* ನವೀಕರಿಸಬಹುದಾದ ಇಂಧನ ಶೃಂಗಸಭೆಯಲ್ಲಿ ಪ್ರಧಾನಿ ಪ್ರತಿಪಾದನೆ
* ಭಾರತ್ ರಿನ್ಯೂವೆಬಲ್ ಎನರ್ಜಿ ಶೃಂಗಸಭೆಗೆ ಪ್ರಧಾನಿ ಚಾಲನೆ
* ಸೌರಶಕ್ತಿ ಕ್ಷೇತ್ರದಲ್ಲಿ ಭಾರತದ ಅಮೋಘ ಸಾಧನೆಗೆ ಮೆಚ್ಚುಗೆ
* ಮೋದಿ ಅವರ ದೂರದೃಷ್ಟಿಯಿಂದ ಗುಜರಾತ್ನಿಂದಲೇ ಆರಂಭವಾಗಿತ್ತು ಸೌರ ಕ್ರಾಂತಿ: ಜೋಶಿ
ನವದೆಹಲಿ: ಜಾಗತಿಕ ಇಂಧನ ಬಿಕ್ಕಟ್ಟಿನ ವೇಳೆ ಸ್ವಚ್ಛ ಮತ್ತು ನವೀಕರಿಸಬಹುದಾದ ಇಂಧನ (Renewable Energy) ಮಹತ್ವದ ಹೆಜ್ಜೆಯಾಗಿದೆ. ಇಂಧನ ಭದ್ರತೆಯು ಆರ್ಥಿಕ ಭದ್ರತೆಯೊಂದಿಗೆ ನೇರ ಸಂಬಂಧ ಹೊಂದಿದ್ದು, ಭವಿಷ್ಯದ ಇಂಧನ ಅಗತ್ಯತೆಗಳನ್ನು ಸ್ವಚ್ಛ ಇಂಧನದ ಮೂಲಕವೇ ಪೂರೈಸಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಪ್ರತಿಪಾದಿಸಿದರು.
ನವದೆಹಲಿಯ ಭಾರತ್ ಮಂಟಪದಲ್ಲಿ ನಡೆಯುತ್ತಿರುವ “ಭಾರತ್ ರಿನ್ಯೂವಬಲ್ ಎನರ್ಜಿ ಶೃಂಗಸಭೆ ಮತ್ತು ಎಕ್ಸ್ಪೋ 2026″ಕ್ಕೆ (Bharat Renewable Energy Summit) ಚಾಲನೆ ನೀಡಿದ ಪ್ರಧಾನಿ, ಕಳೆದೊಂದು ದಶಕದಲ್ಲಿ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಭಾರತ ವಿಶ್ವದಲ್ಲೇ ಮಹತ್ವದ ಪ್ರಗತಿ ಸಾಧಿಸಿದೆ ಎಂದು ಹೆಮ್ಮೆಯಿಂದ ಹೇಳಿದರು. ಇದನ್ನೂ ಓದಿ: ನನ್ನ ವ್ಯಕ್ತಿತ್ವಕ್ಕೆ ಧಕ್ಕೆಯಾದ್ರೆ ಮುಂದಿನ ಚುನಾವಣೆಯಲ್ಲಿ ಪ್ರಚಾರಕ್ಕೆ ಬರಲ್ಲ – ರಾಹುಲ್ಗೆ ಸಿದ್ರಾಮಯ್ಯ ಚಾರ್ಜ್ಶೀಟ್
ಸಿಒಪಿ-26ರಲ್ಲಿ 2030ರೊಳಗೆ 500 ಗಿಗಾವ್ಯಾಟ್ ಪಳೆಯುಳಿಕೆಯೇತರ ಇಂಧನ ಸಾಮರ್ಥ್ಯ ಸಾಧಿಸುವ ಗುರಿ ಹೊಂದಲಾಗಿತ್ತು. ಆದರೆ, ಭಾರತ ಈ ಗುರಿಯನ್ನು ನಿಗದಿತ ಅವಧಿಗಿಂತ ಐದು ವರ್ಷ ಮೊದಲೇ, ಅಂದರೆ 2025ರಲ್ಲೇ ಸಾಧಿಸಿದೆ ಎಂದು ಸಂತಸ ಹಂಚಿಕೊಂಡರು.
