– ದೆಹಲಿಯಿಂದ ಬಂದಿತ್ತು 4 ಸೆಟ್ ಪ್ರಶ್ನೆಪತ್ರಿಕೆ
– ಪ್ರಕರಣದ ಮಾಸ್ಟರ್ ಮೈಂಡ್ ಎಸ್ಕೇಪ್
ಮುಂಬೈ: ಮಹಾರಾಷ್ಟ್ರದಲ್ಲಿ ಭಾನುವಾರ (ಜೂ.28) ನಡೆಯಬೇಕಿದ್ದ ಶಿಕ್ಷಕರ ಅರ್ಹತಾ ಪರೀಕ್ಷೆ (TET)-2026 ಅನ್ನು ಪ್ರಶ್ನೆಪತ್ರಿಕೆ ಸೋರಿಕೆಯ (Paper Leak) ಹಿನ್ನೆಲೆ ಮುಂದೂಡಲಾಗಿದೆ. ಈ ಬೆನ್ನಲ್ಲೇ ತನಿಖೆ ನಡೆಸುತ್ತಿರುವ ಭಿವಂಡಿ ಪೊಲೀಸರು ಮೂವರು ಆರೋಪಿಗಳನ್ನ ಬಂಧಿಸಿದ್ದಾರೆ.
ಬಂಧಿತ ಮೂವರು ಆರೋಪಿಗಳನ್ನ ಬಿಹಾರ ಮೂಲದ ರಾಜೀವ್ ಶಾ (45), ಆಕಾಶ್ ಕುಮಾರ್ (30) ಮತ್ತು ಹರಿಯಾಣ ಮೂಲದ ಧೀರಜ್ ಕುಮಾರ್ (28) ಎಂದು ಗುರುತಿಸಲಾಗಿದೆ. ಮೂವರು ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 318(4), 316(5), ಮತ್ತು 61(2) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆದ್ರೆ ಪ್ರಕರಣದ ಪ್ರಮುಖ ಆರೋಪಿ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ನೀಟ್ ಆಯ್ತು ಈಗ ಮಹಾರಾಷ್ಟ್ರದಲ್ಲಿ TET ಪ್ರಶ್ನೆಪತ್ರಿಕೆ ಸೋರಿಕೆ – ನಾಳೆ ನಡೆಯಬೇಕಿದ್ದ ಪರೀಕ್ಷೆ ರದ್ದು

1.5 ಕೋಟಿಗೆ ಮಾರಲು ಪ್ಲ್ಯಾನ್
ಪೊಲೀಸರ ಪ್ರಕಾರ, ಆರೋಪಿಗಳು ದೆಹಲಿಯಿಂದ 4 ಸೆಟ್ ಪ್ರಶ್ನೆಪತ್ರಿಕೆಗಳನ್ನ ತಂದು, 1.5 ಕೋಟಿ ರೂ.ಗಳಿಗೆ ಮಾರಾಟ ಮಾಡಲು ಪ್ಲ್ಯಾನ್ ಮಾಡಿಕೊಂಡಿದ್ದರು. ಆದ್ರೆ ಯಾರಿಗೆ ಮತ್ತು ಎಲ್ಲಿ ಮಾರಾಟ ಮಾಡಬೇಕಿತ್ತು ಅನ್ನೋದ್ರ ಬಗ್ಗೆ ಇನ್ನೂ ಹೆಚ್ಚಿನ ತನಿಖೆ ನಡೆಯುತ್ತಿದೆ. ಅಲ್ಲದೇ ಪ್ರಕರಣದ ಪ್ರಮುಖ ಆರೋಪಿ ತಲೆಮರೆಸಿಕೊಂಡಿದ್ದು, ಪೊಲೀಸರಿಂದ ಶೋಧ ಮುಂದುವರಿದಿದೆ. ಇದನ್ನೂ ಓದಿ: ಮೊಹರಂ ವೇಳೆ ದುಷ್ಕೃತ್ಯಕ್ಕೆ ಸಂಚು – ವಿಷ ತುಂಬಿದ 14,900 ಕ್ಯಾಪ್ಸೂಲ್ ಜೊತೆ ಪುಣೆಯಲ್ಲಿ ಓರ್ವನ ಬಂಧನ

ಈ ಬಗ್ಗೆ ಭಿವಂಡಿ ಎಸಿಪಿ ಅಶೋಕ್ ದುಧೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಕೆಲವರು ಟಿಇಟಿ ಪ್ರಶ್ನೆ ಪತ್ರಿಕೆಗಳನ್ನು ಮಾರಾಟ ಮಾಡಲು ಬರ್ತಿದ್ದಾರೆ ಅನ್ನೋ ಸುಳಿವು ಮೊದಲು ಡಿಸಿಪಿ ಪವನ್ ಬನ್ಸೋದ್ ಅವರಿಗೆ ಸಿಕ್ಕಿತು. ಖಚಿತ ಮಾಹಿತಿ ಮೇರೆಗೆ ಕೊಂಗಾವ್ ಪ್ರದೇಶದಲ್ಲಿ ಬಲೆ ಬೀಸಿ ಮೂವರು ಆರೋಪಿಗಳನ್ನ ಬಂಧಿಸಿದ್ರು. ಬಂಧಿತರಿಂದ 4 ಸೆಕಟ್ ಟಿಇಟಿ ಪ್ರಶ್ನೆಪತ್ರಿಕೆ, ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳನ್ನ ವಶಪಡಿಸಿಕೊಂಡಿದ್ದಾರೆ ಎಂದು ವಿವರಿಸಿದರು.
