– ಕ್ಯಾಪ್ಸೂಲ್‌ನಲ್ಲಿ ಜಿಂಕ್ ಫಾಸ್ಫೈಡ್ ವಿಷದ ಅಂಶ ಪತ್ತೆ
– ವಾಂತಿ, ಹೊಟ್ಟೆ ನೋವಿನಿಂದ ಪತ್ತೆಯಾಯ್ತು ಪ್ರಕರಣ
– ಇರಾನ್ – ಇರಾಕ್‌ಗೂ ಭೇಟಿ ನೀಡಿದ್ದ ಫಯಾಜ್
ಮುಂಬೈ: ಮೊಹರಂ (Muharram) ಅಂದ್ರೆ ಮಹಮದಿಯರ ಮೊದಲ ತಿಂಗಳು. ಇಲ್ಲಿಂದ ಇಸ್ಲಾಂ ವರ್ಷ ಆರಂಭವಾಗುತ್ತದೆ. ಈ ಹಬ್ಬಕ್ಕೆ ಚಾರಿತ್ರಿಕ ಮತ್ತು ಧಾರ್ಮಿಕ ಹಿನ್ನೆಲೆಯೂ ಇದೆ. ಈ ತಿಂಗಳನ್ನ ಇಸ್ಲಾಂನಲ್ಲಿ ಹೊಸ ವರ್ಷ ಅಂತಾ ಆಚರಣೆ ಮಾಡಲಾಗುತ್ತದೆ. ಅದಕ್ಕಾಗಿ ಈ ಸಂದರ್ಭದಲ್ಲಿ ಮುಸ್ಲಿಂ ಬಾಂಧವರು ಪುಣ್ಯದ ಕೆಲಸಗಳನ್ನ ಕೈಗೊಳ್ಳುತ್ತಾರೆ. ಆದ್ರೆ ಈ ಸಂರ್ಭದಲ್ಲಿ ಸಾಮೂಹಿಕ ವಿಷಪ್ರಾಶನಕ್ಕೆ ಸಂಚು ರೂಪಿಸಿದ್ದ ವ್ಯಕ್ತಿಯೊಬ್ಬ ಮುಂಬೈ ಪೊಲೀಸರಿಗೆ (Mumbai Police) ಸಿಕ್ಕಿಬಿದ್ದಿದ್ದಾನೆ.
ಹೌದು.. ಮೊಹರಂ ಮೆರವಣಿಗೆಯ ಸಂದರ್ಭದಲ್ಲಿ ರ‍್ಯಾಟ್ ಪಾಯಿಸನ್ (ಇಲಿ ಪಾಷಾಣ – Rodenticide) ತುಂಬಿದ ಕ್ಯಾಪ್ಸೂಲ್ ಗಳನ್ನು ವಿತರಿಸಲು ಮುಂದಾಗಿದ್ದ ವ್ಯಕ್ತಿಯೊಬ್ಬನನ್ನ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನ ಪುಣೆ ನಿವಾಸಿ, ಬಣ್ಣದ ವ್ಯಾಪಾರಿ ಫಯಾಜ್ ಎಂದು ಗುರುತಿಸಲಾಗಿದೆ. ಆರೋಪಿಯಿಂದ ಸುಮಾರು 14,900 ವಿಷ ತುಂಬಿದ ಕ್ಯಾಪ್ಸೂಲ್ ಗಳನ್ನ ವಶಪಡಿಸಿಕೊಂಡಿದ್ದು, ಘಟನೆ ಹಿಂದೆ ದೊಡ್ಡ ಪಿತೂರಿಯೇ ಇದೆ ಎಂದು ಶಂಕಿಸಲಾಗಿದೆ.

ಮೊಹರಂ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಜನರನ್ನು ಗುರಿಯಾಗಿಸಿಕೊಂಡಿದ್ದ ಶಂಕಿತ ಸಾಮೂಹಿಕ ವಿಷಪ್ರಾಷನಕ್ಕೆ ಸಂಚು ರೂಪಿಸಿದ್ದ. ಅದಕ್ಕಾಗಿ ವಿಷಕಾರಿ ʻಜಿಂಕ್ ಫಾಸ್ಫೈಡ್ʼ (Zinc Phosphide) ಕ್ಯಾಪ್ಸೂಲ್ ಗಳನ್ನ ವಿತರಿಸಲು ಮುಂದಾಗಿದ್ದ. ಒಂದು ವೇಳೆ ಶಂಕಿತನ ಯೋಜನೆ ಸಕ್ಸಸ್ ಆಗಿದ್ದರೆ, ಸಾವಿರಾರು ಜೀವಗಳು ಬಲಿಯಾಗುತ್ತಿದ್ದವು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಖಬರ್ದಾರ್ ಕುಮಾರಣ್ಣ, ನಿನ್ನ ಚೇಲಾಗಳಿಗೆ ಹೆದರಲ್ಲ – ಪ್ರದೀಪ್ ಈಶ್ವರ್ ತಿರುಗೇಟು
ವಾಂತಿ, ಹೊಟ್ಟೆ ನೋವಿನಿಂದ ಪತ್ತೆಯಾಯ್ತು ಪ್ರಕರಣ!
