ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹ ಜ್ಯೋತಿ(Gruha Jyothi Scheme) ಯೋಜನೆಯ ಫಲಾನುಭವಿಗಳ ಮಾಹಿತಿ ಪರಿಶೀಲನೆ ವೇಳೆ ಜಾತಿ (Caste) ವಿವರ ನೀಡುವುದು ಕಡ್ಡಾಯವಲ್ಲ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM) ತಿಳಿಸಿದೆ.
ಜುಲೈ 1 ರಿಂದ ರಾಜ್ಯಾದ್ಯಂತ ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳ ಮನೆ ಮನೆಗೆ ತೆರಳಿ ಮಾಹಿತಿ ಸಂಗ್ರಹಿಸುವ ಪ್ರಕ್ರಿಯೆ ಆರಂಭಗೊಂಡಿದೆ. ಬೆಸ್ಕಾಂ ಸಿಬ್ಬಂದಿ ಹಾಗೂ ಮೀಟರ್ ರೀಡರ್‌ಗಳು ಸೇವಾ ಸಿಂಧು ಮೊಬೈಲ್ ಅಪ್ಲಿಕೇಷನ್ ಮತ್ತು ಮುದ್ರಿತ ಘೋಷಣಾ ಪತ್ರದ ಮೂಲಕ ಈ ವಿವರಗಳನ್ನು ಕಲೆ ಹಾಕುತ್ತಿದ್ದಾರೆ.
ಈ ವೇಳೆ ಫಲಾನುಭವಿಯ ಪ್ರವರ್ಗ (ಜಾತಿ ಪ್ರಮಾಣಪತ್ರ) ಹಾಗೂ ಉಪಜಾತಿಯ ವಿವರಗಳನ್ನು ಕಡ್ಡಾಯವಾಗಿ ಕೇಳಲಾಗುತ್ತಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಕುರಿತು ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ ನಡೆದು, ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಇದನ್ನೂ ಓದಿ: Gruha Jyothi| ಮನೆಗೆ ಬಂದು ನಡೆಯಲಿದೆ ಪರಿಶೀಲನೆ – ಮಾಲೀಕರು ಏನು ದಾಖಲೆ ಕೊಡಬೇಕು?
ವಿರೋಧ ವ್ಯಕ್ತವಾಗುತ್ತಿದ್ದಂತೆ ಸ್ಪಷ್ಟನೆ ನೀಡಿದ ಬೆಸ್ಕಾಂ, ಗೃಹ ಜ್ಯೋತಿ ಫಲಾನುಭವಿಗಳ ಪ್ರವರ್ಗಕ್ಕೆ (ಜಾತಿ) ಸಂಬಂಧಿಸಿದ ಮಾಹಿತಿಯು ಕಡ್ಡಾಯವಲ್ಲ, ಅದು ಕೇವಲ ಐಚ್ಛಿಕ (Optional) ಆಗಿದೆ. ಜಾತಿ ವಿವರ ನೀಡುವುದು ಸಂಪೂರ್ಣವಾಗಿ ಸಾರ್ವಜನಿಕರ ವೈಯಕ್ತಿಕ ಆಯ್ಕೆಯಾಗಿರುತ್ತದೆ ಎಂದು ಹೇಳಿದೆ.
ಯಾವುದೇ ಫಲಾನುಭವಿಗೆ ತಮ್ಮ ಜಾತಿಯ ವಿವರವನ್ನು ನೀಡಲು ಇಷ್ಟವಿಲ್ಲದಿದ್ದರೆ, ಅದನ್ನು ನಿರಾಕರಿಸುವ ಸಂಪೂರ್ಣ ಹಕ್ಕಿದೆ. ಇಂತಹ ಸಂದರ್ಭದಲ್ಲಿ ಮೊಬೈಲ್ ಅಪ್ಲಿಕೇಶನ್‌ನಲ್ಲಿರುವ ಮಾಹಿತಿ ನೀಡಲು ನಿರಾಕರಣೆ ಎಂಬ ಆಯ್ಕೆಯನ್ನು ನಮೂದಿಸಲು ಸಿಬ್ಬಂದಿಗೆ ಈಗಾಗಲೇ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಬೆಸ್ಕಾಂ ತಿಳಿಸಿದೆ. ಇದನ್ನೂ ಓದಿ: ಜುಲೈನಲ್ಲಿ ಮೀಟರ್ ರೀಡಿಂಗ್ ಇಲ್ಲ, ಸರಾಸರಿ ಬಿಲ್ಲಿಂಗ್: ಬೆಸ್ಕಾಂ
ಸಹಾಯವಾಣಿ ಆರಂಭ:
ಬೆಸ್ಕಾಂ ವ್ಯಾಪ್ತಿಯಲ್ಲಿ ಗೃಹ ಜ್ಯೋತಿ ಯೋಜನೆಯ ಪರಿಶೀಲನೆಯ ಮಾಹಿತಿ ಸಂಗ್ರಹಕ್ಕೆ ಸಂಬಂಧಿಸಿದಂತೆ ಗ್ರಾಹಕರು ಹಾಗೂ ಫಲಾನುಭವಿಗಳ ಪ್ರಶ್ನೆಗಳಿಗೆ ಪರಿಹಾರ ಸೂಚಿಸಲು ಬೆಸ್ಕಾಂ ನಿಗಮ ಕಚೇರಿಯಲ್ಲಿ ಸಹಾಯವಾಣಿ ತೆರೆಯಲಾಗಿದೆ. ಗ್ರಾಹಕರು 9480816111, 9480816112, 9480816113 ಮತ್ತು 9480816114. ಸಹಾಯವಾಣಿಗೆ ಬೆಳಗ್ಗೆ 6 ರಿಂದ ರಾತ್ರಿ 10 ಗಂಟೆಯ ಒಳಗಡೆ ಕರೆ ಮಾಡಿ ಸಮಸ್ಯೆ/ಗೊಂದಲವನ್ನು ಪರಿಹರಿಸಿಕೊಳ್ಳಬಹುದು.
