– ʻಪಬ್ಲಿಕ್ ಟಿವಿ Exclusive ಸಂದರ್ಶನʼದಲ್ಲಿ ಸಿಎಂ ಬಿಗ್ ಸ್ಟೇಟ್ಮೆಂಟ್
– ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಅರ್ಜಿ ಹಾಕು ಡಿಕೆ ಅಂದಿದ್ರು ಸೋನಿಯಾ ಗಾಂಧಿ
ಬೆಂಗಳೂರು: ರಾಜ್ಯದಲ್ಲಿ ಮತ್ತೆ ನನ್ನ ನಾಯಕತ್ವದಲ್ಲಿ ಪಕ್ಷವನ್ನ ಅಧಿಕಾರಕ್ಕೆ ತರಬೇಕು, ಅದಾದಮೇಲೆ ರಾಷ್ಟ್ರ ರಾಜಕಾರಣಕ್ಕೆ ಹೋಗಬೇಕು ಅನ್ನೋದು ನನ್ನ ಮುಂದಿನ ಟಾರ್ಗೆಟ್ ಎಂದು ಸಿಎಂ ಡಿಕೆ ಶಿವಕುಮಾರ್ (DK Shivakumar) ಮನಬಿಚ್ಚಿ ಮಾತನಾಡಿದರು.
ʻಪಬ್ಲಿಕ್ ಟಿವಿ Exclusive ಸಂದರ್ಶನʼದಲ್ಲಿ ಮನಬಿಚ್ಚಿ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್ ಅವರು ತಮ್ಮ ಮುಂದಿನ ರಾಜಕೀಯ ಹಾದಿಯ ಬಗ್ಗೆಯೂ ಬಿಗ್ ಸ್ಟೇಟ್ಮೆಂಟ್ ಕೊಟ್ಟಿದರು.
ನಾನು, ನನ್ನ ಬ್ರದರ್ ಭಾರತ್ ಜೋಡೋಯಾತ್ರೆಗೆ ಆಹ್ವಾನಿಸಲು ಹೋಗಿದ್ವಿ. ಆಗ ಸೋನಿಯಾ ಗಾಂಧಿ (Sonia Gandhi) ಅವರು ನಗುನಗುತ್ತಾ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಅರ್ಜಿ ಹಾಕು ಡಿಕೆ ಅಂದಿದ್ರು. ನಾನು ನಗುತ್ತಲೇ… ಅಯ್ಯೋ ಈಗ ಕೊಟ್ಟಿರೋ ಅಧಿಕಾರನೇ ಸಾಕು ಅಂತ ಹೇಳಿದ್ದೆ ಎಂದು ನೆನಪಿಸಿಕೊಂಡರು.
ʻನಿಮ್ಮ ಮುಂದಿನ ಗುರಿ ಏನು?ʼ ಎನ್ನುವ ಹೆಚ್ಆರ್ಆರ್ ಪ್ರಶ್ನೆಗೆ, ನನ್ನ ನಾಯಕತ್ವದಲ್ಲಿ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷವನ್ನ ಅಧಿಕಾರಕ್ಕೆ ತರಬೇಕು. ಆದಾದ ಬಳಿಕ ನಾನು ರಾಷ್ಟ್ರ ರಾಜಕಾರಣಕ್ಕೆ ಹೋಗಬೇಕು. ದೆಹಲಿಯಲ್ಲಿ ನಾನು ಒಂದಿಷ್ಟು ದಿನ ಇರ್ತೀನಿ ಎಂದು ಹೇಳಿದರು.
ನಾನು ಸಿಂಗಲ್ ಫೈಟರ್
ಇದೇ ವೇಳೆ ಗುಂಪುಗಾರಿಕೆ ಬಗ್ಗೆಯೂ ಮಾತನಾಡಿದ ಸಿಎಂ, ನಾನು ಗುಂಪು ಕಟ್ಟಿಕೊಂಡು ಹೋಗಲ್ಲ… ಹೋಗಿಯೂ ಇಲ್ಲ. ನಾನು ಸಿಂಗಲ್ ಆಗಿಯೇ ಫೈಟ್ ಮಾಡ್ತೀನಿ. ಗುಂಪುಗಾರಿಗೆ ವರ್ಕ್ ಆಗಲ್ಲ, ಕಾಂಗ್ರೆಸ್ನಲ್ಲಿ ಅದು ನಡೆಯುವುದೂ ಇಲ್ಲ. ಗುಂಪು ಬರೀ ಬ್ಲ್ಯಾಕ್ಮೇಲ್ ಮಾಡೋದಕ್ಕಷ್ಟೇ ನಡೆಯಬಹುದು. ನನಗೆ ಬ್ಲ್ಯಾಕ್ಮೇಲ್ ನಿಂದ ಪಾಲಿಟಿಕ್ಸ್ಗೆ ಏನೂ ಪ್ರಯೋಜನ ಆಗಲ್ಲ. ನಾನು ಗುಂಪುಗಳನ್ನ ಕೇರ್ ಮಾಡಲ್ಲ. ನನ್ನ ಸಾಮರ್ಥ್ಯ ಹೈಕಮಾಂಡ್ಗೆ ಗೊತ್ತಿದೆ ಎಂದು ಡಿಕೆಶಿ ಹೇಳಿದರು.
