- ಮುಂಬೈ ಶಾಲಾ ಕಾಲೇಜುಗಳಿಗೆ ಜು.6 ರಂದು ರಜೆ
ಮುಂಬೈ: ದಕ್ಷಿಣ ಭಾರತದಲ್ಲಿ ಬರದ ಭೀತಿ ಆವರಿಸುತ್ತಿದೆ. ಆದರೆ, ಮಹಾರಾಷ್ಟ್ರದಲ್ಲಿ (Maharastra) ವರುಣ ಅಬ್ಬರಿಸಿ ಬೊಬ್ಬಿರಿದಿದ್ದಾನೆ. 4 ದಿನಗಳಿಂದ ಭಾರೀ ಮಳೆ (Rain) ಆಗಿದ್ದು, ಇವತ್ತು ಮಳೆ ಇನ್ನಷ್ಟು ಜೋರಾಗಿದೆ. ಮಳೆಗೆ ವಾಣಿಜ್ಯ ಮಹಾನಗರಿ ಮುಂಬೈ ನಲುಗಿ ಹೋಗಿದೆ.
ರಸ್ತೆಗುಂಡಿಗಳು, ಮ್ಯಾನ್‌ಹೋಲ್‌ಗಳು, ಚರಂಡಿಗಳು ಉಕ್ಕಿ ಹರಿದಿವೆ. ಗಾಳಿ ಮಳೆಗೆ ಮರಗಳು ಎಲ್ಲೆಂದರಲ್ಲಿ ಬುಡ ಮೇಲಾಗಿವೆ. ನೀರಿನಲ್ಲಿ ಕಾರುಗಳು, ಬೈಕ್‌ಗಳು ಎಲ್ಲಾ ಮುಳುಗಿಹೋಗಿವೆ. ಜನ ರಬ್ಬರ್ ಬೋಟ್‌ಗಳಲ್ಲಿ ಓಡಾಡುವಂತಾಗಿದೆ. ಮರ ಬಿದ್ದು ವ್ಯಕ್ತಿಯೋರ್ವ ಬಲಿಯಾಗಿದ್ದಾನೆ. ಮುಂಬೈ ಮಾತ್ರವಲ್ಲದೇ ಪುಣೆ, ಥಾಣೆಗಳಲ್ಲೂ ಭಾರೀ ಮಳೆಯಾಗುತ್ತಿದೆ. ಇದರ ನಡುವೆ ಪ್ರವಾಹದಲ್ಲಿ ಸಿಲುಕಿದವರ ರಕ್ಷಣೆ ಮಾಡಲಾಗಿದೆ. ಮಳೆಯ ಅಬ್ಬರಕ್ಕೆ ಮುಂಬೈ ಶಾಲಾ ಕಾಲೇಜುಗಳಿಗೆ ಜು.6 ರಂದು ರಜೆ ಘೋಷಿಸಲಾಗಿದೆ.
41 ಶಿಕ್ಷಕರ ರಕ್ಷಣೆ: ವಸೈನಲ್ಲಿರುವ ಠಾಕೂರ್ ಕಾಲೇಜಿನಲ್ಲಿ 41 ಜನ ಶಿಕ್ಷಕರು ಹಾಗೂ ಸಿಬ್ಬಂದಿ, ಆಚೆ ಬಾರದಸ್ಥಿತಿಯಲ್ಲಿದ್ದರು. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಹಾಗೂ ಎನ್‌ಡಿಆರ್‌ಎಫ್ ತಂಡಗಳು ಅವರನ್ನು ರಕ್ಷಿಸಿವೆ.