ದೇಶದ ಒಟ್ಟು ಸ್ಥಾಪಿತ ವಿದ್ಯುತ್ ಸಾಮರ್ಥ್ಯದಲ್ಲಿ ಶೇ.50ಕ್ಕಿಂತ ಹೆಚ್ಚಿನ ಪಾಲು ಪಳೆಯುಳಿಕೆಯೇತರ ಇಂಧನ ಮೂಲಗಳಿಂದ ಲಭ್ಯವಾಗುತ್ತಿದೆ.
ಭಾರತದಲ್ಲಿ 2024ರ ಫೆಬ್ರವರಿಯಲ್ಲಿ ಆರಂಭವಾದ ಪಿಎಂ ಸೂರ್ಯಘರ್ ಮುಫ್ತ್ ಬಿಜ್ಲಿ ಯೋಜನೆಯಡಿ ಒಂದು ಕೋಟಿ ಮನೆಗಳಿಗೆ ಮೇಲ್ಛಾವಣಿ ಸೌರ ಫಲಕ ಅಳವಡಿಸುವ ಗುರಿ ಹೊಂದಿದ್ದು, ಈಗಾಗಲೇ 65 ಲಕ್ಷಕ್ಕೂ ಹೆಚ್ಚು ಮನೆಗಳು ಈಗಾಗಲೇ ಯೋಜನೆ ವ್ಯಾಪ್ತಿಗೊಳಪಟ್ಟು ಶೂನ್ಯ ವಿದ್ಯುತ್ ಬಿಲ್ ನತ್ತ ಸಾಗಿವೆ. ಕೆಲವರು ಹೆಚ್ಚುವರಿ ವಿದ್ಯುತ್ ಉತ್ಪಾದಿಸಿ ಗ್ರಿಡ್ಗೆ ಮಾರಾಟ ಮಾಡಿ ಆದಾಯವನ್ನೂ ಗಳಿಸುತ್ತಿದ್ದಾರೆ ಎಂದು ಶೃಂಗಸಭೆಯಲ್ಲಿ ಭಾರತದ ಸೌರಶಕ್ತಿ ಕ್ರಾಂತಿಯನ್ನು ತೆರೆದಿಟ್ಟರು.
ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್ ಅಡಿಯಲ್ಲಿ ದಶಕದ ಅಂತ್ಯದ ವೇಳೆಗೆ 50 ಲಕ್ಷ ಟನ್ ಹಸಿರು ಹೈಡ್ರೋಜನ್ ಉತ್ಪಾದಿಸುವ ಗುರಿ ಹೊಂದಲಾಗಿದೆ. ದೇಶದಲ್ಲಿ ಸೌರ ಮಾಡ್ಯೂಲ್ ಮತ್ತು ಸೆಲ್ಗಳ ಉತ್ಪಾದನಾ ಸಾಮರ್ಥ್ಯವೂ ಹೆಚ್ಚಿದ್ದು, ಆತ್ಮನಿರ್ಭರ ಭಾರತ ಹಾಗೂ ಮೇಕ್ ಇನ್ ಇಂಡಿಯಾ ಅಭಿಯಾನಕ್ಕೆ ಇದು ಪೂರಕವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಸ್ತುತದಲ್ಲಿ ಜಾಗತಿಕವಾಗಿ ಇಂಧನ ಬಿಕ್ಕಟ್ಟುಗಳ ನಡುವೆಯೂ 140 ಕೋಟಿ ಭಾರತೀಯರು ದೇಶದ ಆರ್ಥಿಕ ಬೆಳವಣಿಗೆಯನ್ನು ಕಾಪಾಡಿಕೊಂಡಿದ್ದಾರೆ. ಜಾಗತಿಕ ಇಂಧನ ಪರಿವರ್ತನೆಯಲ್ಲಿ ಭಾರತ ತನ್ನ ಪಾತ್ರವನ್ನು ಮತ್ತಷ್ಟು ಬಲಪಡಿಸಬೇಕಿದೆ ಎಂದು ಪ್ರತಿಪಾದಿಸಿದರು.
