ಬೆಂಗಳೂರು: ರಾಜ್ಯದಲ್ಲಿ ಮುಂಗಾರು (Monsoon) ಮಳೆ ಕ್ಷೀಣಿಸಿದೆ. ಜೂನ್ ಮೊದಲ ವಾರದಲ್ಲಿ ಉತ್ತಮವಾಗಿ ಸುರಿದ ಮಳೆ ಹೊಸ ಭರವಸೆ ಮೂಡಿಸಿತ್ತು. ಆದರೀಗ, ಉತ್ತಮ ಮಳೆಯ ನಿರೀಕ್ಷೆಯಲ್ಲಿದ್ದ ರಾಜ್ಯದ ಜನತೆಗೆ ನಿರಾಸೆ ಆಗಿದೆ. ಮಳೆ ದಿಢೀರ್ ಕೈಕೊಟ್ಟ ಪರಿಣಾಮ ಬರದ ಛಾಯೆ ಆವರಿಸಿದೆ.
ತೊಗರಿ ಕಣಜ ಕಲಬುರಗಿ ಜಿಲ್ಲೆಯಲ್ಲಿ ಈ ಬಾರಿ ಮುಂಗಾರು ಸಂಪೂರ್ಣ ಕೈ ಕೊಟ್ಟಿದೆ. ಜೂನ್ ಅಂತ್ಯವಾದರೂ ಜಿಲ್ಲೆಯಲ್ಲಿ ಇಲ್ಲಿಯವರೆಗೆ ವಾಡಿಕೆಗಿಂತ 60% ರಷ್ಟು ಮಳೆ ಕೊರತೆಯಾಗಿದೆ. ಇದರ ಪರಿಣಾಮ ಜಿಲ್ಲೆಯ ಜೀವನದಿಯಾದ ಭೀಮಾ ನದಿಯಲ್ಲಿ ಹನಿ ನೀರಿಲ್ಲದೇ ಸಂಪೂರ್ಣ ಬರಿದಾಗಿದೆ. ಇದರ ಪರಿಣಾಮ ಭೀಮಾ ನದಿಯನ್ನೇ ನಂಬಿದ ಇಲ್ಲಿನ ಜಾನುವಾರುಗಳು ಹನಿ ನೀರು ಕುಡಿಯಲು ಕಿಮೀ ದೂರ ಕ್ರಮಿಸಬೇಕಿದೆ. ಸಾವಿರಾರು ಎಕರೆಯಲ್ಲಿ ಕಬ್ಬು ಬೆಳೆದ ಕಲಬುರಗಿ-ಯಾದಗಿರಿ ಜಿಲ್ಲೆಯ ನದಿ ಪಾತ್ರದ ರೈತರಿಗೆ ಆತಂಕ ಎದುರಾಗಿದೆ. ಅಲ್ಲದೇ ಭೀಮಾ ನದಿ ಪಾತ್ರದ ನೂರಾರು ಗ್ರಾಮಗಳಿಗೆ ಕುಡಿಯುವ ನೀರಿಗೂ ಸಹ ಪರಿತಪಿಸುವ ಪರಿಸ್ಥಿತಿ ಎದುರಾಗಿದೆ. ಇದನ್ನೂ ಓದಿ: ಈ ವರ್ಷ ಮೊದಲ ಬಾರಿಗೆ ತುಂಗಾ ನದಿ ನೀರಿನ ಮಟ್ಟದಲ್ಲಿ ಏರಿಕೆ
ಹಾಸನ ಜಿಲ್ಲೆಯಲ್ಲಿ ಮುಂಗಾರು ಮಳೆ ನಿರೀಕ್ಷೆಯಷ್ಟು ಸುರಿದಿಲ್ಲ. ಮೂರ್ನಾಲ್ಕು ಬಾರಿ ಸುರಿದ ಹದ ಮಳೆಗೆ ಬಿತ್ತನೆ ಮಾಡಿರುವ ಬೆಳೆಗಳು ನೀರಿಲ್ಲದೆ ಒಣಗುತ್ತಿವೆ. ಮಳೆಯ ಕೊರತೆಯಿಂದಾಗಿ ಶೇ.80 ರಷ್ಟು ರೈತರು ಇನ್ನೂ ಬಿತ್ತನೆ ಕಾರ್ಯವನ್ನೇ ಆರಂಭಿಸಿಲ್ಲ. ಹಲವು ಪ್ರದೇಶಗಳಲ್ಲಿ ಆರಂಭದಲ್ಲಿ ಮಳೆಯಾದರೂ, ನಂತರ ಮಳೆ ಬಾರದ ಕಾರಣ ಬಿತ್ತನೆ ಮಾಡಿದ ಮೆಕ್ಕೆಜೋಳ, ಆಲೂಗೆಡ್ಡೆ, ತರಕಾರಿ ಬೆಳೆಗಳು ಸಂಪೂರ್ಣ ನಾಶವಾಗಿ ರೈತರನ್ನು ಸಂಕಷ್ಟಕ್ಕೆ ದೂಡಿದೆ. ಜಿಲ್ಲೆಯ ಬಹುತೇಕ ರೈತರು ಮಳೆಯಾಶ್ರಿತ ಕೃಷಿಯನ್ನೇ ಅವಲಂಬಿಸಿದ್ದಾರೆ. ಇದಲ್ಲದೇ ಅಂತರ್ಜಲ ಕೊರತೆಯಿಂದ ಕೊಳವೆಬಾವಿಗಳು ಸಹ ಬತ್ತಿ ಹೋಗಿವೆ. ಅರೆ ಮಲೆನಾಡು ಭಾಗ ಮಾತ್ರವಲ್ಲದೆ ಮಲೆನಾಡು ಭಾಗದಲ್ಲೂ ಮಳೆ ಕೊರತೆ ಉಂಟಾಗಿದ್ದು, ಕಾಫಿ ಬೆಳೆಗಾರರಿಗೂ ತೀವ್ರ ತೊಂದರೆಯಾಗಿದೆ.
