– ಕೆಕೆಆರ್‌ಟಿಸಿಗೆ 400 ಹೊಸ ಬಸ್‌ಗಳು
ಬೆಂಗಳೂರು: ‘ಸಂಧ್ಯಾ ಕಿರಣ’ ವಂತಿಕೆ ಆಧಾರಿತ ನಗದುರಹಿತ ಆರೋಗ್ಯ ಯೋಜನೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಹಲವಾರು ಮಹತ್ವದ ನಿರ್ಧಾರಗಳನ್ನು ಸರ್ಕಾರ ತೆಗೆದುಕೊಂಡಿದೆ.
ರಾಜ್ಯ ಸರ್ಕಾರಿ ಪಿಂಚಣಿದಾರರು, ಕುಟುಂಬ ಪಿಂಚಣಿದಾರರು ಹಾಗೂ ಅರ್ಹ ಅವಲಂಬಿತ ದಿವ್ಯಾಂಗ ಮಕ್ಕಳಿಗೆ ಆರೋಗ್ಯ ಭದ್ರತೆ ಒದಗಿಸುವ ‘ಸಂಧ್ಯಾ ಕಿರಣ’ ವಂತಿಕೆ ಆಧಾರಿತ ನಗದುರಹಿತ ಆರೋಗ್ಯ ಯೋಜನೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಆರಂಭಿಕ ಹಂತದಲ್ಲಿ 70 ವರ್ಷಕ್ಕಿಂತ ಕಡಿಮೆ ವಯಸ್ಸಿನ ಸುಮಾರು 3.11 ಲಕ್ಷ ರಾಜ್ಯ ಸರ್ಕಾರಿ ಪಿಂಚಣಿದಾರರು ಹಾಗೂ ಅವರ ಅರ್ಹ ಅವಲಂಬಿತರನ್ನು ಒಳಗೊಂಡಂತೆ ಒಟ್ಟು ಸುಮಾರು 4.93 ಲಕ್ಷ ಫಲಾನುಭವಿಗಳು ಯೋಜನೆಯ ವ್ಯಾಪ್ತಿಗೆ ಬರಲಿದ್ದಾರೆ.
ಯೋಜನೆಯಡಿ ಅರ್ಹ ಕುಟುಂಬಗಳಿಗೆ ವರ್ಷಕ್ಕೆ ಗರಿಷ್ಠ 5 ಲಕ್ಷದವರೆಗೆ ದ್ವಿತೀಯ, ತೃತೀಯ ಹಾಗೂ ತುರ್ತು ಚಿಕಿತ್ಸೆಯನ್ನು ನಗದು ಪಾವತಿ ಇಲ್ಲದೆ ಪಡೆಯಲು ಅವಕಾಶ ಕಲ್ಪಿಸಲಾಗುತ್ತದೆ. AB-ArK ವ್ಯವಸ್ಥೆಯಡಿ ಅನ್ವಯವಾಗುವ ಆರೋಗ್ಯ ಪ್ರಯೋಜನ ಪ್ಯಾಕೇಜ್‌ಗಳು ಮತ್ತು ಪರಿಷ್ಕೃತ ಪ್ಯಾಕೇಜ್ ದರಗಳು ಜಾರಿಯಾಗಲಿವೆ. ಅನುಮೋದಿತ ಹಾಗೂ ನೋಂದಾಯಿತ ಆಸ್ಪತ್ರೆಗಳ ಜಾಲದ ಮೂಲಕ ನಗದುರಹಿತ ಚಿಕಿತ್ಸೆ ಪಡೆಯಲು ಅವಕಾಶವಿದ್ದು, ದುಬಾರಿ ವೈದ್ಯಕೀಯ ಚಿಕಿತ್ಸೆಯ ಸಂದರ್ಭದಲ್ಲಿ ಚಣಿದಾರರು ಮತ್ತು ಅವರ ಕುಟುಂಬಗಳ ಮೇಲಿನ ತಕ್ಷಣದ ಆರ್ಥಿಕ ಒತ್ತಡವನ್ನು ಕಡಿಮೆ ಮಾಡುವ ನಿರೀಕ್ಷೆಯಿದೆ. ಯೋಜನೆಯಡಿ ನಿಯಮಿತ ಪಿಂಚಣಿದಾರರು ತಮ್ಮ ಮೂಲ ಪಿಂಚಣಿಯ ಶೇ.1.25ರಷ್ಟು, ಕುಟುಂಬ ಪಿಂಚಣಿದಾರರು ಮೂಲ ಕುಟುಂಬ ಪಿಂಚಣಿಯ ಶೇ.0.75ರಷ್ಟು ವಂತಿಕೆ ಪಾವತಿಸಬೇಕಾಗುತ್ತದೆ.
