ಮುಂಬೈ: ನೀಟ್ ಬಳಿಕ ಇದೀಗ ಮಾಹಾರಾಷ್ಟ್ರದಲ್ಲಿ (Maharashtra) ಶಿಕ್ಷಕರ ಅರ್ಹತಾ ಪರೀಕ್ಷೆಯ (TET) ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವ ಆರೋಪ ಕೇಳಿಬಂದಿದ್ದು, ಇದರ ಬೆನ್ನಲ್ಲೇ ನಾಳೆ (ಜೂ.28) ನಡೆಯಬೇಕಿದ್ದ ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ.
ಜೂ.28ರಂದು ಅಂದರೆ ನಾಳೆ ಟಿಇಟಿ ಪರೀಕ್ಷೆ ನಡೆಯಬೇಕಿತ್ತು. ಆದರೆ ಮುಂಬೈ ಸಮೀಪದ ಭಿವಾಂಡಿ (Bhiwandi) ಪ್ರದೇಶದಲ್ಲಿ ವ್ಯಕ್ತಿಯೊಬ್ಬರ ಬಳಿ ನಾಳೆ ನಡೆಯಬೇಕಿದ್ದ ಟಿಇಟ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಇದೆ ಎಂಬ ಮಾಹಿತಿ ಮಹಾರಾಷ್ಟ್ರ ಪೊಲೀಸ್ ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಲಭಿಸಿತ್ತು. ಹೀಗಾಗಿ ಪರೀಕ್ಷಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ಸಮಗ್ರತೆಯನ್ನು ಕಾಯ್ದುಕೊಳ್ಳುವ ಹಿತದೃಷ್ಟಿಯಿಂದ ಜೂ.28ರಂದು ರಾಜ್ಯಾದ್ಯಂತ 1,028 ಕೇಂದ್ರಗಳಲ್ಲಿ ನಡೆಯಬೇಕಿದ್ದ ಟಿಇಟಿ 2026 ಪರೀಕ್ಷೆಯನ್ನು ಮುಂದೂಡಲಾಗಿದೆ ಎಂದು ಮಹಾರಾಷ್ಟ್ರ ರಾಜ್ಯ ಪರೀಕ್ಷಾ ಮಂಡಳಿ ತಿಳಿಸಿದೆ. ಇದನ್ನೂ ಓದಿ: ದೆಹಲಿ-ಜಿಂದ್ ನಡುವೆ ಭಾರತದ ಮೊದಲ ಹೈಡ್ರೋಜನ್ ಟ್ರೈನ್ ಟ್ರಯಲ್ ರನ್ ಯಶಸ್ವಿ – 120 ಕಿ.ಮೀ ವೇಗದಲ್ಲಿ ಚಲಿಸಿದ ರೈಲು
ಈ ಸಂಬಂಧ ಭಿವಾಂಡಿಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಮೂವರನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣದ ಸಮಗ್ರ ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನು (SIT) ರಚಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮಹಾರಾಷ್ಟ್ರ ಟಿಇಟಿ ಪರೀಕ್ಷಾ ವಿಧಾನ:
ಮಹಾರಾಷ್ಟ್ರ ಟಿಇಟಿ 2026 ಪರೀಕ್ಷೆಯು ಪೇಪರ್ 1 ಮತ್ತು ಪೇಪರ್ 2 ಎಂಬ ಎರಡು ಪತ್ರಿಕೆಗಳನ್ನು ಒಳಗೊಂಡಿದೆ. ಎರಡೂ ಪರೀಕ್ಷೆಗಳು ಒಂದೇ ದಿನ ಬೇರೆ ಬೇರೆ ಸಮಯದಲ್ಲಿ ನಡೆಯುತ್ತವೆ. ಮೊದಲ ಪತ್ರಿಕೆಯು ಬೆಳಗ್ಗೆ 10:30ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಮತ್ತು ಎರಡನೇ ಪತ್ರಿಕೆಯು ಮಧ್ಯಾಹ್ನ :30 ರಿಂದ ಸಂಜೆ 5 ಗಂಟೆಯವರೆಗೆ ನಡೆಯುತ್ತದೆ. ಈ ಪರೀಕ್ಷೆಯು ಆಫ್‌ಲೈನ್ ಮಾದರಿಯಲ್ಲಿ ನಡೆಯಲಿದ್ದು, ಒಎಂಆರ್ ಶೀಟ್‌ನಲ್ಲಿ ಉತ್ತರಗಳನ್ನು ಗುರುತಿಸಬೇಕಿರುತ್ತದೆ. ಪರೀಕ್ಷೆಯಲ್ಲಿ ತಲಾ ಒಂದು ಅಂಕದ 150 ಪ್ರಶ್ನೆಗಳಿರುತ್ತವೆ. ಈ ಪರೀಕ್ಷೆಯಲ್ಲಿ ಯಾವುದೇ ನೆಗೆಟಿವ್ ಮಾರ್ಕಿಂಗ್ ಇರುವುದಿಲ್ಲ.ಇದನ್ನೂ ಓದಿ: ಸಿಶೆಲ್ಸ್ ನ್ಯಾಷನಲ್ ಡೇಗೆ ಮೋದಿ ಮುಖ್ಯ ಅತಿಥಿ – 194 ವರ್ಷದ ಜೀವಂತ ಆಮೆ ವೀಕ್ಷಿಸಲಿದ್ದಾರೆ ಪ್ರಧಾನಿ
ಪ್ರಶ್ನೆಪತ್ರಿಕೆಯನ್ನು ಕನ್ನಡ, ಮರಾಠಿ, ಇಂಗ್ಲಿಷ್, ಉರ್ದು, ಬೆಂಗಾಲಿ, ಗುಜರಾತಿ, ತೆಲುಗು, ಸಿಂಧಿ ಮತ್ತು ಹಿಂದಿ ಸೇರಿದಂತೆ ಒಂಬತ್ತು ಭಾಷೆಗಳಲ್ಲಿ ಸಿದ್ಧಪಡಿಸಲಾಗಿರುತ್ತದೆ.
