– ತಡರಾತ್ರಿ ಹೊತ್ತಿ ಉರಿದ ವಾಹನಗಳು; ಎಲೆಕ್ಟ್ರಿಕ್ ಮೀಟರ್ ಬೋರ್ಡ್‌ಗೂ ಬೆಂಕಿ
ಬೆಂಗಳೂರು: ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ (Parappana Agrahara Police) ವ್ಯಾಪ್ತಿಯ ದೊಡ್ಡನಾಗಮಂಗಲದ ಕೇಂಬ್ರಿಡ್ಜ್ ಶಾಲೆ ಬಳಿ ತಡರಾತ್ರಿ ಭಾರಿ ಅಗ್ನಿ ಅವಘಡ ಸಂಭವಿಸಿದ್ದು, ಮನೆ ಅಂಗಳದಲ್ಲಿ ನಿಲ್ಲಿಸಿದ್ದ ಐದು ಬೈಕ್‌ಗಳು ಬೆಂಕಿಗಾಹುತಿಯಾಗಿವೆ.
ಮನೆಯ ಪಾರ್ಕಿಂಗ್ ಸ್ಥಳದಲ್ಲಿ ಬಾಡಿಗೆದಾರರು ನಿಲ್ಲಿಸಿದ್ದ ಬೈಕ್‌ಗಳು ಏಕಾಏಕಿ ಹೊತ್ತಿ (Bike Fire) ಉರಿದಿವೆ. ಬೈಕ್‌ಗಳ ಜೊತೆಗೆ ಎಲೆಕ್ಟ್ರಿಕ್ ಮೀಟರ್ ಬೋರ್ಡ್‌ಗೂ ಬೆಂಕಿ ತಗುಲಿದ್ದು, ಮನೆಯ ಬಾಗಿಲು ಹಾಗೂ ಕಿಟಕಿಗಳಿಗೂ ಬೆಂಕಿ ಆವರಿಸಿದೆ.

ಅಚ್ಚರಿಯ ಸಂಗತಿಯೆಂದರೆ, ಅಕ್ಕಪಕ್ಕದಲ್ಲಿ ನಿಲ್ಲಿಸಿದ್ದ ಬೈಕ್‌ಗಳ ಜೊತೆಗೆ ಸ್ವಲ್ಪ ದೂರದಲ್ಲಿದ್ದ ಮತ್ತೊಂದು ಬೈಕ್‌ಗೂ ಬೆಂಕಿ ತಗುಲಿದೆ. ಹೀಗಾಗಿ ಈ ಘಟನೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಬೆಂಕಿ ಆಕಸ್ಮಿಕವಾಗಿ ಕಾಣಿಸಿಕೊಂಡಿತೇ ಅಥವಾ ಯಾರಾದರೂ ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚಿದ್ದಾರೆಯೇ ಎಂಬ ಅನುಮಾನ ಮೂಡಿದೆ. ಘಟನೆಯಿಂದ ಬಾಡಿಗೆ ಮನೆ ನಿವಾಸಿಗಳು ಆತಂಕಕ್ಕೊಳಗಾಗಿದ್ದಾರೆ.
ಘಟನೆ ಕುರಿತು ಮಾಹಿತಿ ತಿಳಿದು ಸ್ಥಳಕ್ಕೆ ಪರಪ್ಪನ ಅಗ್ರಹಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಗ್ನಿ ಅವಘಡದ ನಿಖರ ಕಾರಣ ತಿಳಿದುಬರಬೇಕಿದೆ.