ರಾಹುಲ್ ಗಾಂಧಿ ಗುಂಪುಗಾರಿಕೆ ಮಾಡಿದ್ರಾ? ಮಲ್ಲಿಕಾರ್ಜುನ ಖರ್ಗೆ ಗುಂಪುಗಾರಿಕೆ ಮಾಡಿದ್ರಾ? ಖರ್ಗೆ ಅವರು ಮಾಡಬಹುದಿತ್ತು. ಆದ್ರೆ ಮಾಡಲಿಲ್ಲ, ಸಿಎಲ್ಪಿ ಸ್ಥಾನಕ್ಕೆ ಮಧ್ಯರಾತ್ರಿ ರಾಜೀನಾಮೆ ನೀಡಿದ್ರು. ಕಾಂಗ್ರೆಸ್ ಪಕ್ಷವೇ ಹುಡುಕಿಕೊಂಡು ಹೋಗಿ ಅವರನ್ನ ಎಐಸಿಸಿ ಅಧ್ಯಕ್ಷರನ್ನಾಗಿ ಮಾಡ್ತು. ಹೈಕಮಾಂಡ್ಗೆ ನಾನು ಒಳ್ಳೆ ಆಡಳಿತ ಕೊಡಬೇಕು ಅನ್ನೋದು ಇದೆ. ಹೈಕಮಾಂಡ್ನವರು ನನ್ನ ಮೇಲೆ ನಂಬಿಕೆ ಇಟ್ಟಿದ್ದಾರೆ. ಪಕ್ಷಕ್ಕೆ ದುಡಿದಿರುವ ನನಗೆ ಅವಕಾಶ ಕೊಡಬೇಕು ಅನ್ನೋದು ಇತ್ತು. ಹಾಗೆಯೇ ಪಕ್ಷವನ್ನ ಮತ್ತೆ ಅಧಿಕಾರಕ್ಕೆ ತರ್ತೇನೆ ಅನ್ನೋ ನಂಬಿಕೆ ಹೈಕಮಾಂಡ್ಗಿದೆ. ಹೈಕಮಾಂಡ್ ನಂಬಿಕೆಯನ್ನ ನಾನು ಉಳಿಸಿಕೊಳ್ತೇನೆ ಎಂದಿ ಡಿಕೆಶಿ ಮನಬಿಚ್ಚಿ ಮಾತನಾಡಿದರು.
ನಾನು ಯಾರ ಬೆನ್ನಿಗೂ ಚೂರಿ ಹಾಕಿಲ್ಲ
ಇನ್ನೂ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ತಮ್ಮ ನಡುವಿನ ಸಂಬಂಧ ಕುರಿತು ಮಾತನಾಡಿ, ನಾನು ಸಿದ್ದರಾಮಯ್ಯ ಅವರ ಜೊತೆ ನಾನು ಬಂಡೆ ತರ ನಿಂತಿದ್ದೆ, ಅವರೂ ನನ್ನ ಪರವಾಗಿ ನಿಲ್ತಾರೆ. ಸಿದ್ದರಾಮಯ್ಯ ಅವರು ನನಗೆ ಯಾವ್ದೇ ಕಾರಣಕ್ಕೂ ಟ್ರಬಲ್ ಕೊಡಲ್ಲ ಎಂದರಲ್ಲದೇ ನನ್ನ ಲೈಫ್ನಲ್ಲೇ ನಾನು ಯಾರಿಗೂ ಬೆನ್ನಿಗೆಚೂರಿ ಹಾಕಿಲ್ಲ ಎಂದರು.
ಇದೇ ವೇಳೆ ಸಿದ್ದರಾಮಯ್ಯ (Siddaramaiah) ಅವರಿಂದ ನೀವು ಏನನ್ನ ಬಯಸುತ್ತೀರಿ ಎನ್ನುವ ಹೆಚ್ಆರ್ಆರ್ ಪ್ರಶ್ನೆಗೆ, ಸಿದ್ದರಾಮಯ್ಯರಿಂದ ಸಹಕಾರ, ಮಾರ್ಗದರ್ಶನವನ್ನಷ್ಟೇ ಬಯಸುತ್ತೇನೆ ಎಂದರು.
ಬಿಜೆಪಿಯವ್ರು ನನ್ನನ್ನ ಟ್ರ್ಯಾಕ್ ಮಾಡ್ತಿದ್ದಾರೆ
ಮುಂದುವರಿದು… ಬಿಜೆಪಿಯವರು ನನ್ನನ್ನ ಸುಮ್ಮನೆ ಬಿಡಲ್ಲ, ನನ್ನನ್ನ ಟ್ರ್ಯಾಕ್ ಮಾಡ್ತಿದ್ದಾರೆ. ದೆಹಲಿಯಿಂದ ಬೆಂಗಳೂರಿಗೆ ಅಧಿಕಾರಿಗಳನ್ನ ಕಳಿಸಿದ್ದಾರೆ. ನನ್ನ ಸುತ್ತಮುತ್ತಲೇ ಇದ್ದಾರೆ. ದೆಹಲಿಯಿಂದಲೇ ಕುಳಿತು ಆಪರೇಟ್ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ ಚುನಾವಣೆ ಹೊತ್ತಿಗೆ ಐದಾರು ಸಚಿವರ ಮೇಲೆ ಐಟಿ-ಇಡಿ ಮೂಲಕ ದಾಳಿಗೆ ಕಾಯ್ತಿದ್ದಾರೆ ಎಂದು ಸಿಎಂ ಡಿಕೆಶಿ ಹೇಳಿದರು.

