ಶಿಮ್ಲಾ: ಪ್ರವಾಸಿಗರನ್ನು ಕೈಬೀಸಿ ಕರೆಯುವ ಶಿಮ್ಲಾಗೆ (Shimla) ಈ ಬಾರಿ 45 ದಿನಗಳಲ್ಲಿ 15 ಲಕ್ಷ ಪ್ರವಾಸಿಗರ ವಾಹನಗಳ ಲಗ್ಗೆ ಇಟ್ಟಿವೆ.
ಬೇಸಿಗೆ ರಜೆಯ ಹಿನ್ನೆಲೆ ಹಿಮಾಚಲ ಪ್ರದೇಶದ (Himachal Pradesh) ಪ್ರಸಿದ್ಧ ಗಿರಿಧಾಮಗಳಿಗೆ ಪ್ರವಾಸಿಗರ ಹರಿವು ಗಣನೀಯವಾಗಿ ಹೆಚ್ಚಳವಾಗಿದೆ. ಹೀಗಾಗಿ ವಾಹನ ದಟ್ಟಣೆಯನ್ನು ನಿಯಂತ್ರಿಸಲು ಶಿಮ್ಲಾ ಪೊಲೀಸರು ವಿಶೇಷ 5 ಅಂಶಗಳನ್ನು ಜಾರಿಗೆ ತಂದಿದ್ದಾರೆ. ಕೇವಲ 45 ದಿನಗಳ ಅವಧಿಯಲ್ಲಿ (ಮೇ 1 ರಿಂದ ಜೂನ್ 15 ರವರೆಗೆ) ಬರೋಬ್ಬರಿ 15 ಲಕ್ಷಕ್ಕೂ ಹೆಚ್ಚು ವಾಹನಗಳು ಶಿಮ್ಲಾ ನಗರವನ್ನು ಪ್ರವೇಶಿಸಿರುವುದು ಈ ಬಾರಿಯ ದಾಖಲೆಯಾಗಿದೆ. ಇದನ್ನೂ ಓದಿ: ಹಿಮಾಚಲ ಪ್ರದೇಶದಲ್ಲಿ ಕಂದಕಕ್ಕೆ ಉರುಳಿದ ಬೊಲೆರೋ – 7 ಮಂದಿ ಸ್ಥಳದಲ್ಲೇ ಸಾವು
ಈ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿ, ಹೆಚ್ಚುವರಿ ಪೊಲೀಸ್ ಪಡೆಗಳ ನಿಯೋಜನೆ, ಕಣ್ಗಾವಲು, ಪರ್ಯಾಯ ಮಾರ್ಗಗಳ ನಕ್ಷೆ ಸಿದ್ಧಪಡಿಸುವುದು ಮತ್ತು ಸಾರ್ವಜನಿಕ ಸಾರಿಗೆ ಬಳಕೆಗೆ ಉತ್ತೇಜನ ನೀಡುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.
ಶಾಲಾ-ಕಾಲೇಜುಗಳಿಗೆ ರಜೆ ಇರುವುದರಿಂದ ಹಿಮಾಚಲ ಪ್ರದೇಶದ ಪ್ರವಾಸಿ ತಾಣಗಳತ್ತ ಜನ ಸಾಗರವೇ ಹರಿದು ಬರುತ್ತಿದೆ. ಇದರಿಂದಾಗಿ ಹೆದ್ದಾರಿಗಳು ಹಾಗೂ ಪ್ರಮುಖ ರಸ್ತೆಗಳಲ್ಲಿ ಪದೇ ಪದೇ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಹೋಟೆಲ್ ಉದ್ಯಮಿಗಳ ಪ್ರಕಾರ, ವಾರದ ದಿನಗಳಲ್ಲಿ ಶೇ.60 ರಿಂದ 70 ರಷ್ಟಿರುವ ಹೋಟೆಲ್ ರೂಮ್‌ಗಳ ಬುಕ್ಕಿಂಗ್, ವಾರಾಂತ್ಯದಲ್ಲಿ ಶೇ.80ರಿಂದ 90ರಷ್ಟು ದಾಖಲೆಯ ಮಟ್ಟಕ್ಕೆ ಏರಿಕೆಯಾಗುತ್ತಿದೆ.ಇದನ್ನೂ ಓದಿ: ಕರ್ನಾಟಕ ಹೆಚ್ಚುವರಿ ಕಾವೇರಿ ನೀರನ್ನು ಮಾತ್ರ ಹರಿಸುತ್ತಿದೆ – ವಿಜಯ್ ಸರ್ಕಾರದ ಕ್ಯಾತೆ
ಟ್ರಾಫಿಕ್ ನಿರ್ವಹಣೆಗಾಗಿ ಹೆಚ್ಚುವರಿಯಾಗಿ 210 ಪೊಲೀಸ್ ಸಿಬ್ಬಂದಿ, ಹೋಂ ಗಾರ್ಡ್‌ಗಳು ಹಾಗೂ ಸ್ವಯಂಸೇವಕರನ್ನು ನಿಯೋಜಿಸಲಾಗಿದೆ. ನಿಯಮ ಉಲ್ಲಂಘಿಸುವವರ ವಿರುದ್ಧ ತಕ್ಷಣದ ಕ್ರಮಕ್ಕಾಗಿ ವಾಹನಗಳು ಮತ್ತು 32 ಬೈಕ್ ಸವಾರರ ವಿಶೇಷ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ. ಇಡೀ ಶಿಮ್ಲಾ ನಗರವನ್ನು 5 ವಲಯಗಳಾಗಿ ವಿಂಗಡಿಸಲಾಗಿದ್ದು, ಪ್ರತಿಯೊಂದು ವಲಯದ ಸುಗಮ ಸಂಚಾರದ ಜವಾಬ್ದಾರಿಯನ್ನು ಗೆಜೆಟೆಡ್ ಅಧಿಕಾರಿಗೆ ವಹಿಸಲಾಗಿದೆ.
