ಎಲ್ಲಿಯ ತನಕ ದೇವೇಗೌಡರಿಗೆ ಒಡವೆ ಅಡ ಇಡುವ ಪ್ರಸಂಗ ಬರುವುದಿಲ್ಲವೋ ಅಲ್ಲಿಯ ತನಕ ತಾವು ಅವುಗಳನ್ನು ಧರಿಸುವುದಿಲ್ಲ ಎಂದು ಚೆನ್ನಮ್ಮ ಶಪಥ ಮಾಡಿದ್ದರು
1954ರ ಮೇ 25 ರಂದು ಹಿರೇಹಳ್ಳಿಯಲ್ಲಿ ವಿವಾಹವಾದ ಬಳಿಕ ಗೌಡರ ವ್ಯಾಪಾರ ವಹಿವಾಟಿನ ಅಗತ್ಯಗಳಿಗೆ ಚೆನ್ನಮ್ಮ ಒತ್ತಾಸೆಯಾಗಿ ನಿಲ್ಲುವ ಮೂಲಕ ನವ ದಂಪತಿಗಳು ತಮ್ಮ ವೈವಾಹಿಕ ಜೀವನ ಪ್ರಾರಂಭಿಸಿದರು.
ಮದುವೆಯಾಗಿ ಒಂದು ವರ್ಷದಲ್ಲಿ ಅವರಿಗೆ ಒಂದು ಆರ್ಥಿಕ ಮುಗ್ಗಟ್ಟು ಎದುರಾಗುತ್ತದೆ. ದೇವೇಗೌಡರು ಕೈಗೊಳ್ಳಲು ಇಚ್ಛಿಸಿದ್ದ ಒಂದು ಸಿವಿಲ್ ಕಾಮಗಾರಿ ಕೆಲಸದ ಟೆಂಡರ್ ಪಡೆಯಲು ಅಗತ್ಯವಾದ ಠೇವಣಿ ಇಡಲು ಅವರಿಗೆ 1 ಸಾವಿರ ರೂಪಾಯಿಗಳ ಕೊರತೆ ಬೀಳುತ್ತದೆ. ಗಡುವು ಹತ್ತಿರವಾಗುತ್ತಿದ್ದರೂ ಹಣ ಹೊಂದಿಸಲು ಗೌಡರಿಗೆ ಸಾಧ್ಯವಾಗಿರಲಿಲ್ಲ. ಆ ಸಂದರ್ಭದಲ್ಲಿ ಚೆನ್ನಮ್ಮ ಮೊಸಳೆ ಹಿರೇಹಳ್ಳಿಯ ತಮ್ಮ ತವರು ಮನೆಯಲ್ಲಿದ್ದರು.

ದೇವೇಗೌಡರು ತಮ್ಮ ಹಣಕಾಸಿನ ತುರ್ತಿನ ಬಗ್ಗೆ ಒಂದು ಸಂದೇಶ ಬರೆದು ತಮ್ಮ ನಂಬಿಕಸ್ಥ ಬೆಟ್ಟಯ್ಯನ ಕೈಯಲ್ಲಿ ಕೊಟ್ಟು ಚೆನ್ನಮ್ಮನವರಿಗೆ ಕೊಡಲು ಹೇಳುತ್ತಾರೆ. ಚೆನ್ನಮ್ಮ ಯಾವುದೇ ಹಿಂಜರಿಕೆ ಇಲ್ಲದೆ ತಮ್ಮ ತಂದೆ-ತಾಯಿಗೂ ತಿಳಿಸದೇ ತಮ್ಮ ಮದುವೆ ಒಡವೆಯನ್ನ ಬೆಟ್ಟಯ್ಯನ ಕೈಗೆ ಕೊಟ್ಟು ಅದನ್ನ ಅಡ ಇಟ್ಟು ದುಡ್ಡು ಪಡೆಯುವಂತೆ ಹೇಳಿ ಕಳುಹಿಸುತ್ತಾರೆ. ಕೆಲವು ತಿಂಗಳ ನಂತರ ದೇವೇಗೌಡರು ಒಡವೆ ಬಿಡಿಸಿಕೊಂಡು, ಚೆನ್ನಮ್ಮನವರಿಗೆ ಕೊಡಲು ಹೋದಾಗ, ಎಲ್ಲಿಯ ತನಕ ದೇವೇಗೌಡರಿಗೆ ಒಡವೆ ಅಡ ಇಡುವ ಪ್ರಸಂಗ ಬರುವುದಿಲ್ಲವೋ ಅಲ್ಲಿಯ ತನಕ ತಾವು ಅವುಗಳನ್ನು ಧರಿಸುವುದಿಲ್ಲ ಮತ್ತು ಅಲ್ಲಿಯ ತನಕ ದೇವೇಗೌಡರು ಅವುಗಳನ್ನು ತಮ್ಮ ಕೆಲಸದ ಅಗತ್ಯಗಳಿಗೆ ಬಳಸಬಹುದು ಎಂದು ಹೇಳುತ್ತಾರೆ. ಆಪತ್ಕಾಲಕ್ಕೆ ತನ್ನ ಹೆಂಡತಿಯ ಒಡವೆ ಗಿರವಿ ಇಡದಿರುವಂತಹ ಸಂದರ್ಭ ಬರದಿರಲು ದೇವೇಗೌಡರಿಗೆ ಹಲವು ವರ್ಷಗಳೇ ಬೇಕಾಗುತ್ತವೆ.