81.75 ಕೋಟಿ ರೂ. ವಾರ್ಷಿಕ ಚಿಕಿತ್ಸಾ ವೆಚ್ಚ
‘ಸಂಧ್ಯಾ ಕಿರಣ’ ಯೋಜನೆಯಡಿ ವಾರ್ಷಿಕವಾಗಿ ಸುಮಾರು ₹81.75 ಕೋಟಿ ಚಿಕಿತ್ಸಾ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. AB-ArK ನೀತಿಯನ್ವಯ ಒಟ್ಟು ಚಿಕಿತ್ಸಾ ವೆಚ್ಚದ ಶೇ.70ರಷ್ಟು ಫಲಾನುಭವಿಗಳ ವಂತಿಕೆ ಹಾಗೂ ಶೇ.30ರಷ್ಟು ರಾಜ್ಯ ಸರ್ಕಾರದ ಪಾಲಿನಿಂದ ಭರಿಸಲಾಗುತ್ತದೆ.
ಅದರಂತೆ ವರ್ಷಕ್ಕೆ ಸುಮಾರು ₹57.22 ಕೋಟಿ ಫಲಾನುಭವಿಗಳ ಪಾಲು ಹಾಗೂ ₹24.53 ಕೋಟಿ ರಾಜ್ಯ ಸರ್ಕಾರದ ಪಾಲು ಇರಲಿದೆ. ಯೋಜನೆಯ corpus ಬಳಕೆ ಪ್ರಮಾಣ ಶೇ.85ಕ್ಕಿಂತ ಹೆಚ್ಚಾದ ಸಂದರ್ಭದಲ್ಲಿ ವಂತಿಕೆ ದರವನ್ನು 0.05 ಶೇಕಡಾ ಅಂಕದಷ್ಟು (5 basis points) ಸ್ವಯಂಚಾಲಿತವಾಗಿ ಹೆಚ್ಚಿಸುವ ವ್ಯವಸ್ಥೆಯನ್ನೂ ಅಳವಡಿಸಲು ನಿರ್ಧರಿಸಲಾಗಿದೆ.
ಯೋಜನೆಯನ್ನು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ (SAST) ಮೂಲಕ ಅನುಷ್ಠಾನಗೊಳಿಸಲಾಗುತ್ತದೆ. ಫಲಾನುಭವಿಗಳ ನೋಂದಣಿ, ವಂತಿಕೆ ಸಂಗ್ರಹ, ಆಸ್ಪತ್ರೆಗಳ ಜಾಲ ನಿರ್ವಹಣೆ, ನಗದುರಹಿತ ಚಿಕಿತ್ಸೆ, ಕ್ಲೇಮ್‌ಗಳ ನಿರ್ವಹಣೆ ಹಾಗೂ ಯೋಜನೆಯ ಮೇಲ್ವಿಚಾರಣೆಯನ್ನು AB-ArK ವ್ಯವಸ್ಥೆಯೊಂದಿಗೆ ಸಮನ್ವಯಗೊಳಿಸಲಾಗುತ್ತದೆ.
ಕನಿಷ್ಠ ವೇತನ ಪರಿಷ್ಕರಣೆಗೆ ಉಪಸಮಿತಿ
ರಾಜ್ಯದಲ್ಲಿ ಕನಿಷ್ಠ ವೇತನ ಪರಿಷ್ಕರಣೆ ವಿಚಾರವೂ ಸಭೆಯಲ್ಲಿ ಚರ್ಚೆಗೆ ಬಂದಿದೆ. ಕನಿಷ್ಠ ವೇತನ ಹೆಚ್ಚಳದಿಂದ ಸರ್ಕಾರದ ಮೇಲೆ ಉಂಟಾಗಬಹುದಾದ ಹೆಚ್ಚುವರಿ ಆರ್ಥಿಕ ಹೊರೆ ಕುರಿತು ಆರ್ಥಿಕ ಇಲಾಖೆ ಆಕ್ಷೇಪ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ, ವಿಷಯವನ್ನು ಸಮಗ್ರವಾಗಿ ಪರಿಶೀಲಿಸಲು ಉಪಮುಖ್ಯಮಂತ್ರಿ ನೇತೃತ್ವದಲ್ಲಿ ಸಚಿವ ಸಂಪುಟ ಉಪಸಮಿತಿ ರಚಿಸಲು ತೀರ್ಮಾನಿಸಲಾಗಿದೆ. ಉಪಸಮಿತಿ ವಿವಿಧ ವರ್ಗಗಳ ಕಾರ್ಮಿಕರ ಬೇಡಿಕೆಗಳು, ಇಲಾಖೆಗಳ ಅಭಿಪ್ರಾಯಗಳು ಹಾಗೂ ವೇತನ ಪರಿಷ್ಕರಣೆಯಿಂದ ಸರ್ಕಾರದ ಬೊಕ್ಕಸಕ್ಕೆ ಬೀಳುವ ಆರ್ಥಿಕ ಪರಿಣಾಮಗಳನ್ನು ಪರಿಶೀಲಿಸಿ ಮುಂದಿನ ನಿರ್ಧಾರಕ್ಕೆ ಶಿಫಾರಸು ಮಾಡಲಿದೆ.
