ಭೋಪಾಲ್: ಮಧ್ಯಪ್ರದೇಶದ (Madhya Pradesh) ಸಾಗರ್ ಜಿಲ್ಲೆಯಲ್ಲಿ ವಿಷಪೂರಿತ ಮದ್ಯ (Spurious Liquor) ಸೇವಿಸಿ 9 ಜನ ಸಾವನ್ನಪ್ಪಿದ್ದಾರೆ.
ಶನಿವಾರ (ಸೆ.5) ರಾತ್ರಿ ಘೂಘರ್, ನೌರಾಜ್, ಬರಾಜ್ ಸುತ್ತಮುತ್ತಲಿನ ಪ್ರದೇಶಗಳ ಜನರು ವಿಷಪೂರಿತ ಮದ್ಯ ಸೇವಿಸಿ ಅಸ್ವಸ್ಥರಾಗಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ವೇಳೆ 9 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಸ್ಥಳೀಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ.
9 ಮಂದಿ ಸಾವಿಗೆ ವಿಷಪೂರಿತ ಮದ್ಯ ಕಾರಣವೆಂದು ಶಂಕಿಸಲಾಗಿದೆ. ಈ ಬಗ್ಗೆ ಅಧಿಕಾರಿಗಳು ಇನ್ನೂ ಅಧಿಕೃತವಾಗಿ ದೃಢಪಡಿಸಿಲ್ಲ. ಮರಣೋತ್ತರ ಪರೀಕ್ಷೆಗಳ ನಂತರ ನಿಖರವಾದ ಕಾರಣವನ್ನು ತಿಳಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆಯಿಂದಾಗಿ ನಕಲಿ ಮದ್ಯ ತಯಾರಿಕೆ ಮತ್ತು ಸೇವನೆಯ ಬಗ್ಗೆ ಕಳವಳ ವ್ಯಕ್ತವಾಗಿದೆ. ಕೆಲವರಿಗೆ ಚಿಕಿತ್ಸೆ ಮುಂದುವರೆದಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಕೂಡ ಇದೆ ಎನ್ನಲಾಗಿದೆ. ಇದನ್ನೂ ಓದಿ: ಕುಡಿತದ ಚಟ ಬಿಡಿಸೋ ನಾಟಿ ಔಷಧಿ ಸೇವಿಸಿ ನಾಲ್ವರು ಸಾವು – ನಕಲಿ ವೈದ್ಯ ಅರೆಸ್ಟ್
ಕಳೆದ ತಿಂಗಳು, ಗುಜರಾತ್‌ನ ಭಾವನಗರ ಜಿಲ್ಲೆಯಲ್ಲಿ ನಕಲಿ ಮದ್ಯ ಸೇವಿಸಿ 13 ಜನರು ಸಾವನ್ನಪ್ಪಿದ್ದರು. 12ಕ್ಕೂ ಹೆಚ್ಚು ಜನರು ಆಸ್ಪತ್ರೆಗೆ ದಾಖಲಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಶಂಕಿತ ಅಕ್ರಮ ಮದ್ಯ ಮಾರಾಟಗಾರರನ್ನು ಬಂಧಿಸಲಾಗಿದೆ.
ತನಿಖೆಯಲ್ಲಿ ಮದ್ಯದಲ್ಲಿ 38.59% ಮೆಥನಾಲ್ ಇರುವುದು ಕಂಡುಬಂದಿತ್ತು. ಗುಜರಾತ್ ಮದ್ಯ ನಿಷೇಧಿತ ರಾಜ್ಯವಾಗಿದ್ದು, ಅಲ್ಲಿ ಮದ್ಯ ತಯಾರಿಕೆ, ಮಾರಾಟ ಮತ್ತು ಸೇವನೆಯನ್ನು ನಿಷೇಧಿಸಲಾಗಿದೆ. ಇದನ್ನೂ ಓದಿ: ಹೊರ ರಾಜ್ಯದಿಂದ ಬರುವ ಅಕ್ರಮ ಮದ್ಯ ತಡೆಗೆ ಕ್ರಮ: ಬೋಸರಾಜು
