– ನಾನು ಸಿಎಂ ಸ್ಥಾನಕ್ಕೆ ಅಗೌರವ ತರುವ ರೀತಿ ಮಾತಾಡಿಲ್ಲ: ವಿಜಯೇಂದ್ರ ಸ್ಪಷ್ಟನೆ
ಬಳ್ಳಾರಿ: ಬಿಜೆಪಿ (BJP) ಪಾದಯಾತ್ರೆ ನಿರ್ಣಾಯಕ ಹಂತಕ್ಕೆ ಬಂದಿದೆ. ಬಿ.ವೈ.ವಿಜಯೇಂದ್ರ (B.Y.Vijayendra) ನೇತೃತ್ವದ ಬಳ್ಳಾರಿ ಚಲೋ (Ballari Chalo) ಇಂದಿಗೆ ಐದು ದಿನ ಪೂರ್ತಿಗೊಳಿಸಿದೆ. ಅರ್ಧ ಪಾದಯಾತ್ರೆ ಮುಗಿಸಿ ನೂರು ಕಿ.ಮೀ ಹಾದಿ ಕ್ರಮಿಸಲಾಗಿದೆ.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಾಗುತ್ತಿರುವ ಬಿಜೆಪಿ ಪಾದಯಾತ್ರೆ ಐದನೇ ದಿನವೂ ಭರಪೂರ ಜನ ಬೆಂಬಲದೊಂದಿಗೆ ಸಾಗಿತು. ಇವತ್ತು ವಿಜಯೇಂದ್ರ ನೇತೃತ್ವದ ಪಾದಯಾತ್ರೆ ನಿರ್ಣಾಯಕ ಘಟ್ಟ ತಲುಪಿದೆ. ಒಟ್ಟು ಹತ್ತು ದಿನಗಳ ಪಾದಯಾತ್ರೆ ಇಂದಿಗೆ ಐದು ದಿನ ಪೂರ್ತಿಗೊಳಿಸಿದೆ. ಒಟ್ಟು 185 ಕಿಮೀವರೆಗೆ ಇರುವ ರಾಯಚೂರು ಟು ಬಳ್ಳಾರಿ ಪಾದಯಾತ್ರೆ ಇಂದಿನವರೆಗೆ ಬರೋಬ್ಬರಿ 101 ಕಿಮೀ ಕ್ರಮಿಸಿ ಬಂದಿದೆ. ಇದನ್ನೂ ಓದಿ: ಬಹಳ ಜನ ನನಗೆ ರಾಜೀನಾಮೆ ಕೊಡಬೇಡಿ ಅಂದ್ರು, ಮಾತು ಕೊಟ್ಟಿದ್ದೇನೆ ಅಂತ ಕೊಟ್ಟೆ: ಸಿದ್ದರಾಮಯ್ಯ
ಇಂದು ಶಿಕ್ಷಕರ ದಿನವಾದ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿದರು. ಬಳಿಕ ಕನಕಗಿರಿ ಕ್ಷೇತ್ರದ ಕಾರಟಗಿ ಪಟ್ಟಣದ ಶರಣಬಸವೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ವಿಜಯೇಂದ್ರ ಪೂಜೆ ಸಲ್ಲಿಸಿದರು. ಮಹಿಳೆಯರು ಆರತಿ ಬೆಳಗಿ ಸ್ವಾಗತಿಸಿದರು. ಬಳಿಕ ಗೋಪೂಜೆ ನೆರವೇರಿಸಿ ಐದನೇ ದಿನದ ಪಾದಯಾತ್ರೆಗೆ ಚಾಲನೆ ಕೊಟ್ಟರು. ಇದೇ ವೇಳೆ ಕಾರಟಗಿಯಲ್ಲಿ ಹಿರಿಯ ಬಿಜೆಪಿ ಕಾರ್ಯಕರ್ತ ವಿರೂಪಾಕ್ಷಪ್ಪ ನಿವಾಸಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದರು.