ಗುಜರಾತ್ನಿಂದ ಸೌರಶಕ್ತಿ ಕ್ರಾಂತಿ ಆರಂಭ: ಪ್ರಲ್ಹಾದ್ ಜೋಶಿ
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾರತದ ಇಂಧನ ಕ್ಷೇತ್ರಕ್ಕೆ ಹೊಸ ದಿಕ್ಕು ತೋರಿದ್ದಲ್ಲದೆ, ಸೌರ ವಲಯದಲ್ಲಿ ಶಕ್ತಿ ಸಾಮರ್ಥ್ಯ ಮತ್ತು ಆತ್ಮವಿಶ್ವಾಸ ತುಂಬಿದ್ದರೆ ಫಲವಾಗಿ ಭಾರತ ಇಂದು ಜಗತ್ತಿಗೇ ಪ್ರೇರಣೆಯಾಗಿದೆ ಎಂದು ಬಣ್ಣಿಸಿದರು.
ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲೇ ದೇಶದಲ್ಲಿ ಸೌರಶಕ್ತಿಯ ಹೊಸ ಕ್ರಾಂತಿಗೆ ನಾಂದಿ ಹಾಡಿದರು. ಜಗತ್ತಿನಲ್ಲಿ ಸೂರ್ಯ ಪೂರ್ವದಲ್ಲಿ ಉದಯಿಸಿದರೆ, ಭಾರತದಲ್ಲಿ ಸೌರಶಕ್ತಿಯ ಉದಯ ಪಶ್ಚಿಮದ ಗುಜರಾತ್ನಿಂದ ಆರಂಭವಾಯಿತು ಎಂದರು.
ಗುಜರಾತ್ನಲ್ಲಿ ಸಮಗ್ರ ಸೌರ ನೀತಿ ಜಾರಿಗೆ ತರುವುದರ ಜತೆಗೆ ಏಷ್ಯಾದಲ್ಲೇ ಮೊದಲ ಬಾರಿಗೆ ಹವಾಮಾನ ಬದಲಾವಣೆ ಇಲಾಖೆಯನ್ನು ಸ್ಥಾಪಿಸಲಾಯಿತು. ಕಾಲುವೆಗಳ ಮೇಲ್ಭಾಗದಲ್ಲಿ ಸೌರಶಕ್ತಿ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮೂಲಕ ನಾವೀನ್ಯತೆಗೆ ಒತ್ತು ನೀಡಲಾಯಿತು.
ದೇಶದಲ್ಲಿ ನವೀಕರಿಸಬಹುದಾದ ಇಂಧನ ಮತ್ತು ಹಸಿರು ಇಂಧನ ಕಾರಿಡಾರ್ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಜಿ-20 ಶೃಂಗಸಭೆ ಹಾಗೂ ಹೂಡಿಕೆದಾರರ ಸಮಾವೇಶಗಳ ಮೂಲಕ ಇಂಧನ ಕ್ಷೇತ್ರಕ್ಕೆ ಬಂಡವಾಳ ಆಕರ್ಷಿಸಲಾಗಿದೆ. ಸೌರ, ಪವನ ಮತ್ತು ಹಸಿರು ಹೈಡ್ರೋಜನ್ ಉತ್ಪಾದನೆಯಲ್ಲಿ ಭಾರತ ಜಾಗತಿಕ ಮಟ್ಟದಲ್ಲಿ ಮುನ್ನಡೆಯುತ್ತಿದೆ.
ಪಿಎಲ್ಐ ಯೋಜನೆಯಡಿ ಸೌರ ಮಾಡ್ಯೂಲ್ಗಳು, ಸೆಲ್ಗಳು ಮತ್ತು ಟರ್ಬೈನ್ಗಳ ದೇಶೀಯ ಉತ್ಪಾದನೆಗೆ ಉತ್ತೇಜನ ನೀಡಲಾಗಿದೆ. ಹಸಿರು ಹೈಡ್ರೋಜನ್ ಮತ್ತು ಹಸಿರು ಅಮೋನಿಯಾ ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿಯೂ ಭಾರತ ಪ್ರಗತಿ ಸಾಧಿಸುತ್ತಿದೆ. ಇದು ಆತ್ಮನಿರ್ಭರ ಭಾರತದ ಗುರಿಗೆ ಪೂರಕವಾಗಿದೆ ಎಂದು ಪ್ರತಿಪಾದಿಸಿದರು.
