ಇಸ್ಲಾಮಾಬಾದ್: ಇಲ್ಲಿನ ಬಲೂಚಿಸ್ತಾನ್ (Baluchistan) ಪ್ರಾಂತ್ಯದ ಕಲ್ಲಿದ್ದಲು ಗಣಿಯಲ್ಲಿ (Coal Mine) ಭೀಕರ ಸ್ಫೋಟ ಸಂಭವಿಸಿದ್ದು, 32 ಕಾರ್ಮಿಕರು ಸಾವನ್ನಪ್ಪಿದ್ದಾರೆ. ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ಬಲೂಚಿಸ್ತಾನ್ ರಾಜಧಾನಿ ಕ್ವೆಟ್ಟಾದ (Quetta) ಹೊರವಲಯದಲ್ಲಿ ಗುರುವಾರ (ಜು.31) ಈ ಸ್ಫೋಟ ಸಂಭವಿಸಿದ್ದು, ಗಣಿಯೊಳಗೆ ಮೀಥೇನ್ ಅನಿಲ ಶೇಖರಣೆಗೊಂಡಿದ್ದೇ ಈ ದುರಂತಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. ಗಣಿಯೊಳಗೆ ಮೀಥೇನ್ ಅನಿಲ ಸ್ಫೋಟಗೊಂಡ ಕಾರಣ ಆಮ್ಲಜನಕದ ಮಟ್ಟ ಶೂನ್ಯಕ್ಕೆ ಕುಸಿದಿದೆ. ಹೀಗಾಗಿ ಕಾರ್ಮಿಕರು ಬದುಕುಳಿದಿರುವುದು ತೀರಾ ಕಡಿಮೆ ಎಂದು ಸರ್ಕಾರಿ ಗಣಿ ಇಲಾಖೆಯ ಇನ್ಸ್ಪೆಕ್ಟರ್ ಘನಿ ಬಲೋಚ್ (Ghani Baloch) ತಿಳಿಸಿದ್ದಾರೆ. ಇದನ್ನೂ ಓದಿ: ಪೇಪರ್ ಲೀಕ್‌ಗೆ 10 ವರ್ಷ ಜೈಲು, 10 ಕೋಟಿ ದಂಡ – ಸಂಸತ್ತಿನಲ್ಲಿ ಬಿಲ್ ಪಾಸ್; ʻಫ್ರೆಂಡ್ಸ್ʼಗೆ ನಮೋ ವಿಡಿಯೋ ಸಂದೇಶ
ಮಾಹಿತಿ ತಿಳಿದು ಸ್ಥಳಕ್ಕೆ ರಕ್ಷಣಾ ತಂಡಗಳು ದೌಡಾಯಿಸಿದ್ದು, ಆರಂಭದಲ್ಲಿ 7 ಶವಗಳನ್ನು ಹೊರತೆಗೆಯಲಾಗಿತ್ತು. ಬಳಿಕ ಮತ್ತಷ್ಟು ಶವಗಳು ಪತ್ತೆಯಾಗಿದ್ದು, ಈವರೆಗೆ ಸಾವಿನ ಸಂಖ್ಯೆ 32ಕ್ಕೆ ಏರಿಕೆಯಾಗಿದೆ. ಇನ್ನೂ 10ಕ್ಕೂ ಹೆಚ್ಚು ಕಾರ್ಮಿಕರು ಗಣಿಯೊಳಗೆ ಸಿಲುಕಿಕೊಂಡಿದ್ದಾರೆಂದು ಅಂದಾಜಿಸಲಾಗಿದೆ.
ಘಟನೆಯ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದ್ದು, ಸುರಕ್ಷತಾ ನಿಯಮಗಳನ್ನು ಮರುಪರಿಶೀಲಿಸುವುದಾಗಿ ಸರ್ಕಾರ ತಿಳಿಸಿದೆ. ಮತ್ತೊಂದೆಡೆ, ಗಣಿ ಮಾಲೀಕರ ನಿರ್ಲಕ್ಷ್ಯವೇ ಈ ದುರಂತಕ್ಕೆ ಕಾರಣ ಎಂದು ಕಾರ್ಮಿಕ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.
ಮೃತರ ಕುಟುಂಬಸ್ಥರಿಗೆ ಪರಿಹಾರ ಘೋಷಣೆ:
ಮೃತರ ಕುಟುಂಬಗಳಿಗೆ ಬಲೂಚಿಸ್ತಾನ್ ಖನಿಜ ಮತ್ತು ಗಣಿ ಸಚಿವ ಶೋಯೆಬ್ ನೊಷೆರ್ವಾನಿ (Nosherwani) ಸಂತಾಪ ಸೂಚಿಸಿದ್ದು, ತಲಾ 50,000 ರೂ. ಪರಿಹಾರ ಘೋಷಿಸಿದ್ದಾರೆ.ಇದನ್ನೂ ಓದಿ: ಕುಂದಾಪುರದಲ್ಲಿ ಬೆಳ್ಳಂಬೆಳಗ್ಗೆ ಗುಂಡಿಕ್ಕಿ ವ್ಯಕ್ತಿಯ ಬರ್ಬರ ಹತ್ಯೆ
