ಚೆನ್ನಮ್ಮರ ಆತಿಥ್ಯ ನಮ್ಮ ತಾಯಿಯವರನ್ನು ನೆನಪಿಸಿಸುತ್ತಿತ್ತು: ಸೋಮಣ್ಣ
ಬೆಂಗಳೂರು: ಮಾಜಿ ಪ್ರಧಾನಿ ದೇವೇಗೌಡರ ಪತ್ನಿಯವರು ವಿಧಿವಶರಾಗಿದ್ದಾರೆ. ಅವರನ್ನು ನೆನೆದು ಮೊಮ್ಮೊಗ ನಿಖಿಲ್ ಕುಮಾರಸ್ವಾಮಿಯವರು ಭಾವುಕರಾಗಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ನಮ್ಮ ಹೆಮ್ಮೆಯ ಅಜ್ಜಿ ಚೆನ್ನಮ್ಮನವರು ಇಂದು ನಮ್ಮನ್ನು ಅಗಲಿದ್ದಾರೆ ಎಂಬ ಸತ್ಯವನ್ನು ಅರಗಿಸಿಕೊಳ್ಳಲು ನನಗೆ ಸಾಧ್ಯವಾಗುತ್ತಿಲ್ಲ. ಅವರ ಅಗಲಿಕೆ ಇಡೀ ಕುಟುಂಬಕ್ಕೆ ಮತ್ತು ನನಗೆ ತುಂಬಲಾರದ ನಷ್ಟ ತಂದಿದೆ. ಅಜ್ಜಿ ಕೇವಲ ನಮಗೆ ಅಜ್ಜಿಯಾಗಿರಲಿಲ್ಲ; ಇಡೀ ಕುಟುಂಬವನ್ನು ಒಟ್ಟಾಗಿ ಹಿಡಿದಿಟ್ಟಿದ್ದ ಗಟ್ಟಿ ನೆಲೆ ಅವರು. ನಮ್ಮ ಮನೆಯ ದೊಡ್ಡ ಆಧಾರಸ್ತಂಭ. ಮನೆಗೆ ಬಂದ ಯಾರೊಬ್ಬರನ್ನೂ ಅವರು ಹಸಿದ ಹೊಟ್ಟೆಯಲ್ಲಿ ಕಳುಹಿಸುತ್ತಿರಲಿಲ್ಲ. ಬಂದವರೆಲ್ಲರಿಗೂ ಪ್ರೀತಿಯಿಂದ ಉಣಬಡಿಸುತ್ತಿದ್ದ ಅವರ ಆ ಕೈಗಳು ಸಾಕ್ಷಾತ್ ಅನ್ನಪೂರ್ಣೇಶ್ವರಿಯ ಸ್ವರೂಪವಾಗಿತ್ತು. ಅವರ ಆತಿಥ್ಯ, ಸರಳತೆ ಮತ್ತು ಮಮತೆಯ ಮಾತುಗಳು ನನ್ನ ಜೀವನದ ದೊಡ್ಡ ಸ್ಪೂರ್ತಿ. ಅವರು ಕಲಿಸಿದ ಬದುಕಿನ ಪಾಠಗಳು, ತೋರಿದ ಪ್ರೀತಿ ನನ್ನಲ್ಲಿ ಶಾಶ್ವತವಾಗಿ ಜೀವಂತವಾಗಿರುತ್ತದೆ.
ನಮ್ಮ ಇಡೀ ಕುಟುಂಬದ ದಾರಿದೀಪವಾಗಿದ್ದ ಅಜ್ಜಿಯ ಆತ್ಮಕ್ಕೆ ತಾಯಿ ಚಾಮುಂಡೇಶ್ವರಿ ಸದ್ಗತಿ ಕರುಣಿಸಲಿ. ಅವರ ಅಗಲಿಕೆಯ ಈ ತೀವ್ರ ನೋವನ್ನು ತಡೆದುಕೊಳ್ಳುವ ಶಕ್ತಿಯನ್ನು ದೇವರು ನಮ್ಮ ಇಡೀ ಕುಟುಂಬಕ್ಕೆ ನೀಡಲಿ ಎಂದು ಅವರು ಪ್ರಾರ್ಥಿಸಿದ್ದಾರೆ.
ಸಂತಾಪ ಸೂಚಿಸಿದ ಸೋಮಣ್ಣ
ದೇವೇಗೌಡ ಅವರ ಧರ್ಮಪತ್ನಿ ಹಾಗೂ ಅತ್ಯಂತ ಸರಳ-ಸಜ್ಜನಿಕೆಯ ಮನೋಭಾವದವರಾಗಿದ್ದ ಚೆನ್ನಮ್ಮ ಅವರು ದೈವಾಧೀನರಾದ ಸುದ್ದಿ ತಿಳಿದು ಮನಸ್ಸಿಗೆ ತೀವ್ರ ಅಘಾತವಾಗಿದೆ.

ಅವರ ಯಶಸ್ವಿ ರಾಜಕಾರಣದಲ್ಲಿ ಶ್ರೀಯುತರ ಪಾತ್ರವೂ ಅಪೂರ್ವವಾಗಿತ್ತು. ನಮ್ಮ ಮಾರ್ಗದರ್ಶಕರಾದ ದೇವೇಗೌಡರೊಂದಿಗೆ ಮನೆಗೆ ತೆರಳಿದಾಗಲೆಲ್ಲ ಅವರು ನೀಡಿದ್ದ ಆತಿಥ್ಯ ಸದಾ ನಮ್ಮ ತಾಯಿಯವರನ್ನು ನೆನಪಿಸಿದಂತಾಗುತ್ತಿತ್ತು. ಅವರ ನೆನಪು ನಮ್ಮೆಲ್ಲರಲ್ಲಿ ಸದಾ ಚಿರಸ್ಮರಣೀಯವಾಗಿರಲಿದೆ.
ದೇವೇಗೌಡರು ಹಾಗೂ ಅವರ ಕುಟುಂಬಕ್ಕೆ ಹಾಗೂ ಅಪಾರ ಬಂಧುಗಳು, ಅಭಿಮಾನಿಗಳಿಗೆ ಆ ಭಗವಂತ ಈ ತೀವ್ರ ದುಃಖದ ಸಂದರ್ಭದಲ್ಲಿ ಹೆಚ್ಚಿನ ಶಕ್ತಿಯನ್ನು ನೀಡಲಿ. ಶ್ರೀಯುತರ ಆತ್ಮಕ್ಕೆ ಭಗವಂತ ಸದ್ಗತಿ ನೀಡಲಿ ಎಂದು ಕೇಂದ್ರ ಸಚಿವ ಸೋಮಣ್ಣ ಪ್ರಾರ್ಥಿಸಿದ್ದಾರೆ.