ವರ್ಷಗಳು ಕಳೆದಂತೆ ದಂಪತಿಗಳ ನಡುವಿನ ಈ ತಿಳಿವಳಿಕೆ ಮತ್ತು ನಂಬಿಕೆ ಗಾಢವಾಯಿತು. ಗುತ್ತಿಗೆದಾರರಾಗಿ ಮತ್ತು ನಂತರ ರಾಜಕಾರಣಿಯಾಗಿ ಗೌಡರು ಯಾವತ್ತೂ ಹೆಚ್ಚು ಹಣ ಸಂಪಾದನೆ ಮಾಡಿದಂತೆ ಕಾಣುವುದಿಲ್ಲ. ಗಳಿಸಿದ ಹಣವನ್ನ ಒಂದು ಯೋಜನೆಯಿಂದ ಇನ್ನೊಂದಕ್ಕೆ, ಒಂದು ಚುನಾವಣೆಯಿಂದ ಇನ್ನೊಂದಕ್ಕೆ ಬಳಸಿಕೊಂಡರು. ಅವರ ತಲೆಮೇಲೆ ಸಾಲ ಇಲ್ಲದ ಕಾಲ ಎಂಬುದು ಯಾವತ್ತೂ ಇದ್ದಿರಲಿಲ್ಲ. ಇಂತಹ ಅನಿಶ್ಚಿತತೆಗಳ ನಡುವೆ ಗಂಡ ಮತ್ತು 6 ಮಕ್ಕಳ ಸಂಸಾರವನ್ನು ಸ್ಥಿರವಾಗಿ ನಿರ್ವಹಿಸಿಕೊಂಡು ಬಂದ ಶ್ರೇಯಸ್ಸು ಚೆನ್ನಮ್ಮನವರಿಗೆ ಸಲ್ಲುತ್ತದೆ.

ತಾವಾಯಿತು, ತಮ್ಮ ಮನೆಯಾಯಿತು ಎಂದು ಇದ್ದ ಚೆನ್ನಮ್ಮನವರು ತನ್ನ ಗಂಡನ ಕಣ್ಣುಗಳ ಮೂಲಕ ಜಗತ್ತನ್ನು ನೋಡಿದರು. ಕ್ರಮೇಣ ತನ್ನ ಸುತ್ತಲಿನ ಜನರ ಬಗ್ಗೆ ತಮ್ಮದೇ ಆದ ಸ್ವತಂತ್ರ ಅಭಿಪ್ರಾಯ ಬೆಳೆಸಿಕೊಂಡರು. ಅವರ ಸಾಮಾಜಿಕ ವಲಯವೇನಿದ್ದರೂ ಅದು ಹೊಳೆನರಸೀಪುರ ಮತ್ತು ಹಾಸನದ ವ್ಯಾಪ್ತಿಯೊಳಗಿನ ತನ್ನ ಗಂಡನ ಮತ್ತು ತವರು ಮನೆಯ ಪರಿವಾರಕ್ಕೆ ಮಾತ್ರ ಸೀಮಿತವಾಗಿತ್ತು. ಪ್ರವಾಸ ಏನಿದ್ದರೂ ಕುಟುಂಬದೊಳಗಿನ ಮದುವೆ ಸಮಾರಂಭಗಳು ಮತ್ತು ದೇವಸ್ಥಾನಗಳ ಭೇಟಿಗೆ ಸೀಮಿತವಾಗಿತ್ತು.

ಗೌಡರ ಮುಖದ ಮೇಲೆ ಯಾವತ್ತೂ ಚಿಂತೆ ಮನೆಮಾಡಿಕೊಂಡಂತೆ ಕಾಣುತ್ತಿದ್ದರೆ, ಪೂಜೆ ಪುನಸ್ಕಾರಗಳಲ್ಲಿ ಸದಾ ತೊಡಗಿರುತ್ತಿದ್ದ ಚೆನ್ನಮ್ಮನವರ ಮುಖದ ಮೇಲೆ ಶಾಂತಿ ಮನೆಮಾಡಿತ್ತು. ಅತ್ಯಂತ ಧಾರ್ಮಿಕ ಪೃವೃತ್ತಿಯ ಚೆನ್ನಮ್ಮನವರು ತಮ್ಮ ಸುತ್ತಲಿನ ಬ್ರಾಹ್ಮಣ ಮಹಿಳೆಯರಂತೆ ದೀರ್ಘ ಪೂಜಾ ವಿಧಿಗಳು, ಉಪವಾಸ ವೃತಗಳನ್ನು ಪಾಲಿಸಿಕೊಂಡು ಬಂದವರು ಇಂದು ಇಹಲೋಕ ತ್ಯಜಿಸಿ ಚಿರನಿದ್ರೆಗೆ ಜಾರಿದ್ದಾರೆ.