ಕೆಕೆಆರ್‌ಟಿಸಿಗೆ 400 ಹೊಸ ಬಸ್‌ಗಳು
ಕಲ್ಯಾಣ ಕರ್ನಾಟಕ ಪ್ರದೇಶದ ಜನರಿಗೆ ಗುಣಮಟ್ಟದ ಮತ್ತು ವಿಶ್ವಾಸಾರ್ಹ ಸಾರಿಗೆ ಸೇವೆ ಒದಗಿಸುವ ಉದ್ದೇಶದಿಂದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ (ಕೆಕೆಆರ್‌ಟಿಸಿ) 400 ಹೊಸ ಬಸ್‌ಗಳನ್ನು ಖರೀದಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ. 2025-26ನೇ ಸಾಲಿನ ಆಯವ್ಯಯ ಭಾಷಣದ ಕಂಡಿಕೆ 469(iii)ರ ಘೋಷಣೆಯಂತೆ ಬಸ್‌ಗಳನ್ನು ಖರೀದಿಸಲಾಗುತ್ತಿದ್ದು, ಪ್ರತಿ ಬಸ್‌ಗೆ ಅಂದಾಜು ₹38 ಲಕ್ಷದಂತೆ ಒಟ್ಟು ಸುಮಾರು 52 ಕೋಟಿ ರೂ. ವೆಚ್ಚವಾಗಲಿದೆ.
ಈ ವೆಚ್ಚದಲ್ಲಿ ಶೇ.50ರಷ್ಟು ಮೊತ್ತವನ್ನು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಹಾಗೂ ಉಳಿದ ಶೇ.50ರಷ್ಟು ಮೊತ್ತವನ್ನು ರಾಜ್ಯ ಸರ್ಕಾರ ಭರಿಸಲಿದೆ. ಲಭ್ಯವಾಗುವ ಅನುದಾನದ ಆಧಾರದ ಮೇಲೆ ಹಂತ ಹಂತವಾಗಿ ಬಸ್‌ಗಳನ್ನು ಖರೀದಿಸಲು ಉದ್ದೇಶಿಸಲಾಗಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆ ಹಲವು ಪ್ರಮುಖ ಕ್ಷೇತ್ರಗಳಿಗೆ ಸಂಬಂಧಿಸಿದ ನಿರ್ಧಾರಗಳನ್ನು ಕೈಗೊಂಡಿದ್ದು, ಸಾರ್ವಜನಿಕ ಪ್ರದೇಶಗಳ ನಿಯಂತ್ರಣದಿಂದ ಹಿಡಿದು ಪಿಂಚಣಿದಾರರ ಆರೋಗ್ಯ ಭದ್ರತೆ, ಅಪಾರ್ಟ್‌ಮೆಂಟ್ ಮಾಲೀಕರ ಹಕ್ಕುಗಳು, ಕಾರ್ಮಿಕರ ಕನಿಷ್ಠ ವೇತನ ಮತ್ತು ಕಲ್ಯಾಣ ಕರ್ನಾಟಕದ ಸಾರಿಗೆ ವ್ಯವಸ್ಥೆಯವರೆಗೆ ಸರ್ಕಾರದ ಮುಂದಿನ ಕಾರ್ಯಯೋಜನೆಗೆ ದಿಕ್ಕು ನೀಡಿದೆ. ಇದೇ ಹಿನ್ನೆಲೆಯಲ್ಲಿ ಪ್ರಸಕ್ತ ವಿಧಾನಮಂಡಲ ಅಧಿವೇಶನದಲ್ಲಿ ಹಲವು ಪ್ರಮುಖ ವಿಧೇಯಕಗಳು ಮಂಡನೆಯಾಗುವ ಸಾಧ್ಯತೆ ಹೆಚ್ಚಾಗಿದೆ.