ಅಧಿಕಾರಿಗಳ ಪ್ರಕಾರ, ಸಲ್ಮಾನ್ ಸಯ್ಯದ್ ಎಂಬ ವ್ಯಕ್ತಿಯೊಬ್ಬ ಒಂದು ಕ್ಯಾಪ್ಸೂಲ್ ಸೇವಿಸಿ, ಅಸ್ವಸ್ಥರಾಗಿದ್ದರು. ಆ ದಿನ ಬೆಳಗ್ಗೆ 4 ಗಂಟೆ ಸುಮಾರಿಗೆ, ವಾಂತಿ, ಹೊಟ್ಟೆ ನೋವಿನಿಂದ ಆತ ಬಳಲುತ್ತಿದ್ದಾನೆ ಅನ್ನೋ ಬಗ್ಗೆ ಮಾಹಿತಿ ಬಂದಿತು. ಈ ಕುರಿತು ಹೆಚ್ಚಿನ ತನಿಖೆ ಆರಂಭಿಸಿದಾಗ ಪ್ರಕರಣ ಬೆಳಕಿಗೆ ಬಂದಿತು.
15,000 ವಿಷದ ಕ್ಯಾಪ್ಸೂಲ್ ಜಪ್ತಿ
ಆರೋಪಿ ಬಂಧನದ ಬಳಿಕ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಡಿಸಿಪಿ (ಕೇಂದ್ರ ಪ್ರದೇಶ, ವಲಯ 1) ಜಯಂತ್ ಮೀನಾ, ಮೊಹರಂ ಮೆರವಣಿಗೆ ಸಂದರ್ಭದಲ್ಲಿ ಅನುಮಾನಾಸ್ಪದ ವ್ಯಕ್ತಿಯೊಬ್ಬ ಓಡಾಡುತ್ತಿದ್ದು, ಔಷಧಿ ಮಾದರಿಯ ಕ್ಯಾಪ್ಸೂಲ್ ಗಳನ್ನ ವಿತರಿಸುತ್ತಿದ್ದಾನೆ ಅನ್ನೋ ಮಾಹಿತಿ ಬಂದಿತು. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಆರೋಪಿಯನ್ನ ಬಂಧಿಸಿದ್ರು ಎಂದು ತಿಳಿಸಿದರು. ಇದನ್ನೂ ಓದಿ: ಕಾರವಾರ| ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ಅಡಿಕೆಗೆ ಬೆಂಕಿ ತಗುಲಿ ಸುಟ್ಟುಕರಕಲು

ಬಂಧಿತನಿಂದ ಆಧಾರ್ ಮತ್ತು ಪಾಸ್‌ಪೋರ್ಟ್ ದಾಖಲೆಗಳೊಂದಿಗೆ ಆತನ ಬಳಿಯಿದ್ದ ʻಜಿಂಕ್ ಫಾಸ್ಫೈಡ್ʼ ವಿಷ ತುಂಬಿದ 14,900 ಕ್ಯಾಪ್ಸೂಲ್ ಗಳನ್ನೂ (Poison Capsule) ವಶಪಡಿಸಿಕೊಳ್ಳಲಾಯ್ತು.ಕ್ಯಾಪ್ಸೂಲ್ ಗಳನ್ನ ವಿತರಿಸುವ ಮುನ್ನವೇ ಅಧಿಕಾರಿಗಳು ವಶಕ್ಕೆ ಪಡೆದಿರುವುದು ದೊಡ್ಡ ದುರಂತವನ್ನ ತಪ್ಪಿಸಿದಂತಾಗಿದೆ.
