ನವದೆಹಲಿ: ಡಿಕೆ ಶಿವಕುಮಾರ್ (DK Shivakumar) ಅವರು ಗುಂಪುಕಟ್ಟಿಕೊಂಡು ಹೋಗಿ ರಾಜಕೀಯ ಮಾಡುವವರಲ್ಲ, ಹೈಕಮಾಂಡ್‌ಗೆ ನಿಷ್ಠೆಯಿಂದ ಇರುವವರು ಮಾಗಡಿ ಶಾಸಕ ಬಾಲಕೃಷ್ಣ (HC Balakrishna) ಹೇಳಿದ್ರು.
ದೆಹಲಿಯಲ್ಲಿ ʻಪಬ್ಲಿಕ್ ಟಿವಿʼ (PUBLiC Tv) ಜೊತೆಗೆ ಮಾತನಾಡಿದ ಅವರು, ಇಬ್ಬರನ್ನೂ ದೆಹಲಿಗೆ ಕರೆದಿದ್ದಾರೆ ಏನಾದರೂ ಒಂದು ತೀರ್ಮಾನ ಆಗಬಹುದು. ಇರುವ ಗೊಂದಲ ಪರಿಹಾರ ಆಗಬೇಕು, ಎಲ್ಲವೂ ತಿಳಿ ಆಗಬೇಕು. ಎಲ್ಲದಕ್ಕೂ ಹೈಕಮಾಂಡ್ ತೆರೆ ಎಳೆಯಬೇಕು ಎಂದು ಮನವಿ ಮಾಡಿದ್ರು. ಇದನ್ನೂ ಓದಿ: ದಿಲ್ಲಿಯಲ್ಲೂ ದೂರ ದೂರ – ಸಿಎಂ & ಟೀಂನಿಂದ ಅಂತರ ಕಾಯ್ದುಕೊಂಡ ಡಿಕೆಶಿ

ಇದೇ ವೇಳೆ ಸಿಎಂ ಜೊತೆಗೆ ಆಪ್ತ ಸಚಿವರು ದೆಹಲಿಗೆ ಪ್ರಯಾಣಿಸಿರುವ ವಿಚಾರ ಕುರಿತು ಮಾತನಾಡಿ, ಡಿ.ಕೆ ಶಿವಕುಮಾರ್ ಗುಂಪು ಕಟ್ಟಿಕೊಂಡು ಹೋಗಿ ರಾಜಕೀಯ ಮಾಡುವವರಲ್ಲ. ಅವರು ಹೈಕಮಾಂಡ್ ನಿಷ್ಠೆಯಿಂದ ಇರುವವರು. ಸಿಎಂ ಸಹ ಯಾರನ್ನೂ ಕರೆದಿಲ್ಲ ಕುತೂಹಲಕ್ಕೆ ಸಹಜವಾಗಿ 3-4 ಸಚಿವರು ಹೋಗಿರಬಹುದು. ಸಿಎಂ ಜೊತೆ ಈ ಮೊದಲೂ ದೆಹಲಿಗೆ ಹೋಗುವಾಗ ಜೊತೆಗೆ ಸಚಿವರು ಹೋಗುತ್ತಿದ್ದರು, ಇದೇ ಮೊದಲಲ್ಲ. ಎಲ್ಲವೂ ಹೈಕಮಾಂಡ್ ತೀರ್ಮಾನ. ಗೊಂದಲ ಪರಿಹಾರ ಆದರೆ ಮುಂದಿನ ಚುನಾವಣೆಗೆ ಅನುಕೂಲ ಆಗಲಿದೆ ಎಂದರು.
2028 ರ ಚುನಾವಣೆ ನಮಗೆ ಮುಖ್ಯ. ಹಾಗಂತ ನಾವು ಮಾತನಾಡಿದ ಕೂಡಲೇ ಏನೂ ಆಗಲ್ಲ. ಸುಮ್ಮನೆ ಗೊಂದಲ ಉಂಟಾಗೋದು ಬೇಡ, ಹೈಕಮಾಂಡ್‌ಗೆ ಎಲ್ಲ ಗೊತ್ತಿದೆ, ಅವರ ತೀರ್ಮಾನದಂತೆ ಆಗುತ್ತೆ. ಹೈಕಮಾಂಡ್ ತೀರ್ಮಾನವೇ ಎಲ್ಲದಕ್ಕೂ ಅಂತಿಮ ಎಂದು ಸ್ಪಷ್ಟಪಡಿಸಿದ್ರು. ಇದನ್ನೂ ಓದಿ: ಈ ಬಾರಿ ನನಗೆ ಮಂತ್ರಿ ಸ್ಥಾನ ಕೊಡಬೇಕು – ಪುಟ್ಟರಂಗಶೆಟ್ಟಿ ಬಿಗಿಪಟ್ಟು
ಇಂದು ಮೂರು ಸುತ್ತಿನ ಸಭೆ
ನವದೆಹಲಿ: ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ವಿವಾದಕ್ಕೆ ತೆರೆ ಎಳೆಯಲು ಕಾಂಗ್ರೆಸ್ ಹೈಕಮಾಂಡ್ ದೃಢ ನಿರ್ಧಾರ ಮಾಡಿದಂತಿದೆ. ಇಂದು ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ, ಹೈಕಮಾಂಡ್ ಮಹತ್ವದ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಕಾಂಗ್ರೆಸ್ ಮೂಲಗಳು ಖಚಿತಪಡಿಸಿವೆ. ಅದಕ್ಕಾಗಿ ಇಂದು ಸಿಎಂ, ಡಿಸಿಎಂ ಜೊತೆಗೆ ನೇರಾನೇರ ಮಾತುಕತೆ ನಡೆಸಲು ಸಮಯ ನಿಗದಿಮಾಡಿದೆ. ಇದನ್ನೂ ಓದಿ: ಕ್ವಿನ್ ಸಿಟಿಯಲ್ಲಿ ಟೊಯೋಟಾ ಬಿಝ್ಇಂಟೆಲ್ ಹಬ್ – 1,200 ಕೋಟಿ ರೂ. ಹೂಡಿಕೆಗೆ ಒಡಂಬಡಿಕೆ
ಇಂದು 11 ಗಂಟೆ ಬಳಿಕ ಇಂದಿರಾ ಭವನದಲ್ಲಿ ಮೊದಲು ಸಿದ್ದರಾಮಯ್ಯ ಅವರೊಂದಿಗೆ ಮಾತುಕತೆ ನಡೆಸಲು ಹೈಕಮಾಂಡ್ ನಾಯಕರು ಮುಂದಾಗಿದ್ದಾರೆ. ಒಟ್ಟು ಮೂರು ಸುತ್ತಿನ ಸಭೆ ನಡೆಯುವ ಸಾಧ್ಯತೆಯಿದೆ. ಮೊದಲ ಸುತ್ತಿನಲ್ಲಿ ಸಿಎಂ ಸಿದ್ದರಾಮಯ್ಯ ಜೊತೆಗೆ, 2ನೇ ಸುತ್ತಿನಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅವರೊಟ್ಟಿಗೆ ಸಭೆ ನಡೆಸಿದ ಬಳಿಕ ಅಂತಿಮ ಸುತ್ತಿನಲ್ಲಿ ಇಬ್ಬರು ನಾಯಕರನ್ನು ಮುಖಾಮುಖಿ ಕೂರಿಸಿ ಮಾತುಕತೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

