– ಕೋಣೆವಾಡದಲ್ಲಿ ಭಾವೈಕ್ಯತೆಯ ಸಂದೇಶ
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಮುಸ್ಲಿಂ ಯುವಕರೇ ಕಳೆದ 26 ವರ್ಷಗಳಿಂದ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ, ಒಂಬತ್ತು ದಿನಗಳ ಕಾಲ ಪೂಜೆ ಹಾಗೂ ಅನ್ನಸಂತರ್ಪಣೆ ನಡೆಸುತ್ತಿದ್ದಾರೆ. ಆ ಮೂಲಕ ಧಾರ್ಮಿಕ ಭಾವೈಕ್ಯತೆಯ ಸಂದೇಶ ಸಾರಿದ್ದಾರೆ.
ಕಾರವಾರ ನಗರದ ಕೋಣೆವಾಡ ಬಡಾವಣೆಯಲ್ಲಿ ಮುಸ್ಲಿಂ, ಹಿಂದೂ ಹಾಗೂ ಕ್ರಿಶ್ಚಿಯನ್ ಸಮುದಾಯದವರು ಒಟ್ಟಾಗಿ ವಾಸಿಸುತ್ತಿದ್ದು, ಪ್ರತಿಯೊಂದು ಹಬ್ಬವನ್ನೂ ಪರಸ್ಪರ ಸಹಕಾರದಿಂದ ಆಚರಿಸುವುದು ಇಲ್ಲಿನ ವಿಶೇಷವಾಗಿದೆ. ಗಣೇಶೋತ್ಸವ ಸಮಿತಿಯಲ್ಲಿ ಮುಸ್ಲಿಂ ಯುವಕರೇ ಪ್ರಮುಖ ಜವಾಬ್ದಾರಿಗಳನ್ನು ವಹಿಸಿಕೊಂಡಿದ್ದಾರೆ. ಅಧ್ಯಕ್ಷರಿಂದ ಹಿಡಿದು ವಿವಿಧ ಹುದ್ದೆಗಳಲ್ಲಿಯೂ ಮುಸ್ಲಿಂ ಸಮುದಾಯದ ಯುವಕರು ಕಾರ್ಯನಿರ್ವಹಿಸುತ್ತಿದ್ದಾರೆ. ಗಣೇಶ ಚತುರ್ಥಿಯಂದು ಕೇಸರಿ ಶಾಲು ಧರಿಸಿ, ಹಣೆಗೆ ತಿಲಕ ಇಟ್ಟು ಗಣಪತಿಗೆ ಪೂಜೆ ಸಲ್ಲಿಸುವುದರ ಜೊತೆಗೆ ಭಕ್ತರಿಗೆ ಅನ್ನಸಂತರ್ಪಣೆಯನ್ನೂ ನಡೆಸುತ್ತಿದ್ದಾರೆ.

ಕಳೆದ 26 ವರ್ಷಗಳಿಂದ ಇದೇ ರೀತಿಯಲ್ಲಿ ಗಣೇಶೋತ್ಸವವನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ಕೋಣೆವಾಡ ಬಡಾವಣೆಯಲ್ಲಿ ಸಾವಿರಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದು, ವಿವಿಧ ಧರ್ಮಗಳ ಜನರು ಪರಸ್ಪರ ಸಹಕಾರದಿಂದ ಜೀವನ ನಡೆಸುತ್ತಿದ್ದಾರೆ. ಗಣೇಶ ಮೂರ್ತಿಯನ್ನು ಮಸೀದಿ ಎದುರು ಪ್ರತಿಷ್ಠಾಪಿಸಿದರೂ ಯಾವುದೇ ವಿರೋಧ ಅಥವಾ ಸಂಘರ್ಷದ ಘಟನೆಗಳು ನಡೆಯದೇ, ಹಬ್ಬವನ್ನು ಎಲ್ಲರೂ ಒಟ್ಟಾಗಿ ಆಚರಿಸುತ್ತಿರುವುದು ಇಲ್ಲಿನ ವಿಶೇಷವಾಗಿದೆ.
ಪ್ರತಿ ಮೂರು ವರ್ಷಕ್ಕೊಮ್ಮೆ ಗಣೇಶೋತ್ಸವ ಸಮಿತಿ ರಚನೆಯಾಗುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂ ಯುವಕರು ಸಮಿತಿಯಲ್ಲಿ ಇರುವುದರಿಂದ ವಿವಿಧ ಜವಾಬ್ದಾರಿಗಳನ್ನು ಅವರೇ ನಿರ್ವಹಿಸುತ್ತಿದ್ದಾರೆ. ಗಣೇಶೋತ್ಸವದ ಒಂಬತ್ತು ದಿನಗಳಲ್ಲೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಅನ್ನಸಂತರ್ಪಣೆ ನಡೆಯುತ್ತವೆ. ಇದೇ ರೀತಿಯಲ್ಲಿ ಈದ್ ಮಿಲಾದ್ ಆಚರಣೆಯ ಸಂದರ್ಭದಲ್ಲೂ ಹಿಂದೂ ಯುವಕರು ಸಮಿತಿಯ ಜವಾಬ್ದಾರಿ ವಹಿಸಿಕೊಂಡು, ಮುಸ್ಲಿಂ ಸಮುದಾಯದೊಂದಿಗೆ ಸೇರಿ ಕಾರ್ಯಕ್ರಮವನ್ನು ನಡೆಸುತ್ತಾರೆ.

