Saturday, 16th February 2019

Recent News

‘ನಾಗರಹಾವು’ ಸಿನಿಮಾ ರೀ ರಿಲೀಸ್- ಅಭಿಮಾನಿಗಳಿಂದ ವಿಷ್ಣುದಾದಾಗೆ ಭರ್ಜರಿ ಸ್ವಾಗತ!

ಬೆಂಗಳೂರು: ಸಾಹಸ ಸಿಂಹ ವಿಷ್ಣುವರ್ಧನ್ ಅಭಿನಯದ ನಾಗರಹಾವು ಚಿತ್ರ ಇಂದು ಮತ್ತೆ ತೆರೆಗೆ ಬಂದಿದೆ. ಧ್ವನಿ ವಿನ್ಯಾಸ, ಸಿನಿಮಾ ಸ್ಕೋಪ್ ಮೂಲಕ ಚಿತ್ರ ರೀ- ರಿಲೀಸ್ ಆಗಿದೆ. ರಾಜ್ಯಾದ್ಯಂತ ವಿಷ್ಣುವರ್ಧನ್ ಅಭಿಮಾನಿಗಳು ಭರ್ಜರಿಯಿಂದ ಚಿತ್ರವನ್ನು ಸ್ವಾಗತಿಸಿದ್ದಾರೆ.

ಸಾಹಸಸಿಂಹ ವಿಷ್ಣುವರ್ಧನ್ ಅವರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸುತ್ತಲೇ ಸ್ಟಾರ್ ಆಗಿಯೂ ರೂಪಿಸಿದ ಚಿತ್ರ ನಾಗರಹಾವು. ಪುಟ್ಟಣ್ಣ ಕಣಗಾಲ್ ನಿರ್ದೇಶನದ ಈ ಚಿತ್ರವನ್ನು ಕ್ರೇಜಿಸ್ಟಾರ್ ರವಿಚಂದ್ರನ್ ಸಹೋದರ ಬಾಲಾಜಿ ನವೀನ ತಂತ್ರಜ್ಞಾನದೊಂದಿಗೆ ತೆರೆಗೆ ತಂದಿದ್ದಾರೆ.

ನಾಗರಹಾವು ಚಿತ್ರ ಮರು ಬಿಡುಗಡೆ ಹಿನ್ನೆಲೆಯಲ್ಲಿ ಬಾಗಲಕೋಟೆಯ ಕೃಷ್ಣಾ ಥೇಟರ್ ಆವರಣದಲ್ಲಿ ವಿಷ್ಣು ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಚಿತ್ರಮಂದಿರದಲ್ಲಿ ಸಂಭ್ರಮ ಮನೆ ಮಾಡಿದೆ. 70ರ ದಶಕದಲ್ಲಿ ನಾಗರ ಹಾವು ಚಿತ್ರ ತೆರೆಕಂಡಿತ್ತು. ಈಗ ಡಾ. ವಿಷ್ಣು ಸೇನಾ ಕಾರ್ಯಕರ್ತರ ಸಂಭ್ರಮಾಚರಣೆ ಮಾಡುತ್ತಿದ್ದು, ದಿವಗಂತ ವಿಷ್ಣುವರ್ಧನ ಅವರ ಕಟೌಟ್ ಗೆ ಹಾಲಿನ ಅಭಿಷೇಕ ಮಾಡಿ ಸಂಭ್ರಮಿಸಿದ್ದಾರೆ. ಅಲ್ಲದೇ ವಿಷ್ಣು ಭಾವಚಿತ್ರವಿರುವ ಕೇಕ್ ಕಟ್ ಮಾಡಿ, ಸಿಹಿ ಹಂಚಿ ರಾಮಾಚಾರಿ ಅಭಿಮಾನಿಗಳು ಸಂಭ್ರಮಿಸಿದ್ದಾರೆ.

ದಾವಣಗೆರೆಯಲ್ಲೂ ವಿಷ್ಟು ಅಭಿಮಾನಿಗಳ ಸಂಭ್ರಮ ಮನೆ ಮಾಡಿದೆ. ನಗರದ ಪುಷ್ಪಾಂಜಲಿ ಚಿತ್ರಮಂದಿರದಲ್ಲಿ ರಿಲೀಸ್ ಆಗಿದೆ. ಅಭಿಮಾನಿಗಳು 20 ಅಡಿ ಎತ್ತರದ ವಿಷ್ಣು ಕಟೌಟ್ ಗೆ ಹೂವಿನ ಹಾರ ಹಾಕಿ ಜೈಕಾರ ಕೂಗಿದ್ರು. ಕಟೌಟ್ ಗೆ ಕೊಡಗಳಲ್ಲಿ ಹಾಲಿನ ಅಭಿಷೇಕ ಮಾಡಿ ಪಟಾಕಿ ಸಿಡಿಸಿ ಸಂಭ್ರಮಿಸಿದ್ರು. ವಿಷ್ಣುವರ್ಧನ್ ಅಭಿಮಾನಿಯೊಬ್ಬ ಆಕರ್ಷಕ ಉಡುಗೆ ತೊಟ್ಟು ಅಭಿಮಾನಿಗಳನ್ನು ರಂಜಿಸಿದ್ರು. ಅಲ್ಲದೆ ಸಾಹಸಸಿಂಹ ವಿಷ್ಣುವರ್ಧನ್ ಡೈಲಾಗ್ ಹೇಳಿ ನಾಗರಹಾವು ಚಿತ್ರ ನೂರು ದಿನಗಳು ಪೂರೈಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ರು.

