– ಚರ್ಚೆ ನಡೆಸಿದ್ರೆ ಮೋದಿ ಮುಂದೆ ವಿಪಕ್ಷ ನಾಯಕರು ಸೋಲುತ್ತಾರೆ ಎಂದ ಶಾ
– ಇವಿಎಂನಲ್ಲಿ ದೋಷವಿದ್ದರೆ ರೇವಂತ್ ರೆಡ್ಡಿ ಸಿಎಂ ಆಗಿದ್ದು ಹೇಗೆ?
ಹೈದರಾಬಾದ್: ಸಂಸತ್ತಿನ ವಿಶೇಷ ಅಧಿವೇಶನ (Parliament Special Session) ಕರೆಯಲು ಕೇಂದ್ರ ಸರ್ಕಾರ ಸಿದ್ಧವಿದೆ. ಎಸ್ಐಆರ್ ಕುರಿತು ಚರ್ಚೆಗೆ ಬನ್ನಿ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ (Amit Shah) ಅವರು, ರಾಹುಲ್ ಗಾಂಧಿ ಅವರಿಗೆ ಸವಾಲ್ ಹಾಕಿದರು.
ಹೈದರಾಬಾದ್ನಲ್ಲಿ (Hyderabad) ಹಮ್ಮಿಕೊಂಡಿದ್ದ ‘ಪ್ರಜಾಪ್ರಭುತ್ವ ಉಳಿಸಿ, ಅರಾಜಕತೆ ತೊಲಗಿಸಿ’ ಮಹಾ ಪಾದಯಾತ್ರೆ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು. ಇದೇ ವೇಳೆ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಅಭಿಯಾನ ವಿರೋಧಿಸಿ ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
Live from ‘Save Democracy Remove Anarchy’ Maha Padayatra in Hyderabad.
హైదరాబాద్లో జరుగుతున్న ‘ప్రజాస్వామ్యాన్ని రక్షిద్దాం – అరాచకవాదాన్ని అంతం చేద్దాం’ మహా పాదయాత్ర నుండి ప్రత్యక్ష ప్రసారం. https://t.co/uW7jfZaDYS
— Amit Shah (@AmitShah) November 2, 2026
ವಿಶೇಷ ಅಧಿವೇಶನಕ್ಕೆ ಸಿದ್ಧ
ಎಸ್ಐಆರ್ ಕುರಿತು ಚರ್ಚಿಸಲು ಸಂಸತ್ತಿನ ವಿಶೇಷ ಅಧಿವೇಶನ ಕರೆಯಲು ಕೇಂದ್ರ ಸರ್ಕಾರ ಸಿದ್ಧವಾಗಿದೆ. ಆದರೆ ರಾಹುಲ್ ಗಾಂಧಿ (Rahul Gandhi) ಅದರಲ್ಲಿ ಭಾಗವಹಿಸುವುದಿಲ್ಲ, ಏಕೆಂದರೆ ಅವರಿಗೆ ಸಂಸತ್ತು ಸುಗಮವಾಗಿ ನಡೆಯುವುದು ಇಷ್ಟವಿಲ್ಲ ಎಂದರಲ್ಲದೇ, ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷ ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಬಯಸುತ್ತಿದೆ. ಸಂಸತ್ತು ನಡೆದರೆ, ಚರ್ಚೆಯಲ್ಲಿ ವಿಪಕ್ಷ ನಾಯಕರು ಪ್ರಧಾನಿ ನರೇಂದ್ರ ಮೋದಿ ಅವರ ಮುಂದೆ ಸೋಲುತ್ತಾರೆ ಎಂದು ಪ್ರತಿಪಾದಿಸಿದರು.
ಕಾಂಗ್ರೆಸ್ ವೆಂಟಿಲೇಟರ್ನಲ್ಲಿದೆ
ಮುಂದುವರಿದು… ಕಾಂಗ್ರೆಸ್ ಪಕ್ಷವು ‘ವೆಂಟಿಲೇಟರ್’ ಮೇಲಿರುವ ರೋಗಿಯಂತಿದೆ. ಅಂತಹ ಪಕ್ಷವು ಪ್ರಧಾನಿ ಮೋದಿ ಅವರೊಂದಿಗೆ ಮ್ಯಾರಥಾನ್ ಓಟದಲ್ಲಿ ಸ್ಪರ್ಧಿಸಲು ಸಾಧ್ಯವೇ? ಎಂದು ಪ್ರಶ್ನಿಸಿದ ಅಮಿತ್ ಶಾ, ಕಾಂಗ್ರೆಸ್ನ ನಾಯಕ ತೆಲಂಗಾಣದ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರ ಎದುರು ಸ್ಪರ್ಧೆ ಮಾಡಿದ್ರೂ ಕೂಡ ಸೋಲ್ತಾರೆ ಎಂದು ವ್ಯಂಗ್ಯವಾಡಿದರು.