ಮುಂದೂಡಲಾದ ಟಿಇಟಿ ಪರೀಕ್ಷೆಯ ಹೊಸ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು. ಅಭ್ಯರ್ಥಿಗಳು ಹೊಸ ಪರೀಕ್ಷಾ ವೇಳಾಪಟ್ಟಿಯನ್ನು ಅಧಿಕೃತ ವೆಬ್‌ಸೈಟ್ https://mahatet.in/ನಲ್ಲಿ ಪ್ರಕಟವಾದ ನಂತರ ವೀಕ್ಷಿಸಬಹುದು ಮತ್ತು ಡೌನ್‌ಲೋಡ್ ಮಾಡಿಕೊಳ್ಳಬಹುದು. ಹೊಸ ದಿನಾಂಕವನ್ನು ಡೌನ್‌ಲೋಡ್ ಮಾಡಲು, ಅಭ್ಯರ್ಥಿಗಳು ಅಧಿಕೃತ ಪೋರ್ಟಲ್‌ಗೆ ಭೇಟಿ ನೀಡಿ `MAHA TET exam schedule PDF’ ಲಿಂಕ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ಆಗ ವೇಳಾಪಟ್ಟಿಯ ಪಿಡಿಎಫ್ ಸೇವ್ ಮಾಡಿ, ಪ್ರಿಂಟ್ ತೆಗೆದುಕೊಳ್ಳಬಹುದು.
ಮಹಾ ಟಿಇಟಿ ಪ್ರವೇಶ ಪತ್ರವನ್ನು ಪರೀಕ್ಷೆಗೆ ಎರಡು ಅಥವಾ ಮೂರು ದಿನಗಳ ಮುಂಚಿತವಾಗಿ ಬಿಡುಗಡೆ ಮಾಡಲಾಗುವುದು. ಪ್ರವೇಶ ಪತ್ರ ಬಿಡುಗಡೆಯಾದ ನಂತರ ಅದು https://mahatet.in/ ನಲ್ಲಿ ಲಭ್ಯವಿರುತ್ತದೆ. ಹಾಲ್ ಟಿಕೆಟ್ ಪಿಡಿಎಫ್ ಡೌನ್‌ಲೋಡ್ ಮಾಡಲು, ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ‘MAHA TET hall ticket PDF’ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಪ್ರವೇಶ ಪತ್ರದ ಪಿಡಿಎಫ್ ಡೌನ್‌ಲೋಡ್ ಆದ ನಂತರ ಅದರ ಪ್ರಿಂಟ್ ಔಟ್ (ಹಾರ್ಡ್ ಕಾಪಿ) ತೆಗೆದುಕೊಳ್ಳಬೇಕು. ಮಹಾರಾಷ್ಟ್ರ ಟಿಇಟಿ ಪರೀಕ್ಷೆ 2026ರ ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ಅಧಿಕೃತ ವೆಬ್‌ಸೈಟ್ https://mahatet.in/ಗೆ ಭೇಟಿ ನೀಡಿ ಎಂದು ಮಹಾರಾಷ್ಟ್ರ ರಾಜ್ಯ ಪರೀಕ್ಷಾ ಆಡಳಿತ ಮಾಹಿತಿ ನೀಡಿದೆ.ಇದನ್ನೂ ಓದಿ: ‘ಮೌನದ ಏಕೈಕ ಧ್ವನಿ’ – ಗಾಜಾ ಕುರಿತು ಕೇಂದ್ರವನ್ನು ಟೀಕಿಸಿ ಸೋನಿಯಾ ಗಾಂಧಿ ಲೇಖನ
