ಬೆಂಗಳೂರು: ಹಾಸನ (Hassan) ಜಿಲ್ಲೆಯ ಹರದನಹಳ್ಳಿಯ ಮಾವಿನಕೆರೆ ರಂಗನಾಥ ಸ್ವಾಮಿ ಬೆಟ್ಟದ (Ranganathaswamy Hill) ತಪ್ಪಲಿನಲ್ಲಿರುವ ಪುಣ್ಯಭೂಮಿಯಲ್ಲಿ ಮಾಜಿ ಪ್ರಧಾನಿ ದೇವೇಗೌಡರ (H.D Devegowda) ಪತ್ನಿ ಚೆನ್ನಮ್ಮನವರ (89) (Chennamma) ಅಂತ್ಯಕ್ರಿಯೆ ನಡೆಯುವ ಸಾಧ್ಯತೆ ಇದೆ.
ಪತಿ ಊರು ಹಾಗೂ ಅವರ ಹುಟ್ಟೂರಿನ ಸಮೀಪದ ದೈವ ಸನ್ನಿಧಿ ಸಮೀಪವೇ ಸೋಮವಾರ (ಜು.20) ಮಧ್ಯಾಹ್ನದ ಒಳಗೆ ಅಂತ್ಯಕ್ರಿಯೆ ನೆರವೇರಲಿದೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಅಂತ್ಯಕ್ರಿಯೆಗೆ 2-3 ಸ್ಥಳಗಳ ಬಗ್ಗೆ ಚರ್ಚೆ ಇದೆ, ನಾಳೆ ತೀರ್ಮಾನಿಸುತ್ತೇವೆ – ಹೆಚ್‌ಡಿಕೆ
ಉಸಿರಾಟದ ಸಮಸ್ಯೆಯಿಂದಾಗಿ ಕಳೆದ 3 ದಿನಗಳ ಹಿಂದೆ ಹೆಚ್‌ಎಎಲ್‌ನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದ ಚೆನ್ನಮ್ಮ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಇವತ್ತು ಸಂಜೆ 4 ಗಂಟೆ 50 ನಿಮಿಷ ಸುಮಾರಿಗೆ ಹೃದಯಸ್ತಂಭನವಾಗಿದ್ದು, ಅವರು ನಿಧನರಾಗಿದ್ದಾರೆ.
ಪತ್ನಿ ನಿಧನ ಸುದ್ದಿ ತಿಳಿಯುತ್ತಿದ್ದಂತೆಯೇ ದೇವೇಗೌಡರು ಕಣ್ಣೀರು ಹಾಕಿದ್ದಾರೆ. ನಾಲ್ಕೈದು ಗಂಟೆ ಅವರ ಬಳಿಯೇ ಕೂತಿದ್ದರು. ಪತ್ನಿಯ ಹಣೆಗೆ ಕುಂಕುಮ ಇಟ್ಟು, ಹೂ ಮುಡಿಸಿ ಮುಖವನ್ನೇ ನೋಡುತ್ತಾ ಭಾವುಕರಾದರು. ದೇವೇಗೌಡರು ಪ್ರಧಾನಿ ಆಗಲು ಚೆನ್ನಮ್ಮ ಕೊಡುಗೆ ಅಪಾರವಾಗಿತ್ತು. ಕುಮಾರಸ್ವಾಮಿ, ನಿಖಿಲ್ ಕೂಡ ಭಾವುಕರಾಗಿದ್ದಾರೆ. ಕುಮಾರಸ್ವಾಮಿ, ರೇವಣ್ಣ ಸೇರಿದಂತೆ 6 ಮಕ್ಕಳಿಗೆ ಚೆನ್ನಮ್ಮ ಜನ್ಮ ನೀಡಿದ್ದರು. ಇನ್ನು, ನಿನ್ನೆ (ಜು.17) ಇಡೀರಾತ್ರಿ ಸೊಸೆ ಭವಾನಿ ರೇವಣ್ಣ ಅವರು ಆಸ್ಪತ್ರೆಯಲ್ಲೇ ಉಳಿದು ಅತ್ತೆಯ ಆರೋಗ್ಯ ನೋಡಿಕೊಂಡಿದ್ದರು. ಈಗ ದೊಡ್ಡಗೌಡರ ಮನೆಯಲ್ಲಿ ಸೂತಕ ಆವರಿಸಿದೆ. ಇದನ್ನೂ ಓದಿ: ದೇವೇಗೌಡರ ಬಳಿ 1,000 ರೂಪಾಯಿ ಕೊರತೆಯಾದಾಗ ಒಡವೆ ಗಿರವಿ ಇಟ್ಟಿದ್ದ ಚೆನ್ನಮ್ಮ!
