ನವದೆಹಲಿ: ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರ ಟೀಕೆಯ ಬೆನ್ನಲ್ಲೇ ಬಾರ್ ಕೌನ್ಸಿಲ್ ಆಫ್ ಇಂಡಿಯಾ (BCI) ತನ್ನ ಹಿಂದಿನ ಆದೇಶವನ್ನು ಹಿಂಪಡೆದಿದೆ. ಜೊತೆಗೆ BCI ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ಅವರು ಕಾನೂನು ವಿದ್ಯಾರ್ಥಿಗಳಲ್ಲಿ ಕ್ಷಮೆಯಾಚಿಸಿದ್ದಾರೆ.

ಹೈದರಾಬಾದ್‌ನ NALSAR ಕಾನೂನು ವಿಶ್ವವಿದ್ಯಾಲಯದಿಂದ 2026ರಲ್ಲಿ ಪದವಿ ಪಡೆಯುವ ವಿದ್ಯಾರ್ಥಿಗಳನ್ನು ಮುಂದಿನ ಆದೇಶದವರೆಗೆ ವಕೀಲರಾಗಿ ನೋಂದಾಯಿಸಬಾರದು ಎಂದು BCI ಈ ಹಿಂದೆ ನಿರ್ದೇಶಿಸಿತ್ತು. ಈ ಆದೇಶದ ಬಗ್ಗೆ CJI ಸೂರ್ಯಕಾಂತ್ ಅಸಮಾಧಾನ ವ್ಯಕ್ತಪಡಿಸಿದ್ದರು.
ವಿದ್ಯಾರ್ಥಿಗಳಿಗೆ ಪ್ರತಿಭಟಿಸುವ ಹಕ್ಕಿದೆ ಎಂದ CJI
ವಿದ್ಯಾರ್ಥಿಗಳಿಗೆ ಕಾನೂನುಬದ್ಧವಾಗಿ ಪ್ರತಿಭಟಿಸುವ ಹಕ್ಕಿದೆ. ಈ ವಿಚಾರದಲ್ಲಿ BCI ಮಧ್ಯಪ್ರವೇಶ ಮಾಡಬಾರದಿತ್ತು ಎಂದು ಸಿಜೆಐ ಹೇಳಿದ್ದರು.
ಇದು ವಿದ್ಯಾರ್ಥಿಗಳು ಮತ್ತು ನನ್ನ ನಡುವಿನ ಸಂಭಾಷಣೆ. ಅನಗತ್ಯವಾಗಿ ಸುತ್ತೋಲೆ ಹೊರಡಿಸಲು ಅವರು ಯಾರು ಎಂದು ಸೂರ್ಯಕಾಂತ್ ಪ್ರಶ್ನಿಸಿದ್ದರು. ಇದನ್ನೂ ಓದಿ: ಮಾತುಕತೆ ಏನಿದ್ರೂ ನನ್ನ ಮತ್ತು ವಿದ್ಯಾರ್ಥಿಗಳ ನಡುವೆ – ಬಾರ್‌ಕೌನ್ಸಿಲ್ ಹಸ್ತಕ್ಷೇಪಕ್ಕೆ ಸಿಜೆಐ ಕೆಂಡಾಮಂಡಲ
ವಿದ್ಯಾರ್ಥಿ ಜೀವನದಲ್ಲಿ ತಾವೂ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾಗಿ ಹೇಳಿದ ಸಿಜೆಐ, ವಿದ್ಯಾರ್ಥಿಗಳು ಕಾನೂನುಬದ್ಧವಾಗಿ ತಮ್ಮ ಧ್ವನಿ ಎತ್ತುತ್ತಿದ್ದರೆ ಅದಕ್ಕೆ ಅವಕಾಶ ನೀಡಬೇಕು ಎಂದು ಅಭಿಪ್ರಾಯಪಟ್ಟಿದ್ದರು.
BCI ಆದೇಶ ವಾಪಸ್
ಸಿಜೆಐ ಅವರ ಅಸಮಾಧಾನದ ಬಳಿಕ BCI ತನ್ನ ಹಿಂದಿನ ನಿರ್ಧಾರವನ್ನು ಮರುಪರಿಶೀಲಿಸಿದೆ. 2026ರಲ್ಲಿ NALSAR ವಿಶ್ವವಿದ್ಯಾಲಯದಿಂದ ಪದವಿ ಪಡೆಯುವ ಎಲ್ಲಾ ವಿದ್ಯಾರ್ಥಿಗಳು ತಮ್ಮ ಆಯ್ಕೆಯ ರಾಜ್ಯ ಬಾರ್ ಕೌನ್ಸಿಲ್‌ನಲ್ಲಿ ದಾಖಲಾತಿ ಮಾಡಿಕೊಳ್ಳಲು ಅರ್ಹರು ಎಂದು ಹೊಸ ಸಂವಹನದಲ್ಲಿ ತಿಳಿಸಿದೆ.
NALSAR ವಿದ್ಯಾರ್ಥಿಗಳಿಗೆ ಬಿಗ್ ರಿಲೀಫ್
ಈ ನಿರ್ಧಾರದಿಂದ NALSARನ 2026ರ ಪದವೀಧರರಿಗೆ ದೊಡ್ಡ ರಿಲೀಫ್ ಸಿಕ್ಕಿದೆ. ಇನ್ನು ನಡೆಯುತ್ತಿರುವ ವಿಚಾರಣೆ ಪೂರ್ಣಗೊಳ್ಳುವವರೆಗೆ ಕಾಯಬೇಕಾಗಿಲ್ಲ. ವಿದ್ಯಾರ್ಥಿಗಳು ತಮ್ಮ ಆಯ್ಕೆಯ ರಾಜ್ಯ ಬಾರ್ ಕೌನ್ಸಿಲ್‌ನಲ್ಲಿ ದಾಖಲಾತಿ ಪ್ರಕ್ರಿಯೆ ಆರಂಭಿಸಿ, ಕಾನೂನು ವೃತ್ತಿಗೆ ಪ್ರವೇಶಿಸಲು ಮುಂದುವರಿಯಬಹುದು. ಇದನ್ನೂ ಓದಿ: ಕರೂರು ಸಂತ್ರಸ್ತರಿಗೆ ಉದ್ಯೋಗ | ವಿಜಯ್ ಸರ್ಕಾರದ ನಿರ್ಧಾರ ರದ್ದುಗೊಳಿಸಿದ್ದ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ತಡೆ