ಕೆಟ್ಟು ನಿಲ್ಲುವ ಬಸ್ ಅಥವಾ ಟ್ರಕ್‌ಗಳಂತಹ ಭಾರೀ ವಾಹನಗಳಿಂದಾಗಿ ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗುತ್ತಿತ್ತು. ಕಿರಿದಾದ ಸಿಂಗಲ್ ಲೇನ್ ರಸ್ತೆಯಲ್ಲಿ ಇವುಗಳನ್ನು ತೆರವುಗೊಳಿಸುವುದು ಸವಾಲಿನ ಕೆಲಸವಾಗಿತ್ತು. ಇದಕ್ಕಾಗಿ ನಗರದ ಮೂರು ಪ್ರಮುಖ ವಲಯಗಳಲ್ಲಿ ಕ್ರೇನ್‌ಗಳನ್ನು ಸದಾ ಸಿದ್ಧವಾಗಿರಿಸಲಾಗಿದ್ದು, ಅಲ್ಲದೆ ಅನಧಿಕೃತ ಕಡೆಗಳಲ್ಲಿ ನಿಲ್ಲಿಸುವ ಖಾಸಗಿ ಬಸ್‌ಗಳು ಮತ್ತು ಅಕ್ರಮ ಪಾರ್ಕಿಂಗ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ಕುಫ್ರಿ, ನಾರ್ಕಂಡಾ, ಥಿಯೋಗ್ ಮತ್ತು ಕಿನ್ನೌರ್ ಕಡೆಗೆ ಪ್ರಯಾಣಿಸುವ ಪ್ರವಾಸಿಗರಿಗೆ ನಗರದ ಒಳಗಿನ ದಟ್ಟಣೆಯನ್ನು ತಪ್ಪಿಸಲು `ಶೋಗಿ-ಮೆಹ್ಲಿ ಬೈಪಾಸ್’ ರಸ್ತೆಯನ್ನು ಬಳಸುವಂತೆ ಸೂಚಿಸಲಾಗಿದೆ. ಸದ್ಯ ಪ್ರತಿದಿನ ಸುಮಾರು 800 ವಾಹನಗಳನ್ನು ಈ ಬೈಪಾಸ್ ಮೂಲಕ ಸಂಚರಿಸಲು ಸೂಚಿಸಲಾಗಿದ್ದು, ಇದರಿಂದ ಪ್ರವಾಸಿಗರ ಪ್ರಯಾಣದ ಸಮಯ ಉಳಿತಾಯವಾಗುತ್ತಿದೆ.ಇದನ್ನೂ ಓದಿ:ಮರಳು ಗಣಿಗಾರಿಕೆ ವಿವಾದ – ಬಿಜೆಪಿ ನಾಯಕ ಸೇರಿ ಮೂವರನ್ನು ಕಾರಿನಲ್ಲೇ ಸುಟ್ಟು ಹತ್ಯೆ
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಜಾರಿಗೆ ತಂದಿರುವ ಹೊಸ ಯೋಜನೆಯು ಅತ್ಯಂತ ಯಶಸ್ವಿಯಾಗಿದೆ ಎಂದು ಎಸ್ಪಿ ಗೌರವ್ ಸಿಂಗ್ ತಿಳಿಸಿದ್ದಾರೆ. ಕಳೆದ ವರ್ಷ ಏಪ್ರಿಲ್‌ನಿಂದ ಜೂನ್‌ವರೆಗಿನ ಪೀಕ್ ಸೀಸನ್‌ನಲ್ಲಿ ಶೋಗಿ, ಕುಫ್ರಿ ಮತ್ತು ಬಿಲಾಸ್‌ಪುರ ಹಾಗೂ ಮುಖ್ಯ ಶಿಮ್ಲಾ ನಗರದ ರಸ್ತೆಗಳಲ್ಲಿ ಭೀಕರ ಟ್ರಾಫಿಕ್ ಜಾಮ್ ವರದಿಯಾಗಿತ್ತು. ಆದರೆ ಈ ವರ್ಷದ ಬೇಸಿಗೆಯ ಅವಧಿಯಲ್ಲೂ ಎಲ್ಲಿಯೂ ಯಾವುದೇ ಪ್ರಮುಖ ಸಂಚಾರ ಸ್ತಬ್ಧತೆ ಉಂಟಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಪ್ರವಾಸಿಗರು ಮತ್ತು ಸ್ಥಳೀಯ ನಿವಾಸಿಗಳು ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು, ನಿಗದಿತ ಪಾರ್ಕಿಂಗ್ ಸ್ಥಳಗಳನ್ನೇ ಬಳಸಬೇಕು ಮತ್ತು ಪರ್ಯಾಯ ಮಾರ್ಗಗಳನ್ನು ಬಳಸಬೇಕು ಎಂದು ಮನವಿ ಮಾಡಿದ್ದಾರೆ.ಇದನ್ನೂ ಓದಿ: ಉದ್ಧವ್ ಶಿವಸೇನೆಗೆ ದೊಡ್ಡ ಹಿನ್ನಡೆ – ಪಕ್ಷದ ಸಭೆಗೆ 6 ಸಂಸದರು ಗೈರು