ರಬ್ಬರ್ ಬೋಟ್ ಏರಿದ ಜನ: ವಸೈನಲ್ಲಿರುವ ಮಧುಬನ ಪ್ರದೇಶವೂ ಕೂಡ ಸಂಪೂರ್ಣ ಜಲಾವೃಗೊಂಡಿದೆ. ರಸ್ತೆಗಳಲ್ಲೆಲ್ಲಾ ಪ್ರವಾಹ ಸೃಷ್ಟಿಯಾಗಿತ್ತು. ಇಡೀ ಪ್ರದೇಶವೇ ನೀರಿನಿಂದ ಸುತ್ತುವರಿದ ಕಾರಣ, ಜನರು ರಬ್ಬರ್ ಬೋಟ್ ಬಳಸಿ ಆಟವಾಡುತ್ತಿರುವುದು ಕಂಡು ಬಂತು. ಇಲ್ಲಿಯೂ ಕೂಡ ಹಲವು ಪ್ರದೇಶಗಳಲ್ಲಿ ಕಾರುಗಳು ನೀರಿನಲ್ಲಿ ಮುಳುಗಿ ನಿಂತಿರುವ ದೃಶ್ಯಗಳು ಸಾಮಾನ್ಯವಾಗಿ ನೋಡಲು ಕಾಣಸಿಗುತ್ತಿದ್ದವು.
ಜಲಪಾತ ನೋಡಲು ಹೋದವರು ಲಾಕ್: ರಾಯಗಢ ಜಿಲ್ಲೆಯ ಖೋಪೊಲಿಯಲ್ಲಿರುವ ಜಿನಿತ್ ಜಲಪಾತ ನೋಡಲು ಹೋಗಿದ್ದ ಪ್ರವಾಸಿಗರು, ಭೀಕರ ಪ್ರವಾಹದಲ್ಲಿ ಸಿಲುಕಿಕೊಂಡು ಒದ್ದಾಡುತ್ತಿದ್ದರು. ಒಬ್ಬರಲ್ಲ ಇಬ್ಬರಲ್ಲ ಬರೋಬ್ಬರಿ, ನೂರು ಜನ ಪ್ರವಾಸಿಗರು ಯಮವೇಗದಲ್ಲಿ ನುಗ್ಗಿಬರುವ ನೀರಿನ ಮಧ್ಯೆ ಸಿಲುಕಿ ಪರದಾಡುತ್ತಿದ್ದರು. ವಿಹಾರಿ ಥಾಕರ‍್ವಾಡಿ ಗ್ರಾಮದ ಸ್ಥಳೀಯರೆಲ್ಲರೂ ಸೇರಿ ಪ್ರವಾಸಿಗರನ್ನು ರಕ್ಷಿಸಿದ್ದಾರೆ.
ಉಕ್ಕಿ ಹರಿದ ಬುಶಿ ಡ್ಯಾಂ: ಕಳೆದ 24 ಗಂಟೆಗಳ ಕಾಲ ಸುರಿದ ಸತತ ಮಳೆಯಿಂದಾಗಿ ಲೋನಾವಾಲಾ ಬಳಿ ಇರುವ ಪ್ರಸಿದ್ಧ ಬುಶಿ ಡ್ಯಾಂ ಉಕ್ಕಿ ಹರಿದಿದೆ. ಈ ಪ್ರದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 114 ಮಿಲಿ ಮೀಟರ್ ಮಳೆ ಸುರಿದಿದ್ದು. ಡ್ಯಾಂ ಉಕ್ಕಿ ಹರಿದಿದೆ. ಜಲಾಶಯದ ಸೌಂದರ್ಯ ಕಣ್ತುಂಬಿಕೊಳ್ಳಲು ಪ್ರವಾಸಿಗರು ಹರಿದು ಬಂದಿದ್ದರು. ಇನ್ನು ಭೀಕರ ಮಳೆಯಿಂದಾಗಿ ರಾಜಮಚಿ ಕೋಟೆಯ ದಾರಿಯಲ್ಲಿ ಭೀಕರ ಭೂಕುಸಿತ ಉಂಟಾದ ಕಾರಣದಿಂದ ದೊಡ್ಡ ಅನಾಹುತವೇ ಸೃಷ್ಟಿಯಾಗಿದೆ. ಇಡೀ ರಸ್ತೆ ಕಲ್ಲು ಮತ್ತು ಹಸಿ ಮಣ್ಣಿನಿಂದ ಮುಚ್ಚಿ ಹೋಗಿದ್ದು.. ಜೆಸಿಬಿಗಳ ಮೂಲಕ ತೆರವು ಕಾರ್ಯಾಚರಣೆ ಮಾಡಲಾಗಿದೆ.
