ಕನ್ನಡದ ಸೂಪರ್ ಹಿಟ್ ಸಿನಿಮಾ ‘ಬೆಲ್ ಬಾಟಮ್’ ಖ್ಯಾತಿಯ ನಿರ್ಮಾಪಕ ಸಂತೋಷ್ ಕುಮಾರ್ ಕೆ.ಸಿ. ಅವರ ಸಾರಥ್ಯದಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ‘ಹುಬ್ಬಳ್ಳಿ ಹಂಟರ್ಸ್’ (Hubballi Hunters) ಚಿತ್ರದ ಚಿತ್ರೀಕರಣ ಯಶಸ್ವಿಯಾಗಿ ಸಂಪೂರ್ಣಗೊಂಡಿದೆ. ‘ಗೋಲ್ಡನ್ ಹಾರ್ಸ್ ಸಿನಿಮಾ’ ಬ್ಯಾನರ್‌ನಡಿ ಅದ್ಧೂರಿಯಾಗಿ ನಿರ್ಮಾಣವಾಗುತ್ತಿರುವ ಈ ಚಿತ್ರವು ಇದೀಗ ಪೋಸ್ಟ್ ಪ್ರೊಡಕ್ಷನ್ ಹಂತಕ್ಕೆ ಕಾಲಿಟ್ಟಿದೆ.
ಈ ಹಿಂದೆ ವಿಭಿನ್ನ ಕಥಾಹಂದರದ ‘ಎಡಗೈ ಅಪಘಾತಕ್ಕೆ ಕಾರಣ’ ಚಿತ್ರವನ್ನು ನಿರ್ದೇಶಿಸಿ ಗಮನ ಸೆಳೆದಿದ್ದ ಸಮರ್ಥ್ ಬಿ. ಕಡ್ಕೋಲ್, ‘ಹುಬ್ಬಳ್ಳಿ ಹಂಟರ್ಸ್’ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಚೇತನ್ ಮಾರಂಬೀಡ್, ಪವನ್ ಕುಲಕರ್ಣಿ, ಸುಮಿತ್ ಸಂಕೋಜಿ, ನಮನ್ ಅರೋರ, ದೀಪಕ್ ರಾವ್, ಶಿವು ಗುಂಡಣ್ಣನವರ್, ವಿನಯ್ ದೊಡ್ಡಮನಿ, ಧನ್ಯ ಸುಜೀತ್, ಪವನ್ ಅಣ್ಣೆಗೇರಿ ಇವರೊಂದಿಗೆ ‘ಮಹಾನಟಿ’ ರಿಯಾಲಿಟಿ ಶೋ ಖ್ಯಾತಿಯ ಧನ್ಯಶ್ರೀ ಸುಜಿತ್ ಮತ್ತು ವನು ಪಾಟೀಲ್, ಮುಖ್ಯ ಭೂಮಿಕೆಯಲ್ಲಿದ್ದಾರೆ. ನಟರಾದ ಪ್ರಮೋದ್ ಶೆಟ್ಟಿ, ಅಚ್ಯುತ್ ಕುಮಾರ್ ಮತ್ತು ಕೃಷ್ಣ ಹೆಬ್ಬಾಳೆ ಅವರು ಕೂಡ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ. ಇದನ್ನೂ ಓದಿ: ಜನ ನಾಯಗನ್ ಬಿಡುಗಡೆಗೂ ಮುನ್ನವೇ 1.2 ಕೋಟಿ ಜನರಿಂದ ವೀಕ್ಷಣೆ!
ಚಿತ್ರದ ಶೀರ್ಷಿಕೆಯೇ ಸೂಚಿಸುವಂತೆ ಇದು ಪಕ್ಕಾ ಉತ್ತರ ಕರ್ನಾಟಕದ ಸೊಗಡನ್ನು ಒಳಗೊಂಡಿರುವ ವಿಭಿನ್ನ ಕಥೆಯಾಗಿದೆ. ಹುಬ್ಬಳ್ಳಿಯಲ್ಲೇ ಭರ್ಜರಿಯಾಗಿ ಮುಹೂರ್ತ ಆಚರಿಸಿಕೊಂಡಿದ್ದ ಚಿತ್ರತಂಡ, ಮೊದಲ ಹಂತದಲ್ಲಿ 14 ದಿನಗಳ ಕಾಲ ಅಲ್ಲಿನ ಪ್ರಮುಖ ಸ್ಥಳಗಳಲ್ಲಿ ಶೂಟಿಂಗ್ ನಡೆಸಿತ್ತು. ನಂತರ ಶಿರಸಿಯಲ್ಲಿ 22 ದಿನಗಳ ಚಿತ್ರೀಕರಣ ಮಾಡಲಾಗಿದೆ. ಧಾರವಾಡದಲ್ಲಿ 2 ದಿನಗಳ ಶೂಟಿಂಗ್ ಮಾಡಿದ್ದಾರೆ. ಇದೀಗ ಚಿತ್ರೀಕರಣವನ್ನೂ ಮುಗಿಸಿ, ಇಡೀ ಸಿನಿಮಾದ ಶೂಟಿಂಗ್ ಪ್ರಕ್ರಿಯೆಗೆ ಅಧಿಕೃತವಾಗಿ ಕುಂಬಳಕಾಯಿ ಒಡೆದಿದೆ.
ನಿರ್ದೇಶಕ ಸಮರ್ಥ್ ಅವರೇ ಈ ಚಿತ್ರಕ್ಕೆ ಕಥೆ ಬರೆದಿದ್ದು, ರಾಹುಲ್ ವಿ. ಪಾರ್ವತಿಕರ್, ಅಮಿತ್ ಕಾರ್ವ್ಕರ್ ಮತ್ತು ಚೇತನ್ ಮರಂಬೀದ್ ಅವರೊಂದಿಗೆ ಜೊತೆಯಾಗಿ ಸಂಭಾಷಣೆಯ ಜವಾಬ್ದಾರಿಯನ್ನು ಹಂಚಿಕೊಂಡಿದ್ದಾರೆ. ಚಿತ್ರಕ್ಕೆ ಅಭಿಮನ್ಯು ಸದಾನಂದನ್ ಅವರ ಕಣ್ಣಿಗೆ ಕಟ್ಟುವಂತಹ ಛಾಯಾಗ್ರಹಣವಿದ್ದು, ಪ್ರಸನ್ನ ಕೇಶವ ಅವರು ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಸಂಪೂರ್ಣ ಶೂಟಿಂಗ್ ಮುಗಿಸಿ ಕುತೂಹಲ ಮೂಡಿಸಿರುವ ‘ಹುಬ್ಬಳ್ಳಿ ಹಂಟರ್ಸ್’ ತಂಡ, ಶೀಘ್ರದಲ್ಲೇ ಟೀಸರ್ ಹಾಗೂ ಹಾಡುಗಳನ್ನು ಬಿಡುಗಡೆ ಮಾಡಿ ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ಬಡಿಸಲು ಸಜ್ಜಾಗುತ್ತಿದೆ. ಇದನ್ನೂ ಓದಿ: ತಲೈವಾ ಫ್ಯಾನ್ಸ್‌ಗೆ ಗುಡ್‌ನ್ಯೂಸ್ – ‘ಜೈಲರ್- 2’ ಸಿನಿಮಾ ರಿಲೀಸ್‌ಗೆ ಮುಹೂರ್ತ ಫಿಕ್ಸ್
