Kalaburagi
ಓರ್ವ ಶಾಸಕನ ರಾಜೀನಾಮೆ ಕೊಡಿಸಿದ್ರೆ ರಾಜಕೀಯ ನಿವೃತಿ- ಸ್ವಾಮೀಜಿಗೆ ಗುತ್ತೇದಾರ್ ಸವಾಲ್

ಕಲಬುರಗಿ: ಶ್ರೀಶೈಲ ಸಾರಂಗ ಮಠದ ಸಾರಂಗಧರ ದೇಶಿಕೇಂದ್ರ ಸ್ವಾಮೀಜಿಗೆ ತಾಕತ್ ಇದ್ದರೆ ಒಬ್ಬ ಶಾಸಕರ ರಾಜೀನಾಮೆ ಕೊಡಿಸಲಿ ಎಂದು ಮಾಜಿ ಸಚಿವ, ಬಿಜೆಪಿ ಮುಖಂಡ ಮಾಲೀಕಯ್ಯ ಗುತ್ತೇದಾರ್ ಸವಾಲು ಹಾಕಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಪ್ಪುಗೌಡರಿಗೆ(ಶಾಸಕ ದತ್ತಾತ್ರೇಯ ಪಾಟೀಲ್) ಸಚಿವ ಸ್ಥಾನ ನೀಡದಿದ್ದಲ್ಲಿ, 10 ಜನ ಶಾಸಕರಿಂದ ರಾಜೀನಾಮೆ ಕೊಡಿಸುತ್ತೇನೆ ಎಂದು ಶ್ರೀ ಸಾರಂಗಧರ ದೇಶಿಕೇಂದ್ರದ ಸ್ವಾಮೀಜಿ ಹೇಳಿದ್ದಾರೆ. ಸರ್ಕಾರ ಬೀಳಿಸುತ್ತೇವೆ ಎಂಬ ಬ್ಲ್ಯಾಕ್ ಮೇಲ್ ಹೇಳಿಕೆಗಳನ್ನು ಸ್ವಾಮೀಜಿ ಕೊಡಬಾರದು. ಅವರಿಗೆ ತಾಕತ್ ಇದ್ದರೆ ಒರ್ವ ಶಾಸಕರನ್ನಾದರೂ ರಾಜೀನಾಮೆ ಕೊಡಿಸಲಿ ಎಂದು ಸವಾಲು ಹಾಕಿದ್ದಾರೆ.
ಸ್ವಾಮೀಜಿ ರಾಜಕೀಯ ಮಾಡುವುದಾದರೆ ಖಾವಿ ಬಿಟ್ಟು, ಯಾವುದಾದರೂ ಪಕ್ಷ ಸೇರಿ ಇಂತಹ ಮಾತುಗಳನ್ನು ಆಡಲಿ. ಶಾಸಕ ದತ್ತಾತ್ರೇಯ ಪಾಟೀಲ್ ಅವರು ಎರಡು ಬಾರಿ ಶಾಸಕರಾಗಿದ್ದು, ಅವರಿಗೆ ಮಂತ್ರಿಯಾಗುವ ಅರ್ಹತೆಯಿದೆ. ಸಚಿವ ಸ್ಥಾನ ಕೊಡಲಿ ಎಂದು ಹೇಳಿದರೆ ಅದನ್ನು ನಾನೂ ಸ್ವಾಗತಿಸುತ್ತೇನೆ. ಆದರೆ ಸರ್ಕಾರ ಬೀಳಿಸುವ ಮಾತು ಸ್ವಾಮೀಜಿ ಮಾತನಾಡಬಾರದು ಎಂದರು.
ದೊರೆಸ್ವಾಮಿಯವರ ವಿಚಾರದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿರುವುದು ಎಲ್ಲವೂ ಸರಿ ಇದೆ ಎಂದಲ್ಲ, ಕೆಲವು ವಿಚಾರದಲ್ಲಿ ತಪ್ಪು ಮಾತಾಡಿದ್ದಾರೆ. ನಾನು ಯತ್ನಾಳರ ಜೊತೆ ಮಾತನಾಡಿದಾಗ ದೊರೆಸ್ವಾಮಿ ಬಿಜೆಪಿಯವರಿಗೆ ವೋಟ್ ಹಾಕಬೇಡಿ ಎಂದು ಹೇಳಿದ್ದಕ್ಕೆ ಮಾತನಾಡಿರುವುದಾಗಿ ಹೇಳಿದ್ದಾರೆ. ದೊರೆಸ್ವಾಮಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರರು ಅವರ ಬಗ್ಗೆ ನನಗೆ ಗೌರವವಿದೆ. ದೊರೆಸ್ವಾಮಿಯವರ ಬಗ್ಗೆ ಯತ್ನಾಳ್ ಹಗುರವಾಗಿ ಮಾತಾಡಬಾರದಿತ್ತು. ಯತ್ನಾಳರ ಕೆಲವು ಹೇಳಿಕೆಯನ್ನು ನಾನು ಖಂಡಿಸುತ್ತೆನೆ ಎಂದರು.
