Connect with us

International

ಭಾರತದ ಮೇಲೆ ಅಣು ಬಾಂಬ್‌ ಹಾಕ್ತೇವೆ, ಅಸ್ಸಾಂವರೆಗೂ ದಾಳಿ – ಪಾಕ್‌

Published

on

ಇಸ್ಲಾಮಾಬಾದ್‌: 4 ಬಾರಿ ಭಾರತದ ಜೊತೆಗಿನ ಯುದ್ಧದಲ್ಲಿ ಸೋತಿರುವ ಪಾಕಿಸ್ತಾನದ ಯುದ್ಧ ದಾಹ ಇನ್ನೂ ಕಡಿಮೆಯಾಗಿಲ್ಲ. ಈಗ ಭಾರತದ ವಿರುದ್ಧ ಅಣುಬಾಂಬ್‌ ದಾಳಿ ಮಾಡುವ ಗೊಡ್ಡು ಬೆದರಿಕೆಯನ್ನು ಹಾಕಿದೆ.

ಭಾರತ ನಮ್ಮ ಮೇಲೆ ದಾಳಿ ನಡೆಸಿದರೆ ಸಾಂಪ್ರದಾಯಿಕ ಯುದ್ಧ ಮಾಡುವುದಿಲ್ಲ. ಇನ್ನುಮುಂದೆ ರಕ್ತಸಿಕ್ತ ಮತ್ತು ಅಣು ಯುದ್ಧವೇ ಆಗಲಿದೆ ಎಂದು ಪಾಕ್‌ ರೈಲ್ವೇ ಸಚಿವ ಶೇಖ್‌ ರಶೀದ್‌ ಹೇಳಿದ್ದಾರೆ. ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ ಅವರು, ನಮ್ಮಲ್ಲಿ ಸಣ್ಣ ಮತ್ತು ನಿಖರವಾದ ಲೆಕ್ಕಾಚಾರದ ಅಸ್ತ್ರಗಳಿವೆ. ಇವು ಮುಸ್ಲಿಮರನ್ನು ಉಳಿಸಲಿದೆ ಎಂದು ಹೇಳಿದ್ದಾರೆ.

ನಮ್ಮಲ್ಲಿರುವ ಅಸ್ತ್ರಗಳು ಅಸ್ಸಾಂವರೆಗೂ ದಾಳಿ ಮಾಡಬಹುದು. ಹೀಗೆ ಏನಾದರೆ ಸಂಭವಿಸಿದರೆ ಅದು ಅಂತ್ಯವಾಗುತ್ತದೆ ಎಂಬ ವಿಚಾರ ಭಾರತಕ್ಕೂ ತಿಳಿದಿದೆ ಎಂಬ ಬಿಲ್ಡಪ್‌ ಡೈಲಾಗ್‌ ಹೊಡೆದಿದ್ದಾರೆ.

ಪಾಕಿಸ್ತಾನ ಅಣುಬಾಂಬ್‌ ವಿಚಾರವನ್ನು ಪ್ರಸ್ತಾಪ ಮಾಡುವುದು ಇದೇ ಮೊದಲೆನಲ್ಲ. ಈ ಹಿಂದೆ 2019ರಲ್ಲಿ ಜಮ್ಮು ಕಾಶ್ಮೀರಕ್ಕೆ ನೀಡಲಾಗಿರುವ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸುವ ಸಂದರ್ಭದಲ್ಲಿ ಪ್ರಧಾನಿ ಇಮ್ರಾನ್‌ ಖಾನ್‌, ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಏನಾದರೆ ಆದರೆ ನಾವು ಎಲ್ಲದ್ದಕ್ಕೂ ಸಿದ್ಧವಾಗಿದ್ದೇವೆ. ಎರಡು ಅಣ್ವಸ್ತ್ರ ಹೊಂದಿರುವ ದೇಶಗಳು ಕಾದಾಡಿದರೆ ಇಡೀ ವಿಶ್ವಕ್ಕೆ ಹಾನಿಯಾಗಲಿದೆ ಎಂದು ಎಂದಿದ್ದರು.

ಕಾರ್ಗಿಲ್‌ ಯುದ್ಧದ ಬಳಿಕ ಪಾಕಿಸ್ತಾನ 2001ರಲ್ಲಿ ಭಾರತದ ಮೇಲೆ ಅಣ್ವಸ್ತ್ರ ದಾಳಿಗೆ ಯೋಚಿಸಿತ್ತು. ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್‌ ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿ, 2001ರಲ್ಲಿ ಭಾರತ ತನ್ನ ಸೇನೆಯನ್ನು ಪಾಕ್ ಗಡಿಯಲ್ಲಿ ನಿಯೋಜಿಸಿತ್ತು. ನಾವು ಯುದ್ಧಕ್ಕೆ ಸಿದ್ಧವಾಗಿದ್ದೆವು. ಒಂದು ಹಂತದಲ್ಲಿ ಭಾರತದ ಮೇಲೆ ಅಣುಬಾಂಬ್ ಪ್ರಯೋಗಿಸುವ ತೀರ್ಮಾನ ಮಾಡಿದ್ದೆವು. ಆದರೆ ಭಾರತದ ಬಳಿಯೂ ಅಣುಬಾಂಬ್‌ ಇರುವ ಕಾರಣ ಈ ನಿರ್ಧಾರವನ್ನು ಕೈಬಿಡಲಾಯಿತು ಎಂದು ಈ ಹಿಂದೆ ತಿಳಿಸಿದ್ದರು.

ಒಂದು ವೇಳೆ ಅಣುಬಾಂಬ್‌ ದಾಳಿ ಮಾಡಿದರೂ ಭಾರತ ಕೂಡಲೇ ತಿರುಗೇಟು ನೀಡುವ ಸಾಮರ್ಥ್ಯ ಹೊಂದಿರುವುದು ಪಾಕಿಸ್ತಾನಕ್ಕೆ ಗೊತ್ತಿತ್ತು. ಈ ಕಾರಣಕ್ಕೆ ಅಣು ಬಾಂಬ್‌ ದಾಳಿಯ ನಿರ್ಧಾರದಿಂದ ಹಿಂದೆ ಸರಿದಿತ್ತು.

Click to comment

Leave a Reply

Your email address will not be published. Required fields are marked *