– ವಾಹನ ಇಲಿಗೂ ವಿಶೇಷ ಪೂಜೆ, ನೈವೇದ್ಯ
ಗದಗ: ಸಾಮಾನ್ಯವಾಗಿ ಗಣೇಶನಿಗೆ ಮೋದಕ, ಕಡುಬು ನೈವೇದ್ಯ ಮಾಡಲಾಗುತ್ತದೆ. ಆದರೆ (Gadag) ಗದಗನಲ್ಲಿ ಗಣೇಶನಿಗೆ ಮಾಂಸಾಹಾರಿ (Nonveg) ಖಾದ್ಯಗಳನ್ನು ನೈವೇದ್ಯವಾಗಿ ಅರ್ಪಿಸುವ ಮೂಲಕ ನೂರಾರು ವರ್ಷಗಳ ವಿಭಿನ್ನ ಹಾಗೂ ವಿಶೇಷವಾದ ಪರಂಪರೆಯನ್ನು ಆಚರಿಸಿಕೊಂಡು ಬರಲಾಗುತ್ತಿದೆ.
ಗದಗ ನಗರದ ಬೆಟಗೇರಿಯ ‘ಬಸವಾ’ ಎಂಬ ಸಾವಜಿ ಕುಟುಂಬದಲ್ಲಿ ಇಂತಹದೊಂದು ವಿಶಿಷ್ಟ ಆರಾಧನೆ ನಡೆಯುತ್ತಿದ್ದು, ಸಾರ್ವಜನಿಕರ ಗಮನ ಸೆಳೆಯುತ್ತಿದೆ.
ಮನೆಯ ಮಗನಿಗೆ ಇಷ್ಟವಾದ ಅಡುಗೆ
ಸಾವಜಿ ಕುಟುಂಬಸ್ಥರು ಶ್ರಾವಣ ಮಾಸ ಪೂರ್ತಿ ಮಾಂಸಾಹಾರವನ್ನು ತ್ಯಜಿಸಿ ಕಟ್ಟುನಿಟ್ಟಿನ ವ್ರತ ಪಾಲಿಸುತ್ತಾರೆ. ಶ್ರಾವಣ ಮುಗಿದು ಗಣೇಶ ಚತುರ್ಥಿ ಬಂದಾಗ, ಗಣೇಶನನ್ನು ತಮ್ಮ ಮನೆಯ ಮಗನೆಂದೇ ಭಾವಿಸಿ ಪೂಜಿಸುತ್ತಾರೆ.
ಹಬ್ಬದ ದಿನಗಳಲ್ಲಿ ಪ್ರತಿದಿನ ಒಂದೊಂದು ತರಹದ ಭಕ್ಷ್ಯಗಳನ್ನು ಮಾಡುವ ಈ ಕುಟುಂಬ, ಗಣೇಶ ಹಬ್ಬದ ಕೊನೆಯ ದಿನದಂದು ತಾವು ಏನು ಊಟ ಮಾಡುತ್ತಾರೋ ಅದೇ ಖಾದ್ಯಗಳನ್ನು ದೇವರಿಗೆ ನೈವೇದ್ಯವಾಗಿ ಅರ್ಪಿಸುತ್ತಾರೆ. ಇದನ್ನೂ ಓದಿ: ರಾಜ್ಯದ ಸಿನಿಪ್ರಿಯರಿಗೆ ಬಿಗ್ ಶಾಕ್ – ಇನ್ಮುಂದೆ ಫಿಲ್ಮ್ ಟಿಕೆಟ್ ಮೇಲೆ ಬೀಳಲಿದೆ 2% ಸೆಸ್
ಮಟನ್ ಖೈಮಾ, ಮಟನ್ ಮಸಾಲಾ, ಚಾಪ್ಸ್, ಚಿಲ್ಲಿ ಮಟನ್, ಚಿಕನ್, ಖಾರಾ ಬೋಟಿ ಹಾಗೂ ಬಿರಿಯಾನಿಯಂತಹ ರೊಟ್ಟಿ-ಖಾದ್ಯಗಳನ್ನು ಗಣೇಶನಿಗೆ ಪ್ರಸಾದದ ರೂಪದಲ್ಲಿ ಅರ್ಪಿಸಲಾಗುತ್ತದೆ. ಈ ನೈವೇದ್ಯದ ಬಳಿಕವೇ ಕುಟುಂಬಸ್ಥರು ಮರು ಮಾಂಸಾಹಾರ ಸೇವನೆಯನ್ನು ಆರಂಭಿಸುತ್ತಾರೆ.
ಇದು ಇಂದಿನದಲ್ಲ, ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಇವರ ಮನೆತನದ ಸಂಪ್ರದಾಯವಾಗಿದೆ.
ವಾಹನ ಇಲಿಗೂ ವಿಶೇಷ ಪೂಜೆ
ಈ ಆಚರಣೆಯಲ್ಲಿ ಗಣೇಶನಿಗೆ ಮಾತ್ರವಲ್ಲದೆ, ಆತನ ವಾಹನವಾದ ಇಲಿಗೂ ವಿಶಿಷ್ಟ ಪೂಜೆ ಸಲ್ಲಿಕೆಯಾಗುತ್ತದೆ. ಬಸವಾ ಕುಟುಂಬಸ್ಥರು ಮೂಲತಃ ನೇಕಾರಿಕೆ ವೃತ್ತಿ ಮಾಡುವವರಾಗಿದ್ದಾರೆ. ನೇಕಾರಿಕೆಗೆ ಬಳಸುವ ಬೆಲೆಬಾಳುವ ರೇಷ್ಮೆ ನೂಲು, ಜರಿ ಹಾಗೂ ಸೀರೆಗಳನ್ನು ಇಲಿಗಳು ಕಚ್ಚಿ ಹಾಳು ಮಾಡದಿರಲಿ ಮತ್ತು ತಮ್ಮ ಕಸುಬು ಯಾವುದೇ ವಿಘ್ನವಿಲ್ಲದೆ ಸಾಗಲಿ ಎಂಬ ಕಾರಣಕ್ಕೆ ಭಕ್ತಿಭಾವದಿಂದ ಇಲಿಯನ್ನು ಪೂಜಿಸಿ ಪ್ರಾರ್ಥಿಸುತ್ತಾರೆ. ಇದನ್ನೂ ಓದಿ: ಗಮನಿಸಿ, ಮಕ್ಕಳ ಪಾಸ್‌ಪೋರ್ಟ್ ಅವಧಿ ಬದಲಾವಣೆ| ಅರ್ಜಿ ಶುಲ್ಕ ಪರಿಷ್ಕರಣೆ – ಏಷ್ಟು ಏರಿಕೆ?

