ಬೆಂಗಳೂರು: ಬುಡುಬುಡುಕೆ ಸ್ವಾಮೀಜಿ ವೇಷದಲ್ಲಿ ಬಂದ ಖದೀಮನೊಬ್ಬ, ಗರ್ಭಿಣಿ ಮಹಿಳೆಯನ್ನು ʼನಿಮ್ಮ ಮನೆಗೆ ದೋಷವಿದೆ, ಸಾವಿನ ಕಂಟಕ ಇದೆʼ ಎಂದು ಹೆದರಿಸಿ ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನಾಭರಣ ದೋಚಿ (Gold Theft) ಪರಾರಿಯಾಗಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಹೆಗ್ಗಡದೇವನಪುರದಲ್ಲಿ ನಡೆದಿದೆ.
ಮೋಹನ್ ಎಂಬುವರ ಮನೆಗೆ ಬಂದ ವ್ಯಕ್ತಿ, ಅವರ ಪತ್ನಿ ಉಷಾ ಎಂಟು ತಿಂಗಳ ಗರ್ಭಿಣಿಯಾಗಿರುವುದನ್ನು ಗಮನಿಸಿ, ಮನೆಗೆ ದೋಷವಿದೆ ಎಂದು ನಂಬಿಸಿದ್ದಾನೆ. ನನಗೆ ಹಣ ಬೇಡ, ಉಚಿತವಾಗಿ ಪೂಜೆ ಮಾಡುತ್ತೇನೆ ಎಂದು ಹೇಳಿ ಮನೆಯೊಳಗೆ ಪ್ರವೇಶಿಸಿದ್ದಾನೆ.
ಪೂಜೆಗಾಗಿ ಒಂದು ಕುಡಿಕೆಯಲ್ಲಿ ಮನೆಯಲ್ಲಿದ್ದ ಚಿನ್ನಾಭರಣ ಹಾಕಿದರೆ ಇನ್ನಷ್ಟು ಐಶ್ವರ್ಯ ಬರುತ್ತದೆ ಎಂದು ದಂಪತಿಯನ್ನು ನಂಬಿಸಿದ್ದಾನೆ. ಅದರಂತೆ ಉಷಾ ತಮ್ಮ ಕಿವಿಯೋಲೆ, ಉಂಗುರ ಸೇರಿದಂತೆ ಚಿನ್ನಾಭರಣವನ್ನು ಕುಡಿಕೆಯಲ್ಲಿ ಹಾಕಿದ್ದಾರೆ.
ಆ ನಂತರ ನೀರು ತರುವ ನೆಪದಲ್ಲಿ ಕುಡಿಕೆಯನ್ನು ಬದಲಾಯಿಸಿದ ಖದೀಮ, ಮತ್ತೊಂದು ವಸ್ತು ನೀಡಿ ಅದನ್ನು ಕೆರೆಗೆ ಬಿಟ್ಟು ಬರಲು ಹೇಳಿದ್ದಾನೆ. ದಂಪತಿ ಮನೆಗೆ ಮರಳುವಷ್ಟರಲ್ಲಿ ಸುಮಾರು 1.20 ಲಕ್ಷ ಮೌಲ್ಯದ ಚಿನ್ನಾಭರಣದೊಂದಿಗೆ ಆರೋಪಿ ಪರಾರಿಯಾಗಿದ್ದಾನೆ.ಇದನ್ನೂ ಓದಿ: ಒಂದೇ ದಿನ ಚಿತ್ರದುರ್ಗದಲ್ಲಿ ನಾಲ್ವರು ಮಕ್ಕಳ ಮೇಲೆ ಬೀದಿ ನಾಯಿಗಳ ದಾಳಿ
ಮನೆಗೆ ಬಂದು ಪರಿಶೀಲಿಸಿದಾಗ ಮೋಸವಾಗಿರುವುದು ಗೊತ್ತಾಗಿ ದಂಪತಿ ಮಾದನಾಯಕನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದು, ಆರೋಪಿಯ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಆತನ ಪತ್ತೆಗೆ ಬಲೆ ಬೀಸಿದ್ದಾರೆ.ಇದನ್ನೂ ಓದಿ: ಸಿಕ್ಕಿಂನಲ್ಲಿ ನಿರ್ಮಾಣ ಹಂತದ ಸುರಂಗ ಕುಸಿತ – ಏಳು ಸಾವು, ಹಲವರು ಸಿಲುಕಿರುವ ಶಂಕೆ
