ಬೆಂಗಳೂರು: ದಶಕಗಳ ಕಾಲದ ಕನಸನ್ನು ನನಸಾಗಿಸಿಕೊಂಡಿರುವ ಡಿ.ಕೆ. ಶಿವಕುಮಾರ್ (DK Shivakumar) ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ, ಭಾರಿ ಕಸರತ್ತಿನ ನಂತರ ಅವರ ನೂತನ ಸಂಪುಟದ ಮೊದಲ ಪಟ್ಟಿ ಅಧಿಕೃತಗೊಂಡಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಒಟ್ಟು 13 ಮಂದಿ ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದು, ಹೈಕಮಾಂಡ್ ಮಟ್ಟದಲ್ಲಿ ನಡೆದ ಮ್ಯಾರಾಥನ್ ಸಭೆಗಳ ನಂತರ ಈ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ. ಖುದ್ದು ಸಿಎಂ ಡಿ.ಕೆ. ಶಿವಕುಮಾರ್ ಅವರೇ ನಿಯೋಜಿತ ಸಚಿವರಿಗೆ ಫೋನ್ ಕರೆ ಮಾಡಿ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಆಹ್ವಾನ ನೀಡಿದ್ದರು.
ವಿಶೇಷವೆಂದರೆ, ಹಿಂದಿನ ಸಿದ್ದರಾಮಯ್ಯ (Siddaramaiah) ಸಂಪುಟದಲ್ಲಿದ್ದ ಬಹುತೇಕ ಹಿರಿಯ ಮತ್ತು ಅನುಭವಿ ಮುಖಂಡರಿಗೆ ಈ ಬಾರಿಯೂ ಡಿಕೆಶಿ ಕ್ಯಾಬಿನೆಟ್‌ನಲ್ಲಿ (Cabinet) ಸ್ಥಾನ ಮುಂದುವರಿಸಲಾಗಿದ್ದು, ಆಡಳಿತದಲ್ಲಿ ಅನುಭವಕ್ಕೆ ಆದ್ಯತೆ ನೀಡಲಾಗಿದೆ.
ಜಾತಿ ಮತ್ತು ಸಮುದಾಯವಾರು ಲೆಕ್ಕಾಚಾರ ಹೇಗೆ?
ಮುಂಬರುವ ರಾಜಕೀಯ ಸಮೀಕರಣಗಳನ್ನು ಗಮನದಲ್ಲಿಟ್ಟುಕೊಂಡು ಹೈಕಮಾಂಡ್ (Congress High Command) ಅತ್ಯಂತ ಜಾಗರೂಕತೆಯಿಂದ ಜಾತಿ ಲೆಕ್ಕಾಚಾರದ ಆಧಾರದ ಮೇಲೆ ಮೊದಲ ಪಟ್ಟಿಯನ್ನು ಸಿದ್ಧಪಡಿಸಿದೆ. ಪ್ರಮುಖ ಸಮುದಾಯಗಳಿಗೆ ನೀಡಿರುವ ಪ್ರಾತಿನಿಧ್ಯದ ವಿವರ ನೀಡಿದೆ. ಇದನ್ನೂ ಓದಿ: ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಫ್ರೀ ಬಸ್ ಪಾಸ್ – ಸಿಎಂ ಆಗಿ ಡಿಕೆಶಿ ಮೊದಲ ಘೋಷಣೆ
ಒಕ್ಕಲಿಗ ಸಮುದಾಯ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರದೇ ಸಮುದಾಯವಾದ ಒಕ್ಕಲಿಗ ಕೋಟಾದಲ್ಲಿ ಇಬ್ಬರಿಗೆ ಸಚಿವ ಸ್ಥಾನ ನೀಡಲಾಗಿದೆ.
ದಲಿತ (ಬಲಗೈ) ಸಮುದಾಯ: ಸಾಮಾಜಿಕ ನ್ಯಾಯದ ಭಾಗವಾಗಿ ದಲಿತ ಬಲಗೈ ಸಮುದಾಯದ ಇಬ್ಬರು ನಾಯಕರಿಗೆ ಸಂಪುಟದಲ್ಲಿ ಸ್ಥಾನ ಸಿಕ್ಕಿದೆ.
ಕುರುಬ ಸಮುದಾಯ: ಹಿಂದುಳಿದ ವರ್ಗಗಳ ಪ್ರಮುಖ ಸಮುದಾಯವಾದ ಕುರುಬ ಸಮುದಾಯದಿಂದ ಇಬ್ಬರನ್ನು ಸಚಿವರನ್ನಾಗಿ ಆಯ್ಕೆ ಮಾಡಲಾಗಿದೆ.
