ನವದೆಹಲಿ: ಭಾರತದ ಮೊದಲ ಹೈಡ್ರೋಜನ್ ಚಾಲಿತ ರೈಲು (Hydrogen Train) ಶುಕ್ರವಾರ ದೆಹಲಿಯಿಂದ ಜಿಂದ್‌ವರೆಗೆ (Delhi -Jind) ಯಶಸ್ವಿಯಾಗಿ ಪ್ರಾಯೋಗಿಕ ಸಂಚಾರ ನಡೆಸಿದೆ. ಇದಕ್ಕೂ ಮೊದಲು ಸೋನಿಪತ್-ಜಿಂದ್ ಮಾರ್ಗದಲ್ಲಿ ಪರೀಕ್ಷೆ ನಡೆದಿತ್ತು. ದೆಹಲಿಯಿಂದ ಸೋನಿಪತ್‌ವರೆಗೆ ಮೊದಲ ಬಾರಿಗೆ ಹೈಡ್ರೋಜನ್ ರೈಲಿನ ಪ್ರಾಯೋಗಿಕ ಸಂಚಾರ ನಡೆಸಲಾಗಿದ್ದು, ತುರ್ತು ಬ್ರೇಕಿಂಗ್ ಅಂತರ ಹಾಗೂ ರೈಲಿನ ಸ್ಥಿರತೆಯನ್ನು (ಆಸಿಲೇಷನ್) ಈ ವೇಳೆ ಪರೀಕ್ಷಿಸಲಾಯಿತು.
ಜಿಂದ್-ಸೋನಿಪತ್ ಮಾರ್ಗದಲ್ಲಿ ನಡೆದ ಪರೀಕ್ಷೆಯಲ್ಲಿ ರೈಲು ಗಂಟೆಗೆ 120 ಕಿಲೋಮೀಟರ್ ವೇಗ ತಲುಪಿದ್ದು, ಇದು ಭಾರತೀಯ ರೈಲ್ವೆಯ ಹೈಡ್ರೋಜನ್ ಆಧಾರಿತ ರೈಲು ಸೇವೆ ಆರಂಭಿಸುವ ಹಾಗೂ ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ಪ್ರಯತ್ನದಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ಇದನ್ನೂ ಓದಿ: ರಾಜ್ಯದ ವಿವಿಧ ಜಿಲ್ಲಾ ಕೋರ್ಟ್‌ಗಳಿಗೆ ಹುಸಿ ಬಾಂಬ್ ಬೆದರಿಕೆ
ಪ್ರಾಯೋಗಿಕ ಸಂಚಾರದ ವೇಳೆ ರೈಲ್ವೆ ಅಧಿಕಾರಿಗಳು ರೈಲಿನ ಕಾರ್ಯಕ್ಷಮತೆಯನ್ನು ನಿಕಟವಾಗಿ ಪರಿಶೀಲಿಸಿದರು. ಉಳಿದಿರುವ ನಿಯಂತ್ರಣಾತ್ಮಕ ಹಾಗೂ ಕಾರ್ಯಾಚರಣೆಯ ಅನುಮೋದನೆಗಳು ಪೂರ್ಣಗೊಂಡ ಬಳಿಕ ಈ ರೈಲನ್ನು ಪ್ರಯಾಣಿಕರ ಸೇವೆಗೆ ಪರಿಚಯಿಸುವ ಸಾಧ್ಯತೆ ಇದೆ.

