– ಉತ್ತಮ ಅಂಕಗಳೊಂದಿಗೆ ಪ್ರಾಥಮಿಕ ಶಾಲಾ ಶಿಕ್ಷಣ ಮುಗಿಸಿದ್ದ ಚೆನ್ನಮ್ಮ
ದೇಶದ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರ ಪತ್ನಿ ಚೆನ್ನಮ್ಮ ದೇವೇಗೌಡ (Chennamma DeveGowda) ಅವರಿಂದು ಇಹಲೋಕ ತ್ಯಜಿಸಿದ್ದಾರೆ. ದೇವೇಗೌಡರ ಪ್ರತಿಯೊಂದು ಯಶಸ್ಸಿನ ಹಿಂದೆ ಮೌನವಾಗಿ ನಿಂತಿದ್ದ ಚೆನ್ನಮ್ಮ ಅವರು ಚಿರನಿದ್ರೆಗೆ ಜಾರಿದ್ದಾರೆ. ಅವರ ಕುರಿತ ಆಸಕ್ತಿದಾಯಕ ವಿಚಾರಗಳ ಮೇಲೆ ಬೆಳಕು ಚೆಲ್ಲುವ ಕೆಲಸವನ್ನು ಈ ಲೇಖನದಲ್ಲಿ ಮಾಡಲಾಗಿದೆ.
ಹಾಸನ (Hassan) ತಾಲೂಕಿನ ಮುತ್ತಿಗೆ ಹಿರೇಹಳ್ಳಿಯ ಚೆನ್ನಮ್ಮ ಅವರು 1954 ಮೇ 25 ರಂದು ಹೆಚ್.ಡಿ ದೇವೇಗೌಡರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. 1954ರಲ್ಲಿ ಗೌಡರಿಗೆ 21 ವರ್ಷ ತುಂಬಿತ್ತು. ಅವರ ತಂದೆ-ತಾಯಿ ಅದೇ ತಾಲೂಕಿನ ಮುತ್ತಿಗೆ ಹಿರೇಹಳ್ಳಿಯ ಚೆನ್ನಮ್ಮನೊಂದಿಗೆ ಗೌಡರ ಮದುವೆ ನೆರವೇರಿಸಿದ್ದರು. ಮದುವೆಯಾಗುವಾಗ (Marriage) ಚೆನ್ನಮ್ಮನವರಿಗೆ 17 ವರ್ಷ ವಯಸ್ಸು.

ಚೆನ್ನಮ್ಮ ಅವರ ತಂದೆ ಪಟೇಲ ದೇವೇಗೌಡ ಮತ್ತು ಕಾಳಮ್ಮ ಅವರ ಕುಟುಂಬವು ಹರದನಹಳ್ಳಿಯ ದೇವೇಗೌಡ ಅವರ ಕುಟುಂಬಕ್ಕಿಂತ ಸ್ವಲ್ಪ ಮಟ್ಟಿಗೆ ಹೆಚ್ಚಿನ ಸುಸ್ಥಿತಿಯಲ್ಲಿತ್ತು. ಚೆನ್ನಮ್ಮನವರ ತಂದೆ ಹಳ್ಳಿಯ ಪಟೇಲರಾಗಿದ್ದರು ಮತ್ತು ತಮ್ಮ ಹಳ್ಳಿಯಷ್ಟೆ ಅಲ್ಲದೇ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಕೂಡ ಸಾಕಷ್ಟು ಪ್ರಭಾವ ಹೊಂದಿದ್ದರು. ಕಾಳಮ್ಮ, ಪಟೇಲ್ ಗೌಡರ ಮೂರನೆ ಪತ್ನಿಯಾಗಿದ್ದರು. ಅವರ ಮೊದಲ ಇಬ್ಬರು ಪತ್ನಿಯರು ಕೂಡ ತೀರಿ ಹೋಗಿದ್ದರು. ದೇವೇಗೌಡರಂತೆ ಚೆನ್ನಮ್ಮ ಕೂಡ ತಮ್ಮ ತಂದೆ ತಾಯಿಗೆ ಚೊಚ್ಚಲ ಮಗು.

