ಚೆನ್ನೈ: ತಮಿಳುನಾಡಿನ ಮುಖ್ಯಮಂತ್ರಿ ಹಾಗೂ ಸ್ಟಾರ್ ನಟ ದಳಪತಿ ವಿಜಯ್ (Vijay) ನಟನೆಯ ಕೊನೆಯ ಚಿತ್ರ ಜನ ನಾಯಗನ್ (Jana Nayagan) ಸಿನಿಮಾ ಬಿಡುಗಡೆಗೂ ಮುನ್ನವೇ 1.2 ಕೋಟಿ ಜನರು ಸಿನಿಮಾ ವೀಕ್ಷಿಸಿದ್ದಾರೆ ಎಂದು ಸರ್ಕಾರ ಹೈಕೋರ್ಟ್‌ಗೆ (High Court) ತಿಳಿಸಿದೆ.
ಚಿತ್ರ ಸೋರಿಕೆ ಮಾಡಿದ ಇಬ್ಬರು ಪ್ರಮುಖ ಆರೋಪಿಗಳ ಜಾಮೀನು (Bail) ಅರ್ಜಿಯನ್ನು ಚೆನ್ನೈ ಹೈಕೋರ್ಟ್ ಗುರುವಾರ ವಜಾಗೊಳಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 4ನೇ ಆರೋಪಿ ಎಸ್. ರಜಿನಿ ಹಾಗೂ 11ನೇ ಆರೋಪಿ ಜಯಪ್ರಕಾಶ್ ಸಲ್ಲಿಸಿದ್ದ ಜಾಮೀನು ಅರ್ಜಿಗಳ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಸಿ. ಕುಮಾರಪ್ಪನ್ ಅವರು, ಆರೋಪಿಗಳಿಗೆ ಜಾಮೀನು ನೀಡಲು ನಿರಾಕರಿಸಿದ್ದಾರೆ.
ಜಾಮೀನು ಅರ್ಜಿ ವಿಚಾರಣೆ ವೇಳೆ ಸರ್ಕಾರಿ ಅಭಿಯೋಜಕರು ನ್ಯಾಯಾಲಯದ ಮುಂದೆ ಬೆಚ್ಚಿಬೀಳಿಸುವ ಅಂಶಗಳನ್ನು ತೆರೆದಿಟ್ಟಿದ್ದಾರೆ. ಸಿನಿಮಾ ಅಧಿಕೃತವಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ಮೊದಲೇ, ಅಷ್ಟೇ ಏಕೆ ಸೆನ್ಸಾರ್ ಮಂಡಳಿಯ ಪ್ರಮಾಣಪತ್ರ ಸಿಗುವ ಮುನ್ನವೇ ಆನ್‌ಲೈನ್‌ನಲ್ಲಿ ಬರೋಬ್ಬರಿ 1.2 ಕೋಟಿ ಜನರು ಈ ಚಿತ್ರವನ್ನು ವೀಕ್ಷಿಸಿದ್ದಾರೆ ಎಂದು ತಿಳಿಸಿದ್ದಾರೆ.
ಸೋರಿಕೆಯಾದ ಬೆನ್ನಲ್ಲೇ ಸಿನಿಮಾ ತಮಿಳು ರಾಕರ್ಸ್ ಸೇರಿದಂತೆ ಹಲವು ಕುಖ್ಯಾತ ಪೈರಸಿ ವೆಬ್‌ಸೈಟ್‌ಗಳಲ್ಲಿ ಹರಿದಾಡಿದೆ. ಚಿತ್ರವನ್ನು ಅಧಿಕೃತವಾಗಿ ಇಂಟರ್ನೆಟ್‌ನಲ್ಲಿ ಹರಡದಂತೆ ನಿರ್ಬಂಧಿಸುವಷ್ಟರಲ್ಲಿ ಕೋಟ್ಯಂತರ ಜನರು ಇದನ್ನು ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ಸೆನ್ಸಾರ್‌ಗೂ ಮೊದಲೇ ಇಡೀ ಸಿನಿಮಾ ಸೋರಿಕೆಯಾಗಿರುವುದರಿಂದ ಚಿತ್ರತಂಡಕ್ಕೆ ಹಾಗೂ ನಿರ್ಮಾಣ ಸಂಸ್ಥೆಗೆ ಸರಿಪಡಿಸಲಾಗದ ಬೃಹತ್ ಮೊತ್ತದ ಆರ್ಥಿಕ ನಷ್ಟವನ್ನುಂಟು ಮಾಡಲಾಗಿದೆ ಎಂದು ವಾದಿಸಿದ್ದಾರೆ.