ಇವಿಎಂನಲ್ಲಿ ದೋಷವಿದ್ದರೆ ರೇವಂತ್ ರೆಡ್ಡಿ ಸಿಎಂ ಆಗಿದ್ದು ಹೇಗೆ?
ರಾಹುಲ್ ಜೀ, ಒಂದು ವೇಳೆ ಇವಿಎಂ (EVM) ಯಂತ್ರಗಳಲ್ಲಿ ದೋಷವಿದ್ದರೆ, ನಿಮ್ಮ ರೇವಂತ್ ರೆಡ್ಡಿ ಹೇಗೆ ಮುಖ್ಯಮಂತ್ರಿಯಾದರು? ಕೇರಳ, ತಮಿಳುನಾಡು ಮತ್ತು ಹಿಮಾಚಲ ಪ್ರದೇಶಗಳಲ್ಲಿ ನಿಮ್ಮ ಪಕ್ಷದ ಸರ್ಕಾರಗಳು ಹೇಗೆ ಅಧಿಕಾರಕ್ಕೆ ಬಂದವು? EVMಗಳು ಅಷ್ಟೊಂದು ಕೆಟ್ಟದಾಗಿದ್ದರೆ, ನೀವು ಅಧಿಕಾರ ಸ್ವೀಕಾರ, ಪ್ರಮಾಣವಚನವನ್ನೇ ತೆಗೆದುಕೊಳ್ಳಬಾರದಿತ್ತು. ನೀವು ಗೆದ್ದಾಗ ಅದರ ಶ್ರೇಯಸ್ಸು ಜನರಿಗೆ ಸಲ್ಲುತ್ತದೆ. ಸೋತಾಗ ಮಾತ್ರ EVMಗಳಲ್ಲಿ ದೋಷ ಕಾಣಿಸುತ್ತದೆ ಎಂದು ತಿವಿದರು.
ನುಸುಳುಕೋರರನ್ನು ರಕ್ಷಿಸುವ ಯತ್ನ
ಕಾಂಗ್ರೆಸ್ನ ರ್ಯಾಲಿಯು ನುಸುಳುಕೋರರನ್ನ ಉಳಿಸುವ (Save the Infiltrators) ಕಾರ್ಯಕ್ರಮ. ಕಾಂಗ್ರೆಸ್ ಪಕ್ಷವು ಬಾಂಗ್ಲಾದೇಶಿ ಒಳನುಸುಳುಕೋರರನ್ನ ರಕ್ಷಿಸಲು ಬಯಸುತ್ತಿದೆ. ಆದ್ರೆ ಮತದಾರರ ಪಟ್ಟಿಯಿಂದ ಪ್ರತಿಯೊಬ್ಬ ಒಳನುಸುಳುಕೋರನ ಹೆಸರನ್ನ ತೆಗೆದುಹಾಕಲು ಬಿಜೆಪಿ ಬದ್ಧವಾಗಿದೆ. ಭಾರತದ ನಾಗರಿಕರಿಗೆ ಮಾತ್ರ ಚುನಾವಣೆಯಲ್ಲಿ ಮತ ಚಲಾಯಿಸಲು ಹಕ್ಕು, ಅವಕಾಶ ಇದೆ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಪಕ್ಷವು ನಕಲಿ ಮತದಾನದ ಮೂಲಕ ಚುನಾವಣೆಗಳನ್ನ ಗೆಲ್ಲಲು ಬಯಸುತ್ತಿದೆ. ಒಬ್ಬ ವ್ಯಕ್ತಿಗೆ ಎರಡು ಮತಗಳಿದ್ದರೆ, ಅವುಗಳಲ್ಲಿ ಒಂದನ್ನು ರದ್ದುಗೊಳಿಸಬೇಕಲ್ಲವೇ? ಈಗ ‘ರಾಹುಲ್ ಬಾಬಾ’ ಅವರ ಹೊಟ್ಟೆ ನೋವಿಗೆ ಕಾರಣವೇನು? ಎಂದು ನೋಡೋಣ. 3 ಕೋಟಿ ಮತಗಳು ಅಸ್ತಿತ್ವದಲ್ಲೇ ಇಲ್ಲದ ವ್ಯಕ್ತಿಗಳಿಗೆ ಸೇರಿವೆ. ಇವರೆಲ್ಲರೂ ಬಾಂಗ್ಲಾದೇಶಿ ಒಳನುಸುಳುಕೋರರು ಎಂದು ಹರಿಹಾಯ್ದರು.