ಮದುವೆ ನಿಶ್ಚಯವಾಗುವವರೆಗೂ ದೇವೇಗೌಡರು ಮತ್ತು ಚೆನ್ನಮ್ಮ ಪರಸ್ಪರ ಅಪರಿಚಿತರಾಗಿಯೇನೂ ಇರಲಿಲ್ಲ. ಚೆನ್ನಮ್ಮನವರ ತಾಯಿಯ ತವರುಮನೆ ಹರದನಹಳ್ಳಿಯಲ್ಲಿ ಇದ್ದುದರಿಂದ ಅವರು ಹಬ್ಬ, ಹರಿದಿನ, ಜಾತ್ರೆಗೆಂದು ಅಲ್ಲಿಗೆ ಬರುತ್ತಿದ್ದರು. ಚೆನ್ನಮ್ಮನವರ ತಾಯಿಯ ತಂದೆ (ತಾತ) ಸುಬ್ಬೇಗೌಡರು ಚೆನ್ನಮ್ಮನವರ ತಂದೆಗಿಂತಲು ಹೆಚ್ಚು ಪ್ರಭಾವಿ ವ್ಯಕ್ತಿಯಾಗಿದ್ದರು. ಸಾಕಷ್ಟು ಜಮೀನು ಹೊಂದಿದ್ದ ಅವರು ಊರಿನ ಶ್ರೀಮಂತರಲ್ಲಿ ಒಬ್ಬರಾಗಿದ್ದರು. ಬಡ್ಡಿವ್ಯಾಪಾರದಲ್ಲಿ ತೊಡಗಿದ್ದ ಅವರು ಹಣ ವಾಪಾಸಾತಿಗೆ ಮುಸ್ಲಿಂ ಆಳುಗಳನ್ನು ಇರಿಸಿಕೊಂಡಿದ್ದರು. ಇದು ಆ ಕಾಲಕ್ಕೆ ಸಮಾಜದಲ್ಲಿ ಪ್ರತಿಷ್ಠಿತ ವಿಷಯವಾಗಿತ್ತು. ದೊಡ್ಡಗೌಡರಿಗೆ ಮಗನ ವಿದ್ಯಾಭ್ಯಾಸಕ್ಕೆ ಹಣಕಾಸಿನ ಸಹಾಯವನ್ನೂ ಕೂಡ ಸುಬ್ಬೇಗೌಡರು ಮಾಡಿದ್ದರು.

ಚೆನ್ನಮ್ಮ ಅವರನ್ನು ಸೊಸೆಯಾಗಿ ತರಬೇಕೆಂಬುದು ದೇವೇಗೌಡರ ತಾಯಿ ಲಕ್ಷ್ಮಿದೇವಮ್ಮನವರ ಇಚ್ಛೆಯಾಗಿತ್ತು. ಚೆನ್ನಮ್ಮನವರು ಕೂಡ ಉತ್ತಮ ಅಂಕಗಳೊಂದಿಗೆ ಪ್ರಾಥಮಿಕ ಶಾಲಾ ಶಿಕ್ಷಣ ಮುಗಿಸಿದ್ದರು. ಆ ಕಾಲಕ್ಕೆ ಮೈಸೂರು ರಾಜಸಂಸ್ಥಾನದ ಸಾಂಪ್ರದಾಯಿಕ ಮನೆತನಗಳಲ್ಲಿ ಹೆಣ್ಣುಮಕ್ಕಳು ಹೆಚ್ಚೆಂದರೆ 7ನೇ ತರಗತಿ ತನಕ ಮಾತ್ರ ವಿದ್ಯಾಭ್ಯಾಸವನ್ನು ಮುಂದುವರಿಸಲು ಅವಕಾಶವಿತ್ತು ಅನ್ನೋದು ಗಮನಾರ್ಹ.
