ಚಿಕ್ಕಮಗಳೂರು: ಕುದುರೆಮುಖ, ಕೆರೆಕಟ್ಟೆ, ಪಶ್ಚಿಮ ಘಟ್ಟ ವ್ಯಾಪ್ತಿಯಲ್ಲಿ ನಿರಂತರ ಮಳೆ ಹಿನ್ನೆಲೆ ಈ ವರ್ಷ ಮೊದಲ ಬಾರಿಗೆ ತುಂಗಾ ನದಿ (Tunga River) ನೀರಿನ ಮಟ್ಟದಲ್ಲಿ ಏರಿಕೆ ಕಂಡಿದೆ.
ಶೃಂಗೇರಿ ದೇಗುಲದ ಪಾರ್ಕಿಂಗ್ ಲಾಟ್ ಬಳಿ ನೀರಿನ ಪ್ರಮಾಣ ಏರಿಕೆಯ ದೃಶ್ಯ ಗೋಚರವಾಗಿದೆ. ನಿನ್ನೆ ಮಧ್ಯಾಹ್ನದಿಂದಲೂ ಕೆರೆಕಟ್ಟೆ ವ್ಯಾಪ್ತಿಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ. ಮಳೆಯಿಂದಾಗಿ ರಾತ್ರೋರಾತ್ರಿ ತುಂಗಾ ನದಿ ನೀರಿನ ಹರಿವಿನ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಇದನ್ನೂ ಓದಿ: ಕರಾವಳಿಯಲ್ಲಿ ಭಾರೀ ಮಳೆ ಮುನ್ಸೂಚನೆ – ರಾಜ್ಯದ ಹಲವೆಡೆ ಜು.5ರ ವರೆಗೆ ಆರೆಂಜ್ ಅಲರ್ಟ್ ಘೋಷಣೆ
ನದಿ ನೀರು ಆಶ್ರಯಿಸಿರುವ ರೈತರು, ಬೆಳೆಗಾರರ ಮುಖದಲ್ಲಿ ಮಂದಹಾಸ ಮೂಡಿದೆ. 3-4 ದಶಕಗಳ ಬಳಿಕ ಜೂನ್ ಅಂತ್ಯದಲ್ಲಿ ಮಲೆನಾಡಿನಲ್ಲಿ ಬಿರುಬಿಸಿಲು ಕಂಡಿತ್ತು. ಈ ವೇಳೆಗಾಗಲೇ ತುಂಬಿ ಹರಿಯಬೇಕಿದ್ದ ನದಿಗಳ ಒಡಲ ಬರಿದಾಗಿತ್ತು. ನಿನ್ನೆಯಿಂದ ನಿರಂತರವಾಗಿರುವ ಸಾಧಾರಣ ಮಳೆಯಿಂದ ನೀರಿನ ಪ್ರಮಾಣ ಹೆಚ್ಚಳವಾಗಿದೆ.
