ಮೈಸೂರು: ಅರಮನೆಯ ಆವರಣದಲ್ಲಿರುವ ದಸರಾ ಗಜಪಡೆಗೆ ನಾಳೆಯಿಂದ (ಸೆ.6) ತಾಲೀಮು ಆರಂಭವಾಗಲಿದೆ. ಅರಮನೆಯಿಂದ ಬನ್ನಿಮಂಟಪದವರೆಗೂ ಈ ತಾಲೀಮು ಪ್ರತಿ ದಿನ ಬೆಳಗ್ಗೆ ಮತ್ತು ಸಂಜೆ ನಡೆಯಲಿದೆ.
ನಾಳೆಯಿಂದಲೇ ಆನೆಗಳಿಗೆ ಭಾರ ಹೊರಿಸುವ ತಾಲೀಮು ನಡೆಸಲಾಗುತ್ತದೆ. ಮೂರರಿಂದ ನಾಲ್ಕು ಆನೆಗಳಿಗೆ ಹಂತ ಹಂತವಾಗಿ ಭಾರ ಹೊರಿಸುವ ತಾಲೀಮು ನಡೆಸುತ್ತೇವೆ. ತಾಲೀಮು ನಡೆಯುವ ವೇಳೆ ಆನೆಗಳನ್ನು ನೋಡಲು ಹೆಚ್ಚು ಜನರು ಸೇರುತ್ತಾರೆ. ಹೀಗಾಗಿ ಜನರು ಆನೆಗಳಿಂದ ಅಂತರ ಕಾಯ್ದುಕೊಳ್ಳಬೇಕು. ದೂರದಿಂದಲೇ ಆನೆಗಳನ್ನು ನೋಡಿ ಆನಂದಿಸಬೇಕು ಎಂದು ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್ ತಿಳಿಸಿದ್ದಾರೆ. ಇದನ್ನೂ ಓದಿ: ದುಸ್ಸಾಹಸಕ್ಕೆ ಕೈಹಾಕಿದ್ರೆ ಪಾಕಿಸ್ತಾನಕ್ಕೆ ನುಗ್ಗಿ ನಮ್ಮ ಸೇನೆ ಬೇಟೆಯಾಡುತ್ತೆ: ಮೋದಿ
ಎರಡನೇ ತಂಡದ ಆನೆಗಳನ್ನು ಕರೆತರಲು ದಿನಾಂಕ ನಿಗದಿಯಾಗಿಲ್ಲ, ಶೀಘ್ರದಲ್ಲೇ ಆ ಆನೆಗಳು ಕೂಡ ಬರಲಿವೆ. ಅಭಿಮನ್ಯು ಕೂಡ ಈ ಬಾರಿಯ ದಸರಾದಲ್ಲಿ ಪಾಲ್ಗೊಳ್ಳಲಿದೆ. ಜಂಬೂಸವಾರಿ ಮೆರವಣಿಗೆಗೆ 15 ದಿನಗಳು ಬಾಕಿ ಇರುವಾಗ ಅಭಿಮನ್ಯು ಮೈಸೂರಿಗೆ ಆಗಮಿಸಲಿದೆ ಎಂದು ಮಾಹಿತಿ ನೀಡಿದ್ದಾರೆ.
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು, ದಸರಾ ಆನೆಗಳಿಗೆ ವಿಶೇಷ ಪೌಷ್ಟಿಕ ಆಹಾರ ನೀಡಲಾಗುತ್ತಿದೆ. ಬೆಳಿಗ್ಗೆ ಮತ್ತು ಸಂಜೆ ಎರಡು ಸಮಯದಲ್ಲಿ ಬೇಯಿಸಿರುವ ಉದ್ದಿನ ಕಾಳು, ಹೆಸರು ಕಾಳು, ಗೋಧಿ, ಕುಸುಬಲು ಅಕ್ಕಿ, ಈರುಳ್ಳಿ, ಸಾಲ್ಟ್, ಕ್ಯಾರೆಟ್, ಸೌತೆಕಾಯಿ, ಹೂಕೋಸು, ಗೆಡ್ಡೆ ಕೋಸು ಮಿಶ್ರಿತ ಉಂಡೆಗಳನ್ನ ಅರಣ್ಯಧಿಕಾರಿಗಳು ನೀಡಲಿದ್ದಾರೆ. ಜೊತೆಗೆ ಆನೆಗಳಿಗೆ ನೀಡುವ ವಿಶೇಷ ಪೌಷ್ಟಿಕ ಆಹಾರದ ಮೇಲೆ ನಿಗಾವಹಿಸಲಿದ್ದಾರೆ. ಆನೆಗಳ ತೂಕ ಹಾಗೂ ಶಕ್ತಿ ಹೆಚ್ಚಿಸಲು ಉದ್ದೇಶದಿಂದ ಈ ವಿಶೇಷ ಪೌಷ್ಟಿಕ ಆಹಾರ ನೀಡಲಾಗುತ್ತದೆ. ಇದನ್ನೂ ಓದಿ: ದೆಹಲಿ ಮೆಟ್ರೋದಲ್ಲಿ ಪ್ರಯಾಣಿಸಿದ ಪ್ರಧಾನಿ ಮೋದಿ – ಮಕ್ಕಳು, ವಿದ್ಯಾರ್ಥಿಗಳೊಂದಿಗೆ ಮಾತುಕತೆ
