ಕಾರವಾರ: ರಾಜ್ಯದಲ್ಲಿ ಕೃಷಿಕರಿಗೆ ಮಳೆ ಬಾರದೇ ಬೆಳೆದ ಬೆಳೆ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ. ಆದರೆ, ಇದೀಗ ಬೆಳೆದ ಬೆಳೆಯನ್ನ ಹೊರರಾಜ್ಯಗಳಿಗೆ ಕಳುಹಿಸಲು ಮಹಾರಾಷ್ಟ್ರ (Maharashtra) ಸರ್ಕಾರ ಕಿರಿಕ್ ಮಾಡುತ್ತಿದ್ದು, ಕರ್ನಾಟಕದಿಂದ ಮಹಾರಾಷ್ಟ್ರ ಮೂಲಕ ಉತ್ತರ ಭಾರತಕ್ಕೆ ಸರಬರಾಜಾಗುವ ಅಡಿಕೆ ಬೆಳೆಗಳನ್ನ ತಡೆಹಿಡಿದು ಕರ್ನಾಟಕ ಅಡಿಕೆ ಬೆಳೆಗಾರರಿಗೆ (Areca Nut Farmers) ಸಂಕಷ್ಟ ತಂದೊಡ್ಡಿದ್ದಾರೆ.
ಮಹಾರಾಷ್ಟ್ರದಲ್ಲಿ ಅಡಿಕೆ ಲಾರಿಗಳ ಸಂಚಾರಕ್ಕೂ ಅಡ್ಡಿ
ಕರ್ನಾಟಕವು ಭಾರತದ ಅತಿದೊಡ್ಡ ಅಡಿಕೆ ಉತ್ಪಾದಕ ರಾಜ್ಯವಾಗಿದೆ. ಸುಮಾರು 6.7 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿದ್ದು, ವಾರ್ಷಿಕವಾಗಿ ಸುಮಾರು 10–11 ಲಕ್ಷ ಟನ್ ಉತ್ಪಾದನೆಯಾಗುತ್ತದೆ. ಭಾರತದಲ್ಲಿ ಉತ್ಪಾದನೆಯಾಗುವ ಅಡಿಕೆಯ ಒಟ್ಟು ಮಾರುಕಟ್ಟೆ ಮೌಲ್ಯ ಸುಮಾರು 58,664 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಇದರಲ್ಲಿ ಕರ್ನಾಟಕದ ಪಾಲು ಅತಿಹೆಚ್ಚು.
ರೈತರು, ಕೂಲಿ ಕಾರ್ಮಿಕರು, ವ್ಯಾಪಾರಿಗಳು, ಸಾಗಣೆದಾರರು, ಸಂಸ್ಕರಣಾ ಘಟಕಗಳು ಸೇರಿದಂತೆ ಲಕ್ಷಾಂತರ ಜನರು ಅಡಿಕೆ ಆಧಾರಿತ ಜೀವನ ನಡೆಸುತ್ತಿದ್ದಾರೆ. ದೇಶದಾದ್ಯಂತ ಸುಮಾರು 60 ಲಕ್ಷ ಜನರ ಜೀವನೋಪಾಯ ಅಡಿಕೆ ಕ್ಷೇತ್ರದ ಮೇಲೆ ಅವಲಂಬಿತವಾಗಿದೆ ಎನ್ನುತ್ತದೆ ಕೆಲವು ಅಂಕಿಅಂಶಗಳು. ರಾಜ್ಯದಲ್ಲಿ ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ದಾವಣಗೆರೆ, ಚಿತ್ರದುರ್ಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಅಡಿಕೆ ಮುಖ್ಯ ಆದಾಯದ ಮೂಲವಾಗಿದೆ. ರೈತರ ಖರೀದಿ ಶಕ್ತಿ ಹೆಚ್ಚುವುದರಿಂದ ಸ್ಥಳೀಯ ವ್ಯಾಪಾರ, ಶಿಕ್ಷಣ, ಆರೋಗ್ಯ, ಕಟ್ಟಡ ನಿರ್ಮಾಣ ಮತ್ತು ಸೇವಾ ವಲಯವೂ ಬೆಳೆಯಲು ಸಹಾಯವಾಗಿದೆ. ಇದನ್ನೂ ಓದಿ: ಬಂಡೀಪುರ & ನಾಗರಹೊಳೆ ಜಂಗಲ್ ಸಫಾರಿ ಪೂರ್ಣ ಪ್ರಮಾಣದಲ್ಲಿ ಆರಂಭಕ್ಕೆ ರಾಜ್ಯ ಸರ್ಕಾರ ನಿರ್ಧಾರ
ಉತ್ತರ ಕನ್ನಡ ಜಿಲ್ಲೆಯ ಅಡಿಕೆ ಬೆಳೆಯ ತವರು ಎಂದೇ ಖ್ಯಾತಿ ಪಡೆದ ಶಿರಸಿಯದ್ದು. ಅತಿವೃಷ್ಟಿ-ಅನಾವೃಷ್ಟಿ ಜೊತೆ ಅಡಿಕೆ ಬೆಳೆಗೆ ತಗಲಿದ ರೋಗದಿಂದ ಕಂಗೆಟ್ಟಿದ್ದ ಅಡಿಕೆ ಬೆಳೆಗಾರರು ಅಳಿದುಳಿದ ಫಸಲನ್ನ ಉಳಿಸಿಕೊಂಡು ಇನ್ನೇನು ಮಾರುಕಟ್ಟೆಗೆ ತಂದು ಹಾಕಿರುವಾಗಲೇ, ಮಹರಾಷ್ಟ್ರ ಸರ್ಕಾರ ಕೈಗೊಂಡ ಕ್ರಮದಿಂದ ಬೆಲೆ ಇಳಿಕೆ ಜೊತೆ ಅಡಿಕೆ ವಹಿವಾಟುಗಳೇ ಸ್ತಬ್ದವಾಗುವ ಸ್ಥಿತಿಗೆ ಬಂದಿದ್ದು ಬೆಳೆಗಾರ ಕಂಗೆಡುವಂತೆ ಮಾಡಿದೆ. ಉತ್ತರ ಕನ್ನಡ ಸೇರಿದಂತೆ ರಾಜ್ಯದ ಹಲವು ಜಿಲ್ಲೆಯಲ್ಲಿ ಅಡಿಕೆ ಬೆಳೆಗಾರರಿದ್ದು, ರಾಜ್ಯದ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಅಡಿಕೆ ಸಹ ಒಂದು. ಒಂದು ಕಾಲದಲ್ಲಿ ಬಂಗಾರದ ಬೆಳೆ ಎಂದೇ ಪ್ರಸಿದ್ಧಿ ಪಡೆದಿದ್ದ ಈ ಬೆಳೆ ಇದೀಗ ಹಲವು ಸವಾಲುಗಳಿಂದ ಮಾರುಕಟ್ಟೆ ಧಾರಣೆ ಕುಸಿತ ಕಂಡಿದೆ. ಹೀಗಿರುವಾಗ ಉತ್ತರ ಕನ್ನಡ ಜಿಲ್ಲೆಯಲ್ಲಿ ವರ್ಷಕ್ಕೆ ಸುಮಾರು 12,000 ರಿಂದ 15,000 ಮೆಟ್ರಿಕ್ ಟನ್‌ಗಳಷ್ಟು ಅಡಿಕೆ ಉತ್ಪಾದನೆ ಆಗುತ್ತದೆ. ಜಿಲ್ಲೆಯ ಸುಮಾರು 10,000 ರಿಂದ 15,000 ಹೆಕ್ಟೇರ್‌ಗಿಂತ ಹೆಚ್ಚು ಪ್ರದೇಶದಲ್ಲಿ ಅಡಿಕೆ ಬೆಳೆ ಇದೆ. ಉತ್ತರ ಕನ್ನಡ ಜಿಲ್ಲೆ ರಾಜ್ಯದ ಒಟ್ಟು ಅಡಿಕೆ ಉತ್ಪಾದನೆಯಲ್ಲಿ ಸುಮಾರು 14% ಪಾಲು ಹೊಂದಿದೆ. ಆದರೆ, ಇದೀಗ ಮಹಾರಾಷ್ಟ ಸರ್ಕಾರ ಅಡಿಕೆಯಲ್ಲಿ ರಾಸಾಯನಿಕವನ್ನು ಬಳಸಲಾಗುತ್ತಿದೆ ಎಂದು ಆರೋಪ ಮಾಡಿ ಒಂದು ವರ್ಷದ ವರೆಗೆ ಮಹಾರಾಷ್ಟ್ರ ಭಾಗದಲ್ಲಿ ಅಡಿಕೆ ವಹಿವಾಟು, ದಾಸ್ತಾನು, ಸರಬರಾಜುಗಳನ್ನ ನಿರ್ಬಂಧಿಸಿದೆ. ಇದರಿಂದಾಗಿ ಮಹಾರಾಷ್ಟ್ರ ಮೂಲಕ ಉತ್ತರ ಭಾರತದ ಹಲವು ರಾಜ್ಯಕ್ಕೆ ತೆರಳುವ ಅಡಕೆಯನ್ನು ಮಹಾರಾಷ್ಟ್ರದ ಆರೋಗ್ಯ ಇಲಾಖೆ ಆಯುಕ್ತರು ತಡೆಹಿಡಿಯುತ್ತಿದ್ದು, ಕಳೆದ ಎರಡು ವಾರದಿಂದ ರಾಜ್ಯದ ಸಾವಿರಕ್ಕೂ ಹೆಚ್ಚು ಅಡಿಕೆಯನ್ನು ಕೊಂಡೊಯ್ಯುತ್ತಿರುವ ಲಾರಿಗಳನ್ನ ಸೀಜ್ ಮಾಡಿದ್ದಾರೆ. ಇದರಿಂದ ನಿಗದಿ ಸಮಯದಲ್ಲಿ ಮಾರುಕಟ್ಟೆಗೆ ಹೋಗಬೇಕಿದ್ದ ಅಡಿಕೆ ಮಹಾರಾಷ್ಟ್ರದಲ್ಲಿ ಕೊಳೆಯುತ್ತಿದೆ. ಇದಲ್ಲದೇ ಅಡಿಕೆಯಲ್ಲಿ ರಾಸಾಯನಿಕ ಕಂಡುಬಂದರೆ ಸುಟ್ಟುಹಾಕುವುದಾಗಿ ಹೇಳಿದ್ದು, ಇದೀಗ ರಾಜ್ಯದ 600 ಕೋಟಿಗೂ ಹೆಚ್ಚು ಅಡಿಕೆ ಬೆಳೆ ಮಹಾರಾಷ್ಟ್ರದಲ್ಲಿ ಲಾಕ್ ಆಗಿದೆ. ವರ್ತಕರು ನಷ್ಟ ಹೊಂದುವ ಜೊತೆ ವ್ಯಾಪಾರವನ್ನೇ ನಿಲ್ಲಿಸುವ ಸ್ಥಿತಿಗೆ ಬಂದಿದ್ದಾರೆ.

ಸಧ್ಯ ಉತ್ತರ ಕನ್ನಡ ಅಡಿಕೆ ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಬೆಟ್ಟೆ 40 ರಿಂದ 49 ಸಾವಿರ ಪ್ರತಿ ಕ್ವಿಂಟಲ್‌ಗೆ ಇದ್ದರೆ, ರಾಶಿ-49 ರಿಂದ 50 ಸಾವಿರ, ಚಾಲಿ -44 ರಿಂದ 48 ಸಾವಿರ ಕ್ವಿಂಟಲ್ ದರ ಇದ್ದು ಏರಿಳಿತ ಕಾಣುತ್ತಿದೆ. ಉತ್ತರ ಕನ್ನಡ ಜಿಲ್ಲೆಯಿಂದ ಮಧ್ಯಪ್ರದೇಶ ದೆಹಲಿ, ಉತ್ತರ ಪ್ರದೇಶ, ರಾಜಸ್ಥಾನ ಮಹಾರಾಷ್ಟ್ರ, ಗುಜರಾತ್‌ಗೆ ಹೆಚ್ಚು ಸರಬರಾಜಾಗುತ್ತದೆ. ಇದನ್ನು ಹೊರತುಪಡಿಸಿದರೆ ಪಾಕಿಸ್ತಾನ, ನೇಪಾಳ, ಮ್ಯಾನ್ಮಾರ್, ಖಜಕಿಸ್ತಾನ್, ಅಫ್ಘಾನಿಸ್ತಾನ ಸೇರಿದಂತೆ ಹಲವು ದೇಶಗಳಿಗೂ ಅಲ್ಪ ಪ್ರಮಾಣದಲ್ಲಿ ರಫ್ತಾಗುತ್ತದೆ.
