ಬೆಳಗಾವಿ: ಕಳೆದ ಎರಡು ತಿಂಗಳುಗಳಿಂದ ಸಂಪೂರ್ಣವಾಗಿ ಬತ್ತಿ ಬಣಗುಡುತ್ತಿದ್ದ ಬೆಳಗಾವಿ ಜಿಲ್ಲೆಯ ಜೀವನಾಡಿಗಳಾದ ಕೃಷ್ಣಾ (Krishna) ಹಾಗೂ ದೂದಗಂಗಾ ನದಿಗಳಿಗೆ(Dudhganga River) ಕೊನೆಗೂ ಜೀವಕಳೆ ಬಂದಿದೆ.
ನೆರೆರಾಜ್ಯ ಮಹಾರಾಷ್ಟ್ರದ(Maharashtra) ಘಟ್ಟ ಪ್ರದೇಶಗಳಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ವರುಣನ ಆರ್ಭಟ ಜೋರಾಗಿದ್ದು, ಅಲ್ಲಿಂದ ಭಾರಿ ಪ್ರಮಾಣದ ಮಳೆ (Rain) ನೀರು ನದಿಗಳ ಮೂಲಕ ಹರಿದು ಬರುತ್ತಿದೆ.
ಸಾಮಾನ್ಯವಾಗಿ ಜೂನ್ ತಿಂಗಳಿನಲ್ಲೇ ನದಿಗಳು ತುಂಬಬೇಕಿತ್ತಾದರೂ, ಈ ಬಾರಿ ಮುಂಗಾರು ಕೊಂಚ ವಿಳಂಬವಾಗಿತ್ತು. ಕಳೆದ ಎರಡು ತಿಂಗಳಿನಿಂದ ಮಳೆಯಿಲ್ಲದೆ ನದಿಗಳು ಸಂಪೂರ್ಣವಾಗಿ ಒಣಗಿ ಹೋಗಿದ್ದವು. ಆದರೆ ಜೂನ್ ತಿಂಗಳ ಅಂತ್ಯಕ್ಕೆ ಆರಂಭವಾದ ಮಳೆ, ಇದೀಗ ಜುಲೈ ಆರಂಭದ ವೇಳೆಗೆ ತೀವ್ರಗೊಂಡಿದೆ. ಇದನ್ನೂ ಓದಿ: ಪ್ರವಾಹ ಕಾಣಬೇಕಿದ್ದ ಜಾಗದಲ್ಲಿ ಬಣಗುಡುತ್ತಿದೆ ಹಿರಣ್ಯಕೇಶಿ ನದಿಯ ಒಡಲು

ಮಹಾರಾಷ್ಟ್ರದಿಂದ ನದಿಗಳಿಗೆ ನೀರು ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ಬತ್ತಿ ಹೋಗಿದ್ದ ಕೃಷ್ಣಾ ಮತ್ತು ದೂದಗಂಗಾ ನದಿಗಳು ಈಗ ತಕ್ಕಮಟ್ಟಿಗೆ ತುಂಬಿಕೊಳ್ಳುತ್ತಿದ್ದು, ಗತವೈಭವದ ಜೀವಕಳೆಯನ್ನು ಮರಳಿ ಪಡೆಯುತ್ತಿವೆ.
ನದಿಗಳು ಬತ್ತಿ ಹೋಗಿದ್ದರಿಂದ ಬೆಳೆಗಳಿಗೆ ನೀರಿಲ್ಲದೆ ಕೃಷ್ಣಾ ಹಾಗೂ ದೂದಗಂಗಾ ನದಿ ತೀರದ ರೈತರು ತೀವ್ರ ಆತಂಕಕ್ಕೆ ಒಳಗಾಗಿದ್ದರು. ಕುಡಿಯುವ ನೀರಿಗೂ ತತ್ವಾರ ಶುರುವಾಗಿತ್ತು. ಆದರೆ ಈಗ ನದಿಗೆ ನೀರು ಹರಿದು ಬರುತ್ತಿರುವುದನ್ನು ಕಂಡು ತೀರದ ರೈತರು ನಿಟ್ಟುಸಿರು ಬಿಟ್ಟಿದ್ದಾರೆ.
ಕೃಷಿ ಚಟುವಟಿಕೆಗಳಿಗೆ ಮತ್ತೆ ಚಾಲನೆ ಸಿಗಲಿದ್ದು, ಅನ್ನದಾತರ ಮೊಗದಲ್ಲಿ ಮಂದಹಾಸ ಮೂಡಿದೆ. ಘಟ್ಟ ಪ್ರದೇಶಗಳಲ್ಲಿ ಮಳೆ ಹೀಗೆಯೇ ಮುಂದುವರಿದರೆ ಮುಂದಿನ ದಿನಗಳಲ್ಲಿ ನದಿಗಳು ಉಕ್ಕಿ ಹರಿಯುವ ಸಾಧ್ಯತೆ ಇದೆ.