ಅಲ್ಪಸಂಖ್ಯಾತ ಮತ್ತು ಇತರ ಸಮುದಾಯಗಳು: ಸಂಪುಟದ ಸಮತೋಲನ ಕಾಯ್ದುಕೊಳ್ಳಲು ಮುಸ್ಲಿಂ ಸಮುದಾಯದಿಂದ ಒಬ್ಬರು ಹಾಗೂ ಕ್ರೈಸ್ತ ಸಮುದಾಯದಿಂದ ಒಬ್ಬರಿಗೆ ಅವಕಾಶ ನೀಡಲಾಗಿದೆ. ಇದರೊಂದಿಗೆ ಎಸ್‌ಟಿ ಪಂಗಡದ ವಾಲ್ಮೀಕಿ ಸಮುದಾಯದ ಒಬ್ಬ ನಾಯಕರಿಗೂ ಡಿಕೆಶಿ ಕ್ಯಾಬಿನೆಟ್‌ನಲ್ಲಿ ಸ್ಥಾನ ಲಭಿಸಿದೆ.
ಡಿಕೆ ಕ್ಯಾಬಿನೆಟ್
ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿ
ಒಕ್ಕಲಿಗ, 9 ಬಾರಿ ಶಾಸಕ
ಕನಕಪುರ(ರಾಮನಗರ)
ಡಾ. ಜಿ.ಪರಮೇಶ್ವರ್, ಉಪಮುಖ್ಯಮಂತ್ರಿ
ದಲಿತ, 6 ಬಾರಿ ಶಾಸಕ
ಕೊರಟಗೆರೆ (ತುಮಕೂರು)
ಕೆ.ಎಚ್ ಮುನಿಯಪ್ಪ
ದಲಿತ, ಮೊದಲ ಬಾರಿ ಶಾಸಕ, 7 ಬಾರಿ ಸಂಸದ
ದೇವನಹಳ್ಳಿ (ಬೆಂಗಳೂರು)
ಕೆ.ಜೆ.ಜಾರ್ಜ್
ಕ್ರಿಶ್ಚಿಯನ್, 6 ಬಾರಿ ಶಾಸಕ
ಸರ್ವಜ್ಞ ನಗರ (ಬೆಂಗಳೂರು)
ಎಂ.ಬಿ.ಪಾಟೀಲ್
ಲಿಂಗಾಯತ, 6 ಬಾರಿ ಶಾಸಕ
ಬಬಲೇಶ್ವರ (ವಿಜಯಪುರ)
ರಾಮಲಿಂಗಾರೆಡ್ಡಿ
ರೆಡ್ಡಿ ಒಕ್ಕಲಿಗ, 8 ಬಾರಿ ಶಾಸಕ
ಬಿಟಿಎಂ ಲೇಔಟ್ (ಬೆಂಗಳೂರು)
ಸತೀಶ್ ಜಾರಕಿಹೊಳಿ
ಎಸ್‌ಟಿ (ವಾಲ್ಮೀಕಿ)
4 ಬಾರಿ ಶಾಸಕ/2 ಬಾರಿ ಎಂಎಲ್‌ಸಿ
ಯಮಕನಮರಡಿ (ಬೆಳಗಾವಿ)
ಕೃಷ್ಣಬೈರೇಗೌಡ
ಒಕ್ಕಲಿಗ, 5 ಬಾರಿ ಶಾಸಕ
ಬ್ಯಾಟರಾಯನಪುರ (ಬೆಂಗಳೂರು)
ಪ್ರಿಯಾಂಕ್ ಖರ್ಗೆ
ದಲಿತ, 3 ಬಾರಿ ಶಾಸಕ
ಚಿತ್ತಾಪುರ (ಕಲಬುರಗಿ)
ಯು.ಟಿ.ಖಾದರ್
ಮುಸ್ಲಿಂ, 3 ಬಾರಿ ಶಾಸಕ
ಮಂಗಳೂರು (ದಕ್ಷಿಣ ಕನ್ನಡ)
ಈಶ್ವರ್ ಖಂಡ್ರೆ
ಲಿಂಗಾಯತ,4 ಬಾರಿ ಶಾಸಕ
ಭಾಲ್ಕಿ (ಬೀದರ್)
ಯತೀಂದ್ರ ಸಿದ್ದರಾಮಯ್ಯ
ಕುರುಬ, ಎಂಎಲ್‌ಸಿ
ಮೈಸೂರು
ಬೈರತಿ ಸುರೇಶ್
ಕುರುಬ, 2 ಬಾರಿ ಶಾಸಕ
ಹೆಬ್ಬಾಳ (ಬೆಂಗಳೂರು)
ಶರಣಪ್ರಕಾಶ್ ಪಾಟೀಲ್
ಲಿಂಗಾಯತ, 3ನೇ ಬಾರಿ ಶಾಸಕ
ಸೇಡಂ (ಕಲಬುರಗಿ)
ಡಿ.ಕೆ. ಶಿವಕುಮಾರ್ ಅವರ ನೂತನ ಸಂಪುಟದ ಮೊದಲ ಪಟ್ಟಿ ಅಂತಿಮಗೊಳ್ಳುತ್ತಿದ್ದಂತೆ, ಸಚಿವ ಸ್ಥಾನಕ್ಕಾಗಿ ಕಡೆಯ ಕ್ಷಣದವರೆಗೂ ತೀವ್ರ ಕಸರತ್ತು ನಡೆಸಿದ್ದ ಹಲವು ಪ್ರಮುಖ ನಾಯಕರಿಗೆ ಹೈಕಮಾಂಡ್ ಶಾಕ್ ನೀಡಿದೆ. ದೆಹಲಿ ಮಟ್ಟದಲ್ಲಿ ಭಾರಿ ಲಾಬಿ ನಡೆಸಿದ್ದರೂ ಸಹ, ಅಂತಿಮ ಹಂತದಲ್ಲಿ ಸಂಪುಟ ಪಟ್ಟಿಯಲ್ಲಿ ಕೆಲವು ಪ್ರಮುಖ ಬದಲಾವಣೆಗಳನ್ನು ಮಾಡುವ ಮೂಲಕ ಹೈಕಮಾಂಡ್ ಹಿರಿಯ ಆಕಾಂಕ್ಷಿಗಳಿಗೆ ನಿರಾಸೆ ಮೂಡಿಸಿದೆ.