ಅತ್ಯಾಧುನಿಕ ಸುರಕ್ಷತಾ ವ್ಯವಸ್ಥೆ:
ಹೈಡ್ರೋಜನ್ ರೈಲಿನಲ್ಲಿ ಹೈಡ್ರೋಜನ್ ಸೋರಿಕೆ ಪತ್ತೆ ಸಾಧನಗಳು, ಬೆಂಕಿ ಪತ್ತೆ ವ್ಯವಸ್ಥೆ ಹಾಗೂ ನಿರಂತರ ಮೇಲ್ವಿಚಾರಣಾ ತಂತ್ರಜ್ಞಾನ ಸೇರಿದಂತೆ ಹಲವು ಅತ್ಯಾಧುನಿಕ ಸುರಕ್ಷತಾ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ. ಯಾವುದೇ ತುರ್ತು ಪರಿಸ್ಥಿತಿ ಉಂಟಾದರೆ ತಕ್ಷಣವೇ ಅದನ್ನು ಪತ್ತೆಹಚ್ಚಿ ಸೂಕ್ತ ಕ್ರಮ ಕೈಗೊಳ್ಳುವಂತೆ ಈ ವ್ಯವಸ್ಥೆಗಳನ್ನು ವಿನ್ಯಾಸಗೊಳಿಸಲಾಗಿದೆ.
ಪರಿಸರ ಸ್ನೇಹಿ ರೈಲು:
ಡೀಸೆಲ್ ಅಥವಾ ವಿದ್ಯುತ್ ಬದಲಿಗೆ ಹೈಡ್ರೋಜನ್ ಇಂಧನ ಕೋಶಗಳ ಮೂಲಕ ವಿದ್ಯುತ್ ಉತ್ಪಾದಿಸಿ ಈ ರೈಲು ಸಂಚರಿಸಲಿದೆ. ಇದು ಭಾರತೀಯ ರೈಲ್ವೆಯ ಪಳೆಯುಳಿಕೆ ಇಂಧನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆಯನ್ನು ಉತ್ತೇಜಿಸುವ ಮಹತ್ವಾಕಾಂಕ್ಷಿ ಯೋಜನೆಯ ಭಾಗವಾಗಿದೆ.
1,200 ಕಿಲೋವಾಟ್ ಸಾಮರ್ಥ್ಯ:
10 ಬೋಗಿಗಳನ್ನು ಹೊಂದಿರುವ ಈ ಹೈಡ್ರೋಜನ್ ಡಿಇಎಂಯು ರೈಲು 1,200 ಕಿಲೋವಾಟ್ ಶಕ್ತಿಯನ್ನು ಹೊಂದಿದೆ. ರೈಲಿನ ಸಂಪೂರ್ಣ ಉದ್ದಕ್ಕೂ ಶಕ್ತಿ ವಿತರಿಸುವ ಡಿಸ್ಟ್ರಿಬ್ಯೂಟೆಡ್ ಪವರ್ ರೋಲಿಂಗ್ ಸ್ಟಾಕ್ ತಂತ್ರಜ್ಞಾನವನ್ನು ಇದರಲ್ಲಿ ಬಳಸಲಾಗಿದೆ.
ರೈಲ್ವೆ ಸಚಿವಾಲಯದ ಅನುಮೋದನೆ:
ಈ ವರ್ಷದ ಮೇ ತಿಂಗಳಲ್ಲಿ ಜಿಂದ್-ಸೋನಿಪತ್ ಮಾರ್ಗದಲ್ಲಿ ಗರಿಷ್ಠ 75 ಕಿ.ಮೀ ವೇಗದಲ್ಲಿ ಈ ರೈಲು ಸಂಚರಿಸಲು ರೈಲ್ವೆ ಸಚಿವಾಲಯ ಅನುಮೋದನೆ ನೀಡಿತ್ತು. ಆದರೆ ವಾಣಿಜ್ಯ ಸೇವೆ ಆರಂಭಿಸಲು ಮುನ್ನ ಸಂಶೋಧನಾ ವಿನ್ಯಾಸ ಮತ್ತು ಮಾನದಂಡಗಳ ಸಂಸ್ಥೆ, ರೈಲ್ವೆ ಸುರಕ್ಷತಾ ಆಯುಕ್ತ, ಪೆಟ್ರೋಲಿಯಂ ಮತ್ತು ಸ್ಫೋಟಕ ಸುರಕ್ಷತಾ ಸಂಸ್ಥೆ ಸೇರಿದಂತೆ ವಿವಿಧ ಸಂಸ್ಥೆಗಳ ಎಲ್ಲಾ ಸುರಕ್ಷತಾ ನಿಯಮಗಳನ್ನು ಪಾಲಿಸಿ ಅಂತಿಮ ಅನುಮತಿ ಪಡೆಯಬೇಕಿದೆ.