ಪಾದಯಾತ್ರೆ ಹೊರಡುವ ಮುನ್ನ ಸುದ್ದಿಗೋಷ್ಠಿ ನಡೆಸಿದ ವಿಜಯೇಂದ್ರ, ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ತುರ್ತಾಗಿ ಬರ ಪರಿಹಾರ ಘೋಷಣೆಗೆ ಒತ್ತಾಯಿಸಿದರು. ನಾನು ಸಿಎಂ ಸ್ಥಾನಕ್ಕೆ ಅಗೌರವ ತರುವ ರೀತಿ ಮಾತಾಡಿಲ್ಲ. ರೈತರ ಸಂಕಷ್ಟ ನೋಡಿ ನೋವಲ್ಲಿ ಮಾತಾಡಿದ್ದೇನೆ ಅಷ್ಟೇ. ಸಿಎಂಗೂ, ಅವರ ಸ್ಥಾನಕ್ಕೂ ಗೌರವ ಕಳೆಯುವಂತೆ ಮಾತಾಡಿಲ್ಲ ಎಂದು ಸ್ಪಷ್ಟನೆ ನೀಡಿದರು.
ಮಾಜಿ ಸಚಿವರಾದ ಶ್ರೀರಾಮುಲು, ರಾಜುಗೌಡ ನಾಯಕ್, ಎಂ.ಪಿ.ರೇಣುಕಾಚಾರ್ಯ, ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮತ್ತಿತರರು ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದರು. ಸಾವಿರಾರು ಸಂಖ್ಯೆಯಲ್ಲಿ ಜನ, ಕಾರ್ಯಕರ್ತರು ಭಾಗವಹಿಸಿದರು. ಇಂದು ಬಿಜೆಪಿ ರೆಬೆಲ್ ನಾಯಕ, ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಭಾವಚಿತ್ರ ಇರುವ ಪ್ಲೆಕಾರ್ಡ್‌ಗಳನ್ನು ಹಿಡಿದು ಅವರ ಬೆಂಬಲಿಗರು ಪಾಲ್ಗೊಂಡಿದ್ದು ಗಮನ ಸೆಳೆಯಿತು. ದಾರಿಯ ಅಲ್ಲಲ್ಲಿ ಕಾರ್ಯಕರ್ತರು ಎಂದಿನಂತೆ ವಿಜಯೇಂದ್ರಗೆ ಹಾರ ಹಾಕಿ ಅವರ ಮೇಲೆ ಜೆಸಿಬಿ ಮೂಲಕ ಹೂಮಳೆ ಸುರಿಸಿದರು. ಭೋಜನದ ಬಳಿಕ ವಿಜಯೇಂದ್ರ ರೈತರ ಜೊತೆಗೆ ಸಂವಾದ ನಡೆಸಿದರು. ಬರ, ಕೃಷಿ ಬೆಳೆ ಹಾನಿ, ನೀರಾವರಿ ಸಮಸ್ಯೆಗಳ ಬಗ್ಗೆ ಚರ್ಚಿಸಿದರು. ಇದನ್ನೂ ಓದಿ: ಬಿಜೆಪಿ ಪಾದಯಾತ್ರೆಯಿಂದ ಅವರ ಬಿಪಿ, ಶುಗರ್ ಕಡಿಮೆಯಾಗುತ್ತಿದೆ: ಲಕ್ಷ್ಮಣ್ ಸವದಿ ಟಾಂಗ್
ಇಂದು 22 ಕಿ.ಮೀ ಸಾಗಿದ ಪಾದಯಾತ್ರೆ ಕಾರಟಗಿಯಿಂದ ಗಂಗಾವತಿ ಕ್ಷೇತ್ರದ ಜಂಗಮ ಕಲ್ಗುಡಿ ಬಳಿ ಬಂದು ತಲುಪಿದೆ. ನಾಳೆ ಗಂಗಾವತಿ ಕ್ಷೇತ್ರದಲ್ಲಿ ಪಾದಯಾತ್ರೆ ಸಾಗಲಿದೆ.
