ಹರಿದ್ವಾರ: ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿದ್ದ ಕುಖ್ಯಾತ ನಿಠಾರಿ ಸರಣಿ ಹತ್ಯಾಕಾಂಡ ಪ್ರಕರಣದಲ್ಲಿ(Nithari Killings) ಆರೋಪಿಯಾಗಿ, ನಂತರ ನ್ಯಾಯಾಲಯದಿಂದ (Court) ಖುಲಾಸೆಗೊಂಡಿದ್ದ ಸುರೇಂದರ್ ಕೋಲಿ(Surendra Koli) ಹರಿದ್ವಾರದಲ್ಲಿ ಶಂಕಾಸ್ಪದ ರೀತಿಯಲ್ಲಿ ಆತ್ಮಹತ್ಯೆ(Suicide) ಮಾಡಿಕೊಂಡಿದ್ದಾನೆ.
ಮಕ್ಕಳ ಹತ್ಯೆ ಪ್ರಕರಣದಲ್ಲಿ ಕಳೆದ ವರ್ಷ ಸುಪ್ರೀಂ ಕೋರ್ಟ್ನಿಂದ (Supreme Court) ಖುಲಾಸೆಗೊಂಡಿದ್ದ ಕೋಲಿ, ಕಳೆದ ಕೆಲವು ತಿಂಗಳುಗಳಿಂದ ಹರಿದ್ವಾರದಲ್ಲಿ ನೆಲೆಸಿದ್ದು, ಇತ್ತೀಚೆಗೆ ಚಹಾ ಅಂಗಡಿ ನಡೆಸುತ್ತಿದ್ದ.
ನಗರ ಕೊತ್ವಾಲಿ ವ್ಯಾಪ್ತಿಯ ಸಪ್ತ ಋಷಿ ಪೊಲೀಸ್ ಚೌಕಿಗೆ ಸಪ್ತ ಸರೋವರ ರಸ್ತೆಯಲ್ಲಿರುವ ಲಾಲ್ಮಾತಾ ದೇವಾಲಯದ ಎದುರಿನ ಚಹಾ ಅಂಗಡಿಯಲ್ಲಿ ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡಿರುವ ಮಾಹಿತಿ ಲಭ್ಯವಾಗಿದೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಮೃತ ವ್ಯಕ್ತಿಯನ್ನು ನಿಠಾರಿ ಪ್ರಕರಣದ ಮಾಜಿ ಆರೋಪಿ ಸುರೇಂದರ್ ಕೋಲಿ ಎಂದು ಗುರುತಿಸಿದ್ದಾರೆ.
ಅಂಗಡಿಯ ಒಳಗೆ ಹಗ್ಗದಿಂದ ನೇಣು ಬಿಗಿದ ಸ್ಥಿತಿಯಲ್ಲಿ ಆತನ ಮೃತದೇಹ ಪತ್ತೆಯಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಆತ ಬಾಡಿಗೆ ಚಹಾ ಅಂಗಡಿಯನ್ನು ನಡೆಸುತ್ತಿದ್ದ ಎಂದು ತಿಳಿದುಬಂದಿದೆ. ಸ್ಥಳದಲ್ಲಿ ಯಾವುದೇ ಡೆತ್ನೋಟ್ ಪತ್ತೆಯಾಗಿಲ್ಲ. ಅಲ್ಮೋರಾದಲ್ಲಿರುವ ಆತನ ಕುಟುಂಬಕ್ಕೆ ಮಾಹಿತಿ ನೀಡಲಾಗಿದ್ದು, ಪೊಲೀಸರು ಎಲ್ಲಾ ಆಯಾಮಗಳಿಂದಲೂ ಪ್ರಕರಣದ ತನಿಖೆ ಆರಂಭಿಸಿದ್ದಾರೆ. ಇದನ್ನೂಓದಿ: KPSC Scam| 26 ಲಕ್ಷದ ಬಳಿಕ ಗೆಳತಿಗೆ ಮತ್ತೆ 30 ಲಕ್ಷ ರೂ. ಮೌಲ್ಯದ ಚಿನ್ನ
ಏನಿದು ನಿಠಾರಿ ಕೇಸ್?
ಭಾರತದ ಅಪರಾಧ ಲೋಕದಲ್ಲೇ ಅತ್ಯಂತ ಕ್ರೂರ ಮತ್ತು ದೇಶವನ್ನೇ ನಡುಗಿಸಿದ ಘಟನೆಗಳಲ್ಲಿ ಒಂದಾಗಿದೆ. 2005 ಮತ್ತು 2006ರ ಅವಧಿಯಲ್ಲಿ ಉತ್ತರ ಪ್ರದೇಶದ ನೋಯ್ಡಾದ ನಿಠಾರಿ ಗ್ರಾಮದಲ್ಲಿ ಈ ಭೀಕರ ಸರಣಿ ಹತ್ಯೆಗಳು ನಡೆದಿದ್ದವು.
