– ಪೇಪರ್ ಲೀಕ್ ಮಾಡೋರು, ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟ ಆಡೋರಿಗೆ ಉಳಿಗಾಲ ಇಲ್ಲ: ಮೋದಿ
ನವದೆಹಲಿ: ಪ್ರಶ್ನೆಪತ್ರಿಕೆ ಸೋರಿಕೆ ಮಾಡುವವರಿಗೆ 10 ವರ್ಷ ಜೈಲು ಶಿಕ್ಷೆ ಹಾಗೂ 10 ವರ್ಷ ದಂಡ ವಿಧಿಸುವ ಹೊಸ ಮಸೂದೆ (Anti Paper Leak Bill) ಗುರುವಾರ ರಾಜ್ಯಸಭೆಯಲ್ಲಿ ಅಂಗೀಕಾರವಾಗಿದೆ.
ಇದಕ್ಕೂ ಮುನ್ನ ಬುಧವಾರ ಈ ವಿಧೇಯಕ ಲೋಕಸಭೆಯಲ್ಲಿ (Lok Sabha) ಪಾಸ್ ಆಗಿತ್ತು. ರಾಷ್ಟ್ರಪತಿಗಳ ಅಂಕಿತ ಬಿದ್ದ ಬಳಿಕ ಕಾಯ್ದೆಯಾಗಿ ರೂಪುಗೊಳ್ಳಲಿದೆ.
Parliament passes a Bill that makes our examination system more robust! pic.twitter.com/OEvLKXoUaf
— Narendra Modi (@narendramodi) July 30, 2026
ಪರೀಕ್ಷಾ ಅಕ್ರಮ ತಡೆ ಮಸೂದೆ ಕುರಿತು ರಾಜ್ಯಸಭೆಯಲ್ಲಿ ನಡೆದ ಚರ್ಚೆ ವೇಳೆ, ಆಡಳಿತ ಮತ್ತು ಪ್ರತಿಪಕ್ಷ ನಡುವೆ ತೀವ್ರ ವಾಕ್ಸಮರ ನಡೆದಿತ್ತು. ರಾಜ್ಯಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಭಾಷಣ ಆಡಳಿತ ಪಕ್ಷವನ್ನು ತೀಕ್ಷ್ಣವಾಗಿ ಗುರಿಯಾಗಿಸಿಕೊಂಡಿತು. ವಿದ್ಯಾರ್ಥಿಗಳ ಮೇಲೆ ದೆಹಲಿ ಪೊಲೀಸರ ಬಲಪ್ರಯೋಗಕ್ಕೆ ನೈತಿಕ ಹೊಣೆಹೊತ್ತು, ಅಮಿತ್ ಶಾ ಕೇಂದ್ರ ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಖರ್ಗೆ ಒತ್ತಾಯಿಸಿದರು.
ಇದಕ್ಕೆ ಅಷ್ಟೇ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ ಆಡಳಿತ ಪಕ್ಷದ ನಾಯಕ ಜೆಪಿ ನಡ್ಡಾ, ʻವಿಪಕ್ಷಗಳಿಗೆ ದೇಶದ ಯುವಜನರ ಭವಿಷ್ಯದ ಬಗ್ಗೆ ಚಿಂತೆ ಇರುವುದು ನಿಜವೇ ಆದರೆ, ಪರೀಕ್ಷಾ ಅಕ್ರಮ ತಡೆ ಮಸೂದೆಗೆ ಬೆಂಬಲ ನೀಡಲಿʼ ಎಂದು ಸವಾಲು ಹಾಕಿದರು. ಅಂತಿಮವಾಗಿ ತೀವ್ರ ಜಟಾಪಟಿ ಬಳಿಕ ಮಸೂದೆಯು ಅಂಗೀಕಾರ ಪಡೆದುಕೊಂಡಿತು.

ಪ್ರತಿಪಕ್ಷ ಸದಸ್ಯರು ದೆಹಲಿಯ ಜಂತರ್ ಮಂತರ್ ವಿದ್ಯಾರ್ಥಿ ಪ್ರತಿಭಟನೆ ಕುರಿತು ಹೆಚ್ಚು ಒತ್ತು ನೀಡಿದರೆ, ಆಡಳಿತ ಪಕ್ಷದ ಸದಸ್ಯರು ಪರೀಕ್ಷಾ ಅಕ್ರಮಕ್ಕೆ ಬ್ರೇಕ್ ಹಾಕುವ ಪ್ರಮುಖ ಮಸೂದೆಗೆ ಅಂಗೀಕಾರ ಪಡೆಯಲು ಒತ್ತು ನೀಡಿದರು. ಚರ್ಚೆಯನ್ನು ಆದಷ್ಟು ಸುದೀರ್ಘಗೊಳಿಸುವ ಪ್ರತಿಪಕ್ಷಗಳ ತಂತ್ರಗಾರಿಕೆ ಅಂತಿಮವಾಗಿ ಫಲಿಸಲಿಲ್ಲ.
ಮೋದಿ ಖಡಕ್ ವಾರ್ನಿಂಗ್
ಇನ್ನು ರಾಜ್ಯಸಭೆಯಲ್ಲಿ ಪರೀಕ್ಷಾ ಅಕ್ರಮ ತಡೆ ಮಸೂದೆಗೆ ಅಂಗೀಕಾರ ಪಡೆದುಕೊಂಡಿರುವುದಕ್ಕೆ, ಪ್ರಧಾನಿ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿಗಳಿಗಾಗಿ ಬಿಡುಗಡೆ ಮಾಡಿದ ಹೊಸ ವಿಡಿಯೋ ಸಂದೇಶದಲ್ಲಿ, ʻನಮ್ಮ ಸರ್ಕಾರ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ರಾಜಿ ಮಾಡಿಕೊಳ್ಳಲಿಲ್ಲ. ಪ್ರಶ್ನೆಪತ್ರಿಕೆ ಸೋರಿಕೆ ಮಾಡುವ ಗ್ಯಾಂಗ್, ವಿದ್ಯಾರ್ಥಿಗಳ ಜೀವನದ ಜೊತೆಗೆ ಚೆಲ್ಲಾಟ ಆಡುವ ಗ್ಯಾಂಗ್ ಇನ್ಮುಂದೆ ಬಚಾವ್ ಆಗೋದಕ್ಕೆ ಸಾಧ್ಯವಿಲ್ಲ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