2023–24ರಲ್ಲಿ ಭಾರತದಿಂದ 10,637 ಟನ್ ಅಡಿಕೆ ರಫ್ತಾಗಿ ಸುಮಾರು 400 ಕೋಟಿ ರೂ. ವಿದೇಶಿ ವಿನಿಮಯ ಗಳಿಕೆಯಾಗಿದೆ ಎಂಬುದು ಅಂಕಿಅಂಶವನ್ನು ನೀಡುತ್ತದೆ. ಇನ್ನು ಮಹರಾಷ್ಟ್ರ, ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯದಲ್ಲಿ ಗುಟ್ಕ ಹಾಗೂ ಸುಫರಿ ಕಾರ್ಖಾನೆಗಳಿದ್ದು, ಅಲ್ಲಿಗೂ ಅಡಿಕೆ ಈ ಭಾಗದಿಂದಲೇ ಹೋಗುತ್ತದೆ. ಆದರೆ, ಇದೀಗ ಮಹಾರಾಷ್ಟ್ರ ಸರ್ಕಾರ ಅಡಿಕೆ ಬೆಳೆಯಲ್ಲಿ ವಿಷಕಾರಿ ರಾಸಾಯನಿಕವಿದೆ ಎಂದು ಸಬೂಬು ಹೇಳಿ ತಮ್ಮ ರಾಜ್ಯದ ಜೊತೆ ಇತರೆ ರಾಜ್ಯಕ್ಕೆ ತೆರಳುವ ಅಡಿಕೆಯನ್ನು ಸಹ ತಡೆಹಿಡಿದಿದೆ. ಹೀಗಾಗಿ, ಪ್ರತಿ ದಿನ ಕೋಟ್ಯಂತರ ರೂಪಾಯಿಯನ್ನು ಬೆಳೆಗಾರರಿಗೆ ಅಡಿಕೆ ವರ್ತಕರು ವಹಿವಾಟಿನಲ್ಲಿ ನೀಡುತ್ತಿದ್ದು, ಇದೀಗ ಬೆಳೆಗಾರರಿಗೆ ತಾವು ನೀಡಿದ ಬೆಳೆಗೆ ಹಣ ಸಿಗದೇ ಕಾಯುವಂತಾಗಿದ್ದು, ದರ ಇಳಿಕೆಯ ಬಿಸಿ ಮುಟ್ಟಿದೆ. ಅಡಿಕೆ ಬೆಳಗಾರರು ಹಾಗೂ ವರ್ತಕರನ್ನ ಸಂಕಷ್ಟಕ್ಕೆ ನೂಕಿದೆ.
