪಗಳಿವೆ. ಈ ಬಗ್ಗೆ ಸದನದಲ್ಲಿ ಮಾತನಾಡುತ್ತೇನೆ. ಗೂಂಡಾಗಿರಿ ಮಾಡಿದರೆ ನಡೆಯುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
