– ಬಿಜೆಪಿ ತೀವ್ರ ಟೀಕೆ
ನವದೆಹಲಿ: ಭಾರತವು ಪ್ಯಾಲೆಸ್ತೀನ್ (Palestinian) ಜನರ ಹಕ್ಕುಗಳ ಬಗ್ಗೆ ತನ್ನ ಐತಿಹಾಸಿಕ ನಿಲುವನ್ನು ಬದಿಗಿಟ್ಟು ಇಸ್ರೇಲ್‌ನೊಂದಿಗೆ ನಿಕಟ ಸಂಬಂಧ ಬೆಳೆಸುತ್ತಿದೆ ಎಂದು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ (Sonia Gandhi) ಆರೋಪಿಸಿದ್ದಾರೆ.
ಗಾಜಾ ಸಂಘರ್ಷದಲ್ಲಿ ಕೇಂದ್ರ ಸರ್ಕಾರದ (Central Government) ಮೌನವನ್ನು ಪ್ರಶ್ನಿಸಿ ಪತ್ರಿಕೆಯೊಂದರಲ್ಲಿ ‘ಮೌನದ ಏಕೈಕ ಧ್ವನಿ’ ಎಂಬ ಶೀರ್ಷಿಕೆಯಲ್ಲಿ ಲೇಖನವೊಂದು ಬರೆದಿದ್ದು, ವಿಶ್ವಸಂಸ್ಥೆಯ ಸ್ವತಂತ್ರ ಅಂತಾರಾಷ್ಟ್ರೀಯ ತನಿಖಾ ಆಯೋಗದ ವರದಿಯನ್ನು ಉಲ್ಲೇಖಿಸಿ, ಗಾಜಾದಲ್ಲಿ ಇಸ್ರೇಲ್ (Israel) ನರಮೇಧ ಎಸಗಿದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಮುಂದಿನ ವರ್ಷದ ಆರಂಭದಲ್ಲಿ ಭಾರತಕ್ಕೆ ಡೊನಾಲ್ಡ್ ಟ್ರಂಪ್ ಭೇಟಿ – ಮಾರ್ಕೊ ರುಬಿಯೋ

ಸಂಘರ್ಷದಲ್ಲಿ 20,000 ಕ್ಕೂ ಹೆಚ್ಕು ಮಕ್ಕಳು ಮೃತಪಟ್ಟು, 44,000 ಮಂದಿ ಗಾಯಗೊಂಡಿದ್ದಾರೆ ಎಂದು ಅಂಕಿ ಅಂಶಗಳನ್ನು ನೀಡಿದ್ದಾರೆ. ಅಂತಾರಾಷ್ಟ್ರೀಯ ಸಮುದಾಯ ಈ ಸಂಘರ್ಷವನ್ನು ತಡೆಯುವಲ್ಲಿ ವಿಫಲವಾಗಿದೆ ಎಂದು ಟೀಕಿಸಿದ್ದಾರೆ.
ಕೇಂದ್ರ ಸರ್ಕಾರ ಗಾಜಾದ ನಾಗರಿಕರ ಸಂಕಷ್ಟಕ್ಕೆ ಬಹುತೇಕ ಮೌನ ವಹಿಸಿದೆ ಎಂದು ಆರೋಪಿಸಿರುವ ಸೋನಿಯಾ, ಭಾರತವು ʻಮೌನದ ಏಕೈಕ ಧ್ವನಿʼಯಾಗಿ ಉಳಿದಿದೆ ಎಂದು ಹೇಳಿದ್ದಾರೆ. ಇದು ನೈತಿಕವಾಗಿ ಖಂಡನೀಯ ಮಾತ್ರವಲ್ಲ, ರಾಷ್ಟ್ರೀಯ ಹಿತಾಸಕ್ತಿಗೂ ಹಾನಿಕರ ಎಂದು ಅಭಿಪ್ರಾಯಪಟ್ಟಿದ್ದಾರೆ.
ಐತಿಹಾಸಿಕವಾಗಿ ಭಾರತ, ಪ್ಯಾಲೆಸ್ತೀನ್‌ನ ಮಿತ್ರ ರಾಷ್ಟ್ರವಾಗಿತ್ತು ಎಂದು ನೆನಪಿಸಿ, ಆ ನಿಲುವಿನಿಂದ ದೂರ ಸರಿಯುವುದು ದೇಶದ ಜಾಗತಿಕ ಗೌರವಕ್ಕೆ ಧಕ್ಕೆ ಉಂಟುಮಾಡುತ್ತದೆ ಎಂದು ಎಚ್ಚರಿಸಿದ್ದಾರೆ. ಪ್ಯಾಲೆಸ್ತೀನ್ ಜನರ ಹಕ್ಕುಗಳ ಪರವಾಗಿ ಸರ್ಕಾರ ಧ್ವನಿ ಎತ್ತಬೇಕು ಎಂದು ಆಗ್ರಹಿಸಿದ್ದಾರೆ.

ಈ ಲೇಖನಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ, ಸೋನಿಯಾ ಗಾಂಧಿ ಜನರನ್ನು ದಾರಿತಪ್ಪಿಸುವ ಮತ್ತು ವಿದೇಶಾಂಗ ನೀತಿಗಿಂತ ಮತಬ್ಯಾಂಕ್ ರಾಜಕಾರಣಕ್ಕೆ ಆದ್ಯತೆ ನೀಡುತ್ತಿದ್ದಾರೆ ಎಂದು ಆರೋಪಿಸಿದೆ. ಇದನ್ನೂ ಓದಿ: Top Updates | ರಾಮಮಂದಿರದ 7 ಕೋಟಿ ದೇಣಿಗೆ ಕಳ್ಳತನ – 70 ಬಾರಿ ಲೂಟಿ, ಸಿಎಂ ಯೋಗಿ ಎಚ್ಚರಿಕೆ
ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ ಮಾತನಾಡಿ, ಗಾಜಾ-ಪ್ಯಾಲೆಸ್ತೀನ್ ವಿಚಾರದಲ್ಲಿ ಭಾರತ ತನ್ನ ನಿಲುವನ್ನು ಹಲವು ಬಾರಿ ಸ್ಪಷ್ಟಪಡಿಸಿದೆ. ಮಾನವೀಯ ನೆರವು ಒದಗಿಸಿದೆ. ಕದನ ವಿರಾಮಕ್ಕೆ ಸಂಬಂಧಿಸಿದ ವಿಶ್ವಸಂಸ್ಥೆ ನಿರ್ಣಯಗಳ ಮೇಲೆ ಮತ ಚಲಾಯಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ಯಾಲೆಸ್ತೀನ್‌ನ ಅತ್ಯುನ್ನತ ನಾಗರಿಕ ಗೌರವ ಲಭಿಸಿದೆ ಎಂದು ಉಲ್ಲೇಖಿಸಿದ್ದಾರೆ.