ಗ್ರಾಮದಲ್ಲಿ ಹಲವು ತಿಂಗಳುಗಳಿಂದ ಸಣ್ಣ ವಯಸ್ಸಿನ ಮಕ್ಕಳು ಮತ್ತು ಯುವತಿಯರು ನಿಗೂಢವಾಗಿ ನಾಪತ್ತೆಯಾಗುತ್ತಿದ್ದರು. ಕೊನೆಗೆ 2006ರ ಡಿಸೆಂಬರ್ನಲ್ಲಿ, ಅಲ್ಲಿನ ಉದ್ಯಮಿ ಮೊನೀಂದರ್ ಸಿಂಗ್ ಪಂಧೇರ್ ಎಂಬುವವರ ಮನೆಯ ಮುಂದಿನ ಚರಂಡಿ ಮತ್ತು ಹಿತ್ತಲಿನಲ್ಲಿ ಮಾನವನ ಅಸ್ಥಿಪಂಜರಗಳು, ಕತ್ತರಿಸಿದ ತಲೆಬುರುಡೆಗಳು ಹಾಗೂ ಮಕ್ಕಳ ಬಟ್ಟೆಗಳು ಪತ್ತೆಯಾದಾಗ ಇಡೀ ಭಾರತವೇ ಬೆಚ್ಚಿಬಿದ್ದಿತ್ತು.
ಮಕ್ಕಳಿಗೆ ಚಾಕೊಲೇಟ್ ಮತ್ತು ಸಿಹಿತಿಂಡಿಗಳ ಆಮಿಷ ಒಡ್ಡಿ ಮನೆಗೆ ಕರೆತರುತ್ತಿದ್ದ ಸುರೇಂದ್ರ ಕೋಲಿ ಮಕ್ಕಳ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಿ, ದೇಹದ ಭಾಗಗಳನ್ನು ಕತ್ತರಿಸಿ ಚರಂಡಿಗೆ ಎಸೆಯುತ್ತಿದ್ದ. ಈ ಘಟನೆಯಲ್ಲಿ ಅತ್ಯಾಚಾರ, ಕೊಲೆ ಮಾತ್ರವಲ್ಲದೆ ನರಭಕ್ಷಣೆ ಮತ್ತು ಶವ ಕಾಮದಂತಹ ಅತ್ಯಂತ ವಿಕೃತ ಆರೋಪಗಳು ಕೇಳಿಬಂದಿದ್ದವು. ಒಟ್ಟು 19ಕ್ಕೂ ಹೆಚ್ಚು ಜೀವಗಳು ಬಲಿಯಾಗಿದ್ದವು
ಆರಂಭದಲ್ಲಿ ಸಿಬಿಐ (CBI) ವಿಶೇಷ ನ್ಯಾಯಾಲಯವು ಮೊನೀಂದರ್ ಸಿಂಗ್ ಪಂಧೇರ್ ಮತ್ತು ಆತನ ಅಡುಗೆ ಕೆಲಸಗಾರನಾಗಿದ್ದ ಸುರೇಂದ್ರ ಕೋಲಿಗೆ ರಿಗೂ ಮರಣದಂಡನೆ ವಿಧಿಸಿತ್ತು. ಆದರೆ ತನಿಖೆಯಲ್ಲಿನ ಲೋಪದೋಷಗಳು ಮತ್ತು ಸೂಕ್ತ ಸಾಕ್ಷ್ಯಾಧಾರಗಳ ಕೊರತೆಯನ್ನು ಎತ್ತಿಹಿಡಿದ ಅಲಹಾಬಾದ್ ಹೈಕೋರ್ಟ್ 2023 ರಲ್ಲಿ ಇಬ್ಬರನ್ನೂ ಖುಲಾಸೆಗೊಳಿಸಿತು. ಸುಪ್ರೀಂ ಕೋರ್ಟ್ ಸಹ ಸುರೇಂದ್ರ ಕೋಲಿ ವಿರುದ್ಧದ ಕೊನೆಯ ಪ್ರಕರಣದಲ್ಲೂ ಆತನನ್ನು ದೋಷ ಮುಕ್ತಗೊಳಿಸಿ ಬಿಡುಗಡೆಗೆ ಆದೇಶಿಸಿತ್ತು.

