ಕಾರವಾರ: ಕಾರವಾರ ಮತ್ತು ಮಡಗಾಂವ್ (Karwar-Madgaon) ನಡುವೆ ಸಂಚರಿಸುತ್ತಿದ್ದ ವಿಶೇಷ ರೈಲನ್ನು ಇನ್ಮುಂದೆ ಖಾಯಂ ಸೇವೆಯನ್ನಾಗಿ ಪರಿವರ್ತಿಸಿ ರೈಲ್ವೆ ಮಂಡಳಿ ಅಧಿಕೃತ ಆದೇಶ ಹೊರಡಿಸಿದೆ. ಈ ಭಾಗದ ಸಾರ್ವಜನಿಕರು ಹಾಗೂ ರೈಲ್ವೆ ಪ್ರಯಾಣಿಕರ ಬಹುದಿನಗಳ ಬೇಡಿಕೆಯಾಗಿದ್ದ ಈ ರೈಲು ಸೇವೆಯನ್ನು ಖಾಯಂಗೊಳಿಸಲು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ನಡೆಸಿದ ಸತತ ಪ್ರಯತ್ನಕ್ಕೆ ಕೊನೆಗೂ ಫಲ ಸಿಕ್ಕಿದೆ.
ಈ ಹಿಂದೆ ವಿಶೇಷ ರೈಲು (ಸಂಖ್ಯೆ 01595/01596) ಆಗಿ ಸಂಚರಿಸುತ್ತಿದ್ದ ಈ ಸೇವೆಯನ್ನು, ಇನ್ಮುಂದೆ ಹೊಸದಾಗಿ ರೈಲು ಸಂಖ್ಯೆ 10109/10110 ಮಡಗಾಂವ್-ಕಾರವಾರ-ಮಡಗಾಂವ್ ಎಕ್ಸ್‌ಪ್ರೆಸ್ ರೈಲನ್ನಾಗಿ ಪ್ರತಿದಿನ ಓಡಿಸಲಾಗುತ್ತದೆ. ಇದನ್ನೂ ಓದಿ: ವಿದ್ಯಾರ್ಥಿಗಳ ಉಚಿತ ಬಸ್ ಪಾಸ್ ವಿತರಣೆ ಮತ್ತಷ್ಟು ವಿಳಂಬ – ಈ ತಿಂಗಳು ಸಿಗೋದು ಡೌಟ್
ರೈಲಿನ ನೂತನ ವೇಳಾಪಟ್ಟಿ ಹಾಗೂ ನಿಲುಗಡೆ:
ಪ್ರಯಾಣಿಕರ ಅನುಕೂಲಕ್ಕಾಗಿ ಈ ರೈಲು ಪ್ರತಿದಿನ ಎರಡು ಪ್ರಮುಖ ನಿಲ್ದಾಣಗಳ ನಡುವೆ ಸಂಚರಿಸಲಿದ್ದು, ಕಾಣಕೋಣ ನಿಲ್ದಾಣದಲ್ಲಿ ವಾಣಿಜ್ಯ ನಿಲುಗಡೆಯನ್ನು ಹೊಂದಿರಲಿದೆ.
ಕಾರವಾರ-ಮಡಗಾಂವ್ (ರೈಲು ಸಂಖ್ಯೆ 10110): ಪ್ರತಿದಿನ ಬೆಳಗ್ಗೆ 8:30 ಕ್ಕೆ ಕಾರವಾರದಿಂದ ಹೊರಟು, ಅದೇ ದಿನ ಬೆಳಗ್ಗೆ 9:45 ಕ್ಕೆ ಮಡಗಾಂವ್ ತಲುಪಲಿದೆ.
ಮಡಗಾಂವ್-ಕಾರವಾರ (ರೈಲು ಸಂಖ್ಯೆ 10109): ಮರುಪ್ರಯಾಣದಲ್ಲಿ ಪ್ರತಿದಿನ ಸಂಜೆ 4:30 ಕ್ಕೆ ಮಡಗಾಂವ್‌ನಿಂದ ಹೊರಟು, ಸಂಜೆ 5:45 ಕ್ಕೆ ಕಾರವಾರವನ್ನು ತಲುಪಲಿದೆ.
ನಿಲುಗಡೆ: ಕಾಣಕೋಣ ರೈಲು ನಿಲ್ದಾಣ
ಈ ಎಕ್ಸ್‌ಪ್ರೆಸ್ ರೈಲು ಎಸಿ (AC), ಸ್ಲೀಪರ್ ಮತ್ತು ಸಾಮಾನ್ಯ ದರ್ಜೆಯ ಬೋಗಿಗಳನ್ನು ಒಳಗೊಂಡ ಒಟ್ಟು 14 ಬೋಗಿಗಳೊಂದಿಗೆ ಸಂಚರಿಸಲಿದೆ. ಈ ಭಾಗದ ಜನಸಾಮಾನ್ಯರಿಗೆ, ಉದ್ಯೋಗಿಗಳಿಗೆ, ಪ್ರವಾಸಿಗರಿಗೆ ಹಾಗೂ ವಿಶೇಷವಾಗಿ ಆರೋಗ್ಯ ಸೇವೆಗಾಗಿ ಗೋವಾಕ್ಕೆ ತೆರಳುವ ರೋಗಿಗಳಿಗೆ ಈ ಖಾಯಂ ರೈಲು ಸೇವೆ ಅತ್ಯಂತ ಉಪಯುಕ್ತವಾಗಲಿದೆ. ಸಾರ್ವಜನಿಕರು ಈ ಸೌಲಭ್ಯದ ಹೆಚ್ಚಿನ ಸದುಪಯೋಗಪಡಿಸಿಕೊಳ್ಳಬೇಕೆಂದು ಸಂಸದರ ಕಚೇರಿ ಪ್ರಕಟಣೆ ವಿನಂತಿಸಿದೆ. ಇದನ್ನೂ ಓದಿ: Ujjwala Scheme| ವಾರ್ಷಿಕ ಸಿಲಿಂಡರ್ ಸಂಖ್ಯೆ 9 ರಿಂದ 4ಕ್ಕೆ ಇಳಿಕೆ
ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಅವರು 2026ರ ಜೂ.11 ರಂದು ಮಡಗಾಂವ್ ನಿಲ್ದಾಣದಲ್ಲಿ ಈ ರೈಲಿನ ನಿಯಮಿತ ಸೇವೆಗೆ ಹಸಿರು ನಿಶಾನೆ ತೋರಲಿದ್ದಾರೆ. ಈ ಬಹುನಿರೀಕ್ಷಿತ ಸೇವೆಯನ್ನು ಖಾಯಂಗೊಳಿಸಿದ್ದಕ್ಕಾಗಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಸಂಸದ ಕಾಗೇರಿ ಅಭಿನಂದನೆ ಸಲ್ಲಿಸಿದ್ದಾರೆ.