ನ್ಯಾಯಾಲಯದಲ್ಲಿ ಸರ್ಕಾರಿ ಪರ ವಕೀಲರು ಆರೋಪಿಗಳಿಗೆ ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದು ಎಂದು ಬಲವಾಗಿ ವಾದಿಸಿದರು. ಆರೋಪಿಗಳು ಹೊರಗೆ ಬಂದರೆ ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಡಿಜಿಟಲ್ ಸಾಕ್ಷ್ಯಗಳನ್ನು ನಾಶಪಡಿಸುವ ಸಾಧ್ಯತೆ ಹೆಚ್ಚಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸದ್ಯ ಪ್ರಾಥಮಿಕ ಚಾರ್ಜ್‌ಶೀಟ್ ಮಾತ್ರ ಸಲ್ಲಿಸಿದ್ದಾರೆ. ಅಂತಿಮ ಚಾರ್ಜ್‌ಶೀಟ್ ಸಲ್ಲಿಕೆಗೂ ಮುನ್ನ ತನಿಖೆ ಇನ್ನೂ ಪ್ರಗತಿಯಲ್ಲಿದೆ. ಈ ಗಂಭೀರ ಜಾಲಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ 21 ಆರೋಪಿಗಳನ್ನು ಬಂಧಿಸಿದ್ದು, ತನಿಖೆ ತೀವ್ರಗೊಂಡಿದೆ ಎಂದು ತಿಳಿಸಿದರು. ಇದನ್ನೂ ಓದಿ: ಕೊನೆಗೂ ಸೆನ್ಸಾರ್ ಗುದ್ದಾಟದಲ್ಲಿ ಗೆದ್ದ `ಜನನಾಯಗನ್’ – ವಿಜಯ್ ಫ್ಯಾನ್ಸ್ ಖುಷ್
ಜನ ನಾಯಗನ್ ಸಿನಿಮಾದ ನಿರ್ಮಾಣ ಸಂಸ್ಥೆಯಾದ ಕೆವಿಎನ್ ಪ್ರೊಡಕ್ಷನ್ಸ್(KVN Productions)ಈ ಮುಂಚೆಯೇ ಹೈಕೋರ್ಟ್‌ನಲ್ಲಿ ಸಿವಿಲ್ ಮೊಕದ್ದಮೆ ಹೂಡಿತ್ತು. ದೇಶದ ಯಾವುದೇ ಇಂಟರ್ನೆಟ್ ಸೇವಾ ಪೂರೈಕೆದಾರರು (ISPs) ತಮ್ಮ ವೇದಿಕೆಗಳಲ್ಲಿ ಈ ಚಿತ್ರದ ಅನಧಿಕೃತ ಪ್ರದರ್ಶನಕ್ಕೆ ಅಥವಾ ಡೌನ್‌ಲೋಡ್‌ಗೆ ಅವಕಾಶ ನೀಡಬಾರದು ಎಂದು ಮಧ್ಯಂತರ ತಡೆಯಾಜ್ಞೆ ತಂದಿತ್ತು. ಈ ಕಾನೂನು ಹೋರಾಟದ ಬಳಿಕ ಸಿನಿಮಾ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವುದು ನಿಂತಿತಾದರೂ, ಅಷ್ಟರಲ್ಲಾಗಲೇ 1.2 ಕೋಟಿ ಜನರು ಚಿತ್ರವನ್ನು ನೋಡಿ ಮುಗಿಸಿದ್ದರು.
