ಬೆಂಗಳೂರು: ಮಾಜಿ ಪ್ರಧಾನಮಂತ್ರಿ ಹೆಚ್.ಡಿ ದೇವೇಗೌಡ (HD Devegowda) ಅವರ ಧರ್ಮಪತ್ನಿ ಚೆನ್ನಮ್ಮ ಅವರು ನಿಧನರಾಗಿದ್ದು ಅತ್ಯಂತ ನೋವುಂಟು ಮಾಡಿದೆ. ಚೆನ್ನಮ್ಮ ಅವರು ನಮಗೆಲ್ಲ ತಾಯಿ ಸಮಾನರಾಗಿದ್ದರು. ಅವರ ಕುಟುಂಬದೊಂದಿಗೆ ನಾನು ಆತ್ಮೀಯ ಸಂಬಂಧ ಹೊಂದಿದ್ದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಸಂತಾಪ ಸೂಚಿಸಿದ್ದಾರೆ.
ಖಾಸಗಿ ಆಸ್ಪತ್ರೆಯಲ್ಲಿ ಚೆನ್ನಮ್ಮ (Chennamma DeveGowda) ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದು ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚೆನ್ನಮ್ಮ ಅವರು ಕಳೆದ 1 ವರ್ಷದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಉಸಿರಾಟದ ತೊಂದರೆಯಿಂದ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿಸಿದ್ದಾರೆ.

ಚೆನ್ನಮ್ಮ ಅವರು ನಮಗೆಲ್ಲ ತಾಯಿ ಸಮಾನರಾಗಿದ್ದರು. ಅವರ ಕುಟುಂಬದೊಂದಿಗೆ ನಾನು ಆತ್ಮೀಯ ಸಂಬಂಧ ಹೊಂದಿದ್ದೆ. ದೇಶದ ಮಾಜಿ ಪ್ರಧಾನಿ ಪತ್ನಿಯಾಗಿದ್ದರೂ ಯಾವುದೇ ಹಮ್ಮು ಬಿಮ್ಮು ಇಲ್ಲದೇ ಎಲ್ಲರನ್ನು ಪ್ರೀತಿಯಿಂದ ಕಾಣುತ್ತಿದ್ದರು. ಚೆನ್ನಮ್ಮ ಅವರ ಅಗಲಿಕೆಯಿಂದ ದೇವೇಗೌಡರು ಆಘಾತಕ್ಕೆ ಒಳಗಾಗಿದ್ದಾರೆ. ದೇವರು ದೇವೇಗೌಡರಿಗೆ ತಮ್ಮ ದೀರ್ಘ ಕಾಲದ ಸಂಗಾತಿಯ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿ ನೀಡಲಿ, ಅವರ ಕುಟುಂಬ ವರ್ಗಕ್ಕೆ ಅವರ ಅಗಲಿಕೆಯ ನೋವನ್ನ ತಡೆಯುವ ಶಕ್ತಿ ನೀಡಲಿ, ಚೆನ್ನಮ್ಮ ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಎಂದು ಪ್ರಾರ್ಥಿಸುವುದಾಗಿ ಸಂತಾಪದಲ್ಲಿ ತಿಳಿಸಿದ್ದಾರೆ.
