– ಭಗವಂತನಿಗೆ ಅವರ ಬದುಕು ಸಾಕು ಅನ್ನಿಸಿ ಕರೆಸಿಕೊಂಡಿದ್ದಾನೆಂದು ಭಾವುಕ
– 2 ಬಾರಿ ಕೋವಿಡ್ ಅಟ್ಯಾಕ್ ಬಳಿಕ ತಾಯಿ ಆರೋಗ್ಯ ಕ್ಷೀಣಿಸಲು ಶುರುವಾಯ್ತು
ಬೆಂಗಳೂರು: ನಮ್ಮ ತಾಯಿ ಮೇಲೆ ಆ್ಯಸಿಡ್ ಅಟ್ಯಾಕ್ ಆದಾಗಲೂ ಉಳಿದಿದ್ದರು, ಆವತ್ತೇ ಹೋಗುವ ಪರಿಸ್ಥಿತಿ ಇತ್ತು. ಭಗವಂತ ಉಳಿಸಿದ್ದ, ಈಗ ಭಗವಂತನಿಗೆ ಅವರ ಬದುಕು ಸಾಕು ಅನ್ನೋ ತೀರ್ಮಾನಕ್ಕೆ ಬಂದು ಕರೆಸಿಕೊಂಡಿದ್ದಾನೆ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಭಾವುಕರಾದರು.
ಚೆನ್ನಮ್ಮ ದೇವೇಗೌಡರ (Chennamma DeveGowda) ನಿಧನದ ಬಗ್ಗೆ ಮಾಧ್ಯಮಗಳೊಂದಿಗೆ ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, 2 ಬಾರಿ ಕೋವಿಡ್ ಅಟ್ಯಾಕ್ ಆದ ಬಳಿಕ ಆರೋಗ್ಯ ಕ್ಷೀಣಿಸಲು ಶುರುವಾಯ್ತು. ಕಳೆದ 1 ವರ್ಷದಿಂದಲೂ ಅವರು ಪಡುತ್ತಿದ್ದ ಯಾತನೆಯನ್ನ ನೋಡುತ್ತಿದ್ದೆವು. ಸಮಯ ಸಿಕ್ಕಾಗ ಮಾತನಾಡಿಸೋದಕ್ಕೆ ಹೋದ್ರೆ, ಊಟ ಮಾಡಿ ಅನ್ನೋ ಮಾತು ಮೊದಲು ಅವರಿಂದ ಬರುತ್ತಿತ್ತು. ರಾಜರಾಜೇಶ್ವರಿ ದೇವಸ್ಥಾನಕ್ಕೆ 35-40 ವರ್ಷಗಳಿಂದ ಪ್ರತಿ ಶುಕ್ರವಾರ ದೇವಸ್ಥಾನಕ್ಕೆ ಹೋಗ್ತಿದ್ದರು. ಈಗ ಭಗವಂತನಿಗೆ ಅವರ ಬದುಕು ಸಾಕು ಅನ್ನೋ ತೀರ್ಮಾನಕ್ಕೆ ಬಂದು ಕರೆಸಿಕೊಂಡಿದ್ದಾನೆ ಎಂದು ದುಃಖತಪ್ತರಾದರು.
ಸದ್ಯ ಪಾರ್ಥೀವ ಶರೀರವನ್ನ ಪದ್ಮನಾಭ ನಗರದ ನಿವಾಸಕ್ಕೆ ತೆಗೆದುಕೊಂಡು ಹೋಗಲಾಗುತ್ತದೆ. ಅಲ್ಲಿಯೇ ಅವರಿಂದ ಜೀವನ ಕಂಡುಕೊಂಡ ಲಕ್ಷಾಂತರ ಕುಟುಂಬಳಿಗೆ ಅಂತಿಮ ದರ್ಶನ ಮಾಡಿಸಬೇಕಿದೆ. ಪದ್ಮನಾಭ ನಗರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡ್ತಿದ್ದೇವೆ, ಹೆಚ್ಚಿನ ಜನ ಸೇರಿದ್ರೆ, ಮನೆ ಸಮೀಪದಲ್ಲೇ ಇರುವ ಮೈದಾನದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡ್ತೇವೆ ಎಂದು ತಿಳಿಸಿದರು.
11 ಗಂಟೆ ಬಳಿಕ ಪಾರ್ಥೀವ ಶರೀರ ಹಾಸನಕ್ಕೆ ಶಿಫ್ಟ್
ನಾಳೆ (ಜು.19) 11 ಗಂಟೆ ಮೇಲೆ ನಮ್ಮ ತಂದೆ-ತಾಯಿಗೆ ಜನ್ಮ ಕೊಟ್ಟ ಹಾಸನ ಜಿಲ್ಲೆಗೆ ಪಾರ್ಥೀವ ಶರೀರ ತೆಗೆದುಕೊಂಡು ಹೋಗಲಿದ್ದೇವೆ. ಮನೆಗೆ ಹೋದ ಬಳಿಕ ಮುಂದಿನ ಕಾರ್ಯಗಳೇನು ಅಂತ ತೀರ್ಮಾನಿಸುತ್ತೇವೆ. ಅವರ ಹುಟ್ಟೂರಲ್ಲೇ ಅಂತ್ಯ ಸಂಸ್ಕಾರ ಮಾಡಬೇಕು ಅನ್ನೋ ತೀರ್ಮಾನ ಇದೆ. ಜೊತೆಗೆ ಮಾವಿನಕೆರೆ ರಂಗನಾಥಸ್ವಾಮಿ ದೇವಸ್ಥಾನದ ತಪ್ಪಲಿನಲ್ಲಿ ಅಂತ್ಯಕ್ರಿಯೆ ಮಾಡಬೇಕೆಂಬ ಚರ್ಚೆಯೂ ಇದೆ. ಅಂತ್ಯಕ್ರಿಯೆಗೆ 2-3 ಸ್ಥಳಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಮನೆಗೆ ಜೋದ ಬಳಿಕ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
ಸದ್ಯ ಚೆನ್ನಮ್ಮ ಅವರ ಪಾರ್ಥೀವ ಶರೀರವನ್ನು ಬೆಂಗಳೂರಿನಲ್ಲಿರುವ ಪದ್ಮನಾಭ ನಗರಕ್ಕೆ ಶಿಫ್ಟ್ ಮಾಡಲಾಗಿದೆ. ಕುಟುಂಬ ಸದಸ್ಯರಿಂದ ಅಂತಿಮ ಪೂಜೆ ನೆರವೇರಿದ ಬಳಿಕ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ.