ಚಿತ್ರದುರ್ಗ ಜಿಲ್ಲೆಯಲ್ಲಿ ಭೀಕರ ಬರದ ಛಾಯೆ ಆವರಿಸಿದೆ. ಕೈಗೆ ಬಂದಿರುವ ಅಡಿಕೆ ತೋಟಗಳು ಒಣಗಿ ಹೋಗ್ತಿವೆ. ತಾಲ್ಲೂಕಿನ ಹುಣಸೆಕಟ್ಟೆ ಗ್ರಾಮದಲ್ಲಿ ಕೊಳವೆ ಬಾವಿಗಳು ಕೈಕೊಡುತ್ತಿವೆ. ಅಂತರ್ಜಲ ತಳಮಟ್ಟಕ್ಕೆ ಕುಸಿದಿದೆ. ಪರಿಣಾಮ ಈ ವರ್ಷ ಅಪಾರ ಲಾಭದ ನಿರೀಕ್ಷೆಯಲ್ಲಿದ್ದ ರೈತರ ನಂಬಿಕೆ ಹುಸಿಯಾಗಿದೆ. ಸಕಾಲಕ್ಕೆ ಅಡಿಕೆ ಹಾಗೂ ತೆಂಗಿಗೆ ನೀರು ಹಾಯಿಸಲಾಗದೇ ಸಂಕಷ್ಟಕ್ಕೆ ಸಿಲುಕಿದ್ದಾನೆ. ಅಡಿಕೆ, ತೆಂಗಿನ ಸಸಿಗಳು ನೀರಿಲ್ಲದೇ ಒಣಗುತ್ತಿವೆ.
ಬೆಳಗಾವಿ ಜಿಲ್ಲೆಯಲ್ಲೂ ಪರಿಸ್ಥಿತಿ ಹೊರತಾಗಿಲ್ಲ. ಮಳೆ ಬಾರದ ಕಾರಣ ರೈತರು ಟ್ಯಾಂಕರ್ ನೀರಿನ ಮೊರೆ ಹೋಗಿದ್ದಾರೆ. ಅಥಣಿ ತಾಲೂಕಿನ ಸಂಬರಗಿ ಗ್ರಾಮದಲ್ಲಿ ರೈತ ಮಾಣಿಕ್ ಎಂಬವರು ಎರಡು ಎಕರೆಯಲ್ಲಿ ಬೆಳೆದ ಕ್ಯಾಪ್ಸಿಕಂ ಉಳಿಸಿಕೊಳ್ಳಲು ಟ್ಯಾಂಕರ್ ನೀರನ್ನು ತಂದು ಹಾಯಿಸುತ್ತಿದ್ದಾರೆ. ಮಳೆ ಅವಲಂಬಿತ ಕೃಷಿ ಮಾಡುವ ರೈತರಿಗೆ ಈ ಪರಿಸ್ಥಿತಿ ದೊಡ್ಡ ಹೊಡೆತ ಕೊಟ್ಟಿದೆ. ಇದನ್ನೂ ಓದಿ: ಇಂದಿನಿಂದ ರಾಜ್ಯದಲ್ಲಿ SIR – ಮತದಾರರು ಯಾವ ದಾಖಲೆ ಇಟ್ಟುಕೊಳ್ಳಬೇಕು?
ರಾಜ್ಯದಲ್ಲಿ ಮುಂಗಾರು ಮಳೆ ನಿರೀಕ್ಷೆಯಂತೆ ಸುರಿಯದ ಕಾರಣ ರೈತರಲ್ಲಿ ಆತಂಕ ಮೂಡಿಸಿದೆ. ಉತ್ತಮ ಮಳೆಯ ನಿರೀಕ್ಷೆಯಲ್ಲಿದ್ದ ರಾಜ್ಯದ ಜನತೆಗೆ ನಿರಾಸೆ ಆಗಿದೆ.
