ಕೋಲ್ಕತ್ತಾ: ಹನಿಮೂನ್‌ಗೆ ಬಂದಿದ್ದ ನವವಿವಾಹಿತೆಗೆ ಬೆಂಕಿ ತಗುಲಿ ಗಾಯಗೊಂಡ ಘಟನೆ ಪಶ್ಚಿಮ ಬಂಗಾಳದ ಕಲಿಂಪಾಂಗ್ ಜಿಲ್ಲೆಯ ಸಿಟಾಂಗ್‌ನ ರೆಸಾರ್ಟ್ ಒಂದರಲ್ಲಿ ನಡೆದಿದೆ.
ನಿಖಿತಾ ದಾಸ್ ಬೆಂಕಿಗೆ ಸಿಲುಕಿದ ಮಹಿಳೆ. ರೆಸಾರ್ಟ್‌ಗೆ ಮಹಿಳೆ ಹನಿಮೂನ್‌ಗೆ ಬಂದಿದ್ದರು. ಈ ವೇಳೆ ರೆಸಾರ್ಟ್‌ನಲ್ಲಿ ಬಾರ್ಬಿಕ್ಯೂ ಮಾಡುವ ಸಮೀಪದಲ್ಲೇ ಕುಳಿತಿದ್ದರು. ಆಗ ವ್ಯಕ್ತಿಯೊಬ್ಬ ಕ್ಯಾನ್‌ನಿಂದ ದ್ರವ ಸುರಿದಿದ್ದು, ಏಕಾಏಕಿ ಬೆಂಕಿಯ ಜ್ವಾಲೆ ಎದ್ದಿದೆ. ಆ ಬೆಂಕಿ ನಿಖಿತಾಗೆ ತಗಲಿದ್ದು, ಆಕೆ ಗಾಯಗೊಂಡಿದ್ದಾಳೆ.
ಬಾರ್ಬಿಕ್ಯೂಗೆ ದ್ರವ ಸುರಿದಿರುವುದು ಹಾಗೂ ಮಹಿಳೆಗೆ ಬೆಂಕಿ ತಗಲಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ವೇಳೆ, ಪತ್ನಿಯನ್ನು ರಕ್ಷಿಸಲು ಪತಿ ಸಮೀರ್ ದಾಸ್ ಪ್ರಯತ್ನಿಸಿದ್ದಾರೆ. ಅಲ್ಲದೇ ದ್ರವ ಸುರಿಸಿದ್ದ ವ್ಯಕ್ತಿ ಸಹ ತನ್ನ ಟೀ-ಶರ್ಟ್ ತೆಗೆದು ಬೆಂಕಿ ನಂದಿಸಲು ಯತ್ನಿಸಿದ್ದಾನೆ. ಬಳಿಕ ರೆಸಾರ್ಟ್ ಸಿಬ್ಬಂದಿ ಹಾಗೂ ಅಲ್ಲಿದ್ದವರು ತಕ್ಷಣ ನೆರವಿಗೆ ಧಾವಿಸಿ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ನಿಕಿತಾ ಅವರ ದೇಹದ ಹಲವು ಭಾಗಗಳಲ್ಲಿ ತೀವ್ರ ಸುಟ್ಟಗಾಯಗಳಾಗಿವೆ. ಆರಂಭದಲ್ಲಿ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಬಳಿಕ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿದ್ದರಿಂದ ಅವರನ್ನು ಸಿಲಿಗುರಿಯ ಖಾಸಗಿ ನರ್ಸಿಂಗ್ ಹೋಮ್‌ಗೆ ಸ್ಥಳಾಂತರಿಸಲಾಗಿದೆ. ನಿಖಿತಾ ಹಾಗೂ ಸಮೀರ್ ಎರಡು ತಿಂಗಳ ಹಿಂದಷ್ಟೇ ವಿವಾಹವಾಗಿದ್ದರು ಎಂದು ತಿಳಿದುಬಂದಿದೆ.
ಈ ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

