– ʻಪಬ್ಲಿಕ್ ಟಿವಿ Exclusive ಸಂದರ್ಶನʼದಲ್ಲಿ ಸಿಎಂ ಮಾತು
– ಪಕ್ಷವನ್ನ ಮತ್ತೆ ಅಧಿಕಾರಕ್ಕೆ ತರ್ತೇನೆ ಅನ್ನೋ ನಂಬಿಕೆ ಹೈಕಮಾಂಡ್‌ಗಿದೆ
ಬೆಂಗಳೂರು: ನಾನು ಸಿದ್ದರಾಮಯ್ಯ ಅವರ ಜೊತೆ ನಾನು ಬಂಡೆ ತರ ನಿಂತಿದ್ದೆ, ಅವರೂ ನನ್ನ ಪರವಾಗಿ ನಿಲ್ತಾರೆ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ʻಪಬ್ಲಿಕ್ ಟಿವಿʼ ಮುಖ್ಯಸ್ಥರಾದ ಹೆಚ್.ಆರ್. ರಂಗನಾಥ್ (HR Ranganath) ಅವರೊಂದಿಗೆ ನಡೆದ ಎಕ್ಸ್‌ಕ್ಲೂಸಿವ್ ಸಂದರ್ಶನದಲ್ಲಿ ಮಾತನಾಡಿದ ಅವರು, ಹಲವು ವಿಚಾರಗಳ ಬಗ್ಗೆ ಸ್ಫೋಟಕ ಮಾಹಿತಿ ಹಂಚಿಕೊಂಡಿದ್ದಾರೆ.
ನಾನು ಯಾರ ಬೆನ್ನಿಗೂ ಚೂರಿ ಹಾಕಿಲ್ಲ
ಸಿದ್ದರಾಮಯ್ಯ ಅವರು ನನಗೆ ಯಾವ್ದೇ ಕಾರಣಕ್ಕೂ ಟ್ರಬಲ್ ಕೊಡಲ್ಲ. ಅವರು ನನ್ನ ಪರವಾಗಿ ನಿಲ್ದಾರೆ. ನಾನೂ ಕೂಡ ಅವರ ಜೊತೆ ಬಂಡೆ ತರ ನಿಂತಿದ್ದೆ ಎಂದರಲ್ಲದೇ, ನನ್ನ ಲೈಫ್‌ನಲ್ಲೆ ನಾನು ಯಾರಿಗೂ ಬೆನ್ನಿಗೆಚೂರಿ ಹಾಕಿಲ್ಲ ಎಂದು ಹೇಳಿದರು.
ಇದೇ ವೇಳೆ ಸಿದ್ದರಾಮಯ್ಯ (Siddaramaiah) ಅವರಿಂದ ನೀವು ಏನನ್ನ ಬಯಸುತ್ತೀರಿ ಎನ್ನುವ ಹೆಚ್‌ಆರ್‌ಆರ್ ಪ್ರಶ್ನೆಗೆ, ಸಿದ್ದರಾಮಯ್ಯರಿಂದ ಸಹಕಾರ, ಮಾರ್ಗದರ್ಶನವನ್ನಷ್ಟೇ ಬಯಸುತ್ತೇನೆ ಎಂದರು.
ಮುಂದುವರಿದು… ಹೈಕಮಾಂಡ್‌ಗೆ ನಾನು ಒಳ್ಳೆ ಆಡಳಿತ ಕೊಡಬೇಕು ಅನ್ನೋದು ಇದೆ. ಹೈಕಮಾಂಡ್‌ನವರು ನನ್ನ ಮೇಲೆ ನಂಬಿಕೆ ಇಟ್ಟಿದ್ದಾರೆ. ಪಕ್ಷಕ್ಕೆ ದುಡಿದಿರುವ ನನಗೆ ಅವಕಾಶ ಕೊಡಬೇಕು ಅನ್ನೋದು ಇತ್ತು. ಹಾಗೆಯೇ ಪಕ್ಷವನ್ನ ಮತ್ತೆ ಅಧಿಕಾರಕ್ಕೆ ತರ್ತೇನೆ ಅನ್ನೋ ನಂಬಿಕೆ ಹೈಕಮಾಂಡ್‌ಗಿದೆ. ಹೈಕಮಾಂಡ್ ನಂಬಿಕೆಯನ್ನ ನಾನು ಉಳಿಸಿಕೊಳ್ತೇನೆ ಎಂದಿ ಡಿಕೆಶಿ ಮನಬಿಚ್ಚಿ ಮಾತನಾಡಿದ್ದಾರೆ.