ಪಿಇಎಸ್‌ಒ ಜಿಂದ್‌ನಲ್ಲಿ ಸಂಕುಚಿತ ಹೈಡ್ರೋಜನ್ ಅನಿಲದ ಸಂಗ್ರಹಣೆ ಹಾಗೂ ಇಂಧನ ತುಂಬುವ ವ್ಯವಸ್ಥೆಗೆ ಪರವಾನಗಿ ನೀಡಿದ್ದು, ಅದರಲ್ಲಿರುವ ಎಲ್ಲಾ ಷರತ್ತುಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ರೈಲ್ವೆ ಸಚಿವಾಲಯ ಸೂಚಿಸಿದೆ. ಧೂಳು ಸಂಗ್ರಹವಾಗುವುದರಿಂದ ಹೈಡ್ರೋಜನ್ ಸೋರಿಕೆ ಮತ್ತು ಬೆಂಕಿ ಪತ್ತೆ ಸಾಧನಗಳ ಕಾರ್ಯಕ್ಷಮತೆಗೆ ತೊಂದರೆಯಾಗುವ ಸಾಧ್ಯತೆ ಇರುವುದರಿಂದ ಅವುಗಳ ನಿಯಮಿತ ನಿರ್ವಹಣೆ ಕಡ್ಡಾಯ ಎಂದು ಸಚಿವಾಲಯ ತಿಳಿಸಿದೆ. ಇದನ್ನೂ ಓದಿ: ಸಿಶೆಲ್ಸ್ ನ್ಯಾಷನಲ್ ಡೇಗೆ ಮೋದಿ ಮುಖ್ಯ ಅತಿಥಿ – 194 ವರ್ಷದ ಜೀವಂತ ಆಮೆ ವೀಕ್ಷಿಸಲಿದ್ದಾರೆ ಪ್ರಧಾನಿ
ಮಹತ್ವವೇನು?
ಹೈಡ್ರೋಜನ್ ರೈಲಿನ ಯಶಸ್ವಿ ಪರೀಕ್ಷೆಯು ಭಾರತೀಯ ರೈಲ್ವೆಯ ಹಸಿರು ಇಂಧನದತ್ತದ ಪರಿವರ್ತನೆಯಲ್ಲಿ ಪ್ರಮುಖ ಹೆಜ್ಜೆಯಾಗಿದೆ. ಈ ತಂತ್ರಜ್ಞಾನವು ಭವಿಷ್ಯದಲ್ಲಿ ಮಾಲಿನ್ಯವನ್ನು ಕಡಿಮೆ ಮಾಡಿ ಪರಿಸರ ಸ್ನೇಹಿ ರೈಲು ಸೇವೆ ಒದಗಿಸುವಲ್ಲಿ ಮಹತ್ವದ ಪಾತ್ರ ವಹಿಸುವ ನಿರೀಕ್ಷೆಯಿದೆ.
ಹೈಡ್ರೋಜನ್ ರೈಲು ವಾಣಿಜ್ಯ ಸೇವೆಗೆ ಬಂದ ಬಳಿಕ, ಜರ್ಮನಿ, ಸ್ವೀಡನ್, ಜಪಾನ್ ಹಾಗೂ ಚೀನಾ ನಂತರ ಹೈಡ್ರೋಜನ್ ಚಾಲಿತ ರೈಲುಗಳನ್ನು ಹೊಂದಿರುವ ವಿಶ್ವದ ಕೆಲವೇ ದೇಶಗಳ ಪಟ್ಟಿಗೆ ಭಾರತ ಸೇರ್ಪಡೆಯಾಗಲಿದೆ. ಇದನ್ನೂ ಓದಿ: ‘ಮೌನದ ಏಕೈಕ ಧ್ವನಿ’ – ಗಾಜಾ ಕುರಿತು ಕೇಂದ್ರವನ್ನು ಟೀಕಿಸಿ ಸೋನಿಯಾ ಗಾಂಧಿ ಲೇಖನ