ಹೆಬ್ಬಾಳ್ಕರ್‌ಗೆ ಕಡೇ ಕ್ಷಣದಲ್ಲಿ ನಿರಾಸೆ
ಸಚಿವರಾಗಲು ಹೈಕಮಾಂಡ್ ಮಟ್ಟದಲ್ಲಿ ತೀವ್ರ ಕಸರತ್ತು ನಡೆಸಿದ್ದ ಹಿರಿಯ ನಾಯಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಈ ಪಟ್ಟಿಯಲ್ಲಿ ಸ್ಥಾನ ಸಿಗದಿರುವುದು ದೊಡ್ಡ ಆಶ್ಚರ್ಯ ಮೂಡಿಸಿದೆ. ಆರಂಭದಿಂದಲೂ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ಅವರಿಗೆ ಕಡೇ ಕ್ಷಣದ ರಾಜಕೀಯ ಸಮೀಕರಣಗಳು ಮತ್ತು ಸಂಪುಟದ ಮೇಜರ್ ಬದಲಾವಣೆಗಳು ಹಿನ್ನಡೆ ತಂದಿವೆ ಎಂದು ಹೇಳಲಾಗುತ್ತಿದೆ.
ಜಮೀರ್‌ಗೆ ಸಿಗದ ಸ್ಥಾನ
ಮಾಜಿ ಸಚಿವ ಮತ್ತು ಸಿದ್ದರಾಮಯ್ಯ ಅವರ ಅತ್ಯಾಪ್ತ ನಾಯಕರಾದ ಜಮೀರ್ ಅಹ್ಮದ್ ಖಾನ್ ಅವರಿಗೆ ಇತ್ತೀಚಿನ ಆಡಿಯೋ ವಿವಾದ ಭಾರಿ ಮುಳುವಾಗಿದೆ. ಆಡಿಯೋ ಬಿಡುಗಡೆಯಾದ ದಿನದಿಂದಲೂ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರ ಮೂಲಕ ಸಂಪುಟ ಸೇರಲು ಜಮೀರ್ ಭಾರಿ ಸರ್ಕಸ್ ನಡೆಸಿದ್ದರು. ಆದರೆ, ವಿವಾದದ ಹಿನ್ನೆಲೆಯಲ್ಲಿ ಹೈಕಮಾಂಡ್ ಅವರಿಗೆ ಮೊದಲ ಪಟ್ಟಿಯಲ್ಲಿ ಸ್ಥಾನ ನೀಡದೆ ಕಟ್ಟುನಿಟ್ಟಿನ ಸಂದೇಶ ರವಾನಿಸಿದೆ.
ಜಾರಕಿಹೊಳಿ ಹಠಕ್ಕೆ ಭಾಗಶಃ ಒಪ್ಪಿಗೆ
ಇನ್ನೊಂದೆಡೆ, ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿದ್ದ ಸತೀಶ್ ಜಾರಕಿಹೊಳಿ ಅವರು ಈ ಬಾರಿ ಸಚಿವ ಸ್ಥಾನದ ಜೊತೆಗೆ ಕೆಪಿಸಿಸಿ ಅಧ್ಯಕ್ಷ ಪಟ್ಟದ ಮೇಲೂ ಕಣ್ಣಿಟ್ಟಿದ್ದರು. ತಮಗೆ ಮಂತ್ರಿ ಸ್ಥಾನ ಹಾಗೂ ಪಕ್ಷದ ಸಾರಥ್ಯ ಎರಡನ್ನೂ ನೀಡಬೇಕೆಂದು ಅವರು ಹೈಕಮಾಂಡ್ ಮುಂದೆ ಪಟ್ಟು ಹಿಡಿದಿದ್ದರು. ಆದರೆ ಹೈಕಮಾಂಡ್ ಅವರ ಬೇಡಿಕೆಗೆ ಪೂರ್ಣವಾಗಿ ಮಣಿಯದೆ, ಸದ್ಯಕ್ಕೆ ಕೇವಲ ಸಚಿವ ಸ್ಥಾನವನ್ನು ಮಾತ್ರ ನೀಡಲು ಒಪ್ಪಿಗೆ ಸೂಚಿಸಿದೆ.













