ಮುಂಬೈ: ಕೃಷ್ಣ ಜನ್ಮಾಷ್ಟಮಿಯಂದು ಹಮ್ಮಿಕೊಳ್ಳಲಾಗುವ ಮೊಸರು ಕುಡಿಕೆ ಸಂಭ್ರಮದ ವೇಳೆ ದುರಂತ ಸಂಭವಿಸಿದೆ. 7 ವರ್ಷದ ಬಾಲಕ ಸೇರಿ ಇಬ್ಬರು ಸಾವನ್ನಪ್ಪಿರುವ ಎರಡು ಪ್ರತ್ಯೇಕ ಘಟನೆ ಮುಂಬೈ (Mumbai) ಹಾಗೂ ಪುಣೆಯಲ್ಲಿ (Pune) ನಡೆದಿದೆ.
ಮುಂಬೈನ ಮಲಾಡ್ನಲ್ಲಿ ಮೊಸರು ಕುಡಿಕೆ ಉತ್ಸವ ಆಚರಣೆಯ ವೇಳೆ ಸಂಭವಿಸಿದ ಅನಾಹುತದಲ್ಲಿ 7 ವರ್ಷದ ರೂದ್ರ ಕದಮ್ ಸಾವನ್ನಪ್ಪಿದ್ದಾನೆ. ಇನ್ನೂ ಪುಣೆಯಲ್ಲಿ ಮೊಸರು ಕುಡಿಕೆ ಉತ್ಸವ ನಡೆಯುತ್ತಿದ್ದಾಗ ಕಬ್ಬಿಣದ ಚೌಕಟ್ಟು ಕುಸಿದು 45 ವರ್ಷದ ಸಲ್ಮಾ ಸಲಾವುದ್ದೀನ್ ಪಠಾಣ್ ಎಂಬ ಮಹಿಳೆ ಮೃತಪಟ್ಟಿದ್ದಾರೆ. ಜೊತೆಗೆ 42 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: Nepal Flood | ಯಮನ ಜೊತೆ ಸೆಣಸಾಡಿ ಸಾವು ಗೆದ್ದ ವೃದ್ಧೆ – 11 ದಿನಗಳ ಬಳಿಕ ರಕ್ಷಣೆ
ಏಕಾಏಕಿ ಕಂಬ ಕುಸಿದು ಬಾಲಕ ಸಾವು:
ಕುಡಿಕೆಗೆ ಕಟ್ಟಿದ್ದ ಹಗ್ಗವನ್ನು ಮರ ಹಾಗೂ ಕಂಬಕ್ಕೆ ಕಟ್ಟಲಾಗಿತ್ತು. ಮಡಿಕೆ ಒಡೆಯುವಾಗ ಏಕಾಏಕಿ ಕಂಬ ಬಾಲಕನ ಮೇಲೆ ಕುಸಿದಿದೆ. ಪರಿಣಾಮ ತಲೆಗೆ ತೀವ್ರವಾಗಿ ಗಾಯವಾಗಿತ್ತು. ಕೂಡಲೇ ಬಾಲಕನನ್ನು ಆಸ್ಪತ್ರೆಗೆ ಕೊಂಡೊಯ್ದರೂ ಕೂಡ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದರು.
ಪುಣೆಯಲ್ಲಿ ಮೊಸರು ಕುಡಿಕೆ ಉತ್ಸವಕ್ಕಾಗಿ ಡಿಜೆ ಅಳವಡಿಸಲಾಗಿತ್ತು. ಕಾರ್ಯಕ್ರಮ ಮುಗಿದ ಬಳಿಕ ಡಿಜೆ ಸಪೋರ್ಟ್ಗಾಗಿ ನಿಲ್ಲಿಸಿದ್ದ ಕಬ್ಬಿಣದ ಚೌಕಟ್ಟನ್ನು ತೆಗೆಯಲಾಗುತ್ತಿತ್ತು. ಈ ವೇಳೆ ಇದರ ಭಾರವಾದ ಭಾಗವೊಂದು ಮಹಿಳೆ ಮೇಲೆ ಬಿದ್ದಿದ್ದು, ಪರಿಣಾಮ ಸಾವನ್ನಪ್ಪಿದ್ದಾರೆ. ಮೃತರ ಮಗನೇ ಆಯೋಜಕ ಮಂಡಳಿಯಲ್ಲಿದ್ದು, ಹೀಗಾಗಿ ಆಯೋಜಕರ ವಿರುದ್ಧ ದೂರು ನೀಡಲು ಕುಟುಂಬಸ್ಥರು ನಿರಾಕರಿಸಿದ್ದಾರೆ. ಜೊತೆಗೆ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸದಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ.ಇದನ್ನೂ ಓದಿ: ಬಂಗಾಳದ ಶಾಲೆಗಳಲ್ಲಿ ಸೊಳ್ಳೆ ಕಾಟ – ಹೆಣ್ಮಕ್ಕಳು ಸ್ಕರ್ಟ್ ಬದಲು ಸಲ್ವಾರ್ ಹಾಕೊಂಡು ಬರುವಂತೆ ಆರೋಗ್ಯ ಸಚಿವರ ಸಲಹೆ