ಮೂರು ಮಹತ್ವದ ಪ್ರಕಟಣೆ ಬಿಡುಗಡೆ: ಶೃಂಗಸಭೆ ವೇಳೆ ಪ್ರಧಾನಿ ನರೇಂದ್ರ ಮೋದಿ ಮೂರು ಮಹತ್ವದ ಪ್ರಕಟಣೆಗಳನ್ನು ಬಿಡುಗಡೆ ಮಾಡಿದರು. ‘ಸೂರ್ಯ ಶಕ್ತಿ – ಫ್ರಮ್ ರೆವೆರೆನ್ಸ್ ಟು ಸೆಲ್ಫ್ ರಿಲಯನ್ಸ್’, ‘ಈಸ್ ಆಫ್ ಡೂಯಿಂಗ್ ಸೋಲಾರ್ 2026’ ಹಾಗೂ ‘ದಿ ರಿನ್ಯೂವಬಲ್ ಎನರ್ಜಿ ಸ್ಟೇಟ್ ಅಸೆಸ್ಮೆಂಟ್ ಫ್ರೇಮ್ವರ್ಕ್ (RE-SAF)’ ಎಂಬ ಪ್ರಕಟಣೆಗಳು ಭಾರತದ ಸೌರಶಕ್ತಿಯ ಪಯಣ, ಜಾಗತಿಕ ಸೌರಶಕ್ತಿ ಅಳವಡಿಕೆಗೆ ಉತ್ತೇಜನ ಮತ್ತು ರಾಜ್ಯ ಮಟ್ಟದಲ್ಲಿ ನವೀಕರಿಸಬಹುದಾದ ಇಂಧನ ಅಭಿವೃದ್ಧಿಗೆ ಮಾರ್ಗದರ್ಶನ ನೀಡುವ ಉದ್ದೇಶ ಹೊಂದಿವೆ.
ಈ ಮಹತ್ವದ ಶೃಂಗಸಭೆಯಲ್ಲಿ ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ಅವರು ಸ್ಥಳೀಯ ಕುಶಲಕರ್ಮಿಗಳು ಸೌರಶಕ್ತಿ ಚಾಲಿತ ಚರಕದಲ್ಲಿ ತಯಾರಿಸಿದ ವಿಶೇಷ ಶಾಲೊಂದನ್ನು ಪ್ರಧಾನಿ ಮೋದಿ ಅವರಿಗೆ ಗೌರವಪೂರ್ವಕವಾಗಿ ಅರ್ಪಿಸಿದರು. ಭಾರತದ ಸಾಂಪ್ರದಾಯಿಕ ಕರಕುಶಲತೆ, ನಾವೀನ್ಯತೆ ಮತ್ತು ಸುಸ್ಥಿರತೆಯ ಸಂಯೋಜನೆ ಸಂಕೇತವಾಗಿ ಈ ಶಾಲನ್ನು ಪರಿಚಯಿಸಲಾಯಿತು.
ನವೀಕರಿಸಬಹುದಾದ ಇಂಧನ ಶೃಂಗಸಭೆಯಲ್ಲಿ 130ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು, 400ಕ್ಕೂ ಹೆಚ್ಚು ಪ್ರದರ್ಶಕರು ಹಾಗೂ 75 ಸಾವಿರಕ್ಕೂ ಹೆಚ್ಚು ಪಾಲುದಾರರು ಪಾಲ್ಗೊಳ್ಳುವವರ ನಿರೀಕ್ಷೆಯಿದ್ದು , 500ಕ್ಕೂ ಹೆಚ್ಚು ಭಾಷಣಕಾರರು ಮತ್ತು ವಿವಿಧ ಕ್ಷೇತ್ರಗಳ ತಜ್ಞರು ಭಾಗವಹಿಸಲಿದ್ದಾರೆ. ಜಾಗತಿಕ ಸ್ವಚ್ಛ ಇಂಧನ ಸಮುದಾಯವನ್ನು ಒಂದೇ ವೇದಿಕೆಗೆ ತಂದು ಇಂಧನ ಪರಿವರ್ತನೆಗೆ ವೇಗ ನೀಡುವುದು ಈ ಶೃಂಗಸಭೆಯ ಉದ್ದೇಶವಾಗಿದೆ ಎಂದು ಅವರು ಇದೇ ವೇಳೆ ಹೇಳಿದರು. ಇದನ್ನೂ ಓದಿ: ಸಂಸತ್ತಿನ ವಿಶೇಷ ಅಧಿವೇಶನಕ್ಕೆ ಸಿದ್ಧ – SIR ಕುರಿತು ಚರ್ಚೆಗೆ ಬನ್ನಿ; ರಾಹುಲ್ ಗಾಂಧಿಗೆ ಅಮಿತ್ ಶಾ ಸವಾಲ್