ರಾಯಚೂರಿನಲ್ಲೂ ಆಧುನಿಕ ತಂತ್ರಜ್ಞಾನದ ಮೆರಗಿನೊಂದಿಗೆ ಬಿಡುಗಡೆಯಾದ ಡಾ.ವಿಷ್ಣುವರ್ಧನ್ ಅಭಿನಯದ ಸೂಪರ್ ಹಿಟ್ ಸಿನಿಮಾ ನಾಗರಹಾವುಗೆ ಅಭಿಮಾನಿಗಳು ಭರ್ಜರಿ ಸ್ವಾಗತ ಕೋರಿದ್ದಾರೆ. ನಗರದ ಎಸ್ ಎನ್ ಟಿ ಚಿತ್ರಮಂದಿರದಲ್ಲಿ ಸಿನಿಮಾ ಬಿಡುಗಡಯಾಗಿದ್ದು, ಚಿತ್ರದ ಪೋಸ್ಟರ್ ಗೆ ಅಭಿಮಾನಿಗಳು ಹಾಲಿನ ಅಭಿಷೇಕ ಮಾಡಿದ್ದಾರೆ. ವಿಷ್ಣುವರ್ಧನ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಸಿನಿಮಾ ಮರು ಬಿಡುಗಡೆಯಾಗಿದ್ದಕ್ಕೆ ಸಂಭ್ರಮಿಸಿದ್ದಾರೆ. ತೆಂಗಿನಕಾಯಿ ಹೊಡೆಯುವ ಮೂಲಕ ಸಿನಿಮಾ ಶತದಿನ ಆಚರಿಸಬೇಕು ಎಂದು ಹಾರೈಸಿದ್ದಾರೆ.

ಹುಬ್ಬಳ್ಳಿಯ ರೂಪಂ ಚಿತ್ರಮಂದಿರದಲ್ಲಿ ನಾಗರಹಾವು ಚಿತ್ರ ತೆರೆಕಂಡಿದೆ. ಡಾ. ವಿಷ್ಣು ಸೇನಾ ಸಮಿತಿ ವತಿಯಿಂದ ಸಂಭ್ರಮಾಚರಣೆ ಮನೆ ಮಾಡಿದೆ. ದಿವಗಂತ ವಿಷ್ಣುವರ್ಧನ ಅವರ ಕಟೌಟ್ ಗೆ ಹಾಲಿನ ಅಭಿಷೇಕ ಮಾಡಿದ್ದಾರೆ. ಅಲ್ಲದೇ ಡಾ. ವಿಷ್ಣುವರ್ಧನ್ ಕಟೌಟ್ ಗೆ ಬೃಹತ್ ಗಾತ್ರದ ಹಾರ ಹಾಕಿ ರಾಮಾಚಾರಿ ಶಿಷ್ಯಂದಿರು ಅಭಿಮಾನ ಮೆರೆದಿದ್ದಾರೆ. ಸ್ಟೇಷನ್ ರಸ್ತೆಯಲ್ಲಿರುವ ರೂಪಂ ಚಿತ್ರಮಂದಿರದಲ್ಲಿ ವಿಷ್ಣುವರ್ಧನ್ ಅಭಿಮಾನಿಗಳು ಸಂಭ್ರಮ ಮಾಡುತ್ತಿದ್ದಾರೆ.

ತುಮಕೂರು ಜಿಲ್ಲೆಯಲ್ಲೂ ಕೂಡಾ ಡಾ. ವಿಷ್ಣುವರ್ದನ್ ಅಭಿನಯದ ನಾಗರಹಾವು ಸಿನಿಮಾ ಹೊಸ ತಂತ್ರಜ್ಞಾನದೊಂದಿಗೆ ಮರು ಬಿಡುಗೆಡೆಯಾಗಿದೆ. ತುಮಕೂರು ನಗರದ ಮಾರುತಿ ಚಿತ್ರಮಂದಿರದಲ್ಲಿ ನಾಗರಹಾವು ಬಿಡುಗಡೆಯಾಗಿದೆ. ವಿಷ್ಣು ಅಭಿಮಾನಿಗಳು ವರ್ಣಮಯ ಚಿತ್ರ ನೋಡಿ ಫುಲ್ ಖುಷ್ ಆಗಿದ್ದಾರೆ. ಸಾಹಸ ಸಿಂಹರ ಕಟೌಟ್ ತಯಾರಿಸಿ ಹೂವಿನ ಹಾರ ಹಾಕಿ ಪೂಜೆ ಮಾಡಿದ್ದಾರೆ. ಅಲ್ಲದೇ ಕ್ಷೀರಾಭಿಷೇಕ ಮಾಡಿ ಅನ್ನಸಂತರ್ಪಣೆ ನೇರವೇರಿಸಿ ವಿಷ್ಣು ಅಭಿಮಾನಿಗಳು ಸಂಭ್ರಮಿಸಿದ್ದಾರೆ.

Leave a Reply

Your email address will not be published. Required fields are marked *