ವಹಿವಾಟಿಗೆ ಹಿನ್ನಡೆ
ಮಹಾರಾಷ್ಟ್ರದಲ್ಲಿ ಅಡಿಕೆ ಲಾರಿಗಳನ್ನ ತಡೆಯುತ್ತಿರುವುದರಿಂದ ರೈತರು, ಕೂಲಿ ಕಾರ್ಮಿಕರು, ವ್ಯಾಪಾರಿಗಳು, ಸಾಗಣೆದಾರರು, ಸಂಸ್ಕರಣಾ ಘಟಕಗಳು ಸೇರಿದಂತೆ ಹಲವು ಉದ್ಯಮಕ್ಕೆ ಹೊಡೆತ ಬಿದ್ದಿದೆ. ಇದರಿಂದ ಸಾಗಾಣಿಕೆದಾರರು ಸಧ್ಯ ಅಡಿಕೆಯನ್ನು ಮಹಾರಾಷ್ಟ್ರದ ಮೂಲಕ ಸಾಗಾಟವನ್ನು ನಿಲ್ಲಿಸಿ ಪರ್ಯಾಯ ಮಾರ್ಗದ ಮೂಲಕ ಸಾಗಾಟ ಮಾಡುತ್ತಿದ್ದು, ಇಂದಿನ ದುಬಾರಿ ಡೀಸೆಲ್ ಬೆಲೆಯಿಂದ ಸಾಗಾಟ ವೆಚ್ಚ ದುಪ್ಪಟ್ಟಾಗಿದೆ. ಹೀಗಾಗಿ, ಸಧ್ಯ ಈ ಸಮಸ್ಯೆ ಬಗೆಹರಿಯುವ ವರೆಗೆ ಕೆಲವು ವರ್ತಕರು ವಹಿವಾಟು ಬಂದ್ ಮಾಡಿದ್ದು, ಮಾರುಕಟ್ಟೆ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಇದನ್ನೂ ಓದಿ: ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಶನಿವಾರ ಶಾಲಾ ಸಮಯ ಬದಲಿಸಿದ ಶಿಕ್ಷಣ ಇಲಾಖೆ
ಹಲವು ಜಿಲ್ಲೆಗಳಲ್ಲಿ ಸಮಸ್ಯೆ ಕುರಿತು ಸಭೆ
ಈ ಸಮಸ್ಯೆ ಬಗೆಹರಿಸಲು ಉತ್ತರ ಕನ್ನಡ, ಶಿವಮೊಗ್ಗ, ಉಡುಪಿ ಸೇರಿದಂತೆ ಹಲವು ಕಡೆ ವರ್ತಕರು ಹಾಗೂ ಬೆಳೆಗಾರರ ಸಭೆ ಮಾಡಲಾಗಿದ್ದು, ಸಮಸ್ಯೆ ಬಗೆಹರಿಸುವಲ್ಲಿ ಪ್ರಯತ್ನ ಸಾಗಿದೆ. ಆದರೆ, ಈ ಬಗ್ಗೆ ಮಹಾರಾಷ್ಟ್ರ ಸರ್ಕಾರದಿಂದ ಯಾವುದೇ ಪ್ರಕಟಣೆಗಳು ಅಥವಾ ಆದೇಶಗಳಾಗಿಲ್ಲ.
ರಾಜ್ಯದ ಅಡಿಕೆ ಬೆಳೆಗಾರರಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲೇ ಅಂದಾಜು ಮೂರು ಲಕ್ಷಕ್ಕೂ ಹೆಚ್ಚು ಅಡಿಕೆ ಬೆಳೆಗಾರರಿದ್ದಾರೆ. ಇನ್ನು ಇದರ ಅವಲಂಭಿತ ಕಾರ್ಮಿಕರು ಪ್ರತ್ಯೇಕವಾಗಿದ್ದು, ಜಿಲ್ಲೆಯ ಆರ್ಥಿಕತೆಯ ಮುಖ್ಯ ಮೂಲಸಹ. ರಾಜ್ಯದ ಇತರ ಜಿಲ್ಲೆಯ ಪಾಲು ಸಹ ದೊಡ್ಡದಿದೆ. ಹೀಗಿರುವಾಗ ರಾಜ್ಯ ಸರ್ಕಾರ ಸಹ ಮಹಾರಾಷ್ಟ್ರದ ಈ ನಿರ್ಧಾರವನ್ನು ಪ್ರಶ್ನಿಸದೇ ಸುಮ್ಮನಿದೆ. ಹೀಗಾಗಿ ಅಡಿಕೆ ಬೆಳೆಗಾರರು ಹಾಗೂ ವರ್ತಕರು ಸರ್ಕಾರ ಮಧ್ಯಸ್ತಿಕೆ ವಹಿಸಿ ಆದ ಗೊಂದಲ ಬಗೆಹರಿಸಿ ನಮ್ಮ ಹಿತ ಕಾಯಬೇಕೆಂದು ಬೆಳೆಗಾರರು ಆಗ್ರಹಿಸಿದ್ದಾರೆ.