ಪ್ರತಿ ಕ್ಯಾಪ್ಸುಲ್‌ನಲ್ಲಿ 1 ಗ್ರಾಂ ವಿಷ
ಬಂಧಿನ ಫಯಾಜ್ ಕುರಿತು ತನಿಖೆ ನಡೆಸಿದ ಪೊಲೀಸರು, ಸ್ಫೋಟಕ ರಹಸ್ಯಗಳನ್ನು ಬಯಲಿಗೆಳೆದಿದ್ದಾರೆ. ಮೊಹರಂ ಮೆರವಣಿಗೆ ಗುರಿಯಾಗಿಸಿಕೊಂಡಿದ್ದ ಫಯಾಜ್, 50 ಕೆಜಿ ಜಿಂಕ್ ಫಾಸ್ಫೈಡ್ ಆರ್ಡರ್ ಮಾಡಿ ತರಿಸಿಕೊಂಡಿದ್ದ. ತನ್ನ ಮನೆಯಲ್ಲೇ ಪಾಯಿಸನ್ ಇಟ್ಟುಕೊಂಡು ತಲಾ 1 ಗ್ರಾಂ ವಿಷವನ್ನ ಪ್ರತಿ ಕ್ಯಾಪ್ಸೂಲ್ ನಲ್ಲಿ ತುಂಬಿಸಿದ್ದ. ಒಟ್ಟು 30,000 ಕ್ಯಾಪ್ಸೂಲ್ ಗಳನ್ನ ತಯಾರಿಸಲು ಫಯಾಜ್ ಉದ್ದೇಶಿಸಿದ್ದ. ಅದಕ್ಕೂ ಮುನ್ನ ತಯಾರಿಸಲಾಗಿದ್ದ 14,900 ಕ್ಯಾಪ್ಸುಲ್‌ಗಳನ್ನ ವಿತರಿಸಲು ಸಂಚು ರೂಪಿಸಿದ್ದ. ಅಷ್ಟರಲ್ಲಿ ಸಿಕ್ಕಿಬಿದ್ದು, ಮಹಾ ದುರಂತವೊಂದು ತಪ್ಪಿದಂತಾಗಿದೆ.
ಆರೋಪಿ ಫಯಾಸ್ ಯಾರು?
ದುಷ್ಕೃತ್ಯಕ್ಕೆ ಸಂಚು ರೂಪಿಸಿದ್ದ ಆರೋಪಿಯನ್ನ ಪುಣೆಯ ವಿಮಾನ್ ನಗರದ ನಿವಾಸಿ ಫಯಾಜ್ ಪ್ರೇಮ್‌ಜಿ ಎಂದು ಗುರುತಿಸಲಾಗಿದೆ. ಫಯಾಜ್ ಬಿಬಿಎ ಪದವಿ ಪಡೆದಿದ್ದಾನೆ. ಪೇಯಿಂಟ್ (ಬಣ್ಣ) ವ್ಯವಹಾರ ಮಾಡಿಕೊಂಡಿದ್ದ. 15 ದಿನಗಳ ಹಿಂದೆ ಮುಂಬೈನ ಡೋಂಗ್ರಿಯಲ್ಲಿ ಮನೆ ಬಾಡಿಕೆ ಪಡೆದು ಅಲ್ಲೇ ವಾಸ್ತವ್ಯ ಹೂಡಿ ಸಂಚು ರೂಪಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಇರಾನ್, ಇರಾಕ್‌ಗೂ ತೆರಳಿದ್ದ ಫಯಾಜ್
2025 ರಲ್ಲಿ ಇರಾನ್ ಮತ್ತು ಇರಾಕ್‌ಗೆ ಪ್ರಯಾಣಿಸಿದ್ದ ಅನ್ನೋ ಸ್ಫೋಟಕ ಸಂಗತಿ ತನಿಖೆ ವೇಳೆ ಬಯಲಾಗಿದೆ. ಅಲ್ಲಿಗೆ ಫಯಾಜ್ ಭೇಟಿ ನೀಡಿದ್ದೇಕೆ ಅನ್ನೋ ಉದ್ದೇಶವನ್ನು ಪರಿಶೀಲಿಸಲಾಗುತ್ತಿದೆ.
ಸದ್ಯ ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಮುಂಬೈ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: ಹಾವೇರಿ, ಕೊಡಗು, ಧಾರವಾಡ ಜಿಲ್ಲಾ ನ್ಯಾಯಾಲಯಗಳಿಗೆ ಬಾಂಬ್ ಬೆದರಿಕೆ ಕರೆ