ಬಿಜೆಪಿಯವ್ರು ನನ್ನನ್ನ ಟ್ರ್ಯಾಕ್ ಮಾಡ್ತಿದ್ದಾರೆ
ಮುಂದುವರಿದು… ಬಿಜೆಪಿಯವರು ನನ್ನನ್ನ ಸುಮ್ಮನೆ ಬಿಡಲ್ಲ, ನನ್ನನ್ನ ಟ್ರ್ಯಾಕ್ ಮಾಡ್ತಿದ್ದಾರೆ. ದೆಹಲಿಯಿಂದ ಬೆಂಗಳೂರಿಗೆ ಅಧಿಕಾರಿಗಳನ್ನ ಕಳಿಸಿದ್ದಾರೆ. ನನ್ನ ಸುತ್ತಮುತ್ತಲೇ ಇದ್ದಾರೆ. ದೆಹಲಿಯಿಂದಲೇ ಕುಳಿತು ಆಪರೇಟ್ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ ಚುನಾವಣೆ ಹೊತ್ತಿಗೆ ಐದಾರು ಸಚಿವರ ಮೇಲೆ ಐಟಿ-ಇಡಿ ಮೂಲಕ ದಾಳಿಗೆ ಕಾಯ್ತಿದ್ದಾರೆ ಎಂದು ಸಿಎಂ ಡಿಕೆಶಿ ಹೇಳಿದರು.
ಪ್ರಿಯಾಂಕ್‌ಗೂ ಕೆಪಿಎಸ್‌ಸಿಗೂ ಸಂಬಂಧನೇ ಇಲ್ಲ
ಇದೇ ವೇಳೆ ಕೆಪಿಎಸ್‌ಸಿ ಹಗರಣದಲ್ಲಿ ಪ್ರಿಯಾಂಕ್ ಖರ್ಗೆ ಅವರ ವಿರುದ್ಧದ ಆರೋಪಗಳಿಗೆ ಪ್ರತಿಕ್ರಿಯಿಸಿದರು. ಕೆಪಿಎಸ್‌ಸಿ ಪರೀಕ್ಷೆ ವಿಚಾರದಲ್ಲಿ ಪ್ರಿಯಾಂಕ್ ಖರ್ಗೆ ಅವರ ಮೇಲೆ ಯಾವುದೇ ಆರೋಪ ಇಲ್ಲ. ಕೆಪಿಎಸ್‌ಸಿಗೂ ಪ್ರಿಯಾಂಕ್ ಖರ್ಗೆಗೂ ಸಂಬಂಧನೇ ಇಲ್ಲ. ಪ್ರಿಯಾಂಕ್ ಬುದ್ಧಿವಂತರಾಗಿ ಇಡಿಗೆ ಪ್ರಕರಣ ಬಿಟ್ಟುಕೊಡದೇ ಆ ಅಧಿಕಾರಿಯನ್ನ ಎಳೆದು ತಂದ್ರು ಎಂದು ತಿಳಿಸಿದರು.
5 ರಿಂದ 6 ಜನರಿಗೆ ದಾಳಿ ಆತಂಕ ಇದೆ
ಐಟಿ-ಇಡಿ ದಾಳಿ ಬಗ್ಗೆ ಮಾತನಾಡಿರುವ ಡಿಕೆ ಶಿವಕುಮಾರ್, 5 ರಿಂದ 6 ಜನರ ಮೇಲೆ ದಾಳಿ ನಡೆಯುವ ಸಾಧ್ಯತೆಗಳಿವೆ ಎಂದು ತಿಳಿಸಿದರು.

